ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಿನಿಮಾ ನಡುವಣ ಹರಿವು ‘ಅರಿವು’

Last Updated 12 ಜನವರಿ 2017, 19:30 IST
ಅಕ್ಷರ ಗಾತ್ರ

‘ಪುಸ್ತಕ ಜಗತ್ತಿನಲ್ಲಿ ಅಡ್ಡಾಡಿ ಬಂದವರಿಗೆ ಉತ್ತಮ ಚಿತ್ರಗಳನ್ನು ನೀಡಲು ಸಾಧ್ಯ. ನಮ್ಮೊಂದಿಗಿರುವ ಪಿ. ಶೇಷಾದ್ರಿ ಅದಕ್ಕೆ ತಾಜಾ ಉದಾಹರಣೆ. ಇದೀಗ ಕನ್ನಡ ಚಿತ್ರರಂಗ ಮತ್ತು ಪುಸ್ತಕಲೋಕದ ನಡುವಿನ ಸಂಬಂಧ ಮರುಕಳಿಸುತ್ತಿದೆ. ಯುವ ನಿರ್ದೇಶಕರು ಕಳೆದ ವರ್ಷ ಮಾಡಿರುವ ಚಿತ್ರಗಳೇ ಇದಕ್ಕೆ ಸಾಕ್ಷಿ’ ಎಂದು ಪತ್ರಕರ್ತ ಜೋಗಿ ಕನ್ನಡ ಚಿತ್ರರಂಗದ ಕುರಿತು ಗಮನ ಸೆಳೆದರು.

ಸಿನಿಮಾ ರೂಪಕ್ಕೆ ಬಂದಿರುವ ಸೋಸಲೆ ಗಂಗಾಧರ್ ಅವರ ‘ಅರಿವು’ ಕಥೆಯ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಕಥೆಯೊಂದು ಹಲವರ ಮೂಲಕ ಹಾದುಬಂದಾಗ ಅದರಲ್ಲಿನ ಅವಗುಣಗಳು ಹೋಗಿ ಅಪರಂಜಿಯಾಗುತ್ತದೆ. ಇದು ನಿರ್ದೇಶಕ ಹೊಂದಿರುವ ಪುಸ್ತಕದ ನಂಟನ್ನು ಅವಲಂಬಿಸಿದೆ’ ಎಂದರು.

ರಂಗನಾಥ್ ‘ಅರಿವು’ ಚಿತ್ರದ ನಿರ್ದೇಶಕ. ತಮ್ಮ ಚೊಚ್ಚಲ ಚಿತ್ರಕ್ಕಾಗಿ ಅವರು ಆಯ್ದುಕೊಂಡಿರುವುದು ಶಿಕ್ಷಣದ ಮಹತ್ವ ಸಾರುವ ಗಂಗಾಧರ್ ಅವರ ‘ಅರಿವು’ ಕಥೆ. ಚಿತ್ರಕ್ಕೆ ಹಣ ಹೂಡುವ ಜತೆಗೆ ಕಥೆಯನ್ನು ಪುಸ್ತಕರೂಪದಲ್ಲಿ ಹೊರತರಲು ಕಾರಣಕರ್ತರಾದವರು ನಿರ್ಮಾಪಕ ಮಹೇಂದ್ರ ಮುನೋತ್.

ಪುಸ್ತಕ ಬಿಡುಗಡೆಗೆ ಜತೆಯಾದ ನಿರ್ದೇಶಕ ಪಿ. ಶೇಷಾದ್ರಿ ಅವರು, ಪಾರ್ವತಮ್ಮ ಅವರಿಗಿದ್ದ  ಪುಸ್ತಕ ಓದುವ ಹವ್ಯಾಸ ಹೇಗೆ ‘ಮಯೂರ’ ಚಿತ್ರ ನಿರ್ಮಾಣಕ್ಕೆ ಕಾರಣವಾಯಿತು ಎಂಬುದನ್ನು ಸ್ವಾರಸ್ಯಕರವಾಗಿ ಬಿಡಿಸಿಟ್ಟರು.

‘ಮದ್ರಾಸ್‌ನಲ್ಲಿದ್ದ ಪಾರ್ವತಮ್ಮ ಅವರು, ಒಮ್ಮೆ ರದ್ದಿ ಪೇಪರ್‌ಗಳನ್ನು ಖರೀದಿಸಲು ಬಂದಿದ್ದ ವ್ಯಕ್ತಿಯ ಬಳಿ ಇದ್ದ ದೇವುಡು ನರಸಿಂಹಶಾಸ್ತ್ರಿ ಅವರ ‘ಮಯೂರ’ ಕಾದಂಬರಿ ನೋಡಿದರು. ಮನೆಯಲ್ಲಿದ್ದ  ಪೇಪರ್‌ಗಳನ್ನು ಆತನಿಗೆ ಕೊಟ್ಟು, ಹಣಕ್ಕೆ ಬದಲಾಗಿ ಆ ಕಾದಂಬರಿ ಪಡೆದರು. ಓದಿದ ಬಳಿಕ, ಈ ಕಾದಂಬರಿಯನ್ನು ಸಿನಿಮಾ ಮಾಡಬಹುದು ಎಂದು ಅಣ್ಣಾವ್ರಿಗೆ (ರಾಜ್‌ಕುಮಾರ್‌) ಹೇಳಿದರು. ಹೀಗೆ ಒಬ್ಬರಿಂದ ಒಬ್ಬರಿಗೆ ಕಾದಂಬರಿ ಹಸ್ತಾಂತರವಾಗಿ ಕಡೆಗೂ ಚಿತ್ರದ ರೂಪ ತಳೆಯಿತು’ ಎಂದು ವಿವರಿಸಿದರು.

ಸದ್ಯ ಕನ್ನಡ ಚಿತ್ರರಂಗದಲ್ಲಾಗಿರುವ ಸ್ಥಿತ್ಯಂತರಗಳನ್ನು ಗುರುತಿಸಿದ ಶೇಷಾದ್ರಿ, ‘ಹಿಂದೆ ಕನ್ನಡ ಚಿತ್ರಗಳು ಬಿಡುಗಡೆಯಾಗುವ ಹಿಂದಿನ ದಿನ ಮದ್ರಾಸ್‌ನಿಂದ ಹಲವು ನಿರ್ದೇಶಕರು ಬೆಂಗಳೂರಿಗೆ ಬರುತ್ತಿದ್ದರು. ಇಲ್ಲಿ ಸಿನಿಮಾ ನೋಡಿಕೊಂಡು ಹೋಗಿ, ತಮ್ಮ ಭಾಷೆಯಲ್ಲಿ ರೀಮೇಕ್ ಮಾಡುತ್ತಿದ್ದರು. ವಿಪರ್ಯಾಸವೆಂದರೆ ನಾವೀಗ ಆ ಕೆಲಸ ಮಾಡುತ್ತಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರ ಮಾಡಿದ ತೃಪ್ತಿ ನನಗಿದೆ’ ಎಂದು ಸಂಭ್ರಮಿಸಿದ ನಿರ್ದೇಶಕ ರಂಗನಾಥ್, ಅದಕ್ಕಾಗಿ ತಾವು ಪಟ್ಟ ಪಾಡುಗಳನ್ನು ಹಂಚಿಕೊಂಡರು. ಚಿತ್ರಕ್ಕೆ ಬಂಡವಾಳ ಹಾಕುವ ಜತೆಗೆ, ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಿರ್ಮಾಪಕ ಮಹೇಂದ್ರ ಮುನೋತ್ – ‘ಚಿತ್ರ ಗೆಲ್ಲಲಿ ಬಿಡಲಿ. ಒಳ್ಳೆಯ ಚಿತ್ರವೊಂದನ್ನು ನಿರ್ಮಿಸಿದ್ದೇನೆ ಎಂಬ ತೃಪ್ತಿ ನನಗೆ ಸಿಕ್ಕಿದೆ. ಇದೇ ಜನವರಿ 20ರಂದು ಚಿತ್ರ ಬಿಡುಗಡೆ ಮಾಡುವ ಯೋಜನೆ ಇದೆ’ ಎಂದು ಹೇಳಿದರು.

ಲೇಖಕ ಸೋಸಲೆ ಗಂಗಾಧರ್, ನಿರ್ಮಾಪಕ ಪದ್ಮಾನಾಭನ್, ನಿರ್ದೇಶಕ ನರೇಂದ್ರಬಾಬು ಸೇರಿದಂತೆ ವೇದಿಕೆ ಮೇಲಿದ್ದ ರಂಗನಾಥ್ ಹಿತೈಷಿಗಳು, ಚಿತ್ರ ಯಶಸ್ಸು ಕಾಣಲೆಂದು ಹರಸಿದರು. ಇದೇ ವೇಳೆ ಚಿತ್ರದ ಟ್ರೇಲರ್ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT