ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಹಿಡಿದು ನಡೆಸಿತು ಕ್ಯಾಮೆರಾ...

Last Updated 12 ಜನವರಿ 2017, 19:30 IST
ಅಕ್ಷರ ಗಾತ್ರ

‘ಕೆನ್‌ ಕಲಾ ಶಾಲೆ’ಯಲ್ಲಿ ಕಲಿತು ನಾನು ಹೊರಬೀಳುವ ವೇಳೆಗೆ ಮಣಿರತ್ನಂ ನಿರ್ದೇಶನದ ‘ಪಲ್ಲವಿ ಅನುಪಲ್ಲವಿ’ ಕನ್ನಡ ಸಿನಿಮಾ ತೆರೆಕಂಡಿತ್ತು. ಆ ಚಿತ್ರವನ್ನು ನೋಡಿ ನಾನೂ ಒಂದು ಕ್ಯಾಮೆರಾ ಖರೀದಿಸಿದೆ, ಫೋಟೊಗಳನ್ನು ತೆಗೆಯಲಾರಂಭಿಸಿದೆ. ಪತ್ರಿಕಾ ಛಾಯಾಗ್ರಾಹಕನಾಗಿ ಕೆಲಸ ಮಾಡಲು ತೊಡಗಿದೆ.

ಛಾಯಾಗ್ರಹಣದ ಜೊತೆಜೊತೆಗೆ ವಿನ್ಯಾಸಗಾರ ಹಾಗೂ ರೇಖಾಚಿತ್ರಕಾರನಾಗಿಯೂ ಕೆಲಸ ಮಾಡಿದೆ. ಕಡೆಗೆ ಎಲ್ಲವನ್ನೂ ಬಿಟ್ಟು ಸ್ವತಂತ್ರವಾಗಿ ಫೋಟೊಗ್ರಫಿ ಮಾಡತೊಡಗಿದೆ. ಜಾಹೀರಾತು ಮತ್ತು ಸಿನಿಮಾಗಳಿಗೆ ಫೋಟೊ ತೆಗೆಯುತ್ತಿದ್ದೆ. ಆಗಲೇ ಕೆಲವರು ಸಿನಿಮಾ ಮಂದಿ ಪರಿಚಯವಾದರು.

ಉಪೇಂದ್ರ ಅವರಲ್ಲೊಬ್ಬರು. ರಾಜಾಜಿನಗರದಲ್ಲಿ ಒಂದು ಸಣ್ಣ ಸ್ಟುಡಿಯೊ ಮಾಡಿಕೊಂಡಿದ್ದೆ. ಅಲ್ಲೇ ಸಿನಿಮಾ ನಟ–ನಟಿಯರ ಫೋಟೊಶೂಟ್ ಮಾಡುತ್ತಿದ್ದೆ. ಈ ಸಂದರ್ಭದಲ್ಲೇ ನನಗೆ ತಾರಾ ಅವರ ಪರಿಚಯವಾಗಿದ್ದು. ಅವರ ಪೋಟೊಶೂಟ್ ಮಾಡಿದ್ದೂ ನಾನೇ.

1989ರಲ್ಲಿ ಬಿಡುಗಡೆಯಾದ ‘ತರ್ಕ’ ಚಿತ್ರಕ್ಕೆ ಮೊದಲ ಸಲ ಸ್ಟಿಲ್ ಫೋಟೊಗ್ರಾಫರ್ ಆಗಿ ಕೆಲಸ ಮಾಡಿದೆ. ಪ್ರಚಾರ ವಿನ್ಯಾಸಕಾರನಾಗಿಯೂ ಆ ಚಿತ್ರಕ್ಕೆ ಕೆಲಸ ಮಾಡಿದೆ.ನಂತರ ‘ಉತ್ಕರ್ಷ’ ಹಾಗೂ ಉಪೇಂದ್ರ ನಿರ್ದೇಶನದ ‘ಶ್‌’ ಚಿತ್ರಕ್ಕೂ ಪೋಟೊ ತೆಗೆದೆ. ಹೀಗೆ ಪೇಂಟಿಂಗ್ ಜೊತೆಗೆ ಫೋಟೊಗ್ರಫಿ ಗೊತ್ತಿದ್ದರಿಂದ ಎರಡೂ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೆ. ಅದಿಲ್ಲದಿದ್ದರೆ ಇದು, ಇದಿಲ್ಲದಿದ್ದರೆ ಅದು – ಒಟ್ಟಿನಲ್ಲಿ ಕೆಲಸ ಇಲ್ಲದೆ ಖಾಲಿಯಂತೂ ಕುಳಿತಿರಲಿಲ್ಲ.

ತಿರುವು ಕೊಟ್ಟ ‘ಎ’
ನನ್ನ ಜೀವನಕ್ಕೆ ಅನಿರೀಕ್ಷಿತ ತಿರುವು ಕೊಟ್ಟಿದ್ದು ಉಪೇಂದ್ರ ನಟಿಸಿ, ನಿರ್ದೇಶಿಸಿದ ‘ಎ’ ಚಿತ್ರ. ನನ್ನ ಕೆಲಸವನ್ನು ತುಂಬಾ ಮೆಚ್ಚಿಕೊಳ್ಳುತ್ತಿದ್ದ ಉಪ್ಪಿ, ಒಮ್ಮೆ ಸ್ಟುಡಿಯೊಗೆ ಬಂದು, ‘ನಾನೀಗ ನಿರ್ದೇಶಿಸಲಿರುವ ಚಿತ್ರಕ್ಕೆ ನಾನೇ ಹೀರೋ. ಅದಕ್ಕೆ ನೀನೇ ಕ್ಯಾಮೆರಾಮನ್’ ಎಂದಾಗ ನನಗೆ ತಲೆ ತಿರುಗಿದಂತಾಯಿತು. ಕೊರಳಿಗೆ ನೇತು ಹಾಕಿಕೊಂಡು ಫೋಟೊ ತೆಗೆಯುವ ಕ್ಯಾಮೆರಾ ಬಿಟ್ಟರೆ, ಸಿನಿಮಾ ಶೂಟ್ ಮಾಡುವ ಕ್ಯಾಮೆರಾವನ್ನು ನಾನು ಎಂದಿಗೂ ಮುಟ್ಟೇ ಇರಲಿಲ್ಲ.

‘ಇಲ್ಲಪ್ಪಾ, ನನ್ನ ಕೈಲಿ ಆ ಕೆಲಸ ಆಗದು. ಬೇರೆ ಏನೇ ಇದ್ದರೂ ಹೇಳು ಮಾಡುತ್ತೇನೆ. ನೀನು ಹೀರೊ ಆಗಿ ಲಾಂಚ್ ಆಗುತ್ತಿರುವ ಚಿತ್ರ ಅಂತೀಯಾ. ಯಾರಾದ್ರೂ ಎಕ್ಸ್‌ಪರ್ಟ್ ಕ್ಯಾಮೆರಾಮನ್ ನೋಡ್ಕೊ. ಏನೂ ಗೊತ್ತಿಲ್ಲದ ನನ್ನ ಹಾಕೊಂಡ್ರೆ ಅಷ್ಟೆ. ಸಿನಿಮಾ ತೋಪಾಗುತ್ತದೆ’ ಎಂದೆ. ಆದರೂ ಉಪೇಂದ್ರ ಹಟ ಬಿಡಲಿಲ್ಲ. ‘ನಿನಗೆ ಸಾಮರ್ಥ್ಯ ಇದೆ.

ಭಯಪಡಬೇಡ, ನಾನಿರುತ್ತೇನೆ’ ಎಂದು ಧೈರ್ಯ ತುಂಬಿದರು. ‘ಆಗಲ್ಲ’ ಅಂತ ಎಷ್ಟೇ ಹೇಳಿದರೂ ಬಿಡದೆ ಸೆಟ್‌ಗೆ ಕರೆದುಕೊಂಡು ಹೋಗಿ ನಿಲ್ಲಿಸಿದರು. ಅದೇ ಮೊದಲು ನಾನು ಸಿನಿಮಾ ಕ್ಯಾಮೆರಾ ನೋಡಿದ್ದು, ಮುಟ್ಟಿದ್ದು.

ಅದುವರೆಗೆ ಯಾವುದೇ ಕಿರುಚಿತ್ರ ಅಥವಾ ಸಾಕ್ಷ್ಯಚಿತ್ರವನ್ನೂ ನಾನು ಮಾಡಿರಲಿಲ್ಲ. ಆದರೆ, ಕ್ಯಾಮೆರಾ ವರ್ಕ್ ಬಗ್ಗೆ ಐಡಿಯಾ ಇತ್ತು. ‘ಸರಿ, ಒಂದು ಕೈ ನೋಡೇ ಬಿಡೋಣ’ ಅಂತ ಒಪ್ಪಿಕೊಂಡೆ. ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ಉಪ್ಪಿ ಹಿರೋ ಆಗಿ ಲಾಂಚ್ ಆದ. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ‘ಎ’ ಚಿತ್ರ, ತಂಡದಲ್ಲಿದ್ದ ಎಲ್ಲರಿಗೂ ಹೆಸರು ತಂದುಕೊಟ್ಟಿತು. ಹತ್ತೊಂಬತ್ತು ವರ್ಷದ ಹಿಂದೆ ಬಿಡುಗಡೆಯಾದ ಆ ಚಿತ್ರ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ.

‘ಎ’ ಚಿತ್ರದಿಂದ ಆರಂಭವಾದ ನನ್ನ ಸಿನಿಮಾ ಪಯಣಕ್ಕೀಗ ಹತ್ತೊಂಬತ್ತು ವರ್ಷ. ಇಷ್ಟು ವರ್ಷದ ಜರ್ನಿಯಲ್ಲಿ ‘ಸ್ಪರ್ಶ’, ‘ಪ್ರತ್ಯರ್ಥ’, ‘ಕಂಠಿ’, ‘ಆ ದಿನಗಳು’  ‘ಜಗ್ಗುದಾದ’, ಇತ್ತೀಚಿನ ‘ಮಮ್ಮಿ’ ಸೇರಿದಂತೆ ಒಟ್ಟು 39 ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದೇನೆ. ಅನುಭವಿ ನಿರ್ದೇಶಕರಲ್ಲದೆ ಹೊಸ ನಿರ್ದೇಶಕರ ಜೊತೆಯೂ ಕೆಲಸ ಮಾಡಿದ್ದೇನೆ.

ಈ ಅವಧಿಯಲ್ಲಿ ’ಎಚ್‌2ಒ’, ‘ಆಟೊ ಶಂಕರ್’ ಹಾಗೂ ‘ಕಠಾರಿವೀರ ಸುರಸುಂದರಾಂಗಿ’ ಚಿತ್ರಗಳಲ್ಲಿ ಉಪ್ಪಿ ಮತ್ತು ನಾನು ಮತ್ತೆ ಒಟ್ಟಾಗಿ ಕೆಲಸ ಮಾಡಿದ್ದೇವೆ. ಸದ್ಯ ಅರ್ಜುನ್ ಸರ್ಜಾ ಅವರ ‘ಪ್ರೇಮಬರಹ’ ಚಿತ್ರದಲ್ಲಿ ತೊಡಗಿಕೊಂಡಿರುವೆ. ಬಾಲಿವುಡ್ ಚಿತ್ರವೊಂದಕ್ಕೆ ಕೆಲಸ ಮಾಡುವ ಕುರಿತಂತೆ ಮಾತುಕತೆ ನಡೆಯುತ್ತಿದೆ.

ಸೆಟ್‌ನಲ್ಲೇ ತಯಾರಿ
ನಾನು ಒಪ್ಪಿಕೊಳ್ಳುವ ಚಿತ್ರಗಳಿಗೆ ಮನೆಯಲ್ಲಿ ಕುಳಿತು ಯಾವುದೇ ಹೋಮ್‌ವರ್ಕ್ ನಡೆಸುವುದಿಲ್ಲ. ಕಥೆ ಕೇಳುವಾಗಲೇ ನಿರ್ದೇಶಕನ ಅಗತ್ಯಗಳೇನು ಎಂಬುದನ್ನು ತಿಳಿದುಕೊಳ್ಳುತ್ತೇನೆ. ಲೊಕೇಷನ್‌ನಲ್ಲಿ ಅಂದಿನ ಕಥೆಯ ಭಾಗನ್ನೊಮ್ಮೆ ಕೇಳಿ ಚರ್ಚಿಸಿ, ದೃಶ್ಯವನ್ನು ಯಾವ ಯಾವ ಆ್ಯಂಗಲ್‌ನಲ್ಲಿ ಸೆರೆಹಿಡಿಯಬಹುದು ಎಂದು ಪ್ಲಾನ್ ಮಾಡಿಕೊಳ್ಳುವೆ.

ಚಿತ್ರವೊಂದು ಅಚ್ಚುಕಟ್ಟಾಗಿ ಮೂಡಿಬರಬೇಕಾದರೆ ಸ್ಕ್ರೀನ್‌ಪ್ಲೇ ಮತ್ತು ಸಿನಿಮಾಟೋಗ್ರಫಿ ಒಟ್ಟೊಟ್ಟಿಗೆ ಸಾಗಬೇಕು. ನಿರ್ದೇಶಕನಿಗೆ ಇದು ಚೆನ್ನಾಗಿ ಗೊತ್ತಿರಬೇಕು.ನಿರ್ದೇಶಕನ ಕನಸುಗಳಿಗೆ ಕಣ್ಣಾಗುವವನು ಛಾಯಾಗ್ರಾಹಕ.

ಇತ್ತೀಚೆಗೆ ಛಾಯಾಗ್ರಹಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಹೊಸ ತಂತ್ರಜ್ಞಾನ ಬಂದಿದೆ. ಫ್ಲೈ ಕ್ಯಾಮೆರಾಗಳು ಸೇರಿದಂತೆ, ಲಕ್ಷಾಂತರ ರೂಪಾಯಿ ಬೆಲೆಬಾಳುವ ಕ್ಯಾಮೆರಾಗಳು ಮಾರುಕಟ್ಟೆಗೆ ಬಂದಿವೆ. ಆದರೆ, ಕಲಾಪ್ರಜ್ಞೆ ಮತ್ತು ಸೃಜನಶೀಲತೆ ಇಲ್ಲದಿದ್ದರೆ ಎಂಥ ತಂತ್ರಜ್ಞಾನ ಕೈಯಲ್ಲಿದ್ದರೂ ವ್ಯರ್ಥ.

‘ಮಮ್ಮಿ’ಯಲ್ಲಿ ಕಂಡ ಮರಿ ಉಪ್ಪಿ!
ಕತ್ತಲು ಬೆಳಕಿನಲ್ಲಿ ಆಟವಾಡುವ ಅವಕಾಶವಿರುವ ಚಿತ್ರವೊಂದಕ್ಕೆ ನಾನೂ ಕಾಯುತ್ತಿದ್ದೆ. ಇತ್ತೀಚೆಗೆ ಬಿಡುಗಡೆಯಾಗಿ ಗಮನಸೆಳೆದ ‘ಮಮ್ಮಿ’ ಚಿತ್ರದ ಮೂಲಕ ನನ್ನ ಆಸೆ ಈಡೇರಿತು.

‘ಮಮ್ಮಿ’ ನಿರ್ದೇಶಕ ಲೋಹಿತ್ ಇನ್ನೂ ಚಿಕ್ಕ ಹುಡುಗ. ವರ್ಷದ ಹಿಂದೆಯೇ ಮನೆಗೆ ಬಂದು ಕಥೆ ಹೇಳಿದ್ದ. ಆತ ಆರಿಸಿಕೊಂಡಿರುವ ವಿಷಯ ಹಾಗೂ ನಾಲ್ಕೇ ಪಾತ್ರಗಳಲ್ಲಿ ಕಥೆ ಸಾಗುವ ರೀತಿಯನ್ನು ಕೇಳಿದಾಗ, ‘ನಿಜವಾಗ್ಲೂ ಈತ ಸಿನಿಮಾ ಮಾಡ್ತಾನಾ?’ ಎಂಬ ಅನುಮಾನ ಮೂಡಿತ್ತು. ಹಾಗಾಗಿ ‘ಮಾಡೋಣ’ ಎಂದು ದಿನಗಳನ್ನು ಮುಂದೂಡಿಕೊಂಡು  ಬಂದೆ. ಆದರೆ, ಆತ ಮಾತ್ರ ನನ್ನ ಬೆನ್ನು ಬಿಡಲಿಲ್ಲ.

ಕಥೆಯ ಬಗ್ಗೆ ಲೋಹಿತ್‌ಗೆ ಸ್ಪಷ್ಟತೆ ಇತ್ತು. ತನಗೇನು ಬೇಕು, ಬೇಡ ಎಂಬುದರ ಅರಿವಿತ್ತು. ಈ ಎಲ್ಲ ಅಂಶಗಳಿಂದಾಗಿ ಆತನ ಜತೆ ಕೆಲಸ ಮಾಡಲು ನಿರ್ಧರಿಸಿದೆ. ಚಿತ್ರಕಥೆ ಸವಾಲಿನದಾಗಿತ್ತು. ಯಾವುದೇ ಗ್ಲ್ಯಾಮರ್ ಇಲ್ಲದೆ, ಗ್ರೇ ಶೇಡ್‌ನಲ್ಲಿ ಒಂದೇ ಕ್ಯಾಮೆರಾದಲ್ಲಿ ಶೂಟ್ ಮಾಡಿದೆವು. ಚಿತ್ರದ ಶೇ 90ರಷ್ಟು ಭಾಗವನ್ನು ಸಹಜ ಬೆಳಕಿನಲ್ಲೇ ಚಿತ್ರೀಕರಿಸಿದ್ದೇವೆ.

ಕೆಲವು ದೃಶ್ಯಗಳಿಗೆ ಮೇಣದ ಬತ್ತಿ ಬಳಸಿದ್ದೇವೆ. ಮೊಬೈಲ್‌ ಮತ್ತು ಟಾರ್ಚ್ ಬೆಳಕಿನಲ್ಲಿ ಕ್ಲೈಮ್ಯಾಕ್ಸ್‌ ಚಿತ್ರೀಕರಿಸಿದ್ದೇವೆ. ಹಾರರ್ ಸಿನಿಮಾಗಳ ಪಲ್ಸ್ ಏನು ಅಂತ ಆತನಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ, ನೆರಳು ಬೆಳಕಿನಾಟದ ಜತೆಗೆ ಸೌಂಡ್‌ ಎಫೆಕ್ಟ್ ಮೂಲಕ ಒಳ್ಳೆಯ ಹಾರರ್ ಚಿತ್ರವಾಗಿ ‘ಮಮ್ಮಿ’ ಮೂಡಿಬಂತು.

ನಿರ್ದೇಶನದ ಜತೆಗೆ ಛಾಯಾಗ್ರಹಣದ ಬಗ್ಗೆಯೂ ಒಳ್ಳೆಯ ಮಾತುಗಳು ಕೇಳಿಬಂದವು. ಸಿನಿಮಾ ಕುರಿತು ಆರಂಭದಲ್ಲಿ ಉಪೇಂದ್ರನಲ್ಲಿದ್ದ ಆಲೋಚನೆಗಳು ಮತ್ತು ಐಡಿಯಾಗಳನ್ನು ನಾನು ಲೋಹಿತ್‌ನಲ್ಲಿ ಕಂಡಿದ್ದೇನೆ. ಉಪ್ಪಿಯಂತೆ ಈತನೂ ಹಾರ್ಡ್‌ವರ್ಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT