ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವುಕರ ‘ಬ್ಯೂಟಿಫುಲ್ ಮನಸುಗಳು’

Last Updated 12 ಜನವರಿ 2017, 19:30 IST
ಅಕ್ಷರ ಗಾತ್ರ

‘ನಮ್ಮದು ಭಾವುಕರ ತಂಡ. ವ್ಯವಹಾರದ ಚೌಕಟ್ಟನ್ನು ಮೀರಿ ಎಲ್ಲರೂ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಆದ್ದರಿಂದಲೇ ನನಗೇ ಸಿನಿಮಾದ ಬಗ್ಗೆ ಯಾವುದೇ ಆತಂಕ ಇಲ್ಲ.ಹೆಮ್ಮೆಯಿದೆ. ತೃಪ್ತಿಯಿದೆ. ನಿರಾಳವಾಗಿದ್ದೇನೆ’.

ತಮ್ಮ ನಿರ್ದೇಶನದ ‘ಬ್ಯೂಟಿಫುಲ್‌ ಮನಸುಗಳು’ ಬಗ್ಗೆ ಮಾತನಾಡುವಾಗ ನಿರ್ದೇಶಕ ಜಯತೀರ್ಥ ಅವರ ಮಾತಿನಲ್ಲಿಯೂ ಭಾವುಕತೆಯ ಲೇಪ ಇತ್ತು. ಇದೇ ತಿಂಗಳ 20ರಂದು ಬಿಡುಗಡೆ ಮಾಡುವ ಸುದ್ದಿಯನ್ನು ಹಂಚಿಕೊಳ್ಳಲಿಕ್ಕಾಗಿ ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು.

ನೈಜ ಘಟನೆಯಿಂದ ಪ್ರೇರೇಪಿತರಾಗಿ ಈ ಸಿನಿಮಾ ಮಾಡಿದ್ದಾರೆ ಜಯತೀರ್ಥ. ‘ಚಿತ್ರಕಥೆ ಬರೆಯುವಾಗ ನನ್ನದೇ ಬದುಕಿನ ಹಲವು ಭಾವುಕ ಸನ್ನಿವೇಶಗಳು ಮನಸಲ್ಲಿ ಹಾದು ಹೋಗಿ ಕಣ್ಣೀರಿಡುತ್ತಿದ್ದೆ. ಈ ಸಿನಿಮಾ ನೋಡುತ್ತಿರುವ ಎಲ್ಲರಿಗೂ ಇದು ತಮ್ಮದೇ ಬದುಕಿನ ಭಾಗ ಎನಿಸುತ್ತದೆ’ ಎಂದು ಅವರು ವಿವರಿಸಿದರು.

‘ನಾನು ಸಿನಿಮಾ ಮಾಡುವಾಗ ಇದು ಗೆಲ್ಲುತ್ತದೆ–ಸೋಲುತ್ತದೆ ಎಂದೆಲ್ಲ ಯೋಚಿಸುತ್ತ ಕೂರುವುದಿಲ್ಲ. ಆ ಕಥೆ ನನ್ನ ಮನಸ್ಸಿಗೆ ತಾಕಬೇಕು. ಬ್ಯೂಟಿಫುಲ್‌ ಮನಸುಗಳು ನನ್ನನ್ನು ಹಾಗೆ ಆವರಿಸಿಕೊಂಡ ಸಿನಿಮಾ’ ಎಂದರು ನಾಯಕ ನೀನಾಸಂ ಸತೀಶ್‌.

‘ನೀನಾಸಮ್‌’ ಸಂಸ್ಥೆಯ ಒಂದು ನಾಟಕಕ್ಕಾಗಿ ಬಿ.ವಿ. ಕಾರಂತ್‌ ಸಂಯೋಜಿಸಿದ ಒಂದು ಹಾಡಿನ ಟ್ಯೂನ್‌ ಅನ್ನೇ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಆ ನಾಟಕದಲ್ಲಿ ಕೆ. ವಿ. ಸುಬ್ಬಣ್ಣ ಬರೆದ ಹಾಡಿನ ಮೊದಲೆರಡು ಸಾಲುಗಳನ್ನೂ ಕೊಂಚ ಬದಲಾವಣೆ ಮಾಡಿಕೊಂಡು ಬಳಸಿಕೊಳ್ಳಲಾಗಿದೆ. ಉಳಿದ ಸಾಲುಗಳನ್ನು ಪತ್ರಕರ್ತ ಮದನ್‌ ಬೆಳ್ಳಿಸಾಲು ಬರೆದಿದ್ದಾರೆ.

‘ಇದು ನನ್ನ ಮಟ್ಟಿಗೆ ಮೊದಲ ಅನುಭವ. ಹಾಡು ಎಲ್ಲರಿಗೂ ಮೆಚ್ಚುಗೆಯಾಗಿದೆ. ಅದಕ್ಕಿಂತ ಹಲವು ಪಟ್ಟು ಸಿನಿಮಾ ಮೆಚ್ಚುಗೆ ಆಗಲಿ’ ಎಂದು ಹಾರೈಸಿದರು ಮದನ್‌.ಶ್ರುತಿ ಹರಿಹರನ್‌ ಮಾತನಾಡುತ್ತ ಈ ಸಿನಿಮಾಕ್ಕೂ ಪ್ರಸ್ತುತ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ವಿದ್ಯಮಾನಗಳಿಗೂ ಇರುವ ಸಂಬಂಧದ ಕುರಿತು ತಮ್ಮದೇ ಶೈಲಿಯಲ್ಲಿ ವಿವರಿಸಿದರು.

‘ಈ ಹೊಸ ವರ್ಷದ ಆಚರಣೆಯಲ್ಲಿ ಹೆಣ್ಣು ಮಕ್ಕಳಿಗೆ ಏನು ಆಗಬಾರದಿತ್ತೋ ಅದು ಆಗಿಹೋಯ್ತು. ಈಗ ಎಲ್ಲ ಕಡೆಯಲ್ಲಿಯೂ ಇದೇ ಚರ್ಚೆ. ಪರ ವಿರೋಧ ವಾದ ವಾಗ್ವಾದ ಜೋರಾಗಿದೆ. ಆದರೆ, ಹಾಗೆ ಶೋಷಣೆಗೆ ಒಳಗಾಗಿರುವ ಹೆಣ್ಣುಮಕ್ಕಳ ಮನಸ್ಥಿತಿ ಹೇಗಿರಬಹುದು? ಈ ಬಗ್ಗೆ ನಾವು ಯೋಚಿಸುವುದೇ ಇಲ್ಲ.

ಇಂಥ ಮನಸ್ಥಿತಿಯನ್ನು ಹಾದು ಬಂದ ‘ನಂದಿನಿ’ ಎಂಬ ಹುಡುಗಿಯ ಪಾತ್ರದಲ್ಲಿ ನಾನು ನಟಿಸಿದ್ದೇನೆ’ ಎಂದು ತಮ್ಮ ಪಾತ್ರದ ಕುರಿತು ಹೇಳಿಕೊಂಡರು. ಎಸ್‌. ಪ್ರಸನ್ನ ಬ್ಯೂಟಿಫುಲ್‌ ಮನಸ್ಸುಗಳಿಗೆ ಹಣಹೂಡಿದ್ದಾರೆ. ಕಿರಣ್‌ ಛಾಯಾಗ್ರಹಣವಿದೆ.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT