ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡ ಬಣ್ಣ ‘ಹೊಂಬಣ್ಣ’

Last Updated 12 ಜನವರಿ 2017, 19:30 IST
ಅಕ್ಷರ ಗಾತ್ರ

ಹಸಿರನ್ನು ಹೊದ್ದ ಬೆಟ್ಟಗುಡ್ಡಗಳು, ಸುರಿವ ಮಳೆ, ಭೋರ್ಗರೆಯುವ ಜಲಪಾತ... ಕಣ್ಣಿಗೆ ಹಬ್ಬವೆನಿಸುವ ನಿಸರ್ಗದ ರಮಣೀಯತೆಯನ್ನು ಪ್ರತಿಫಲಿಸುವ ಮಲೆನಾಡು ತೆರೆಯ ಮೇಲೆ ‘ವಾಹ್‌’ ಎನಿಸುವಷ್ಟು ಮುದ ನೀಡುತ್ತದೆ. ನಮ್ಮ ಸಿನಿಮಾಗಳು ಮಲೆನಾಡನ್ನು ಸಿನಿಮಾದೊಳಗಿನ ಸೌಂದರ್ಯದ ‘ವಸ್ತು’ವಾಗಿ ನೋಡಿವೆಯೇ ವಿನಾ, ಅದರ ಆಂತರ್ಯ ಪ್ರವೇಶಿಸಿಲ್ಲ.

ಮಲೆನಾಡನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಹೇಳುವ ಸಿನಿಮಾಗಳ ಸಂಖ್ಯೆ ಬೆರಳಣಿಕೆಯಷ್ಟು. ಅದರಲ್ಲಿಯೂ ವ್ಯಾಪಾರಿ ಸಿನಿಮಾಗಳು ಮಲೆನಾಡಿನ ಮೂಲ ಪ್ರಾದೇಶಿಕ ಚಹರೆಗಳನ್ನು ಬಹುತೇಕ ಕಡೆಗಣಿಸಿವೆ. ಈ ಕೊರತೆಯನ್ನು- ಆಧುನಿಕತೆಯ ಸುಳಿಯೊಳಗೆ ಸಿಲುಕಿದ ಮಲೆನಾಡಿಗರ ಬದುಕು, ಸರ್ಕಾರದ ಕಾನೂನು ಕಟ್ಟಳೆಗಳಡಿಯಲ್ಲಿ ನಲುಗುವ ರೈತಾಪಿ ಜನರ ಸಂಕಟಗಳ ಮುಖಗಳನ್ನು ತೆರೆದಿಡುವ ಮೂಲಕ ‘ಹೊಂಬಣ್ಣ’ ನೀಗಿಸುತ್ತದೆ ಎಂಬ ಭರವಸೆ ನಿರ್ದೇಶಕ ರಕ್ಷಿತ್ ಗೌಡ ಅವರದು.

‘ಹೊಂಬಣ್ಣ’ ಎನ್ನುವುದು ಚಿತ್ರದ ಪಾತ್ರದ ಹೆಸರೂ ಹೌದು, ಮಲೆನಾಡಿಗರಲ್ಲಿ ಉಳಿದಿರುವ ಭರವಸೆಯ ಪ್ರತೀಕವೂ ಹೌದು. ರಕ್ಷಿತ್‌ ಕೈಗೆತ್ತಿಕೊಂಡಿರುವುದು ದೀರ್ಘಕಾಲದಿಂದ ಚರ್ಚೆಯಲ್ಲಿರುವ ಅರಣ್ಯ ಒತ್ತುವರಿಯ ಸಮಸ್ಯೆಯನ್ನು. ಬದುಕು ಕಟ್ಟಿಕೊಳ್ಳಲು ನಾಲ್ಕು ಎಕರೆ ಒತ್ತುವರಿ ಮಾಡುವವನಿಗೂ, ಹಣದಾಸೆಗಾಗಿ 400 ಎಕರೆ ಕಾಡನ್ನು  ಬಟಾಬಯಲು ಮಾಡುವ ಸಿರಿವಂತನಿಗೂ ಒಂದೇ ಕಾನೂನು. ಆದರೆ ಕಾನೂನಿನ ಚೌಕಟ್ಟಿನಲ್ಲಿ ಬಂದಿಯಾಗುವವನು ಬಡ ರೈತನೇ ಹೊರತು ಹಣವಂತನಲ್ಲ.

ರೈತನೇ ದೇಶದ ಬೆನ್ನೆಲುಬು ಎನ್ನುವ ಘೋಷಣೆಯುಳ್ಳ ಕೃಷಿ ಪ್ರಧಾನ ದೇಶದಲ್ಲಿ, ಕಾನೂನುಗಳು ಕಠಿಣವಾಗಿ ಅನ್ವಯಿಸುವುದು ರೈತನಿಗೆ ಮಾತ್ರ. ಕಷ್ಟಪಟ್ಟು ಮಾಡಿಕೊಂಡ ಜಮೀನು–ಮನೆ ಕಳೆದುಕೊಳ್ಳುವ ಕೃಷಿಕರ ಪರವಾಗಿ ಯಾರೂ ನಿಲ್ಲುವುದಿಲ್ಲ ಎಂಬ ಸತ್ಯವನ್ನು ರಕ್ಷಿತ್ ಕಣ್ಣಾರೆ ಕಂಡಿದ್ದಾರೆ. ಈ ಘಟನಾವಳಿಗಳನ್ನು ತೀರಾ ಗಂಭೀರ ಸಾಕ್ಷ್ಯಚಿತ್ರವನ್ನಾಗಿಸದೆ, ವ್ಯಾಪಾರಿ ಸಿನಿಮಾ ಗುಣಗಳನ್ನು ಬೆರೆಸಿ ವಿಸ್ತರಿಸಿದ್ದಾರೆ ಅವರು. ಮರಳು, ಕಲ್ಲು ಗಣಿಗಾರಿಕೆ ಅವ್ಯವಹಾರಗಳು, ಮರಗಳ ಕಳ್ಳಸಾಗಣೆಯಂತಹ ದಶಕಗಳಿಂದ ಕಾಡುತ್ತಿರುವ ಪರಿಸರದ ಮೇಲಿನ ದಾಳಿಗಳನ್ನು ತೆಳುವಾಗಿ ಚಿತ್ರಿಸಿರುವುದಾಗಿ ಅವರು ಹೇಳುತ್ತಾರೆ.

ಮಲೆನಾಡಿನ ಒತ್ತುವರಿ–ಒಕ್ಕಲೆಬ್ಬಿಸುವಿಕೆಯ ಸಮಸ್ಯೆ ‘ಹೊಂಬಣ್ಣ’ದ ಕೇಂದ್ರ. ಅದನ್ನು ಸಿನಿಮೀಯವಾಗಿ ಕಟ್ಟಿಕೊಟ್ಟಿರುವುದಾಗಿ ರಕ್ಷಿತ್ ಹೇಳುತ್ತಾರೆ. ಅತಿರೇಕ, ಮಸಾಲೆಗಳಿಲ್ಲದ ವ್ಯಾಪಾರಿ ಸಿನಿಮಾ ರೂಪಿಸುವ ಪ್ರಯತ್ನ ತಮ್ಮದ್ದಾಗಿತ್ತು ಎಂದು ಅವರು ವಿವರಿಸುತ್ತಾರೆ.

ಮಲೆನಾಡಿನ ಅಪ್ಪಟ ಗ್ರಾಮ್ಯ ಭಾಷೆ, ಸಂಸ್ಕೃತಿ, ಆಚರಣೆಗಳ ಎಳೆಗಳನ್ನು ಪರಿಚಯಿಸುವುದರ ಜತೆಗೆ, ಮಧುರ ಪ್ರೇಮಕಥೆಯೊಂದನ್ನು ಅದರೊಳಗೆ ಬೆಸೆದಿದ್ದಾರೆ. ಪ್ರೇಮದ ಚುಂಗು, ಹಾಸ್ಯ ಎಲ್ಲವೂ ಮೂಲ ವಸ್ತುವಿನೊಂದಿಗೇ ಬೆರೆತಿರುವುದರಿಂದ ಅಪ್ಪಟ ಪ್ರಾದೇಶಿಕತೆ ದಕ್ಕುವುದರಲ್ಲಿ ಸಂಶಯವಿಲ್ಲ ಎನ್ನುವ ಭರವಸೆ ಅವರದು. ಸಮಸ್ಯೆಗಳನ್ನು ಬಿಂಬಿಸುವುದರ ಜತೆಗೆ ‘ಹೊಂಬಣ್ಣ’ನ ಬದುಕಿನಲ್ಲಿ ಎಲ್ಲವೂ ಒಳಿತಾಗಲಿದೆ ಎಂಬ ಆಶಯವನ್ನು ಅವರು ಚಿತ್ರದಲ್ಲಿ ವ್ಯಕ್ತಪಡಿಸಿದ್ದಾರಂತೆ.

ಮಲೆನಾಡಿನಿಂದ ಸಿನಿಮಾ ಮಡಿಲಿಗೆ...
ತೀರ್ಥಹಳ್ಳಿಯವರಾದ ರಕ್ಷಿತ್‌, ಆರಂಭದ ವಿದ್ಯಾಭ್ಯಾಸ ಮುಗಿಸಿದ್ದು ದಾವಣಗೆರೆ, ರಾಣೆಬೆನ್ನೂರುಗಳಲ್ಲಿ. ಬಳಿಕ ತವರೂರಿಗೆ ಮರಳಿ ಪಾಲಿಟೆಕ್ನಿಕ್‌ನಲ್ಲಿ ಓದು ಮುಗಿಸಿ, ಬೆಂಗಳೂರಿನ ಎಂಜನಿಯರಿಂಗ್ ಕಂಪೆನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಬರವಣಿಗೆ ಅವರ ಇಷ್ಟದ ಕ್ಷೇತ್ರ.

ಫೇಸ್‌ಬುಕ್‌ನಲ್ಲಿ ಹನಿಗವಿತೆಗಳನ್ನು ನಿರಂತರವಾಗಿ ಪ್ರಕಟಿಸುವ ಅವರನ್ನು ಸಿನಿಮಾ ಪ್ರಭಾವಿಸಿತ್ತು. ನಿರ್ದೇಶನ ಮಾಡಬೇಕೆಂದು ಕೆಲವು ಕಥೆಗಳನ್ನೂ ಸಿದ್ಧಪಡಿಸಿದ್ದರು. ಆದರೆ ಊರಿನಲ್ಲಿ ನಡೆಯುತ್ತಿದ್ದ ಅರಣ್ಯ ಒತ್ತುವರಿ ಸುತ್ತಲಿನ ಘಟನೆಗಳು ಅವರನ್ನು ತೀವ್ರವಾಗಿ ಕಾಡಿದಾಗ, ಈ ಕುರಿತು ಸಿನಿಮಾದಂತಹ ಪ್ರಬಲ ಮಾಧ್ಯಮದಲ್ಲಿ ಬಿಂಬಿಸುವ ಅಗತ್ಯವಿದೆ ಎಂದು, ಕಣ್ಣಾರೆ ಕಂಡ ಘಟನೆಗಳಿಗೆ ಸಿನಿಮಾ ಕಥನದ ರೂಪ ನೀಡಿದರು.

ಸಿನಿಮಾ ಕ್ಷೇತ್ರದಲ್ಲಿ ರಕ್ಷಿತ್ ಅನನುಭವಿ. ಆದರೆ ಸಿನಿಮಾದ ಗಂಭೀರ ವಿದ್ಯಾರ್ಥಿ. ಚಿತ್ರೀಕರಣ ನಡೆಯುವ ಸ್ಥಳಗಳಿಗೆ ಹೋಗಿ ಅದರ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಕೆಲವು ತರಗತಿಗಳಿಗೂ ಹಾಜರಾಗಿ ನಿರ್ದೇಶನದ ಕುರಿತ ಜ್ಞಾನ ಬೆಳೆಸಿಕೊಂಡರು. ನಿರ್ದೇಶನ ಸಾಹಸದ ಜೊತೆಗೆ, ಚಿತ್ರದ ಸಂಭಾಷಣೆ ಮತ್ತು ಹಾಡುಗಳ ಸಾಹಿತ್ಯವನ್ನೂ ಅವರು ರಚಿಸಿದ್ದಾರೆ. ಬಾಗಲಕೋಟೆ ಮೂಲದ ರಾಮಕೃಷ್ಣ ನಿಗಡೆ ಚಿತ್ರದ ನಿರ್ಮಾಪಕರು.

ಮಲೆನಾಡಿನ ಭಾಷೆಯನ್ನು ನಿಖರವಾಗಿ ಅರಿತ ಕಲಾವಿದರೇ ಬೇಕಿದ್ದರಿಂದ, ಅವರಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಸುಬ್ಬು, ಧನು ಗೌಡ, ವರ್ಷ ಆಚಾರ್ಯ, ಪವಿತ್ರಾ ಮುಂತಾದ ಸಿನಿಮಾ, ರಂಗಭೂಮಿಯ ಅನುಭವಗಳಿರುವ ಊರಿನ ಕಲಾವಿದರನ್ನೇ ಬಳಸಿಕೊಂಡಿದ್ದಾರೆ.

ಸುಚೇಂದ್ರ ಪ್ರಸಾದ್‌, ದತ್ತಾತ್ರೇಯ ಅವರಂತಹ ಹಿರಿಯರೂ ನಟಿಸಿದ್ದಾರೆ. ತೀರ್ಥಹಳ್ಳಿ, ಸಾಗರ, ಹೆಬ್ರಿ ಮುಂತಾದೆಡೆ ಚಿತ್ರೀಕರಣ ನಡೆಸಿದ್ದಾರೆ. ವಿನು ಮನಸು ಸಂಗೀತ ನೀಡಿರುವ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಅವರಲ್ಲಿ ಭರವಸೆ ಮೂಡಿಸಿದೆ. ಅಜನೀಶ್‌ ಲೋಕನಾಥ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಚಿತ್ರವನ್ನು ತೆರೆಗೆ ತರಲು ಅವರು ಉತ್ಸುಕರಾಗಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT