ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದಲ್ಲಿ ಶಿರಸಿ ‘ಲಯನ್ಸ್‌’ ಗರ್ಜನೆ

ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌: ಧಾರವಾಡ ವಲಯಮಟ್ಟದ ಸ್ಪರ್ಧೆಯಲ್ಲಿ 90 ಪ್ರೌಢಶಾಲೆಗಳು ಭಾಗಿ
Last Updated 13 ಜನವರಿ 2017, 5:17 IST
ಅಕ್ಷರ ಗಾತ್ರ
ಧಾರವಾಡ: ಗೆಲ್ಲಲೇಬೇಕು ಎಂಬ ಗುರಿಯ ಜೊತೆಗೆ, ‘ವಿಷಯ ತಿಳಿದುಕೊಳ್ಳಬೇಕು’ ಎಂದು ಬಂದವರ ಸಂಖ್ಯೆ ಅಲ್ಲಿ ಹೆಚ್ಚಿತ್ತು. ಗೆಲುವಿನ ಸಿಹಿ–ಸೋಲಿನ ಕಹಿಗಳ ನಡುವೆ ‘ಜ್ಞಾನ’ದ ಸವಿ ಉಂಡವರೇ ಅಲ್ಲಿ ಅನೇಕ.  ಇನ್ನೊಂದೆರಡು ಉತ್ತರ ಸರಿಯಾಗಿ ಬರೆದಿದ್ದರೆ, ನಾನೂ ‘ಅಲ್ಲಿರುತ್ತಿದ್ದೆ’ ಎಂದುಕೊಂಡೇ ಸ್ಪರ್ಧೆ ವೀಕ್ಷಿಸಿದ ಅನೇಕ ವಿದ್ಯಾರ್ಥಿಗಳು, ತಮ್ಮ ಪಾಲಿಗೆ ಬಂದ ಪ್ರಶ್ನೆಗಳಿಗೆ ಉತ್ತರ ಹೇಳಿ ಸಮಾಧಾನಪಟ್ಟುಕೊಳ್ಳುತ್ತಿದ್ದ ವೀಕ್ಷಕರು...
 
ಧಾರವಾಡದ ಸೃಜನಾ ರಂಗಮಂದಿರದಲ್ಲಿ ಶುಕ್ರವಾರ ಜರುಗಿದ ‘ಪ್ರಜಾವಾಣಿ’ಯ ಕ್ವಿಜ್‌ ಚಾಂಪಿಯನ್‌ಶಿಪ್‌ನ ಧಾರವಾಡ ವಲಯಮಟ್ಟ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯಗಳಿವು. 90 ಪ್ರೌಢಶಾಲೆಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳ ನಡುವಿನ ಸ್ಪರ್ಧೆ ಎದುರಿಸಿದ ಶಿರಸಿಯ ಲಯನ್ಸ್‌ ಪ್ರೌಢಶಾಲೆಯ ಚಿನ್ಮಯ್‌ ಡಿ. ಹೆಗ್ಡೆ, ಪ್ರಜ್ವಲ್‌ ಯಾಜಿ  ವಿಜಯದ ಮಾಲೆಯನ್ನು ಕೊರಳಿಗೆ ಹಾಕಿಕೊಂಡರು. 
 
ಧಾರವಾಡ, ಉತ್ತರ ಕನ್ನಡ,  ವಿಜಯಪುರ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆಯಿಂದ ವಿವಿಧ ಸ್ಪರ್ಧಿಗಳು ಸ್ಪರ್ಧೆಗೆ ಬಂದಿದ್ದರು. ಬೆಳಿಗ್ಗೆ 9ರಿಂದಲೇ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲಾರಂಭಿಸಿದ್ದರು. ಬೆಳಿಗ್ಗೆ 10.30ರ ವೇಳೆಗೆ ವಿದ್ಯಾರ್ಥಿಗಳಿಂದಲೇ ಸ್ಪರ್ಧೆಯನ್ನು ಉದ್ಘಾಟಿಸಲಾಯಿತು. 
 
ಒಂದು ಪ್ರೌಢಶಾಲೆಯಿಂದ ಆರು ತಂಡಗಳಂತೆ 12 ವಿದ್ಯಾರ್ಥಿಗಳು ಭಾಗವಹಿಸಬೇಕಿತ್ತು. ಎಲ್ಲ ಸ್ಪರ್ಧಿಗಳಿಗೆ ಮೊದಲು 20 ಪ್ರಶ್ನೆಗಳನ್ನು ಕ್ವಿಜ್‌ ಮಾಸ್ಟರ್‌ ರಾಘವ್‌ ಚಕ್ರವರ್ತಿ ಕೇಳಿದರು. ಈ ಪ್ರಶ್ನೆಗಳಿಗೆ ಲಿಖಿತವಾಗಿ ಉತ್ತರಿಸುವ ಅವಕಾಶವಿತ್ತು. ಇವರಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಆರು ತಂಡಗಳನ್ನು ಎರಡನೇ ಸುತ್ತಿಗೆ ಆಯ್ಕೆ ಮಾಡಲಾಯಿತು. ಈ ತಂಡಗಳು ಗಳಿಸಿದಷ್ಟೇ ಅಂಕಗಳನ್ನು ಇನ್ನೂ ಎರಡು ತಂಡಗಳು ಪಡೆದಿದ್ದವು. ಆದರೆ, ‘ಸ್ಟಾರ್‌’ ಗುರುತಿನ ಪ್ರಶ್ನೆಗಳಿಗೆ ಹೆಚ್ಚು ಉತ್ತರ ನೀಡಿದವರನ್ನು ಆಯ್ಕೆ ಮಾಡಲಾಯಿತು. ಆರು ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಂಚಿತರಾದ ಹಾವೇರಿಯ ಕೆಎಲ್‌ಇ ಇಂಗ್ಲಿಷ್‌ ಮಾಧ್ಯಮ ಶಾಲೆಯ ರಾಹುಲ್‌ ಪಾಟೀಲ, ಅವನೀಶ್‌ ಲಾಡ್‌ ಹಾಗೂ ಬಾಗಲಕೋಟೆಯ ಬಸವೇಶ್ವರ ಇಂಟರ್‌ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ನ ಶೈಲಶ್ರೀ ದೊಡ್ಡಮನಿ, ಶಿವಪ್ರಸಾದ ಕಟಗಿ ಅವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. 
 
ಧಾರವಾಡ, ಉತ್ತರ ಕನ್ನಡದ ತಂಡಗಳು: ಎರಡನೇ ಸುತ್ತಿಗೆ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾದರು. ಶಿರಸಿಯ ಲಯನ್ಸ್‌ ಪ್ರೌಢಶಾಲೆಯ ಚಿನ್ಮಯ್‌ ಡಿ. ಹೆಗ್ಡೆ, ಪ್ರಜ್ವಲ್‌ ಎಂ. ಯಾಜಿ, ಧಾರವಾಡದ ಕೆ.ಇ. ಬೋರ್ಡ್ಸ್‌ ಪ್ರೌಢಶಾಲೆಯ ರಾಹುಲ್‌ ಚಿವಟೆ, ಮಹೇಶ ಹುಲ್ಲೂರ,  ಧಾರವಾಡದ ಜವಾಹರ ನವೋದಯ ವಿದ್ಯಾಲಯದ ಪಿ.ಎಚ್‌. ಅನಿಲ್‌, ಎಸ್.ಎಸ್. ಆನಂದ,  ಕಾರವಾರದ ಬಾಲಮಂದಿರ ಪ್ರೌಢಶಾಲೆಯ ಶಮಂತ್‌ ಎಸ್. ನಾಯ್ಕ, ಅಭಿನವ್‌ ಎಲ್‌. ಶೆಟ್ಟಿ, ಧಾರವಾಡದ ಜೆ.ಎಸ್.ಎಸ್. ಸ್ಟೇಟ್‌ ಸ್ಕೂಲ್‌ನ ಡಿ. ರುಷಬ್‌, ಎಚ್‌. ವೆಂಕಟೇಶ, ಹುಬ್ಬಳ್ಳಿಯ ನಿರ್ಮಲಾ ಠಕ್ಕರ್‌ ಪ್ರೌಢಶಾಲೆಯ ಅನಂತನಾಗ್‌ ಕವಡಿಕೇರಿ, ಪ್ರಮಥ್‌ ಡಿ. ಮೂಗಿ ಆಯ್ಕೆಯಾದರು. ಐದು ಸುತ್ತಿನಲ್ಲಿ ಸ್ಪರ್ಧಿಗಳಿಗೆ ಪ್ರಶ್ನೆ ಕೇಳಲಾಯಿತು.  ಸ್ಥಳೀಯವಾಗಿ ಗಮನ ಸೆಳೆದ ಅಂಶಗಳಿಂದ ಹಿಡಿದು, ಬಾಹ್ಯಾಕಾಶಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೂ ವಿದ್ಯಾರ್ಥಿಗಳು ಥಟ್ಟನೇ ಉತ್ತರ ನೀಡುತ್ತಿದ್ದರು. 
 
40 ಅಂಕಗಳೊಂದಿಗೆ ಶಿರಸಿಯ ತಂಡ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಬೆಂಗಳೂರಿನಲ್ಲಿ ನಡೆಯುವ ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಯಾಯಿತು. ಧಾರವಾಡದ ಜೆ.ಎಸ್‌.ಎಸ್‌. ಸ್ಟೇಟ್‌ ಶಾಲೆಯ ತಂಡ ದ್ವಿತೀಯ, ಹುಬ್ಬಳ್ಳಿಯ ನಿರ್ಮಲಾ ಠಕ್ಕರ್‌ ಶಾಲೆ ತೃತೀಯ ಸ್ಥಾನ ಪಡೆದುಕೊಂಡವು. 
 
ಮೊದಲ ಮೂರು ತಂಡಗಳಿಗೆ ನಗದು ಬಹುಮಾನದ ಜೊತೆಗೆ ಟ್ರೋಫಿ, ಪ್ರಶಂಸಾ ಪತ್ರ ವಿತರಿಸಲಾಯಿತು. 4,5 ಮತ್ತು 6ನೇ ಸ್ಥಾನ ಪಡೆದ ತಂಡಗಳಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು. ಧಾರವಾಡದ ಸೃಷ್ಟಿ ವಿಜ್ಞಾನ ಪಿಯು ಕಾಲೇಜು ಸ್ಪರ್ಧೆಯ ಸಹ ಪ್ರಾಯೋಜಕತ್ವ ವಹಿಸಿತ್ತು.  
 
‘ಪ್ರಜಾವಾಣಿ’ ಹುಬ್ಬಳ್ಳಿ ಬ್ಯೂರೊ ಮುಖ್ಯಸ್ಥ ಎಂ. ನಾಗರಾಜ, ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಶಿವರಾಜ ನರೋನಾ, ಜಾಹೀರಾತು ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ದಿವಾಕರ ಭಟ್‌ ಹಾಜರಿದ್ದರು. 
 
**
ಆನ್‌ಲೈನ್‌ನಲ್ಲಿ 26ಸಾವಿರ ವೀಕ್ಷಣೆ !
‘ಪ್ರಜಾವಾಣಿ’ ರಸಪ್ರಶ್ನೆ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌’ ಪುಟದಲ್ಲಿ ಅಪ್‌ಲೋಡ್‌ ಮಾಡಲಾದ ನೇರ ಪ್ರದರ್ಶನ ಜಾಗತಿಕ ಮಟ್ಟದಲ್ಲಿ 26,474 ವೀಕ್ಷಕರನ್ನು ತಲುಪಿದೆ. ಬೆಳಿಗ್ಗೆ 9.30ಕ್ಕೆ ಆರಂಭವಾದ ರಸ ಪ್ರಶ್ನೆ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗಿತ್ತು.
 
ನೇರ ಪ್ರಸಾರವನ್ನು ವೀಕ್ಷಿಸಿದವರು ಲೈಕ್ ಹಾಗೂ ಕೆಲವೊಮ್ಮೆ ಪ್ರತಿಕ್ರಿಯೆಯನ್ನೂ ಕಳುಹಿಸುತ್ತಿದ್ದುದು ಕಂಡುಬಂತು. ಕಾರ್ಯಕ್ರಮದ ಉದ್ದಕ್ಕೂ ವೀಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇದ್ದುದು ಕಂಡುಬಂತು. 
 
ಪ್ರಜಾವಾಣಿ ಆನ್‌ಲೈನ್‌ನಲ್ಲಿ ಸುದ್ದಿ ಓದಿದವರ ಸಂಖ್ಯೆಯೂ ಕಡಿಮೆ ಇರಲಿಲ್ಲ. 
 
**
ಕವಿವಿ, ಸಾಧನಕೇರಿ, ಪೇಢಾ, ಎಂ.ಎಂ. ಕಲಬುರ್ಗಿ... 
ಧಾರವಾಡ ಜಿಲ್ಲೆಗೆ ಸಂಬಂಧಿಸಿದ, ಸ್ಥಳೀಯವಾಗಿ ಗಮನ ಸೆಳೆದ ಅಂಶಗಳು ಕುರಿತ ಪ್ರಶ್ನೆಗಳು ಹೆಚ್ಚಾಗಿದ್ದವು. 
 
ಕರ್ನಾಟಕ ವಿಶ್ವವಿದ್ಯಾಲಯ, ಸಾಧನಕೇರಿ, ಧಾರವಾಡ ಪೇಢಾ, ಗಂಗೂಬಾಯಿ ಹಾನಗಲ್‌ ಗುರುಕುಲ, ಎಂ.ಎಂ. ಕಲಬುರ್ಗಿ, ದೇಶಪಾಂಡೆ ಫೌಂಡೇಷನ್‌ಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಲಾಯಿತು. 
 
ಈ ಪ್ರಶ್ನೆಗಳು ತೂರಿಬಂದಾಗ ತಲೆ ಕೆರೆದುಕೊಂಡ ಸ್ಪರ್ಧಿಗಳು, ಸರಿ ಉತ್ತರ ಹೇಳಿದಾಗ, ‘ಅಯ್ಯೋ ಇದೇನಾ’ ಎಂದು ಕೈ ಕೈ ಹಿಸುಕಿಕೊಂಡರು. 
ಜ್ಞಾನದೊಂದಿಗೆ, ಮನರಂಜನೆಯನ್ನೂ ನೀಡುವ ಹಾಗೆ ಕೆಲವು ಪ್ರಶ್ನೆಗಳನ್ನು ರಚಿಸಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT