ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಿ ವಸ್ತುವಿನಿಂದ ಮರ ಏರುವ ಯಂತ್ರ

ಕಸವನ್ನು ರಸ ಮಾಡಿದ ಯುವ ವಿಜ್ಞಾನಿಗಳು
Last Updated 13 ಜನವರಿ 2017, 5:36 IST
ಅಕ್ಷರ ಗಾತ್ರ
ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ಪ್ರದರ್ಶನ ಮತ್ತು ಸ್ಪರ್ಧೆಯ ‘ಜಿಜ್ಞಾಸಾ’ದ ಎರಡನೇ ದಿನ ಗುಜರಿ ವಸ್ತುಗಳದ್ದೇ ಕಾರುಬಾರು. ‘ಗುಜರಿ ವಸ್ತುಗಳಿಂದ ವಿಜ್ಞಾನ ಮಾದರಿ’ ಸ್ಪರ್ಧೆಯಲ್ಲಿ ಪಾಲ್ಗೊಂಡ 15 ಶಾಲೆಗಳ ತಂಡಗಳು ನಿರುಪಯುಕ್ತ ವಸ್ತುಗಳನ್ನು ಬಳಸಿ ವೈವಿಧ್ಯಮಯ ಮಾದರಿ ತಯಾರಿಸಿ ಗಮನ ಸೆಳೆದರು.
 
ಅಗಸ್ತ್ಯ ಅಂತರರಾಷ್ಟ್ರೀಯ ಫೌಂಡೇ­ಷನ್, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ, ದೇಶಪಾಂಡೆ ಫೌಂಡೇಷನ್, ಜೆ.ಎಸ್.ಡಬ್ಲ್ಯು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆಯುತ್ತಿರುವ ಪ್ರದರ್ಶನದಲ್ಲಿ ಗುಜರಿ ವಸ್ತುಗಳನ್ನು ಸಂಘಟಕರೇ ಪೂರೈಸಿದ್ದರು. ತಮಗೆ ಬೇಕಾದ ವಸ್ತುಗಳನ್ನು ಆಯ್ದುಕೊಂಡ ವಿದ್ಯಾರ್ಥಿಗಳು ಅವುಗಳಿಗೆ ‘ಜೀವ’ ತುಂಬಿದರು.
 
ಕೊಪ್ಪಳ ಜಿಲ್ಲೆ ಮೂಗನೂರು ಗ್ರಾಮದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಾದ ರವಿಕಿರಣ ಸುರಳಿಕಲ್ಲು ಮತ್ತು ಸಂತೋಷ ಗೌಡರ ಸುಲಭವಾಗಿ ಮರ ಏರಲು ಸಹಕಾರಿಯಾಗುವ ಯಂತ್ರ ತಯಾರಿಸಿದ್ದರು. 
 
ಕಬ್ಬಿಣದ ಕಂಬಕ್ಕೆ ಕಬ್ಬಿಣದಿಂದ ತಯಾರಿಸಿದ 35 ಡಿಗ್ರಿ ಬಾಗಿದ ಮತ್ತೊಂದು ವಸ್ತುವನ್ನು ಸಿಲುಕಿಸಿ ಅದರ ಮೇಲೆ ಕಾಲಿಟ್ಟು ಮೇಲೇರಬಹುದು ಎಂಬುದು ಈ ವಿದ್ಯಾರ್ಥಿಗಳ ಅನಿಸಿಕೆ. ಕಾಲಿಡುವ ವಸ್ತುವಿನ ಮೇಲೆ ಹೆಚ್ಚು ಭಾರ ಬೀಳದಂತೆ ಮಾಡಲು ಮತ್ತು ಕಂಬ ಏರುವ ವ್ಯಕ್ತಿ ದೇಹದ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗುವಂತೆ ಕಬ್ಬಿಣದ ಕೋಲನ್ನು ಕೂಡ ಬಳಸಬಹುದು ಎಂದು ರವಿಕಿರಣ ಮತ್ತು ಸಂತೋಷ ವಿವರಿಸಿದರು.
 
ಪ್ಲಾಸ್ಟಿಕ್ ಕುರ್ಚಿ, ಗೋಣಿಚೀಲ ಮತ್ತಿತರ ವಸ್ತುಗಳನ್ನು ಬಳಸಿ ಭೂಮಂಡಲ, ಸೂರ್ಯ, ಗ್ರಹಗಳು ಮತ್ತು ಅವುಗಳ ಚಲನೆಯನ್ನು ಜಿಂದಾಲ್‌ ಶಾಲೆಯ ಶಶಾಂಕ ಮತ್ತು ಆರ್ಯನ್‌ ವಿವರಿಸಿದರು.
 
ನೂಲ್ವಿ ಸರ್ಕಾರಿ ಶಾಲೆಯ ಗೌರಮ್ಮ ಹಕಾರಿ ಮತ್ತು ನಾಗರತ್ನ ದಾನಪ್ಪಗೌಡ್ರ ಹಳೆಯ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಗಾಳಿಯ ಚಲನೆಗೆ ಅನುಗುಣವಾಗಿ ನೀರು ಸಾಗಿಸುವ ತಂತ್ರದ ಮಾದರಿಯನ್ನು ಪ್ರದರ್ಶಿಸಿದರು. ವಿಜಯಪುರದ ಎಕ್ಸಲೆಂಟ್ ಶಾಲೆ ವಿದ್ಯಾರ್ಥಿಗಳಾದ ರೋಹಿತ್ ಸಿ ಮತ್ತು ಕಿರಣ ಸಿ ಡಬ್ಬಗಳು, ಅಯಸ್ಕಾಂತ ಇತ್ಯಾದಿ ಬಳಸಿ ಪವನ ಯಂತ್ರದ ಮಾದರಿಯನ್ನು ತಯಾರಿಸಿದ್ದಾರೆ. ಒಟ್ಟು ಹದಿನೈದು ಶಾಲೆಗಳ ವಿದ್ಯಾರ್ಥಿಗಳು ಮಾದರಿಗಳನ್ನು ಸಿದ್ಧಪಡಿಸಿದ್ದಾರೆ. 
 
ಅಗಸ್ತ್ಯಾ ತಂಡದವರು ನಟ್‌, ಬೋಲ್ಟ್‌, ಸ್ಕ್ರೂ ಇತ್ಯಾದಿಗಳನ್ನು ಬಳಸಿ ತಯಾರಿಸಿದ ಹಕ್ಕಿ, ಪ್ರಾಣಿ, ಕೀಟಗಳ ಮಾದರಿಗಳು ಗಮನ ಸೆಳೆಯುತ್ತಿವೆ. 
 
***
ಸಂಶೋಧನೆಗೆ ಹಾದಿಯಾದ ಕೀಟ ಪ್ರಪಂಚ
ಬೆಳಿಗ್ಗೆ ನಡೆದ ಸಮಾನಾಂತರ ಗೋಷ್ಠಿಗಳಲ್ಲಿ ಹರೀಶ ಭಟ್ ನಡೆಸಿಕೊಟ್ಟ ‘ಇಂಟೆಲ್ ಐರಿಸ್‌’ ಯೋಜನೆ ಕುರಿತ ಗೋಷ್ಠಿ ಗಮನ ಸೆಳೆಯಿತು.
 
ಕೀಟ ಪ್ರಪಂಚದಲ್ಲಿ ನಡೆಯುವ ಸೂಕ್ಷ್ಮ ಚಲನವಲನ­ಗಳ ವಿಡಿಯೊ ತೋರಿಸಿದ ಅವರು ಇದರ ಆಧಾರದಲ್ಲಿ ಯುವ ವಿಜ್ಞಾನಗಳು ನಡೆಸಿದ ಸಂಶೋ­ಧ­ನೆ­ಗಳನ್ನು ವಿವರಿಸಿದರು. ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿಯೊಬ್ಬರೂ ಇಂಥ ಸಾಧನೆ ಮಾಡಬಹುದು ಎಂದು ಅವರು ಹುರಿದುಂಬಿಸಿದರು.
 
ಜೇಡ ಬಲೆ ಹೆಣೆದು ಕೊಳ್ಳೆ ಹಿಡಿಯುವ ಕಾರ್ಯದ ವಿಡಿಯೊ ತೋರಿಸಿದ ಇದಕ್ಕಾಗಿ ಜೇಡ ಬಳಸುವ ತಂತ್ರಗಳನ್ನು ನಿತ್ಯ ಜೀವನದಲ್ಲಿ ಬಳಸಿದರೆ ಕೆಲಸಗಳನ್ನು ಸುಲಭಗೊಳಿಸ­ಬಹುದು ಎಂದರು. ಸೈನ್ಯಕ್ಕೂ ಇದು ಸಹಕಾರಿಯಾಗಬಲ್ಲುದು ಎಂದರು.
 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT