ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಯಲ್ಲಿ ತುರುಸು, ನಗರದಲ್ಲಿ ನೀರಸ ಮತದಾನ

ಎಂ.ಪಿ.ಎಂ.ಸಿ: ಧಾರವಾಡ ತಾಲ್ಲೂಕಿನ 11 ಕ್ಷೇತ್ರಗಳಿಗೆ ನಡೆದ ಚುನಾವಣೆ
Last Updated 13 ಜನವರಿ 2017, 5:37 IST
ಅಕ್ಷರ ಗಾತ್ರ
ಧಾರವಾಡ: ಜಿಲ್ಲೆಯ ಐದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ)ಗೆ ಗುರುವಾರ ಗ್ರಾಮೀಣ ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ನಡೆದರೆ, ನಗರ ಪ್ರದೇಶದಲ್ಲಿ ಮಂದಗತಿಯಲ್ಲಿ ನಡೆಯಿತು. ಒಟ್ಟಾರೆ ಜಿಲ್ಲೆಯಾದ್ಯಂತ ಶೇ 34.82ರಷ್ಟು ಮತದಾನವಾಗಿದೆ.
 
ತಾಲ್ಲೂಕಿನ ಹೆಬ್ಬಳ್ಳಿ, ಶಿವಳ್ಳಿ, ಅಮ್ಮಿ­ನ­ಬಾವಿ, ಉಪ್ಪಿನ ಬೆಟಗೇರಿ, ನರೇಂದ್ರ ಸೇರಿದಂತೆ ಇತರ ಕಡೆಗಳಲ್ಲಿ ಮತದಾನ ಜೋರಾಗಿ ನಡೆದಿತ್ತು. ಆದರೆ, ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ನವಲೂರು, ತಡಸಿನಕೊಪ್ಪ ಹಾಗೂ ಸತ್ತೂರುಗಳಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ನವಲೂರಿನ ಮತಗಟ್ಟೆ ಸಂಖ್ಯೆ  71ರಲ್ಲಿ ಒಟ್ಟು 1237 ಮತದಾರರಿದ್ದು, ಆ ಪೈಕಿ 136 ಪುರುಷರು ಹಾಗೂ 31 ಮಹಿಳೆಯರು ಸೇರಿದಂತೆ ಒಟ್ಟು 167 ಜನ ಮಧ್ಯಾಹ್ನದ ಹೊತ್ತಿಗೆ ಮತದಾನ ಮಾಡಿದ್ದರು. ಅದೇ ಗ್ರಾಮದ ಮತಗಟ್ಟೆ ಸಂಖ್ಯೆ 72ರಲ್ಲಿ ಒಟ್ಟು 1178 ಜನ ಮತದಾರರಿದ್ದು, ಅದರಲ್ಲಿ 134 ಜನ ಪುರುಷರು ಹಾಗೂ 27 ಜನ ಮಹಿಳೆಯರು ಸೇರಿದಂತೆ ಕೇವಲ 154 ಜನ ಮಾತ್ರ ಮಧ್ಯಾಹ್ನದ ಹೊತ್ತಿಗೆ ಮತದಾನ ಮಾಡಿದ್ದರು. 
 
ಇನ್ನು ಮತಗಟ್ಟೆ ಸಂಖ್ಯೆ 73ರಲ್ಲಿ 1198 ಮತದಾರರಿದ್ದು, 32 ಜನ ಮಹಿಳೆಯರು ಹಾಗೂ 170 ಜನ ಪುರುಷರು ಮಧ್ಯಾಹ್ನದ ಹೊತ್ತಿಗೆ ಮತದಾನ ಮಾಡಿದ್ದರು. ಇನ್ನು ಸತ್ತೂರಿನಲ್ಲಿ ಮತದಾನಕ್ಕಾಗಿ ಒಂದು ಮತಗಟ್ಟೆ ತೆರೆಯಲಾಗಿತ್ತು ಅಲ್ಲಿ 952 ಜನ ಮತದಾರರಿದ್ದರೆ, ಆ ಪೈಕಿ 12 ಜನ ಮಹಿಳೆಯರು ಹಾಗೂ 84 ಜನ ಪುರುಷರು ಮತದಾನ ಮಾಡಿದ್ದರು. ತಾಲ್ಲೂಕಿನ ತಡಸಿನಕೊಪ್ಪ ಗ್ರಾಮದಲ್ಲೂ ಮತದಾನ ಮಂದಗತಿಯಲ್ಲಿ ಸಾಗಿತ್ತು. 
 
30 ಜನ ಅಭ್ಯರ್ಥಿ: ‘ಧಾರವಾಡ ತಾಲ್ಲೂಕಿನ 14 ಮತಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಿಗೆ ಮತದಾನ ನಡೆಸಲಾಯಿತು. 2 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅವಿ­ರೋಧವಾಗಿ ಆಯ್ಕೆ ಮಾಡಲಾಗಿದೆ. ವರ್ತಕರ ಕ್ಷೇತ್ರದ ಚುನಾವಣೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿರುವುದ­ರಿಂದ ಆ ಕ್ಷೇತ್ರಕ್ಕೆ ಮತದಾನ ನಡೆಯ­ಲಿಲ್ಲ.
 
ತಾಲ್ಲೂಕಿನಾದ್ಯಂತ ಒಟ್ಟು 119 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಆ ಪೈಕಿ 105 ಮತಗಟ್ಟೆಗಳಲ್ಲಿ ಮಾತ್ರ ಮತದಾನ ಪ್ರಕ್ರಿಯೆ ನಡೆಸಲಾಯಿತು. ನಿಗದಿ ಮತಕ್ಷೇತ್ರದಿಂದ ಕೃಷ್ಣ ಕೊಳ್ಳಾನಟ್ಟಿ ಹಾಗೂ ಸಂಸ್ಕರಣಾ ಘಟಕ ಕ್ಷೇತ್ರದಿಂದ ದೀಪಕ ಚಿಂಚೋರೆ  ಅವಿರೋಧವಾಗಿ ಆಯ್ಕೆಯಾಗಿದ್ದರಿಂದ ಈ ಎರಡೂ ಕ್ಷೇತ್ರ­ಗಳಿಗೆ ಮತದಾನ ನಡೆಯಲಿಲ್ಲ’ ಎಂದು ತಹಶೀಲ್ದಾರ್‌ ಆರ್‌.ವಿ.ಕಟ್ಟಿ ತಿಳಿಸಿದರು.
 
**
ಮತದಾರರಿಗೆ ವಾಹನ ವ್ಯವಸ್ಥೆ
ಕೃಷಿ ಜಮೀನಿನ ಪಹಣಿ ಪತ್ರ­ದಲ್ಲಿ ಹೆಸರು ಇದ್ದವರಿಗೆ ಮಾತ್ರ ಮತ ಚಲಾಯಿಸುವ ಅಧಿಕಾರ ನೀಡಲಾ­ಗಿತ್ತು. ಆದ್ದರಿಂದ ಗ್ರಾಮೀಣ ಕ್ಷೇತ್ರ­ಗಳ ಅಲ್ಲಲ್ಲಿ ತೆರೆಯಲಾದ ಮತ­ಗಟ್ಟೆಗಳಿಗೆ ಅಭ್ಯರ್ಥಿಗಳ ಪರ ಬೆಂಬಲಿಗರು ಮತದಾರರನ್ನು ವಾಹನದ ಮೂಲಕ ಕರೆದೊಯ್ದು ಮತ ಹಾಕಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
 
ತಾಲ್ಲೂಕಿನ ಉಪ್ಪಿನ ಬೆಟಗೇರಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದ್ದರಿಂದ ಇಬ್ಬರೂ ಅಭ್ಯರ್ಥಿಗಳ ಪರ ಬೆಂಬಲಿ­ಗರು ಬಿರುಸಿನಿಂದಲೇ ಮತ­ದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ತಾಲ್ಲೂಕಿನ ಯಾವ ಮತಕ್ಷೇತ್ರಗಳಲ್ಲೂ ಮತ­ದಾನದ ವೇಳೆ ಗಲಾಟೆ, ಗೊಂದಲ­ಗಳಾದ ಬಗ್ಗೆ ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT