ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ.ಗೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

ಪಂಚಾಯಿತಿ ನೌಕರರ ಕಾರ್ಯಕ್ಷಮತೆ ಹೆಚ್ಚಿಸುವುದು, ಅಹಿತಕರ ಘಟನೆ ತಡೆಯುವ ಉದ್ದೇಶ
Last Updated 13 ಜನವರಿ 2017, 6:21 IST
ಅಕ್ಷರ ಗಾತ್ರ
ಬಾಗಲಕೋಟೆ: ಗ್ರಾಮೀಣ ಪ್ರದೇಶದ ಆಡಳಿತದ ಶಕ್ತಿ ಕೇಂದ್ರಗಳಾಗಿರುವ ಗ್ರಾಮ ಪಂಚಾಯ್ತಿಗಳ ದೈನಂದಿನ ಚಟುವಟಿಕೆಗಳಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
 
ಪಂಚಾಯ್ತಿಯ ನೌಕರರ ಕಾರ್ಯಕ್ಷಮತೆ ಹೆಚ್ಚಿಸುವುದು, ಅಹಿತಕರ ಘಟನೆ ತಡೆಯುವ ಉದ್ದೇಶದಿಂದ ಪಂಚಾಯ್ತಿ ಮಟ್ಟದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಕಳೆದ ಜುಲೈನಲ್ಲಿ ರಾಜ್ಯ ಸರ್ಕಾರ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಸುತ್ತೋಲೆ ಹೊರಡಿಸಿದೆ.
 
ಯಾವ ಗ್ರಾಮ ಪಂಚಾಯ್ತಿಯಲ್ಲಿ ಅಳವಡಿಕೆ: ಸರ್ಕಾರದ ಆದೇಶದಂತೆ ತಾಲ್ಲೂಕಿನ 30 ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೈಕಿ 17ರಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದೆ. ಬೇವಿನಮಟ್ಟಿ, ಶಿರೂರ, ಬೆನಕಟ್ಟಿ, ಭಗವತಿ, ಬೆಣ್ಣೂರ, ಹಳ್ಳೂರ, ಬೇವೂರ, ಬಿಲ್‌ಕೆರೂರು, ತಿಮ್ಮಾಪುರ, ನಾಯನೇಗಲಿ, ರಾಂಪುರ, ಹೊಸೂರ, ಸುತಗುಂಡರ, ಚಿಕ್ಕಮ್ಯಾಗೇರಿ, ಮುಗಳೊಳ್ಳಿ, ಹಿರೇಗುಳಬಾಳ, ಕಡ್ಲಿಮಟ್ಟಿಗಳಲ್ಲಿ ಅಳವಡಿಸಲಾಗಿದೆ. 
 
ಪಂಚಾಯ್ತಿಗಳಿಗೆ ಮಾರ್ಗದರ್ಶನ ನೀಡುವ ಜೊತೆಗೆ ಪಾರದರ್ಶಕ ಆಡಳಿತಕ್ಕೆ ನೆರವಾಗಲು ಕ್ಯಾಮೆರಾ ಅಳವಡಿಸಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಇಒ ಸತೀಶ ನಾಯಕ ತಿಳಿಸಿದರು.
 
ಸರ್ಕಾರದ ಆದೇಶ: ಸರ್ಕಾರದ ಆದೇಶದ ಅನ್ವಯ ಗ್ರಾಮ ಪಂಚಾಯ್ತಿ ಸ್ವಂತ ನಿಧಿಯಿಂದ ಸಿಸಿಟಿವಿ ಕ್ಯಾಮೆರಾ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. 3 ವರ್ಷಗಳಿಗೆ ಕಡಿಮೆ ಇಲ್ಲದ ವಾರಂಟಿ ಹೊಂದಿರುವ, ಸ್ಥಳೀಯವಾಗಿ ರಿಪೇರಿ ಮಾಡುವ ಹಾಗೂ ಉತ್ತಮ ಚಿತ್ರ ಹಾಗೂ ಧ್ವನಿ ಸೆರೆ ಹಿಡಿಯುವ ಕ್ಯಾಮರಾ ಇರಬೇಕು. ಅವುಗಳಿಗೆ ತಡೆರಹಿತ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಕ್ಯಾಮೆರಾ ಅಳವಡಿಸಿ ಅವುಗಳ ಸಮರ್ಪಕವಾಗಿ ಕೆಲಸ ಮಾಡುವಂತೆ ತಾ.ಪಂ. ಇಒ ಉಸ್ತುವಾರಿ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
 
ಎಲ್ಲೆಲ್ಲಿ ಕ್ಯಾಮರಾ ಅಳವಡಿಕೆ: ಪಂಚಾಯ್ತಿ ಕಚೇರಿಯ ಮುಖ್ಯ ದ್ವಾರ, ಸಭಾಂಗಣ, ಉಗ್ರಾಣ, ಸಾರ್ವಜನಿಕ ಸೇವೆ ನೀಡುವ ಸ್ಥಳ, ಸಾರ್ವಜನಿಕರ ಅಹವಾಲು ಸ್ವೀಕರಿಸುವ ಪ್ರದೇಶ ಹಾಗೂ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕಿದೆ. ಕನಿಷ್ಠ 4ರಿಂದ 5 ಸಿಸಿಟಿವಿ ಕ್ಯಾಮೆರಾ ಇರಬೇಕು. 
 
ಸಣ್ಣ ಪಂಚಾಯ್ತಿಗಳಿಗೆ ಕಷ್ಟ: ‘ಎಲ್ಲಾ ಸೌಲಭ್ಯಗಳ ಒಳಗೊಂಡ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಕನಿಷ್ಠ ₹ 40 ಸಾವಿರದಿಂದ ₹ 60 ಸಾವಿರ ಹಣ ಬೇಕಿದೆ. ಸಣ್ಣ ಪಂಚಾಯ್ತಿಗಳಿಗೆ 14ನೇ ಹಣಕಾಸು ಯೋಜನೆಯಲ್ಲಿ ಒಂದು ಕಂತಿಗೆ ಬರುವ ಅನುದಾನ ₹ 3.50 ಲಕ್ಷ ಮಾತ್ರ. ಹಾಗಾಗಿ ಸ್ಥಳೀಯ ಆದಾಯದಲ್ಲಿ ಸಿಸಿಟಿವಿ ಕ್ಯಾಮೆರಾ ಜೋಡಿಸಲು ಸಾಧ್ಯವಾಗುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಅಳಲು ತೋಡಿಕೊಳ್ಳುತ್ತಾರೆ.
 
***
‘ಕ್ಯಾಮೆರಾ  ಅಳವಡಿಕೆ  ಸ್ವಾಗತಾರ್ಹ’
‘ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಸರಿಯಾದ  ಸಮಯಕ್ಕೆ ಕಚೇರಿಗೆ ಬರುತ್ತಿರಲಿಲ್ಲ ಜೊತೆಗೆ  ಗ್ರಾಮಸ್ಥರ ಕೈಗೆ ಸಿಗುವುದಿಲ್ಲ ಎಂಬ ಆರೋಪಗಳಿದ್ದವು. ಅವರು ದೂರವಾಣಿ ಕರೆಗೂ ಸ್ಪಂದಿಸುತ್ತಿರಲಿಲ್ಲ. ಯಾವಾಗಲೂ ಮೀಟಿಂಗ್‌ ಇದೆ ಎಂದು ಹೇಳುತ್ತಿದ್ದರು. ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಿಂದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಲು ಸಾಧ್ಯವಾಗುತ್ತಿದೆ’ ಎಂದು ರಾಂಪುರ ಕ್ಷೇತ್ರದ ತಾಲ್ಲೂಕು ಪಂಚಾಯ್ತಿ ಸದಸ್ಯ ಬಸವರಾಜ ಕೆಂಜೋಡಿ ಹೇಳುತ್ತಾರೆ.
 
**
ಸರ್ಕಾರದ ಆದೇಶದ ಅನ್ವಯ ₹ 60,200 ನೀಡಿ ನಾಲ್ಕು ಸಿಸಿಟಿವಿ ಕ್ಯಾಮೆರಾ ಖರೀದಿಸಿ ನಮ್ಮ ಪಂಚಾಯ್ತಿಯಲ್ಲಿ ಅಳವಡಿಸಿದ್ದೇವೆ
-ಈಶ್ವರ ಕವಡಿ
ರಾಂಪುರ, ಹೊಸೂರು ಪಿಡಿಒ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT