ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಪುರುಷ ವಾರ್ಡನ್‌

ವಸತಿ ನಿಲಯದಲ್ಲಿ ಮೂಲಸೌಕರ್ಯಗಳ ಕೊರತೆ; ಹಳೇ ಬೆಡ್‌ಶೀಟ್‌ನಲ್ಲೇ ನಿದ್ದೆ, ಸಮರ್ಪಕ ನಿರ್ವಹಣೆಗೆ ಒತ್ತಾಯ
Last Updated 13 ಜನವರಿ 2017, 6:48 IST
ಅಕ್ಷರ ಗಾತ್ರ
ಹೊಸಪೇಟೆ: ‘ನಮ್ಮ ಹಾಸ್ಟೆಲ್ ವಾರ್ಡನ್ ಪುರುಷರು ಇರುವುದರಿಂದ ಯಾವುದೇ ಸಮಸ್ಯೆ ಹೇಳಿಕೊಳ್ಳಲು ಆಗುವುದಿಲ್ಲ. ಹುಡುಗಿಯರು ಮುಜುಗರದಿಂದ ಎಲ್ಲದಕ್ಕೂ ಸುಮ್ಮನಿರಬೇಕಾಗಿದೆ’
 
ಇದು ನಗರ ಹೊರವಲಯದ ಜಂಬುನಾಥಹಳ್ಳಿ ಸಮೀಪದ ಮೆಟ್ರಿಕ್‌ ನಂತರದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸರ್ಕಾರಿ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರ ಗೋಳು.
 
ಮನೆಯಲ್ಲಿ ‘ಪೀರಿಯಡ್‌’ ಸೇರಿದಂತೆ ಏನೇ ಸಮಸ್ಯೆ ಎದುರಾದರೂ ಹುಡುಗಿಯರು ತಾಯಿ, ಸಹೋದರಿಗೆ ಅದನ್ನು ಹೇಳುತ್ತಾರೆ ಹೊರತು ತಂದೆ ಅಥವಾ ಸಹೋದರನಿಗೆ ತಿಳಿಸುವುದಿಲ್ಲ. ಹೀಗಿರುವಾಗ ಹಾಸ್ಟೆಲ್‌ ವಾರ್ಡನ್‌ ಪುರುಷರಿದ್ದರೆ ನಾವು ಯಾರಿಗೆ ಹೇಳಿಕೊಳ್ಳಬೇಕು. 
 
ಪ್ರತಿಯೊಂದಕ್ಕೂ ಇಲ್ಲಿನ ಹುಡುಗಿಯರು ನಿತ್ಯ  ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ವಸತಿ ನಿಲಯದ ವಿದ್ಯಾರ್ಥಿನಿ ‘ಪ್ರಜಾವಾಣಿ’ಗೆ ತಿಳಿಸಿದರು.
 
ಇಷ್ಟೇ ಅಲ್ಲ, ಹಾಸ್ಟೆಲ್‌ಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳು ಇಲ್ಲದ ಕಾರಣ ವಿದ್ಯಾರ್ಥಿನಿಯರು ತೊಂದರೆ ಅನುಭವಿಸಬೇಕಾಗಿದೆ. ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಇರುವ ಕಾರಣದಿಂದ ಒಂದೇ ಕೊಠಡಿಯಲ್ಲಿ 8ರಿಂದ 9 ವಿದ್ಯಾರ್ಥಿನಿಯರನ್ನು ಇರಿಸಲಾಗಿದೆ. ಹೊಸದಾಗಿ ಪ್ರವೇಶ ಪಡೆದಿರುವ ಅನೇಕ ವಿದ್ಯಾರ್ಥಿನಿಯರಿಗೆ ಇಲ್ಲಿಯವರೆಗೆ ಬೆಡ್‌ಶೀಟ್‌, ತಟ್ಟೆ ಹಾಗೂ ಲೋಟ ನೀಡಿಲ್ಲ. ಪಿ.ಯು.ಸಿ, ಪದವಿ ಹಾಗೂ ಪಿ.ಜಿ ವಿದ್ಯಾರ್ಥಿಗಳು ಒಂದೇ ಕಡೆ ಇರುವುದರಿಂದ ಎಲ್ಲರ ಓದಿಗೂ ತೊಂದರೆ ಆಗುತ್ತಿದೆ. 
 
ಸೂಕ್ತ ನಿರ್ವಹಣೆ ಇಲ್ಲದ ಕಾರಣಕ್ಕೆ ಹಾಸ್ಟೆಲ್‌ನಲ್ಲಿ ಸ್ವಚ್ಛತೆ ಹೆಸರಿಗೆ ಎಂಬಂತಾಗಿದೆ. ಊಟ ಮಾಡುವ ಹಾಲ್‌ ಅನ್ನೇ ಬೀದಿ ನಾಯಿಗಳು ಆವಾಸ ಸ್ಥಾನ ಮಾಡಿಕೊಂಡಿವೆ. ವಿದ್ಯಾರ್ಥಿನಿಯರಿಗೆ ಓದಲು ಗ್ರಂಥಾಲಯವೇ ಇಲ್ಲ. ಹಾಸ್ಟೆಲ್‌ ಒಳ ಪರಿಸರದ ಮೇಜಿನ ಮೇಲೆಯೇ ಪತ್ರಿಕೆಗಳು, ಕಸಬರಿಕೆ ಬಿದ್ದಿರುತ್ತವೆ.
 
ಒಂದು– ಎರಡಲ್ಲ, ಇಲ್ಲಗಳ ದೊಡ್ಡ ಪಟ್ಟಿಯೇ ಇದೆ. ‘ನಿತ್ಯ ಸರಿಯಾಗಿ ಊಟ ಕೊಡುವುದಿಲ್ಲ. ನಮಗೆ ಕೊಡುವ ಆಹಾರದಲ್ಲಿ ಸೊಪ್ಪು, ಕಾಳು ಇರುವುದೇ ಇಲ್ಲ. ಏನು ಕೇಳಿದರೂ ತಲೆಗೆ ಹಾಕಿಕೊಳ್ಳುವುದಿಲ್ಲ. ಎಲ್ಲದಕ್ಕೂ ಜಗಳ ಮಾಡುವಂತಹ ಪರಿಸ್ಥಿತಿ ಇದೆ. ತುಂಬಾ ಸಮಸ್ಯೆ ಇದೆ. ಆದರೆ, ಯಾರಿಗೆ ಹೇಳಿಕೊಳ್ಳಬೇಕು’ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಪ್ರಶ್ನಿಸಿದರು. ಪರಿಶಿಷ್ಟ ಜಾತಿ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಊಟದ ಕೊಠಡಿ, ದವಸ ಧಾನ್ಯಗಳನ್ನು ಇಡಲು ಎರಡು ಕೊಠಡಿಗಳನ್ನು ಮೀಸಲಿಡಲಾಗಿದೆ. ಇನ್ನುಳಿದ ಒಂಬತ್ತು ಕೊಠಡಿಗಳಲ್ಲಿ 83 ವಿದ್ಯಾರ್ಥಿನಿಯರನ್ನು ಇರಿಸಲಾಗಿದೆ. ಪರಿಶಿಷ್ಟ ಪಂಗಡ ವಿದ್ಯಾರ್ಥಿನಿಯರ ಹಾಸ್ಟೆಲ್‌ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಆರು ಕೊಠಡಿಗಳಲ್ಲಿ 70 ವಿದ್ಯಾರ್ಥಿನಿಯರು ಉಳಿದುಕೊಂಡಿದ್ದಾರೆ. 
 
ಹಾಸ್ಟೆಲ್‌ ಪ್ರವೇಶ ದ್ವಾರದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹಗಲಿನಲ್ಲಿ ಕಾವಲುಗಾರರು ಇರುವುದಿಲ್ಲ. ರಾತ್ರಿ ವೇಳೆ ಎರಡು ಹಾಸ್ಟೆಲ್‌ಗಳಲ್ಲಿ ತಲಾ ಒಬ್ಬ ಮಹಿಳೆ ಕಾವಲಿಗೆ ಇದ್ದಾರೆ. ಕೆಲ ಕೊಠಡಿಗಳ ಗಾಜುಗಳು ಒಡೆದು ಹೋಗಿದ್ದು, ಅವುಗಳನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ. ಅವುಗಳಿಗೆ ತಾತ್ಕಾಲಿಕವಾಗಿ ರಟ್ಟು ಹಾಕಲಾಗಿದೆ. ವಿದ್ಯಾರ್ಥಿನಿಯರ ವಿಷಯದಲ್ಲಿ ಎಷ್ಟು ನಿರ್ಲಕ್ಷ್ಯ ವಹಿಸಲಾಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ. 
 
ಆದರೆ, ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಪ್ರಕಾಶ ಹುಣಸಗಿ ಅವರು ಹೇಳುವುದೇ ಬೇರೆ. ‘ನಮ್ಮ ಹಾಸ್ಟೆಲ್‌ನಲ್ಲಿ ಮಾತ್ರವಲ್ಲ ರಾಜ್ಯದಾದ್ಯಂತ ಈ ರೀತಿಯ ಸಮಸ್ಯೆ ಇದೆ. ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಮಾರ್ಚ್‌ನಲ್ಲಿ ಲೇಡಿಸ್‌ ವಾರ್ಡನ್‌ ನೇಮಕವಾಗಬಹುದು’ ಎಂದು ಪ್ರಕಾಶ ತಿಳಿಸಿದರು.
 
‘ಇಲಾಖೆಯ ಒಪ್ಪಿಗೆ ಮೇರೆಗೆ 64 ವರ್ಷದ ಹಿರಿಯ ವ್ಯಕ್ತಿಯನ್ನು ವಾರ್ಡನ್‌ ಆಗಿ ನೇಮಕ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿನಿಯರು ಏನೇ ಸಮಸ್ಯೆಯಿದ್ದರೂ ಅವರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬಹುದು. ಸರ್ಕಾರದ ನಿಯಮಾನುಸಾರ ಆಹಾರ ನೀಡುತ್ತಿದ್ದೇವೆ. ಮನೆಯಲ್ಲಿ ನಾಲ್ಕೇ ಜನ ಇದ್ದರೂ ಊಟದ ಬಗ್ಗೆ ಒಂದೊಂದು ಅಭಿಪ್ರಾಯ ಹೇಳುತ್ತಾರೆ. 70–80 ಜನ ಇದ್ದರೆ ಒಬ್ಬೊಬ್ಬರು ಒಂದು ರೀತಿಯಲ್ಲಿ ಮಾತನಾಡುವುದು ಸಹಜ’ ಎಂದು ಹೇಳಿದರು. ತಾಲ್ಲೂಕಿನಲ್ಲಿ ನಾಲ್ಕು ಮೆಟ್ರಿಕ್‌ ಪೂರ್ವ ಹಾಗೂ ಮೂರು ಮೆಟ್ರಿಕ್‌ ನಂತರದ ವಸತಿ ನಿಲಯಗಳಿದ್ದು, ಎಲ್ಲ ಕಡೆ ಬಹುತೇಕ ಇದೇ ರೀತಿಯ ಸಮಸ್ಯೆಗಳನ್ನು ವಿದ್ಯಾರ್ಥಿನಿಯರು ಎದುರಿಸುತ್ತಿದ್ದಾರೆ. 
 
***
ಒಂದೇ ಕೊಠಡಿಯಲ್ಲಿ ಎಂಟರಿಂದ ಹತ್ತು ಜನ ವಿದ್ಯಾರ್ಥಿನಿಯರನ್ನು ಕುರಿ ಹಿಂಡಿನಂತೆ ಇರಿಸಲಾಗಿದೆ. ಇದರಿಂದ ಓದುವುದಕ್ಕೆ ಸಮಸ್ಯೆ ಆಗುತ್ತಿದೆ.
-ಹೆಸರು ಹೇಳಲಿಚ್ಛಿಸದ ಹಾಸ್ಟೆಲ್‌ ವಿದ್ಯಾರ್ಥಿನಿ
 
**
 ಬಾಹ್ಯ ಒತ್ತಡಗಳ ಕಾರಣದಿಂದ ನಿಗದಿತ ಸಂಖ್ಯೆಗಿಂತ ಹೆಚ್ಚಿನ ವಿದ್ಯಾರ್ಥಿನಿಯರಿಗೆ ಪ್ರವೇಶ ಕಲ್ಪಿಸಲಾಗಿದೆ. ಈ ವಿಷಯದಲ್ಲಿ ಅಸಹಾಯಕರಾಗಿದ್ದೇವೆ
-ಪ್ರಕಾಶ ಹುಣಸಗಿ
ಸಹಾಯಕ ನಿರ್ದೇಶಕ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT