ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಕಳಿಸಿತು ಮತ್ತದೇ ಕಹಿ ಘಟನೆ

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ; ಆಗ ಗುಡೇಕೋಟೆ–ಈಗ ಕಮಲಾಪುರದಲ್ಲೊಂದು ಕಹಿ ನೆನಪು
Last Updated 13 ಜನವರಿ 2017, 6:55 IST
ಅಕ್ಷರ ಗಾತ್ರ
ಹೊಸಪೇಟೆ: ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ವೇಳೆ ಈ ಹಿಂದೆ ನಡೆದ ಘಟನೆಗಳಿಂದ ಆರೋಗ್ಯ ಇಲಾಖೆ ಪಾಠ ಕಲಿತಂತೆ ಕಾಣಿಸುತ್ತಿಲ್ಲ. ಹಿಂದಿನ ಘಟನೆಗಳು ಪುನರಾವರ್ತನೆ ಆಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಿದ್ದರೆ ತಾಲ್ಲೂಕಿನ ಕಮಲಾಪುರದಲ್ಲಿ ಬುಧವಾರ ಹದಿನೈದು ಮಹಿಳೆಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗುತ್ತಿರಲಿಲ್ಲ.
 
2016ರ ಮೇ 27ರಂದು ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ವೇಳೆ ಜಯಮ್ಮ (25) ಎಂಬ ಮಹಿಳೆ ಮೃತಪಟ್ಟಿದ್ದರು. ಹತ್ತು ಜನ ಮಹಿಳೆಯರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಗೆ ಮುನ್ನ ನೀಡಿದ್ದ ಚುಚ್ಚುಮದ್ದಿನಿಂದ ಈ ಘಟನೆ ಸಂಭವಿಸಿತ್ತು. ಆರೋಗ್ಯ ಇಲಾಖೆಯ ವೈದ್ಯರು ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ಬೇರೆ ರೀತಿಯ ಸಬೂಬು ಕೊಟ್ಟಿದ್ದಾರೆ.
 
ಆದರೆ, ಮೇಲ್ನೊಟಕ್ಕೆ ಎರಡೂ ಘಟನೆಗಳಲ್ಲಿ ಸಾಮ್ಯತೆ ಕಂಡು ಬರುತ್ತಿದೆ. ಗುಡೇಕೋಟೆ ಮಾದರಿಯಲ್ಲಿಯೇ ಕಮಲಾಪುರದಲ್ಲಿ ಮಹಿಳೆಯರಿಗೆ ಚುಚ್ಚುಮದ್ದು ನೀಡಿದ ನಂತರ ಒಬ್ಬರ ನಂತರ ಒಬ್ಬರು ಅಸ್ವಸ್ಥಗೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ಚುಚ್ಚುಮದ್ದು ನೀಡದೇ ಇರುವುದು ಒಂದು ಕಾರಣವಾದರೆ, ತಜ್ಞ ವೈದ್ಯರು ಸ್ಥಳದಲ್ಲಿ ಇರದೇ ಇರುವುದು ಬಹುದೊಡ್ಡ ಲೋಪ.
 
‘ಶಸ್ತ್ರಚಿಕಿತ್ಸೆ ಮಾಡಬೇಕಿದ್ದ ಡಾ. ಪ್ರಕಾಶ್‌ ರೆಡ್ಡಿ ಅವರು ಬರುವುದಕ್ಕೆ ಮುಂಚೆಯೇ ಆಸ್ಪತ್ರೆಯ ಸಿಬ್ಬಂದಿ ಶಸ್ತ್ರಚಿಕಿತ್ಸೆಗೆ ಸಂಬಂಧಿಸದ ಚುಚ್ಚುಮದ್ದು ನೀಡಿದ ಕಾರಣ ಈ ಘಟನೆ ಜರುಗಿದೆ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ನಾಗೇಂದ್ರ ಕುಮಾರ್‌ ಹೇಳಿದ್ದಾರೆ.
 
‘ಶಸ್ತ್ರಚಿಕಿತ್ಸೆಗೆ 10 ನಿಮಿಷ ಇರುವ ಮುಂಚೆ ಚುಚ್ಚು ಮದ್ದು ನೀಡಬೇಕಿತ್ತು. ಆದರೆ, ಅದಕ್ಕಿಂತಲೂ ಪೂರ್ವದಲ್ಲಿಯೇ ಚುಚ್ಚು ಮದ್ದು ನೀಡಿರುವ ಕಾರಣ ಮಹಿಳೆಯರು ಅಸ್ವಸ್ಥಗೊಂಡರು’ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿಜಯಲಕ್ಷ್ಮಿ ತಿಳಿಸಿದ್ದಾರೆ.
 
ಇಬ್ಬರೂ ನೀಡಿರುವ ಹೇಳಿಕೆಯನ್ನು ಗಮನಿಸಿದರೆ ಆರೋಗ್ಯ ಇಲಾಖೆಯಿಂದ ಕರ್ತವ್ಯಲೋಪ ಆಗಿರುವುದು ರುಜುವಾತು ಆಗುತ್ತದೆ. ಹಿಂದಿನ ಘಟನೆಗಳಿಂದ ಎಚ್ಚೆತ್ತುಕೊಂಡಿದ್ದರೆ ಅಮಾಯಕ, ಬಡ ಹೆಣ್ಣು ಮಕ್ಕಳು ನೋವು, ಸಂಕಟ ಅನುಭವಿಸುತ್ತ ಆಸ್ಪತ್ರೆಯಲ್ಲಿ ಒದ್ದಾಡುತ್ತಿರಲಿಲ್ಲ. 
 
ಇನ್ನೂ ಸಂಕಟ: ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮುನ್ನ ನೀಡಿದ ಚುಚ್ಚುಮದ್ದಿನಿಂದ ಅಸ್ವಸ್ಥಗೊಂಡು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ 13 ಮಹಿಳೆಯರು ಇನ್ನೂ ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗಿಲ್ಲ. ಬಹುತೇಕ ಮಹಿಳೆಯರು ನಿತ್ರಾಣರಾಗಿ, ಹಾಸಿಗೆ ಮೇಲೆ ಮಲಗಿರುವುದು ಗುರುವಾರ ಕಂಡು ಬಂತು.
 
‘ನಿನ್ನೆಯಿಂದ ದೇಹದಲ್ಲಿ ಉಸಿರಿಲ್ಲದಂತಾಗಿದೆ. ನಡೆಯಲು ಬರುವುದಿಲ್ಲ, ಕೂರಲು ಆಗುವುದಿಲ್ಲ. ಹೊಟ್ಟೆಯಲ್ಲಿ ಏನೊ ಸಂಕಟ ಇದೆ’ ಎಂದು ಗಂಗಮ್ಮ ಎಂಬುವರು ‘ಪ್ರಜಾವಾಣಿ’ಗೆ ತಿಳಿಸಿದರು. ಹಸೀನಾ, ಪುಷ್ಪಲತಾ ಸೇರಿದಂತೆ ಇತರ ಮಹಿಳೆಯರು ಇದೇ ಮಾತು ಹೇಳಿದರು.
 
‘ಈ ಆಸ್ಪತ್ರೆಗೆ ಹೋದರೆ ಕಾಯಿಲೆ ಖಚಿತ’
‘ತಾಲ್ಲೂಕಿನ ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ದನದ ಕೊಟ್ಟಿಗೆಗಿಂತ ಕೆಟ್ಟದಾಗಿದೆ. ಆ ಆಸ್ಪತ್ರೆಗೆ ಹೋದರೆ ಕಾಯಿಲೆಗಳು ನಮ್ಮ ಜತೆಗೆ ಬರುತ್ತವೆ’
 
ಹೀಗೆ ಹೇಳಿದ್ದು ತಾಲ್ಲೂಕಿನ ಮಲಪನಗುಡಿಯ ಮಾಬುನ್ನಿ. ಇವರ ಮಗಳು ಹಸೀನಾ ಬುಧವಾರ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಮುನ್ನ ನೀಡಿದ ಚುಚ್ಚುಮದ್ದಿನಿಂದ ಅಸ್ವಸ್ಥಗೊಂಡು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ ಮಾಬುನ್ನಿ ತಮಗಾದ ಅನುಭವಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು. ಕಮಲಾಪುರ ಆಸ್ಪತ್ರೆಯಲ್ಲಿ ಎಳ್ಳಷ್ಟೂ ಸ್ವಚ್ಛತೆ ಇಲ್ಲ. ಶಸ್ತ್ರಚಿಕಿತ್ಸೆಗೆ ಹೋಗಿದ್ದ ಎಲ್ಲ ಮಹಿಳೆಯರನ್ನು ನೆಲದ ಮೇಲೆ ಮಲಗಿಸಿದ್ದರು. ಶೌಚಾಲಯ ಇದ್ದೂ ಇಲ್ಲದಂತಿದೆ. ಅಷ್ಟು ಕೊಳಕಾಗಿದೆ. ಇಂತಹ ಆಸ್ಪತ್ರೆಗಳಿಗೆ ಹೋಗುವವರು ಹೆಚ್ಚಿನವರು ಬಡವರೇ. ಬಡವರಿಗೆ ಒಳ್ಳೆಯ ಚಿಕಿತ್ಸೆ ಕೊಡಲು ಆಗದಿದ್ದರೆ ಇಂತಹ ಆಸ್ಪತ್ರೆ ಏಕೀರಬೇಕು ಎಂದು ಪ್ರಶ್ನಿಸಿದರು. ಘಟನೆಯಿಂದ ನನ್ನ ಅಳಿಯ ನೂರ್‌ ಅಹಮ್ಮದ್‌ಗೆ ಬಹಳ ನೋವಾಗಿದೆ. ಇನ್ನೆಂದೂ ಸರ್ಕಾರಿ ಆಸ್ಪತ್ರೆಗೆ ಹೋಗಬಾರದು. ಸಾಲ ಮಾಡಿಯಾದರೂ ಒಳ್ಳೆಯ ಆಸ್ಪತ್ರೆಗೆ ಹೋಗಬೇಕು ಎಂದು ನಮಗೆ ತಾಕೀತು ಮಾಡಿದ್ದಾನೆ ಎಂದು ತಿಳಿಸಿದರು.
 
**
13 ಮಹಿಳೆಯರು ಇಂದು ಮನೆಗೆ
ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ವೇಳೆ ಅಸ್ವಸ್ಥಗೊಂಡು ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲ 13 ಜನ ಮಹಿಳೆಯರು ಆರೋಗ್ಯದಿಂದ ಇದ್ದಾರೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ವಿಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
 
ಎಲ್ಲರನ್ನೂ ಶುಕ್ರವಾರ ಆಸ್ಪತ್ರೆಯಿಂದ ಮನೆಗೆ ಕಳುಹಿಸಿಕೊಡಲಾಗುವುದು. ಬಳ್ಳಾರಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ವಿಮ್ಸ್‌) ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಹೆಣ್ಣು ಮಕ್ಕಳ ಆರೋಗ್ಯವನ್ನು ಶುಕ್ರವಾರ ಬೆಳಿಗ್ಗೆ ಪರಿಶೀಲಿಸಲಾಗುವುದು. ಅವರಿಗೆ ಮನೆಗೆ ಕಳುಹಿಸಬೇಕೊ ಅಥವಾ ಇನ್ನೂ ಕೆಲವು ದಿನಗಳ ವರೆಗೆ ಚಿಕಿತ್ಸೆ ಮುಂದುವರಿಸಬೇಕೊ ಎನ್ನುವುದರ ಬಗ್ಗೆ ನಂತರ ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದ್ದಾರೆ.
 
ತಾಲ್ಲೂಕಿನ ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ವೇಳೆ ಅಸ್ವಸ್ಥಗೊಂಡಿದ್ದ 13 ಮಹಿಳೆಯರನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆ ಹಾಗೂ ಇನ್ನಿಬ್ಬರನ್ನು ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT