ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿವೇಶನ ಸಮಸ್ಯೆ ನಿವಾರಿಸಿ’

Last Updated 13 ಜನವರಿ 2017, 6:59 IST
ಅಕ್ಷರ ಗಾತ್ರ
ವಿಜಯಪುರ: ವಿವಿಧ ಇಲಾಖೆಗಳ ಯೋಜನೆಗಳಡಿ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾಗಿರುವ ನಿವೇಶನಗಳಿಗೆ ಸಂಬಂಧಿಸಿದಂತೆ ಉದ್ಭವಿಸಿರುವ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಅಧಿಕಾರಿಗಳಿಗೆ ಸೂಚಿಸಿದರು.
 
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಟ್ಟಡ ನಿರ್ಮಾಣಕ್ಕೆ ಉಂಟಾಗಿರುವ ಅಡೆತಡೆಗಳಿದ್ದರೆ ಅವುಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಿದರು.
 
ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ವಿವಿಧ ನಿಗಮಗಳ ಯೋಜನೆಗಳಡಿ ಕಟ್ಟಡಗಳನ್ನು ನಿರ್ಮಿಸಬೇಕು ಎಂದರು.
 
ವಿಶೇಷವಾಗಿ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಬೇಕಾದ ನಿವೇಶನ ತಕ್ಷಣ ಗುರುತಿಸಬೇಕು. ಶಾಲಾ ವ್ಯಾಪ್ತಿಯಲ್ಲಿ ಇಂತಹ ಕಟ್ಟಡ ಸ್ಥಾಪನೆಗೆ ಅವಕಾಶವಿದ್ದಲ್ಲಿ ಸ್ಥಳ ಗುರುತಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಡಿಡಿಪಿಐ ಆದ್ಯತೆ ಮೇಲೆ ಸ್ಥಳ ಗುರುತಿಸುವ ಕಾರ್ಯ ಮಾಡುವಂತೆ ಸೂಚನೆ ನೀಡಿದರು.
 
ಅಂಗನವಾಡಿ ಕಟ್ಟಡಗಳು ಸರ್ಕಾರಿ ಶಾಲೆಗಳು, ವಸತಿ ಶಾಲೆ, ವಸತಿ ನಿಲಯ ವಿವಿಧ ಭವನಗಳ ನಿರ್ಮಾಣ, ಯಾತ್ರಿ ನಿವಾಸ ಸೇರಿದಂತೆ ವಿವಿಧ  ಕಟ್ಟಡಗಳಿಗೆ ಅವಶ್ಯಕವಿರುವ ನಿವೇಶನ ಗುರುತಿಸಿ ವರದಿ ನೀಡಬೇಕು ಎಂದರು.
 
ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಅಡಿಯಲ್ಲಿ ಕಾಮಗಾರಿಯನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು ಎಂದರು. 
 
ಬೆಳೆ ಹಾನಿಗೆ ಸಂಬಂಧಿಸಿದಂತೆ ಫಲಾನುಭವಿಗಳನ್ನು ಗುರುತಿಸಿ ಆಧಾರ ನೋಂದಣಿ ಕಾರ್ಯ ತೀವ್ರಗೊಳಿಸ ಬೇಕು. ಗ್ರಾಮೀಣ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಫಲಾನುಭವಿ ಆಯ್ಕೆ ಪ್ರಕ್ರಿಯೆ ತಕ್ಷಣ ಪೂರ್ಣಗೊಳಿಸಬೇಕು. ಜಿಪಿಎಸ್ ಆಂದೋಲನ, ಆಧಾರ ಕಾರ್ಡ್‌ ಆಂದೋಲನ ಕೈಗೊಳ್ಳಬೇಕು. ಪಿಡಿಓ ಕೇಂದ್ರ ಸ್ಥಾನದಲ್ಲಿದ್ದು ಸಹಕರಿಸಬೇಕು. ತಪ್ಪಿದರೆ ಅಮಾನತು ಕ್ರಮ ಕೈಗೊಳ್ಳಲಾಗುವುದು ಎಂದರು.
 
ಆಹಾರ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ರದ್ದಾದ ಪಡಿತರ ಚೀಟಿ ಪುನಃ ಪಡೆಯುವ, ಆಧಾರ ಕಾರ್ಡ್‌ ಪರಿಶೀಲನೆ ಕುರಿತು ಜಾಗೃತಿ ಮೂಡಿಸಬೇಕು. ಬಾಕಿ ಪ್ರಕರಣಗಳನ್ನು ತಕ್ಷಣ ಇತ್ಯರ್ಥಪಡಿಸಬೇಕು ಎಂದೂ ಅಧಿಕಾರಿಗಳಿಗೆ ಸೂಚಿಸಿದರು.  ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಬಿ. ಬೂದೆಪ್ಪ , ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
 
**
ಕುಟೀರ ಯೋಜನೆಯಡಿ ಹೆದ್ದಾರಿ ಪಕ್ಕದಲ್ಲಿ ಹೋಟೆಲ್ ಆರಂಭಿಸಲು ಅವಕಾಶವಿದ್ದು, ಜಮೀನು ಗುರುತಿಸುವ ಕಾರ್ಯ ಮಾಡಬೇಕು
-ಕೆ.ಬಿ.ಶಿವಕುಮಾರ,
ಜಿಲ್ಲಾಧಿಕಾರಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT