ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಸಂಕ್ರಾಂತಿಗೆ ರಂಗಾಯಣ ಸಜ್ಜು

ಇಂದಿನಿಂದ ‘ಬಹುರೂಪಿ’; ಜಯಶ್ರೀ ಗಾಯನ, ಚಿತ್ರಲೇಖೆ ನಾಟಕ ಇಂದು
Last Updated 13 ಜನವರಿ 2017, 7:17 IST
ಅಕ್ಷರ ಗಾತ್ರ
ಮೈಸೂರು: ಸಂಕ್ರಾಂತಿಯ ಮುನ್ನಾದಿನವೇ ರಂಗಾಸಕ್ತರಿಗೆ ರಂಗಸಂಕ್ರಾಂತಿಯ ಸಂಭ್ರಮ.
 
ನಗರದ ರಂಗಾಯಣದಲ್ಲಿ ಅಂತರರಾಷ್ಟ್ರೀಯ ಬಹುಭಾಷಾ ನಾಟಕೋತ್ಸವ ‘ಬಹುರೂಪಿ’ ಜ. 13ರಿಂದ 18ರವರೆಗೆ ಆಯೋಜಿಸಲಾಗಿದೆ.
 
ಈ ಬಾರಿಯ ವಿಶೇಷವಾದ ರಂಗಸಂಗೀತ ನಡೆಯುವ ದುಂಡುಕಣವನ್ನು ಬೊಂಬುಗಳಿಂದ ಸಿಂಗರಿಸಲಾಗಿದ್ದು, ಅದು ಗರಿ ಬಿಚ್ಚಿದ ನವಿಲಿನಂತೆ ಕಾಣುತ್ತಿದೆ. ಇಲ್ಲಿಯೇ ನಿತ್ಯ ಸಂಜೆ 5.30ಕ್ಕೆ ವಿವಿಧ ಭಾಷೆಗಳ ರಂಗಸಂಗೀತವನ್ನು ಪ್ರೇಕ್ಷಕರು ಕೇಳಬಹುದು. ಆದರೆ, ಉದ್ಘಾಟನೆ ನಡೆಯುವ ವನರಂಗದಲ್ಲಿ ಜ.13ರಂದು ಮಾತ್ರ ಬಿ.ಜಯಶ್ರೀ ತಂಡ ರಂಗಗೀತೆಗಳನ್ನು ಪ್ರಸ್ತುತಪಡಿಸಲಿದೆ.
 
‘ನನ್ನ  ಬೇರುಗಳಿರುವುದು ವೃತ್ತಿ ರಂಗಭೂಮಿಯಲ್ಲಿ. ಅದರ ಟಿಸಿಲುಗಳು ಒಡೆದಿರುವುದು ಹವ್ಯಾಸಿ ರಂಗಭೂಮಿಯಲ್ಲಿ. ಹೀಗಾಗಿ, ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿಯ ಸೇತುವೆಯಾಗಿ ಕೆಲಸ ಮಾಡುತ್ತಿರುವೆ. ನಮ್ಮ ಗುಬ್ಬಿ ಕಂಪನಿಗೆ ಪಿ.ಕಾಳಿಂಗರಾಯರು ಸಂಗೀತ ಸಂಯೋಜಸಿದ ಪರಿಣಾಮ ನಾಟಕಗಳು ಹೆಚ್ಚು ಯಶಸ್ಸು ಕಂಡವು. ಗುಬ್ಬಿ ಕಂಪನಿಯ ಕೃಷ್ಣಲೀಲೆ, ಕುರುಕ್ಷೇತ್ರ, ದಶಾವತಾರ, ಲವಕುಶ, ಪುರುಷ ಪಶು ಮೊದಲಾದ ನಾಟಕಗಳ ಹಾಡುಗಳನ್ನು ಹಾಡುವೆ. ನಂತರ ಹವ್ಯಾಸಿ ರಂಗಭೂಮಿಯಲ್ಲಿ ಬಿ.ವಿ.ಕಾರಂತ ಸಂಗೀತ ಸಂಯೋಜಿಸಿದ ಹಯವದನ, ನಾಗಮಂಡಲ, ಸತ್ತವರ ನೆರಳು ಮೊದಲಾದ ನಾಟಕಗಳ ಹಾಡು ಹಾಡುತ್ತೇವೆ’ ಎಂದು ಬಿ.ಜಯಶ್ರೀ ‘ಪ್ರಜಾವಾಣಿ’ಗೆ ತಿಳಿಸಿದರು.
 
‘ಎನ್‌ಎಸ್‌ಡಿಯಲ್ಲಿ ಓದುವಾಗ ಓಂಪುರಿ, ನಾಸಿರುದ್ದಿನ್‌ ಷಾ, ಜ್ಯೋತಿ ಸುಭಾಷ್‌ ಬ್ಯಾಚ್‌ಮೇಟ್‌. ಬಹುರೂಪಿ ಉದ್ಘಾಟಿಸಬೇಕಿದ್ದ ಓಂಪುರಿಗೆ ರಂಗಗೀತೆಗಳನ್ನು ಅರ್ಪಿಸುವೆ’ ಎಂದು ಹೇಳಿದರು.
 
ನಂತರ 6.30ಕ್ಕೆ ರಂಗಾಯಣದ ಕಲಾವಿದರು ‘ಚಿತ್ರಲೇಖೆ’ ನಾಟಕ ಆಡುವರು. ‘ತುರ್‌–ಆನ್‌–ದೋ’ (ರಾಜನ ಮಗಳು) ಎಂಬ ಹೆಸರಿನಲ್ಲಿ ಮಧ್ಯಪ್ರಾಚ್ಯದಲ್ಲಿ ಪ್ರಚಲಿತದಲ್ಲಿರುವ ನಾಟಕೀಯ, ಜಾನಪದ ರೂಪಕವನ್ನು ಆಧರಿಸಿ ರಚಿತಗೊಂಡ ಸಂಗೀತ ಪ್ರಧಾನ ನಾಟಕವಿದು. 
 
‘ಪ್ರಸ್ತುತ ರಂಗಭೂಮಿಯು ಮಾತಿನ ಮಂಟಪವಾಗಿದೆ. ಮಾತ್ರವಲ್ಲ, ರಂಗಭೂಮಿಯಲ್ಲಿ ಮಾತೇ ಸರ್ವಸ್ವ ಎಂಬ ವಾದವನ್ನೂ ಪ್ರಚುರಪಡಿಸಲಾಗುತ್ತಿದೆ. ಆದರೆ, ನಮ್ಮ ಸಾಂಪ್ರದಾಯಿಕ ರಂಗಭೂಮಿ ಹಾಗಲ್ಲ. ಅದು ಸಂಗೀತಮಯವೂ ಪ್ರತಿಮಾತ್ಮಕವೂ ಆಗಿದೆ. 
 
ಪ್ರಸ್ತುತ ಚಿತ್ರಲೇಖೆ ನಾಟಕವು ಸಾಂಪ್ರದಾಯಿಕ ರಂಗಭೂಮಿಯ ಸಂಗೀತಮಯತೆಯನ್ನು ಸಮಕಾಲೀನ ರಂಗಪ್ರಯೋಗದಲ್ಲಿ ಮರುಕಸಿಗೊಳಿಸಿಕೊಳ್ಳುವ ಪ್ರಯತ್ನವಾಗಿದೆ. ಸರಳ, ಜನಪದ ಕಥಾನಕವನ್ನು ಅತಾರ್ಕಿಕ ರಂಗಚಿತ್ರದ ಮೂಲಕ ತುಸು ಅಮೂರ್ತಗೊಳಿಸಿ ನಿರೂಪಿಸುವ ಪ್ರಯತ್ನವನ್ನು ಈ ನಾಟಕದಲ್ಲಿ ಮಾಡಲಾಗಿದೆ’ ಎಂದು ನಾಟಕ ನಿರ್ದೇಶಕ ಸುರೇಶ್‌ ಆನಗಳ್ಳಿ ವಿವರಿಸಿದರು. 
 
**
ಶುಕ್ರವಾರ ಪ್ರದರ್ಶನಗೊಳ್ಳುವ ‘ಚಿತ್ರಲೇಖೆ’ ನಾಟಕದ ಎಲ್ಲ ಟಿಕೆಟುಗಳು ಮಾರಾಟವಾಗಿವೆ. ಈಗಲೂ ಬೇಡಿಕೆಯಿದೆ. ವಾರಾಂತ್ಯ ನಾಟಕದಲ್ಲಿ ‘ಚಿತ್ರಲೇಖೆ’ ಮತ್ತೆ ಪ್ರದರ್ಶನಗೊಳ್ಳಲಿದೆ.
-ನಿರ್ಮಲಾ ಮಠಪತಿ
ಉಪ ನಿರ್ದೇಶಕಿ, ರಂಗಾಯಣ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT