ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳ್ಗಿಚ್ಚು ನಿಯಂತ್ರಣಕ್ಕೆ ಮುನ್ನೆಚ್ಚರಿಕೆ

ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಬೆಂಕಿ ನಿಯಂತ್ರಣಾ ರೇಖೆ ನಿರ್ಮಾಣ
Last Updated 13 ಜನವರಿ 2017, 7:26 IST
ಅಕ್ಷರ ಗಾತ್ರ
ಹುಣಸೂರು: ಪ್ರಸಕ್ತ ಸಾಲಿನಲ್ಲಿ ಬರದ ತೀವ್ರತೆ ಹೆಚ್ಚಿದ್ದು, ಬೇಸಿಗೆಯಲ್ಲಿ ಕಾಡ್ಗಿಚ್ಚು ನಿಯಂತ್ರಣಕ್ಕೆ ಇಲಾಖೆ ಈಗಾಗಲೇ ಬೆಂಕಿ ನಿಯಂತ್ರಣಾ ರೇಖೆ (ಫೈರ್‌ ಲೈನ್‌) ನಿರ್ಮಿಸುವಲ್ಲಿ ಕಾರ್ಯೋನ್ಮುಖವಾಗಿದೆ.
 
ಕೊಡಗು ಹಾಗೂ ಮೈಸೂರು ಜಿಲ್ಲೆಯಲ್ಲಿ ವ್ಯಾಪಿಸಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಸುಮಾರು 640 ಚದರ ಕಿ.ಮಿ. ವ್ಯಾಪ್ತಿಯಲ್ಲಿ ಹೊಂದಿದ್ದು, ಪ್ರತಿ ವರ್ಷವೂ ಒಂದಲ್ಲ ಒಂದು ಕಾರಣಗಳಿಗೆ ಬೇಸಿಗೆಯಲ್ಲಿ  ಜೀವ ಪ್ರಭೇದಗಳು ಕಾಡ್ಗಿಚ್ಚಿಗೆ ತುತ್ತಾಗುತ್ತಿವೆ. ಈ ಬಾರಿ ಮಳೆ ಕೊರತೆಯಾಗಿರುವುದು ಅಧಿಕಾರಿಗಳಲ್ಲಿ ಆತಂಕ ಹೆಚ್ಚು ಮಾಡಿದೆ.
 
ಉದ್ಯಾನದಲ್ಲಿ ಇಲಾಖೆ 1800 ಕಿ.ಮಿ. ವ್ಯಾಪ್ತಿಯಲ್ಲಿ ಬೆಂಕಿ ನಿಯಂತ್ರಣಾ ರೇಖೆಯನ್ನು ನಿರ್ಮಿಸುವಲ್ಲಿ ಮುಂದಾ ಗಿದೆ. ರಾಷ್ಟ್ರೀಯ ಉದ್ಯಾನದ ಪ್ರವೇಶದ್ವಾರವಾದ ವೀರನಹೊಸಹಳ್ಳಿ ಮೂಲಕ ಈ ಕೆಲಸ ಆರಂಭಿಸಿದ್ದು, ಅರಣ್ಯದಂಚಿನಲ್ಲಿ ಪ್ರದೇಶಗಳಲ್ಲಿ ಹೆಚ್ಚು ಒತ್ತು ನೀಡುವ ಮೂಲಕ ಫೈರ್‌ಲೈನ್ ನಿರ್ಮಿಸಲಾಗುತ್ತಿದೆ ಎಂದು ಹುಲಿ ಯೋಜನೆ ನಿರ್ದೇಶಕ ಮಣಿಕಂಠನ್‌ ತಿಳಿಸಿದ್ದಾರೆ. 
 
ವೀರನಹೊಸಹಳ್ಳಿ ವಲಯ ಪ್ರತಿವರ್ಷವೂ ಬೆಂಕಿಗೆ ತುತ್ತಾಗುತ್ತಿದ್ದು, ಕೊಡಗು ಮತ್ತು ಎಚ್‌.ಡಿ.ಕೋಟೆ ತಾಲ್ಲೂಕಿನ ಅರಣ್ಯದಂಚಿನ ಗ್ರಾಮ ಗಳಲ್ಲೂ ಅರಿವು ಮೂಡಿಸುವ ಕೆಲಸ ವನ್ನೂ  ಇಲಾಖೆ ಈಗಾಗಲೇ ನಡೆಸಿದೆ. ಬೇಸಿಗೆಯಲ್ಲಿ ಕಾಳ್ಗಿಚ್ಚು ನಿಯಂತ್ರಿಸಲು ಈಗಾಗಲೇ ಇಲಾಖೆ 200 ಸಿಬ್ಬಂದಿ ಯನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿದೆ. ಉದ್ಯಾನದ ವ್ಯಾಪ್ತಿಯ 8 ವಲಯದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
 
ವೀಕ್ಷಣಾ ಗೋಪುರ: ರಾಷ್ಟ್ರೀಯ ಉದ್ಯಾನದಲ್ಲಿ ಬೆಂಕಿ ಪತ್ತೆ ಮಾಡಲು 15  ಸ್ಥಳದಲ್ಲಿ ವೀಕ್ಷಣಾ ಗೋಪುರ ನಿರ್ಮಿಸಲಾಗಿದ್ದು, 24 ಗಂಟೆ, ಎರಡು ಪಾಳೆಯಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಅರಣ್ಯದಲ್ಲಿ ಎಲ್ಲಿ ಬೆಂಕಿ ಕಂಡರೂ ತಕ್ಷಣದಲ್ಲೇ ಕೇಂದ್ರ ಸ್ಥಳಕ್ಕೆ ಮಾಹಿತಿ ರವಾನಿಸಲಿದ್ದಾರೆ. ಈ ನಿಟ್ಟಿನಲ್ಲಿ 40 ಹೆಚ್ಚುವರಿ ವಾಕಿಟಾಕಿ ಖರೀದಿಸಲು ಇಲಾಖೆ ಮುಂದಾಗಿದೆ. ಈಗ 150 ವಾಕಿಟಾಕಿಗಳನ್ನು ಹೊಂದಿದೆ ಎಂದೂ ಅವರು ಮಾಹಿತಿ ನೀಡಿದರು.
 
ತಂತ್ರಜ್ಞಾನ ಬಳಕೆ: ಹೈದರಾಬಾದ್‌ ನಲ್ಲಿರುವ ಎನ್‌.ಆರ್‌.ಎಚ್‌.ಐ ಸ್ಯಾಟ್‌ಲೈಟ್‌ ನಿಯಂತ್ರಣ ಕೇಂದ್ರದಿಂದ ಕಾಳ್ಗಿಚ್ಚು ಕುರಿತ ಮಾಹಿತಿ ನಿಖರ ಸ್ಥಳ ತಿಳಿಸಲಿದೆ. ಅಲ್ಲದೇ, ಬೆಂಕಿ ನಿಯಂತ್ರಿಸಲು ಅಗತ್ಯ ನೆರವು ನೀಡುವಂತೆ ಅರಣ್ಯದಂಚಿನ ತಾಲ್ಲೂಕು ಕೇಂದ್ರಗಳಲ್ಲಿರುವ ಅಗ್ನಿಶಾಮಕ ದಳಕ್ಕೂ ಮನವಿ ಮಾಡಲಾಗಿದೆ ಎಂದು ಮಣಿಕಂಠನ್‌ ತಿಳಿಸಿದರು.
 
**
ಯಾವುದೇ ಅರಣ್ಯದಲ್ಲಿ ಸ್ವಾಭಾವಿಕ ಬೆಂಕಿ ಬೀಳು ವುದಿಲ್ಲ, ಮಾನವರಿಂದಲೇ ಬೆಂಕಿ ತಗಲುತ್ತಿದೆ. ಅರಣ್ಯ ರಕ್ಷಣೆ ಇಲಾಖೆಗೆ ಮಾತ್ರ ಸೀಮಿತಗೊಂಡಿಲ್ಲ.  ಎಲ್ಲರೂ ಕೈ ಜೋಡಿಸಿದಲ್ಲಿ ಅರಣ್ಯ ಉಳಿಸಲು ಸಾಧ್ಯ
-ಮಣಿಕಂಠನ್‌ ,
ನಿರ್ದೇಶಕ, ನಾಗರಹೊಳೆ ಹುಲಿ ಯೋಜನೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT