ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಾತ್ಕಾರ ಜೀವನಕ್ಕಾಗಿ ಪ್ರಯತ್ನಿಸಲು ಸಲಹೆ

ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧೆಡೆ ರಾಷ್ಟ್ರೀಯ ಯುವ ದಿನಾಚರಣೆ
Last Updated 13 ಜನವರಿ 2017, 8:27 IST
ಅಕ್ಷರ ಗಾತ್ರ

ಆತ್ಮಶುದ್ಧಿ ಇಲ್ಲದೆ ಯಾವ ಸಾಧನೆಯೂ ಇಲ್ಲ *ಯುವಜನರು ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಹೊರಬರಬೇಕು

**
ಹಾಸನ: ಆತ್ಮ ಶುದ್ಧಿಯಿಲ್ಲದೆ ಯಾವ ಸಾಧನೆಯೂ ಇಲ್ಲ ಎಂಬ ಸತ್ಯವನ್ನು ಅರಿತು ಸಾಕ್ಷಾತ್ಕಾರ ಜೀವನಕ್ಕೆ ನಾಗರಿಕ ಪ್ರಯತ್ನಿಸಬೇಕು. ಅಂತಹ ಉದಾತ್ತ ಮೌಲ್ಯಗಳು ಭಾರತದ ಮಣ್ಣಿನಲ್ಲಿ ಸಮ್ಮಿಳಿತವಾಗಿದೆ ಎಂದು ಮೈಸೂರಿನ ರಾಮಕೃಷ್ಣ ಆಶ್ರಮದ ಸ್ವಾಮಿ ತೀರ್ಥಕರುಣಾನಂದಜಿ ಮಹಾರಾಜ್ ಹೇಳಿದರು.
 
ಜಿಲ್ಲಾಡಳಿತ, ಪದವಿ ಪೂರ್ವ ಶಿಕ್ಷಣ ಇಲಾಖೆ , ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಗರದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಅವರ 154ನೇ ಜನ್ಮ ದಿನದ ಪ್ರಯುಕ್ತ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.
 
ಆಧುನಿಕ ಶಿಕ್ಷಣವು ಊಟ, ವಸತಿ, ಬಟ್ಟೆಯನ್ನು ಸಂಪಾದಿಸುವ ಕೌಶಲ ಮಾತ್ರ ಕಲಿಸಿಕೊಡುತ್ತದೆ. ಆದರೆ, ಅದರಿಂದ ನೆಮ್ಮದಿ ಸಿಗುವುದಿಲ್ಲ. ಯುವಕರ ಮನಸ್ಥಿತಿ ಬದಲಾಗಬೇಕು. ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರಗಳ ನಡುವೆ ವ್ಯತ್ಯಾಸವಿದೆ. ಪಾಶ್ಚಿಮಾತ್ಯ ಸಂಸ್ಕೃತಿಗಳ ಆಚರಣೆಯೇ ಸ್ವಾತಂತ್ರ್ಯ ಎಂಬ ಕಲ್ಪನೆಯಿಂದ ಯುವ ಜನಾಂಗ ಹೊರಬರಬೇಕು ಎಂದು ಕಿವಿಮಾತು ಹೇಳಿದರು.
 
ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಶಾರದಾದೇವಿ ಸೇರಿದಂತೆ ಅನೇಕ ಮಹಾನ್ ಪುರುಷರ ಜೀವನ ಚರಿತ್ರೆ ಅರಿಯಬೇಕು. ನಿರಂತರ ಜ್ಞಾನ, ಧ್ಯಾನದ ಹಸಿವು ಇದ್ದಲ್ಲಿ ಸಾಕ್ಷಾತ್ಕಾರದ ಹಾದಿ ಸುಗಮವಾಗಲಿದೆ ಎಂದರು.
 
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಮಾತನಾಡಿ, ಭಾರತದ ಹಿರಿಮೆಯನ್ನು ಪ್ರಪಂಚದಾದ್ಯಂತ ಪಸರಿಸಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ. ಯುವಕರು ತಮ್ಮಲ್ಲಿರುವ ಶಕ್ತಿಯನ್ನು ಅರಿತು ಸಾಧನೆಯತ್ತ ಸಾಗಬೇಕು ಎಂದು ಕರೆ ನೀಡಿದರು.
 
ಜಿಲ್ಲಾಧಿಕಾರಿ ವಿ. ಚೈತ್ರಾ ಮಾತನಾಡಿ, 2045ರ ವೇಳೆಗೆ ಭಾರತದಲ್ಲಿ 41 ಮಿಲಿಯನ್‌ ಯುವ ಸಂಪತ್ತು ಇರಲಿದೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ದುಡಿಯುವ ಸಂಪತ್ತಿಗೆ ಕೊರತೆಯಿಲ್ಲ ಎಂಬ ಕಾರಣಕ್ಕೆ ವಿದೇಶಗಳು ನಮ್ಮತ್ತ ತಿರುಗಿ ನೋಡುತ್ತಿವೆ. ಆದ್ದರಿಂದ ಯುವಕರು ತಮ್ಮ ಸಾಮರ್ಥ್ಯ ಪ್ರದರ್ಶಿಸಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕು.
 
ಸಕಾರಾತ್ಮಕ ಚಿಂತನೆಯಿಂದ ಎಂತಹ ಸಮಸ್ಯೆಯ ನ್ನಾದರೂ ಎದುರಿಸಬಹುದು ಎಂಬ ಮನೋಸ್ಥೈರ್ಯವನ್ನು ಶಿಕ್ಷಕಕರು ಮಕ್ಕಳಿಗೆ ಕಲಿಸಿಕೊಡಬೇಕು ಎಂದರು.
ಉಪ ವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್, ಪ್ರೊಬೇಷನರಿ ಐಎಎಸ್ ಅಧಿಕಾರಿ ರೋಷನ್ ಮಾತನಾ ಡಿದರು. ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರಸ ಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
 
ಜಿಲ್ಲಾ ಎಸ್ಪಿ ರಾಹುಲ್ ಕುಮಾರ್ ಶಹಪುರವಾಡ್, ತಹಶೀಲ್ದಾರ್ ಶಿವಶಂಕರಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಸಿ. ಜಯದೇವಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ್ ಸರಶೆಟ್ಟಿ, ನೆಹರು ಯುವ ಕೇಂದ್ರದ ಸಮನ್ವಯ ಅಧಿಕಾರಿ ಅನಂತಪ್ಪ,   ಪಾಂಶುಪಾಲ ಯೋಗೇಶ್ ಇದ್ದರು.
 
ಮೌಲ್ಯ ಬೆಳೆಸಿಕೊಳ್ಳಿ
ಹೆತ್ತೂರು: ವಿದ್ಯಾರ್ಥಿಗಳು ಸಂಸ್ಕಾರ, ಮೌಲ್ಯ ರೂಢಿಸಿಕೊಳ್ಳಬೇಕು. ದೇಶದ ಬದಲಾವಣೆಗೆ ಶಿಕ್ಷಣ ಅತ್ಯಗತ್ಯ ಎಂದು ಡಾ.ದಿನೇಶ್ ಹೇಳಿದರು.
 
ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಅಯೋಜಿಸಿದ್ದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
ಕಲಿಯುವ ಹಂತದಲ್ಲಿಯೇ ಮಹನೀಯರ, ಚಿಂತಕರ, ದೇಶಭಕ್ತರ ವಿಚಾರಧಾರೆ ಕುರಿತು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್, ಉಪನ್ಯಾಸಕರು ಮತ್ತು ಬೋಧಕೇತರರು ಹಾಜರಿದ್ದರು.
 
ಸಂಸ್ಕೃತಿ ಉಳಿಸಿ, ಬೆಳೆಸಿ
ಶ್ರವಣಬೆಳಗೊಳ: ಹೋಬಳಿಯ ಕಬ್ಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ರಾಷ್ಟ್ರೀಯ ಯುವ ದಿನ ಆಚರಿಸಲಾಯಿತು. ಮಕ್ಕಳೇ ಕಾರ್ಯಕ್ರಮ ನಡೆಸಿಕೊಟ್ಟದ್ದು ವಿಶೇಷವಾಗಿತ್ತು.
 
ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿನಿ ಖುಷಿ ಮಾತನಾಡಿ, ‘ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂದು ಹೇಳಿದ ವಿವೇಕಾನಂದರ ಧೈರ್ಯ, ಸಾಹಸ, ಆದರ್ಶ ನಮಗೆಲ್ಲಾ ಸ್ಪೂರ್ತಿಯಾಗಲಿ ಎಂದರು.
 
ಶಿಕ್ಷಕಿ ಇಂದಿರಾ ಮಾತನಾಡಿ, ಯುವಜನರು ಮಾನಸಿಕ, ಆಧ್ಯಾತ್ಮಿಕ, ದೈಹಿಕ, ನೈತಿಕ ಶಕ್ತಿ ಅಳವಡಿಸಿಕೊಂಡು ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಬೇಕು ಎಂದು ಮನವಿ ಮಾಡಿದರು. ಶಿಕ್ಷಕ ಲಿಂಗರಾಜು ಮಾತನಾಡಿದರು. 
 
ಕಾನೂನು ಅರಿವು
ಅಕಲಗೂಡು: ‘ಸರ್ವರಿಗೂ ಕಾನೂನು ಅರಿವು ಅಗತ್ಯ’ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕುರಾಣಿ ಕಾಂತ್ ಗುರುವಾರ ತಿಳಿಸಿದರು. 
 
ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ಸಹಯೋಗ ದಲ್ಲಿ ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರಾಷ್ಟ್ರೀಯ ಯುವ ದಿನ ಅಂಗವಾಗಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
‘ಯುವಜನರು  ಸಾಮಾಜಿಕ ಜಾಲ ತಾಣಗಳಲ್ಲಿ ವ್ಯವಹರಿಸವಾಗ ಆಕ್ಷೇಪಾರ್ಹ ಅಂಶಗಳನ್ನು ಪ್ರಕಟಿಸಿದರೆ ಶಿಕ್ಷೆ  ಆಗಲಿದೆ. ಈ ಕುರಿತು ಎಚ್ಚರ ಅಗತ್ಯ. ಸ್ವತಃ ಜಾಗರೂ ಕರಾಗುವ ಜತೆಗೆ ಜತೆಗೆ ಇತರರಿಗೂ ಅರಿವು ಮೂಡಿಸಬೇಕು’ ಎಂದರು.
 
‘ರಾಷ್ಟ್ರೀಯ ಯುವ ದಿನಾಚರಣೆ ಮಹತ್ವ’ ಕುರಿತು ವಕೀಲ ಕೆ.ಆರ್‌. ವಿಜಯಕುಮಾರ್‌, ಭಾರತೀಯ ಮೋಟಾರು ವಾಹನ ಅಧಿ ನಿಯಮ ಕುರಿತು ವಕೀಲ ಎಸ್‌.ಟಿ.ಪ್ರಕಾಶ್‌ ಮಾಹಿತಿ ನೀಡಿದರು. ಸರ್ಕಾರಿ ಐಟಿಐ ಅಧಿಕಾರಿ ಟಿ.ಜಯರಾಮ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎಂ.ನಳರಾಜ, ಕಾರ್ಯದರ್ಶಿ ಜಿ.ಜಿ.ರವಿ, ಖಜಾಂಚಿ ವಿ.ಎನ್‌. ರವಿಕುಮಾರ್, ಸರ್ಕಾರಿ ವಕೀಲರಾದ ಎಸ್‌.ಎನ್‌. ಮಮತಾ, ಎನ್ಎಸ್ಎಸ್ ಅಧಿಕಾರಿ ಎ.ಎಸ್‌.ಯೋಗನಾಥ್ ಇದ್ದರು. 
 
**
ವಿದ್ಯಾರ್ಥಿಗಳಿಗೆ ಮೌಲ್ಯಗಳ ಸ್ಥೂಲ ಪರಿಚಯ ಅಗತ್ಯ
ಬಾಣಾವರ: ಅಧುನಿಕ ಕಾಲದ ವಿದ್ಯಾರ್ಥಿ ಸಮುದಾಯಕ್ಕೆ ಮೌಲ್ಯಗಳ ಸ್ಥೂಲ ಪರಿಚಯ ಮಾಡಿಕೊಡುವುದರ ಜೊತೆಗೆ ಗುರಿ ಸಾಧನೆಯ ಬದ್ಧತೆಗಾಗಿ ವಿವೇಕಾನಂದರ ಆದರ್ಶ ಮನ ಮುಟ್ಟವಂತೆ ತಿಳಿಸುವ ಅಗತ್ಯವಿದೆ ಎಂದು ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ್ ಸ್ವಾಮೀಜಿ ಅಭಿಪ್ರಾಯಪಟ್ಟರು.
 
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಗುರುವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ಜಗತ್ತಿನ ಶಾಂತಿಗಾಗಿ ವಿಶ್ವ ಪರ್ಯಟನೆ ಮಾಡಿ ಜನರಿಗೆ ವೈಜ್ಞಾನಿಕ ಆಧಾರದ ಮೇಲೆ ಆಧ್ಯಾತ್ಮ ವಿಚಾರ, ಸತ್ಯ ಸಂವೇದ ತಿಳಿಸಿ ಪ್ರಪಂಚದ ಕಣ್ಣಲ್ಲಿ ಭಾರತದ ಮೇಲಿನ ಅಭಿಮಾನ ಇಮ್ಮುಡಿ ಗೊಳಿಸಿದ ವಿವೇಕಾನಂದರು ಇಂದಿನ ಮಕ್ಕಳಿಗೆ ಸರಿ ದಾರಿ ತೋರುವ ಮಾನಸಿಕ ಗುರುವಿದ್ದಂತೆ. ವಿದ್ಯಾರ್ಥಿಗಳ ಬದುಕು ಸುಂದರ ಗೊಳಿಸಿಕೊಳ್ಳ ಬೇಕಾದರೆ ಪ್ರತಿಯೊಬ್ಬರೂ ಅವರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
 
ಉದ್ಯಮಿ ಆಕಾಶ್ ಹಿರಿಯಣ್ಣ ಮಾತನಾಡಿ, ಜಾತಿ ಮತ್ತು ಧರ್ಮದ ಕಂದಾಚಾರ ಮೀರಿ ರಾಷ್ಟ್ರಕ್ಕಾಗಿ ರಾಷ್ಟ್ರದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ವಿಶ್ವ ಚೇತನ ವಿವೇಕಾನಂದರ ವ್ಯಕ್ತಿತ್ವ ಚಿಂತನೆ ಹಾಗೂ ತತ್ವಗಳು ಪ್ರಸ್ತುತವಾಗಿವೆ. ಸದೃಢ ಭಾರತ ನಿರ್ಮಾಣಕ್ಕೆ ವಿವೇಕಾನಂದರ ಚಿಂತನೆಗಳು ಯುವಕರಿಗೆ ದಾರಿದೀಪವಾಗಬೇಕು ಎಂದರು.
 
ಪಟ್ಟಣದ ಹುಳಿಯಾರು ರಸ್ತೆ, ಆಸ್ಪತ್ರೆ ರಸ್ತೆ, ಎನ್ಎಚ್ 234ರಲ್ಲಿ ವಿವೇಕಾನಂದರ ಧ್ಯೇಯ ವಾಕ್ಯ ಘೋಷಣೆ ಕೂಗುತ್ತ ಮೆರವಣಿಗೆ ನಡೆಯಿತು. 
 
ದೇಶ ಕಂಡ ಮಹಾನ್  ಚಿಂತಕ
ಜಾವಗಲ್‌: ಸ್ವಾಮಿ ವಿವೇಕಾನಂದ ಅವರು ಜಗತ್ತು ಕಂಡ ಮಹಾನ್‌ ಸನ್ಯಾಸಿ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕವಲೀರಪ್ಪ ತಿಳಿಸಿದರು.
ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಗುರುವಾರ ನಡೆದ ಯುವ ದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
‘ಯುವಕರು ಹೇಡಿಗಳಾಗಬಾರದು, ಪುರುಷ ಸಿಂಹಗಳಾಗ ಬೇಕು. ನೀವು ಎಂದಿಗೂ ಪರಾವಲಂಬಿಗಳಾಗಬಾರದು, ನೀವೇ ನಿಮ್ಮ ಬದುಕಿನ ಶಿಲ್ಪಿಗಳು’ಎಂದು ಸ್ವಾಮಿ ವಿವೇಕಾನಂದರು ಯುವ ಜನರಿಗೆ ನೀಡಿರುವ ಸಂದೇಶವೂ ಜೀವನದ ಧರ್ಮವಾಗಿದೆ ಎಂದರು.
 
ಪ್ರಾಧ್ಯಾಪಕ ಕುಮಾರ್‌, ಶ್ರೀನಿವಾಸ್, ಉಪನ್ಯಾಸಕರಾದ ಮಂಜುನಾಥ್‌, ಉದಯ್‌ಕುಮಾರ್‌ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಕುರಿತ ಭಾಷಣ ಸ್ಪರ್ಧೆ, ಘೋಷಣೆಗಳ ಸ್ಪರ್ಧೆ, ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ನಡೆಯಿತು. 
 
ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಅನುಷಾ ವಿಜೇತರಾದರು. ಉಪಪ್ರಾಂಶುಪಾಲ ಯೋಗಿಶ್‌ ಮಾತನಾಡಿದರು. ಶಿಕ್ಷಕರಾದ ಪುಟ್ಟಶಂಕರಪ್ಪ, ರಾಮಲಿಂಗಪ್ಪ, ಶಿವಲಿಂಗಮೂರ್ತಿ ಇತರರು ಹಾಜರಿದ್ದರು.  
 
**
ವಿದ್ಯಾರ್ಥಿಗೆ ಓದು ಬರಹ ಎಷ್ಟು ಮುಖ್ಯವೋ, ಅದೇ ರೀತಿ ಸಾಮಾಜಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದೂ ಮುಖ್ಯ. ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಬೇಕು
–ವಿ. ಚೈತ್ರಾ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT