ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲೆಡೆ ‘ವೀರ ಸನ್ಯಾಸಿ’ ವಿವೇಕಾನಂದರ ಸ್ಮರಣೆ

ವಿವೇಕಾನಂದರ 154ನೇ ಜಯಂತಿ: ಬಡತನ, ಅಸಮಾನತೆ ನಿರ್ಮೂಲನೆಗೆ ತುಡಿಯುತ್ತಿದ್ದ ನರೇಂದ್ರ
Last Updated 13 ಜನವರಿ 2017, 9:52 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ: ಸ್ವಾಮಿ ವಿವೇಕಾನಂದರ 154ನೇ ಜನ್ಮದಿನದ ಪ್ರಯುಕ್ತ ಗುರುವಾರ ನಗರದ ವಿವಿಧ ಶಾಲಾ, ಕಾಲೇಜುಗಳಲ್ಲಿ ‘ವೀರ ಸನ್ಯಾಸಿ’ ವಿವೇಕಾನಂದರ ಸ್ಮರಣೆಯ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. 
 
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಉನ್ನತ ಶಿಕ್ಷಣ ಇಲಾಖೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ವಿವೇಕಾನಂದರ 154ನೇ ಜಯಂತಿ ಅಂಗವಾಗಿ ‘ರಾಷ್ಟ್ರೀಯ ಯುವ ಸಪ್ತಾಹ’ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
 
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಣ ತಜ್ಞ ಪ್ರೊ.ಕೋಡಿ ರಂಗಪ್ಪ, ‘ಮನುಷ್ಯತ್ವ, ಅಂತಃಕರಣ ಪ್ರತಿಯೊಬ್ಬರಲ್ಲಿ ಮೂಡಬೇಕು ಎಂದು ತುಡಿಯುತ್ತಿದ್ದ ಸ್ವಾಮಿ ವಿವೇಕಾನಂದರು ಬಡವರ ಉದ್ಧಾರವಾಗದೆ ದೇಶದ ಪ್ರಗತಿ ಸಾಧ್ಯವಿಲ್ಲ ಎಂದು ಸಾರಿ ಹೇಳಿದ್ದರು. ಬಡತನ ನಿರ್ಮೂಲನೆಯೇ ಮೊದಲ ಆದ್ಯತೆಯನ್ನಾಗಿ ಸ್ವೀಕರಿಸಿದ್ದ ಅವರು ಬಡವರು ಮತ್ತು ಮಹಿಳೆಯರನ್ನು ಕಡು ಕಷ್ಟಕ್ಕೆ ನೂಕಿದ್ದ ಮೇಲುಕೀಳು ಆಚರಣೆಯ ಜಾತಿ ವ್ಯವಸ್ಥೆ ವಿರುದ್ಧ ಕಿಡಿಕಾರುತ್ತಿದ್ದರು’ ಎಂದು ಹೇಳಿದರು. 
 
‘ನಮ್ಮ ದೇಶ ಬಹುಸಂಸ್ಕೃತಿಗೆ ಹೆಸರು ಮಾಡಿದಷ್ಟೇ ಅಸಮಾನತೆಯ ಆಚರಣೆಗಳಿಗೆ ನೆಲೆ ಒದಗಿಸಿಕೊಟ್ಟಿದೆ. ಇಂತಹ ಸಂದರ್ಭದಲ್ಲಿ ಕಟ್ಟಕಡೆಯ ವ್ಯಕ್ತಿಯೂ ಸಮಾನತೆಯಿಂದ ಬಾಳಲು ಬೇಕಾಗಿರುವ ಶಿಕ್ಷಣ ಪ್ರತಿಯೊಬ್ಬರಿಗೂ ದೊರೆಯುವಂತೆ ನೋಡಿಕೊಳ್ಳಬೇಕಿದೆ. ಶಿಕ್ಷಣ ಮನುಷ್ಯನನ್ನು ಮೃಗತ್ವದಿಂದ ಮಾನವೀಯತೆ ಕಡೆಗೆ ಕರೆದುಕೊಂಡು ಹೋಗುತ್ತದೆ’ ಎಂದು ಅಭಿಪ್ರಾಯಪಟ್ಟರು. 
 
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎನ್.ಅನುರಾಧಾ ಮಾತನಾಡಿ, ‘ಲೌಕಿಕ ಜೀವನದ ನಡುವೆಯೇ ಅಧ್ಯಾತ್ಮದ ಉತ್ತುಂಗ ಶಿಖರಕ್ಕೆ ಏರಿದ ಮಹಾನ್ ಪುರುಷ ವಿವೇಕಾನಂದರ ಶಿಸ್ತುಬದ್ಧ ಜೀವನ ಕ್ರಮವನ್ನು ಇಂದಿನ ಯುವ ಸಮೂಹ ಆದರ್ಶವಾಗಿ ಸ್ವೀಕರಿಸಬೇಕಿದೆ. ಯಾಂತ್ರಿಕ ಜೀವನದ ಹಲವಾರು ಸಮಸ್ಯೆಗಳಿಗೆ ಅವರ ಆಧ್ಯಾತ್ಮಿಕ ಮಾರ್ಗ ಪರಿಹಾರ ಒದಗಿಸುತ್ತದೆ’ ಎಂದು ಹೇಳಿದರು.
 
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರುದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಜುಂಜಣ್ಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾರಾಯಣಸ್ವಾಮಿ, ಮಹಿಳಾ ಕಾಲೇಜಿನ ಪ್ರಾಂಶುಪಾಲ ನಾಗರಾಜಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 
ಇಡೀ ವಿಶ್ವವೇ ಮೆಚ್ಚಿದ ವ್ಯಕ್ತಿತ್ವ: ನಗರದ ವಿಶ್ವ ವಿವೇಕ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿವೇಕಾನಂದ ಜಯಂತಿ ಮತ್ತು ಸಾಂಸ್ಕೃತಿಕ ಸಿರಿ ಉತ್ಸವ ಬಿಜೆಪಿ ವತಿಯಿಂದ ವಿದ್ಯಾರ್ಥಿಗಳಿಗೆ  ‘ವಿವೇಕ್‌ ಬ್ಯಾಂಡ್‌’ ವಿತರಿಸಲಾಯಿತು. 
 
ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್, ‘ಪ್ರತಿಯೊಬ್ಬರಲ್ಲಿ ಒಂದು ಸಾಮರ್ಥ್ಯ ಅಡಗಿರುತ್ತದೆ. ಅದನ್ನು ಉಪಯೋಗಿಸಿಕೊಂಡು ಯುವಪೀಳಿಗೆ ದೇಶದ ಉದ್ಧಾರಕ್ಕೆ ಮುಂದಿನ ಹಾದಿಯಾಗಬೇಕು. ಪ್ರತಿ ಕಷ್ಟವನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ಸೋಲು ಗೆಲುವಿನ ಮೆಟ್ಟಿಲಾಗಿ ಭಾವಿಸಿಕೊಂಡು ಯಶಸ್ಸಿಗಾಗಿ ಪ್ರಯತ್ನ ಮುಂದುವರಿಸಬೇಕು’ ಎಂದು ಹೇಳಿದರು. 
 
‘ಯುವ ಪೀಳಿಗೆಯಲ್ಲಿ ಚೈತನ್ಯ ಮೂಡಿಸುವ ವ್ಯಕ್ತಿತ್ವ ಹೊಂದಿದ್ದ ಸ್ವಾಮಿ ವಿವೇಕಾನಂದರನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿತ್ತು. ಅಮೆರಿಕಾದ ಚಿಕಾಗೊದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನಕ್ಕೆ ಅವರು ಹೋದಾಗ ಮೂರು ದಿನಗಳ ಕಾಲ ಅವರಿಗೆ ಮಾತನಾಡಲು ಅವಕಾಶ ಕೊಟ್ಟಿರಲಿಲ್ಲ. ಕೊನೆಯಲ್ಲಿ ಸಿಕ್ಕ ಐದು ನಿಮಿಷಗಳ ಅವಕಾಶದಲ್ಲಿ ಇಡೀ ವಿಶ್ವವೇ ತಲೆದೂಗುವಂತೆ ಅವರು ಭಾಷಣ ಮಾಡಿದ್ದರು’ ಎಂದು ತಿಳಿಸಿದರು. 
 
‘ಭಾರತೀಯ ಸಂಸ್ಕೃತಿಯ ವಕ್ತಾರಂತಿದ್ದ ವಿವೇಕಾನಂದರು ಯುವ ಪೀಳಿಗೆ ಯಾವ ರೀತಿ ಇರಬೇಕು ಎನ್ನುವ ಹಾದಿ ತೋರಿದವರು. ನಾವು ಸಮಾಜಕ್ಕೆ ಉಪಯೋಗವಾಗುವ ಜತೆಗೆ ಪರರಿಗೆ ಉಪಕಾರಿಗಳಾಗಿರಬೇಕು ಎನ್ನುವ ಸಂದೇಶವುಳ್ಳ ‘ವಿವೇಕ್‌ ಬ್ಯಾಂಡ್‌’ ಧರಿಸುವ ಪ್ರತಿಯೊಬ್ಬರೂ ವಿವೇಕಾನಂದರ ಮೌಲ್ಯಗಳನ್ನು ಮನನ ಮಾಡಿಕೊಳ್ಳಬೇಕು’ ಎಂದರು. 
 
ಪೊಲೀಸ್ ಅಧಿಕಾರಿ ರಮೇಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕಿರಣ್, ಪಿಯು ಕಾಲೇಜಿನ ಪ್ರಾಂಶುಪಾಲ ಸುದರ್ಶನ ರೆಡ್ಡಿ, 
ಪದವಿ ಕಾಲೇಜಿನ ಪ್ರಾಂಶುಪಾಲ ಗಂಗರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 
 
ರಕ್ತದಾನ ಶಿಬಿರ ಆಯೋಜನೆ: ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ತಾಲ್ಲೂಕಿನ ಜಡಲತಿಮ್ಮನಹಳ್ಳಿ ಬಳಿ ಇರುವ ವಿಷ್ಣುಪ್ರಿಯ ಕಾಲೇಜಿನಲ್ಲಿ ಗುರುವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಮತ್ತು ಲಯನ್ಸ್‌ ಕ್ಲಬ್‌ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 
 
ವಿಷ್ಣುಪ್ರಿಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೈ.ಎನ್.ರಾಮಚಂದ್ರ ರೆಡ್ಡಿ, ಎಬಿವಿಪಿ ಸಂಘಟನೆಯ ವಿಭಾಗ ಸಂಚಾಲಕ ಮಂಜುನಾಥ್ ರೆಡ್ಡಿ, ಲಯನ್ಸ್‌ ಕ್ಲಬ್‌ ಕಾರ್ಯದರ್ಶಿ ಸುನೀಲ್, ಖಜಾಂಚಿ ಬ್ರಹ್ಮಚಾರಿ, ಪ್ರಾಂಶುಪಾಲೆ ಎನ್.ಸಿಂಧೂ, ಉಪನ್ಯಾಸಕರಾದ ನಾಗೇಂದ್ರ ಸಿಂಹ, ಸತೀಶ್, ನಟರಾಜ್, ಮಂಜುಳಾ, ಮತ್ತು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ರಕ್ತನಿಧಿ ಅಧಿಕಾರಿ ಜಹೀರ್ ಪಾಷಾ ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದಲ್ಲಿ 19 ಯೂನಿಟ್‌ ರಕ್ತ ಸಂಗ್ರಹಿಸಲಾಯಿತು. 
 
ವಿವೇಕ್‌ ಬ್ಯಾಂಡ್‌ ವಿತರಣೆ: ವಿವೇಕಾನಂದರ ಜನ್ಮದಿನದ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದ ವಿಜಯ ಚೇತನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ‘ವಿವೇಕ್‌ ಬ್ಯಾಂಡ್‌’ ವಿತರಿಸಲಾಯಿತು. ಬಿಜೆಪಿ ಯುವ ಮೋರ್ಚಾ ನಗರ ಘಟಕ ಅಧ್ಯಕ್ಷ ಬಾಲು, ಪ್ರಧಾನ ಕಾರ್ಯದರ್ಶಿ ಚೇತನ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕಿರಣ್, ಪದಾಧಿಕಾರಿಗಳಾದ ವರದರಾಜ್, ನವೀನ್‌, ಶಿವಣ್ಣ, ವಿಜಯ್, ರವಿರಾಜ್, ಶ್ರೀತಮನಾಯ್ಡು, ದೇವರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
 
**
ವೈಚಾರಿಕ ಚಿಂತನೆಯಿಂದ ದೂರಮಾಡಿ ಅಧೋಗತಿಗೆ ತಳ್ಳುವ ಮೂಢನಂಬಿಕೆಗಳನ್ನು ಆಚರಿಸುವಂತೆ ಪ್ರೋತ್ಸಾಹಿಸುವುದು ಮತ್ತು ಆಚರಿಸುವುದು ದೇಶದ್ರೋಹಕ್ಕೆ ಸಮ. 
-ಪ್ರೊ.ಕೋಡಿ ರಂಗಪ್ಪ, 
ಶಿಕ್ಷಣ ತಜ್ಞ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT