ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ವಾಂಸರು ಮಾರಾಟದ ಸರಕಾಗುವುದು ಅಪಾಯ

‘ಗಾಯಗೊಂಡಿದೆ ಗರಿಕೆ ಗಾನ’ ಕವನ ಸಂಕಲನ ಬಿಡುಗಡೆ
Last Updated 13 ಜನವರಿ 2017, 9:55 IST
ಅಕ್ಷರ ಗಾತ್ರ
ಹುಳಿಯಾರು: ‘ವಿದ್ವಾಂಸರು, ಕವಿಗಳು ಮಾರಾಟದ ಸರಕಾಗುತ್ತಿರುವುದು ಅಪಾಯದ ಸಂಕೇತವಾಗಿದ್ದು , ಇಂಥವರು ಸ್ವವಿಮರ್ಶೆ ಮಾಡಿಕೊಳ್ಳಬೇಕು’ ಎಂದು ಸಾಹಿತಿ ಡಾ.ಕೆ.ವೈ.ನಾರಾಯಣಸ್ವಾಮಿ ತಿಳಿಸಿದರು.
 
ಹುಳಿಯಾರು–ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಅವರ ‘ಗಾಯಗೊಂಡಿದೆ ಗರಿಕೆ ಗಾನ’ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 
 
‘ಈಚೆಗೆ ಕೆಲ ಸ್ಥಿತಿವಂತರು, ರಾಜಕಾರಣಿಗಳು ವಿದ್ವಾಂಸರು ಮತ್ತು ಕವಿಗಳನ್ನು ಸ್ವಂತಕ್ಕೆ ಬಳಸಿಕೊಂಡು ಅವರಿಂದ ತಮಗೆ ಬೇಕಾದ ಸಾಹಿತ್ಯ ರಚನೆ ಮಾಡಿಸಿಕೊಳ್ಳುತ್ತಿದ್ದಾರೆ. ಕವಿ ಸ್ವಂತಿಕೆ ಕಳೆದುಕೊಳ್ಳುತ್ತಿರುವುದು ಕೇಡಿನ ಸಂಗತಿಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
 
 ‘ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ಖಂಡಿಸಲು ಕಾವ್ಯ, ನಾಟಕದಂತಹ ಸಾಹಿತ್ಯ ಪ್ರಕಾರಗಳು ರೂಪಗೊಳ್ಳಬೇಕು. ಯೌವನದಲ್ಲಿ ಮಕ್ಕಳಿಗೆ ಹೆಚ್ಚಿನ ಜ್ಞಾನ ಕಲ್ಪಿಸಲು ಕಾಲೇಜು ಶಿಕ್ಷಣ ನೀಡಲಾಗುತ್ತದೆ. ಆದರೆ, ಅನ್ಯಾಯ ಖಂಡಿಸುವ ಮುಕ್ತ ಅವಕಾಶ ಅವರಿಗೆ ಮಾಡಿಕೊಡಬೇಕು’ ಎಂದರು.
 
ಡಾ.ನಟರಾಜ ಬೂದಾಳ್ ಮಾತನಾಡಿ, ಸಾಹಿತ್ಯ ನಿತ್ಯದ ಬದುಕಿನ ಭಾಗವಾಗಬೇಕು. ಇಂದಿನ ನಿರಾಶದಾಯಕ ಯುಗದಲ್ಲಿ ಬದುಕನ್ನು ಹಸನು ಮಾಡುವ ಕೆಲಸ ಪುಸ್ತಕಗಳಿಂದ ಆಗಬೇಕು ಎಂದರು.
 
‘ಪ್ರಸ್ತುತ ಕವಿಗಳು, ದಾರ್ಶನಿಕರ ಸಲಹೆಗಳನ್ನು ರಾಜಕಾರಣಿಗಳು ಪಡೆಯಬೇಕಾಗಿತ್ತು. ಆದರೆ, ಅವರು ಜ್ಯೋತಿಷಿಗಳ ಸಲಹೆ ಪಡೆಯುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು. 
 
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಎನ್.ಇಂದಿರಮ್ಮ ಅಧ್ಯಕ್ಷತೆ ವಹಿಸಿದ್ದರು. 
 
ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಕವಿ ಮಾತುಗಳನ್ನಾಡಿದರು. ಕನ್ನಡ ಉಪನ್ಯಾಸಕ ಡಾ.ಬಾಳಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. 
 
ಸಾಹಿತಿ ಎಂ,ವಿ.ನಾಗರಾಜರಾವ್, ಸಹಜ ಕೃಷಿಕ ಶಿವನಂಜಪ್ಪ ಬಾಳೆಕಾಯಿ, ಕನ್ನಡ ಸಾಹಿತ್ಯ ಪರಿಷತ್ತಿನ ಯಲ್ಲಪ್ಪ. ಎಚ್.ಕೆ.ರಾಮಯ್ಯ, ಟಿ.ನಾರಾಯಣಪ್ಪ, ರೈತಸಂಘದ ಕೆಂಕೆರೆ ಸತೀಶ್, ಹೊಸಹಳ್ಳಿ ಚಂದ್ರಣ್ಣ ಸೇರಿದಂತೆ ವಿವಿಧ ಕನ್ನಡಸಾಕ್ತರು ಭಾಗವಹಿಸಿದ್ದರು. ಉಪನ್ಯಾಸಕ ಅಶೋಕ್ ಸ್ವಾಗತಿಸಿ, ಇಬ್ರಾಹಿಂ ವಂದಿಸಿದರು. 
 
***
ಸಾಹಿತ್ಯ ಮತ್ತು ಕೃಷಿ ಒಂದಕ್ಕೊಂದು ಹೊರತಾಗಿಲ್ಲ. 16ನೇ ಶತಮಾನದಲ್ಲಿ ರಚಿತವಾದ ಅಮರ ಕಲ್ಯಾಣ ಗ್ರಂಥವು ಸಾಹಿತ್ಯ ಕ್ಷೇತ್ರದ ಜನರ ತಳಮಳ ಹೋಗಲಾಡಿಸುವ ನಿಟ್ಟಿನಲ್ಲಿ  ಕೆಲಸ ಮಾಡಿದೆ.
-ಡಾ.ಡಿ.ಡಾಮಿನಿಕ್, ಸಾಹಿತಿ
 
***
ತರಗೆಲೆಗಳ ತರಹ ಬದುಕು ಮೂರಾಬಟ್ಟೆಯಾಗುತ್ತಿದೆ. ಲೋಕವನ್ನು ತಿಳಿಯಲು ಅನುಕೂಲವಾದ ಸಾಹಿತ್ಯವನ್ನು ಓದದೇ ನಾವು ಬಹುದೊಡ್ಡ ತೊಂದರೆಗೆ ಸಿಲುಕುತ್ತಿದ್ದೇವೆ
-ಡಾ.ಆರ್.ಶಿವಪ್ಪ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT