ಶನಿವಾರ, 30 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ವಿಶ್ವಮಟ್ಟದ ತೆಂಗು ಸ್ಮಾರ್ಟ್‌ ಗ್ರಾಮ

ತೆಂಗು ಉತ್ಪಾದಕರ ಕಂಪೆನಿ ಪದಾಧಿಕಾರಿಗಳ ಜತೆ ಸಭೆ
Last Updated 13 ಜನವರಿ 2017, 10:08 IST
ಅಕ್ಷರ ಗಾತ್ರ
ತುಮಕೂರು: ಒಂದೇ ಸೂರಿನಡಿ ತೆಂಗು, ಕೊಬ್ಬರಿ, ತೆಂಗಿನ ಉಪ ಉತ್ಪನ್ನಗಳ ಪ್ರದರ್ಶನ ಮತ್ತು  ಮಾರಾಟ, ವಿಶ್ವಮಟ್ಟದ ರಫ್ತು ಉತ್ತೇಜನ ಕೇಂದ್ರಗಳನ್ನು ಒಳಗೊಂಡ ‘ತೆಂಗು ಸ್ಮಾರ್ಟ್‌ ಗ್ರಾಮ’ವನ್ನು ಜಿಲ್ಲೆಯಲ್ಲಿ ಸ್ಥಾಪಿಸುವ ಬಗ್ಗೆ ಕರ್ನಾಟಕ ರಾಜ್ಯ ತೆಂಗು ನಾರಿನ ಅಭಿವೃದ್ಧಿ ನಿಗಮದ ಅಧ್ಯಕ್ಷರು, ತೆಂಗು ಉತ್ಪಾದಕರ ಒಕ್ಕೂಟಗಳ ಪದಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ (ಡಿ.ಸಿ) ಗುರುವಾರ ಸಭೆ ನಡೆಸಿದರು.
 
‘ಜಿಲ್ಲೆಯಲ್ಲಿ ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯ ತೆಂಗಿನಕಾಯಿ, ಕೊಬ್ಬರಿ ವಿಶಿಷ್ಟ ರುಚಿಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ತೆಂಗನ್ನು ಬ್ರಾಂಡ್‌ ರೀತಿಯಲ್ಲಿ ಹೊರ ದೇಶಗಳಿಗೆ ಮಾರಾಟ ಮಾಡಲು ನೂರು ಎಕರೆ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಮಟ್ಟದ ಪ್ರದರ್ಶನ ಮತ್ತು ಮಾರಾಟ ಕೇಂದ್ರವನ್ನು ತೆರೆಯಲು ನಿಗಮ ಉದ್ದೇಶಿಸಿದೆ’ ಎಂದು  ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದ ವೆಂಕಟಾಚಲಯ್ಯ ಜಿಲ್ಲಾಧಿಕಾರಿ ಗಮನಕ್ಕೆ ತಂದರು.
 
‘ಕೇಂದ್ರದಲ್ಲಿ ಕೊಬ್ಬರಿ, ತೆಂಗು, ತೆಂಗಿನ ನಾರು, ನೀರಾ ಉಪ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ತೆಂಗು ಉತ್ಪಾದಕ ಕಂಪೆನಿಗಳು ಹಾಗೂ ತೆಂಗಿನ ಉಪ ಉತ್ಪನ್ನಗಳ ಸಂಶೋಧನೆ, ಉತ್ಪಾದನೆಗೂ ಅವಕಾಶ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.
 
‘ರಫ್ತು ಹಾಗೂ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ತುಮಕೂರು ನಗರಕ್ಕೆ ಹೊಂದಿಕೊಂಡಂತೆ ಭೂಮಿ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹಾಗೂ ಕೈಗಾರಿಕೆ ಸಚಿವ ಸತೀಶ್‌ ಜಾರಕಿಹೊಳಿ ಅವರೊಂದಿಗೆ ಮಾತನಾಡಲಾಗಿದೆ’ ಎಂದರು.
 
‘ಕೇಂದ್ರದ ಸ್ಥಾಪನೆಯ ನೇತೃತ್ವವನ್ನು ನಿಗಮ ವಹಿಸಿಕೊಳ್ಳಲಿದೆ. ಎಲ್ಲ ರೀತಿಯ ಸೌಲಭ್ಯಗಳನ್ನು ತೆಂಗು ಉತ್ಪಾದನಾ ಕಂಪೆನಿಗಳಿಗೆ ಒದಗಿಸಿಕೊಡಲಾಗುವುದು. ಕೇಂದ್ರ ತೆಂಗಿನನಾರಿನ ಮಂಡಳಿ, ತೆಂಗು ಅಭಿವೃದ್ಧಿ ಮಂಡಳಿಯಿಂದಲೂ ನೆರವು ಸಿಗಲಿದೆ’ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.
 
‘ಕಚ್ಚಾ ವಸ್ತುಗಳ ಲಭ್ಯತೆಯ ದೃಷ್ಟಿಯಿಂದ ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು  ತಾಲ್ಲೂಕುಗಳಲ್ಲಿ ಕೇಂದ್ರ ಸ್ಥಾಪನೆ ಮಾಡಿದರೆ ಅನುಕೂಲವಾಗಲಿದೆ. ಆ ಬಗ್ಗೆ ಹೆಚ್ಚು ಚಿಂತಿಸಿ. ತುಮಕೂರಿನಲ್ಲೂ ಜಾಗ ಕೊಡಲು ಅಭ್ಯಂತರ ಇಲ್ಲ. ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಬೇಕಾದರೆ ಭೂಮಿ ತೆಗೆದುಕೊಳ್ಳಬಹುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
 
‘ತುಮಕೂರು, ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ ಯಾವ ತಾಲ್ಲೂಕಿನಲ್ಲಿ ತೆಂಗು ಸ್ಮಾರ್ಟ್‌ ವಿಲೇಜ್‌ ಸ್ಥಾಪಿಸುವುದರಿಂದ ಹೆಚ್ಚು ಅನುಕೂಲವಾಗಲಿದೆ. ಈ ಬಗ್ಗೆ ಯೋಜನೆಯ ನೀಲನಕ್ಷೆ ನೀಡಿದರೆ ನಂತರ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
 
ಜಿಲ್ಲೆಯಲ್ಲಿ ತೆಂಗಿನ ಉಪ ಉತ್ಪನ್ನ, ನೀರಾ ಉತ್ಪನ್ನಗಳನ್ನು ಪ್ರಚುರಪಡಿಸಲು ಕ್ರಮ ತೆಗೆದುಕೊಳ್ಳಬೇಕು. ಇಂಥ ಮಳಿಗೆ ತೆರೆಯಲು ಪ್ರೋತ್ಸಾಹ ನೀಡಬೇಕು ಎಂದು ಶಾಸಕ ಸುಧಾಕರಲಾಲ್‌ ಹೇಳಿದರು.
 
ತಿಪಟೂರು, ಕಿಬ್ಬನಹಳ್ಳಿ, ಕುಣಿಗಲ್‌ನಲ್ಲಿ ತೆಂಗು ಉತ್ಪನ್ನ ಉದ್ಯಾನ ಸ್ಥಾಪಿಸುವುದಾಗಿ 2012ರ ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ತುಮಕೂರಿನಲ್ಲಿ ತೆಂಗು ನಾರಿನ ಟೆಕ್ನಾಲಜಿ ಪಾರ್ಕ್‌ ಸ್ಥಾಪಿಸುವುದಾಗಿ 2014ರ  ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ತೆಂಗು ಉತ್ಪಾದಕರ ಕಂಪೆನಿಗಳಿಗೆ ₹ 1 ಕೋಟಿ ಸರ್ಕಾರ ಮಂಜೂರು ಮಾಡಿದೆ. ಗುಬ್ಬಿ, ತಿಪಟೂರು ತಾಲ್ಲೂಕಿಗೆ ಕೇಂದ್ರ ಸರ್ಕಾರದಿದ 4 ಕಾಯರ್‌ ಕ್ಲಸ್ಟರ್‌ ಮಂಜೂರಾಗಿವೆ. ಆದರೆ ಈ ಎಲ್ಲ ಯೋಜನೆಗಳು ನನೆಗುದಿಗೆ ಬಿದ್ದಿವೆ. ಇವುಗಳ ಜಾರಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಅಭಿವೃದ್ಧಿ ರೆವಲ್ಯೂಷನ್ ಫೋರಂನ ಕುಂದರನಹಳ್ಳಿ ರಮೇಶ್‌ ಒತ್ತಾಯಿಸಿದರು.
 
ಸಭೆಯಲ್ಲಿ ವಿವಿಧ ತೆಂಗು ಉತ್ಪಾದಕರ ಕಂಪೆನಿಯ ಪದಾಧಿಕಾರಿಗಳಾದ ಮೃತ್ಯಂಜಯಪ್ಪ, ಬಸವರಾಜು, ಅದಲಗೆರೆ ದೇವಾನಂದ, ಶಂಕರಾನಂದ, ವಿನೋದ್‌ ಇತರರು ಇದ್ದರು. 
 
**
ಮಾರಾಟ ಮಳಿಗೆ
ತೆಂಗಿನ ಉಪ ಉತ್ಪನ್ನಗಳು, ತಿನಿಸುಗಳು, ಆಲಂಕಾರಿಕ ವಸ್ತುಗಳನ್ನು ಮಾರಾಟ ಮಾಡಲು ಆಸಕ್ತಿ ತೋರಿದರೆ ಅಂಥವರಿಗೆ ನಗರದ ಬಸ್‌ ನಿಲ್ದಾಣ, ರೆಡ್‌ಕ್ರಾಸ್‌ ಕಟ್ಟಡ ಅಥವಾ ಅಮಾನಿಕೆರೆಯಲ್ಲಿ ಮಳಿಗೆ ನೀಡಲು ಕ್ರಮ ತೆಗೆದುಕೊಳ್ಳುವುದಾಗಿ ಕೆ.ಪಿ.ಮೋಹನ್‌ರಾಜ್‌ ತಿಳಿಸಿದರು.

ಸಭೆ ಸಮಾರಂಭಗಳಲ್ಲಿ ಆಹ್ವಾನಿತರು, ಗಣ್ಯರಿಗೆ ಹೂವಿನ ಗುಚ್ಛ ನೀಡುವ ಬದಲಿಗೆ ತೆಂಗಿನ ಆಲಂಕಾರಿಕ ವಸ್ತುಗಳನ್ನು ನೀಡುವ ಪರಿಪಾಠವನ್ನು ಜಿಲ್ಲೆಯಲ್ಲಿ ಬೆಳೆಸಬೇಕಾಗಿದೆ. ತೆಂಗು ಜಿಲ್ಲೆಯ ಅಸ್ಮಿತೆಯಾಗಿದ್ದು, ಅದನ್ನು ಉಳಿಸಿಕೊಳ್ಳಬೇಕು. ತೆಂಗಿನ ಆಲಂಕಾರಿಕ ವಸ್ತುಗಳನ್ನು ಮಾರಾಟ ಮಾಡಲು ಆಸಕ್ತಿ ತೋರಿದರೆ ಜಿಲ್ಲಾಧಿಕಾರಿ ಕಚೇರಿಯಲ್ಲೆ ಮಳಿಗೆ ಒದಗಿಸುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT