ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾದದಲ್ಲಿ ಗೆಲ್ಲಲು 7 ಸೂತ್ರಗಳು

Last Updated 13 ಜನವರಿ 2017, 19:30 IST
ಅಕ್ಷರ ಗಾತ್ರ
ಆತ್ಮವಿಶ್ವಾಸ
‘ನಾನು ಹೇಳುತ್ತಿರುವುದು ಸರಿಯಾಗಿದೆ’ ಎನ್ನುವ ಆತ್ಮವಿಶ್ವಾಸದಿಂದ ಹೇಳಿದರೆ ಜನರು ಅದನ್ನು ಹೆಚ್ಚು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಾರೆ. ವ್ಯಕ್ತಿ ಹೇಳುತ್ತಿರುವ ವಿಷಯಕ್ಕೆ ಗಮನ ನೀಡುವುದಕ್ಕಿಂತ ಹೆಚ್ಚಾಗಿ ಹೇಳುತ್ತಿರುವ ರೀತಿ, ಅವರ ಆತ್ಮವಿಶ್ವಾಸದ ಮಟ್ಟ, ಎಷ್ಟರಮಟ್ಟಿಗೆ ಜನರನ್ನು ತಮ್ಮ ಮಾತಿನತ್ತ ಸೆಳೆಯುತ್ತಿದ್ದಾರೆ ಎನ್ನುವುದಕ್ಕೇ ಕೇಳುಗರು ಪ್ರಾಮುಖ್ಯತೆ ನೀಡುತ್ತಾರೆ.
 
**
ಮುಕ್ತ ಪ್ರಶ್ನೆ
ವಾಗ್ವಾದ ನಡೆಯುವಾಗ ಎದುರಿಗೆ ಇರುವವರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುವಂಥ ಮುಕ್ತ ಪ್ರಶ್ನೆಗಳನ್ನು ಕೇಳಿ ಎನ್ನುತ್ತಾರೆ ಮನಃಶಾಸ್ತ್ರಜ್ಞ ಜಾನ್‌ ಗಾಟ್ಟ್‌ಮಾನ್‌. ಮುಕ್ತ ಪ್ರಶ್ನೆಗಳನ್ನು ಕೇಳುವ ವಾತಾವರಣ ಇದ್ದರೆ, ಚರ್ಚಾಸ್ಪರ್ಧೆ ಆಗಬಹುದಾದ ಸಂವಹನ ಸೌಹಾರ್ದ ಚರ್ಚೆಯಾಗಿ ಬದಲಾಗುತ್ತವೆ
 
**
ಅಂಕಿ–ಅಂಶಗಳ ಬಳಕೆ
ಜನರು ವಿಜ್ಞಾನಿಗಳನ್ನು ಮತ್ತು ಪ್ರಸಿದ್ಧ ತಜ್ಞರನ್ನು ನಂಬುತ್ತಾರೆ. ಆದ್ದರಿಂದ ಅಂಕಿ–ಅಂಶಗಳನ್ನು ಬಳಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ವಿಷಯ ಮಂಡಿಸುವುದು ನಮ್ಮ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ
 
**
ಕತೆಗಳ ಉಲ್ಲೇಖ
ನಿಮ್ಮ ವಾದ ಮಂಡನೆಗೆ ಪುಷ್ಟಿ ನೀಡುವಂತೆ ಆಯಾ ಸಂದರ್ಭಕ್ಕೆ ಹೊಂದುವ ರೀತಿಯಲ್ಲಿ ಘಟನೆಗಳನ್ನು ಕತೆಯ ರೂಪದಲ್ಲಿ ಉಲ್ಲೇಖಿಸಬಹುದು. ಆದರೆ ಕತೆಗಳನ್ನು ಜಾಗರೂಕತೆಯಿಂದ ಆರಿಸಿಕೊಳ್ಳಿ. ಅದು ಜನರು ನಂಬುವ ರೀತಿಯಲ್ಲಿ ವಾಸ್ತವಕ್ಕೆ ಸಮೀಪವಾಗಿರಬೇಕು
 
**
ಜಗಳವಾಡಿ ಗೆಲ್ಲುವ ಯತ್ನ ಬೇಡ 
ಇನ್ನೊಬ್ಬರ ಅಭಿಪ್ರಾಯವನ್ನು ಸಾರಾಸಗಟಾಗಿ ತಳ್ಳಿ ಹಾಕುವುದರಿಂದ ಅವರು ಜಗಳಕ್ಕೆ ಮುಂದಾಗಬಹುದು ಅಥವಾ ಚರ್ಚೆಯಿಂದಲೇ ತಪ್ಪಿಸಿಕೊಳ್ಳಬಹುದು. ಬದಲಾಗಿ, ನಿಮ್ಮ ವಾದಗಳನ್ನು ಒಪ್ಪುವಂತೆ ಮಾಡಬೇಕಾದರೆ, ಚರ್ಚೆಯಲ್ಲಿ ಪಾಲ್ಗೊಂಡವರ ಅಭಿಪ್ರಾಯಗಳನ್ನು ನೀವು ಸಂಪೂರ್ಣ ಆಲಿಸಿ. ನಂತರ ಅವರದೇ ಮಾತುಗಳನ್ನು ಬಳಸಿ ತರ್ಕಕ್ಕೆ ಅವಕಾಶವೇ ಇಲ್ಲದಂತೆ ವಾದ ಕೊನೆಗಾಣಿಸಿ.
 
**
ವಿನಯವಿರಲಿ
ಪ್ರತಿ ಬಾರಿಯೂ ವಾದಗಳು ತರ್ಕಬದ್ಧವಾಗಿರಬೇಕು ಎಂದೇನಿಲ್ಲ. ಮತ್ತೊಬ್ಬರ ದೃಷ್ಟಿಕೋನವನ್ನೂ ವಿನಯದಿಂದ ಆಲಿಸಿ, ಅವುಗಳನ್ನು ಗೌರವಿಸಿ. ತಿಳಿದವರು ಮತ್ತು ತಿಳಿದುಕೊಳ್ಳುವ ಆಸಕ್ತಿ ಇರುವವರು ಸದಾ ಇನ್ನೊಬ್ಬರ ಅಭಿಪ್ರಾಯಕ್ಕೆ ಗೌರವ ನೀಡುತ್ತಾರೆ. ತಮ್ಮ ನಂಬಿಕೆಗಳಿಗೆ ಸವಾಲೊಡ್ಡುವ ವಿಷಯಗಳನ್ನು ಸ್ವೀಕರಿಸುವ ಮನೋಭಾವ ಹೊಂದಿರುತ್ತಾರೆ ಎನ್ನುವುದು ಕ್ಯಾಲಿಫೋರ್ನಿಯಾ ವಿವಿಯ ರಾಜಕೀಯ ಮನೋವಿಶ್ಲೇಷಕ ಪೀಟರ್‌ ಡಿಟ್ಟೊ ಅಭಿಪ್ರಾಯ. ಎದುರಿನ ವ್ಯಕ್ತಿಯ ವಾದವನ್ನು ತಾಳ್ಮೆಯಿಂದ ಕೇಳಿಸಿಕೊಂಡರೆ ಯಾವುದೇ ನಷ್ಟವಾಗುವುದಿಲ್ಲ. ಚರ್ಚೆಯ ಕೊನೆಯಲ್ಲಿ ನಿಮ್ಮ ನಿಲುವನ್ನು ಸಾಬೀತು ಪಡಿಸಲು ಹಲವು ಅಂಶಗಳು ನೆರವಾಗುತ್ತವೆ. 
 
**
‘ಸಾಮಾಜಿಕ ಸಮ್ಮತ’ ಮಾರ್ಗ
ನೀವು ಹೇಳುತ್ತಿರುವುದನ್ನು ಜನರು ಒಪ್ಪಿಕೊಳ್ಳುವಂತೆ ಮಾಡಬೇಕೆಂದರೆ, ಅದಕ್ಕೆ ಉತ್ತಮ ಮಾರ್ಗ ‘ಸಾಮಾಜಿಕವಾಗಿ ಸಮ್ಮತ’ವಾಗಿರುವ  ಅಂಶಗಳನ್ನು ಉಲ್ಲೇಖಿಸುವುದು.
 
 ಕೇಳುತ್ತಿರುವ ವಿಷಯ ತಮಗೆ ತಿಳಿಯದೇ ಇರುವುದಾದರೂ ಸಹ, ಬಹುಪಾಲು ಜನರು ಅವುಗಳನ್ನು ಒಪ್ಪಿಕೊಂಡಿದ್ದಾರೆ ಎಂದರೆ ಸಹಜವಾಗಿಯೇ ಅವುಗಳನ್ನು ಪ್ರಶ್ನಿಸಲು ಹೋಗುವುದಿಲ್ಲ. ಆ ಮಾರ್ಗದ ಪ್ರಕಾರ, ಕೆಲವು ಸಂದರ್ಭಗಳಲ್ಲಿ ಯಾವುದೇ ಆಲೋಚನೆ  ಮಾಡದೆ, ಇತರರ ವರ್ತನೆ ಸೂಕ್ತವಾಗಿದೆ ಎಂದೇ ಭಾವಿಸುತ್ತಾರೆ. ಅದನ್ನು ಪುನಃ ಪರೀಕ್ಷಿಸದೆ ಅನುಸರಿಸಲು ಮುಂದಾಗುತ್ತಾರೆ.  ಇದಕ್ಕೆ ಸಾಮಾನ್ಯವಾದ ಉದಾಹರಣೆ ಎಂದರೆ, ರೆಸ್ಟೊರೆಂಟ್‌ ಹೊರಗೆ ಉದ್ದದ ಸಾಲು ಇದ್ದರೆ, ಅಲ್ಲಿಯ ಆಹಾರ ರುಚಿಕರವಾಗಿರುತ್ತದೆ ಎನ್ನುವ ನಿರ್ಧಾರಕ್ಕೆ ಜನರು ಬರುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT