ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಜ್ಜು – ಕಸಿಯದಿರಲಿ ಸಂತಾನಭಾಗ್ಯ

ಸಂದರ್ಶನ
Last Updated 13 ಜನವರಿ 2017, 19:30 IST
ಅಕ್ಷರ ಗಾತ್ರ
ಸ್ಥೂಲಕಾಯತೆ ಮತ್ತು ಬಂಜೆತನ ಇವೆರಡನ್ನೂ ಈ ಶತಮಾನದ ಅತ್ಯಂತ ಗಂಭೀರ ಆರೋಗ್ಯ ತೊಡಕುಗಳೆಂದು ಪರಿಗಣಿಸಲಾಗಿದೆ. ಮೇಲ್ನೋಟಕ್ಕೆ ಇವೆರಡೂ ಬೇರೆ ಬೇರೆ ಸಮಸ್ಯೆ ಎಂದು ಕಂಡುಬಂದರೂ ಆಂತರಿಕವಾಗಿ ಒಂದಕ್ಕೊಂದು ಹತ್ತಿರದ ಸಂಬಂಧ ಹೊಂದಿವೆ. ಸ್ಥೂಲಕಾಯತೆ ಹೇಗೆಲ್ಲ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರಬಲ್ಲದು ಮತ್ತು ಈ ಸಮಸ್ಯೆ ನಿವಾರಣೆಗೆ ಬೆರಿಯಾಟ್ರಿಕ್ ಸರ್ಜರಿ ಹೇಗೆ ಪೂರಕ ಎಂಬ ಬಗ್ಗೆ ಬ್ಯಾರಿಯಾಟ್ರಿಕ್ ಸರ್ಜನ್ ಡಾ. ರಾಜಶೇಖರ್ ನಾಯಕ್ ಇಲ್ಲಿ ಉತ್ತರಿಸಿದ್ದಾರೆ. 
 
ಸ್ಥೂಲಕಾಯತೆಯನ್ನು ಈ ಶತಮಾನದ ಗಂಭೀರ ಆರೋಗ್ಯ ಸಮಸ್ಯೆಯೆಂದು ಪರಿಗಣಿಸಲಾಗಿದೆ. ಹಾಗಾದರೆ ಬೊಜ್ಜು ಯಾವೆಲ್ಲಾ ಸಮಸ್ಯೆಗಳಿಗೆ ಕಾರಣವಾಗಬಹುದು? 
ವ್ಯಕ್ತಿಯ ದೇಹದ್ರವ್ಯ ಸೂಚ್ಯಂಕವು 37ನ್ನು ಮೀರಿದಾಗ ಅಪಾಯಕಾರಿ ಬೊಜ್ಜು ಉಂಟಾಗುತ್ತದೆ. ಆರೋಗ್ಯವಂತ ವ್ಯಕ್ತಿಯ ದೇಹದ್ರವ್ಯ ಸೂಚ್ಯಂಕವು 23-25ರ ನಡುವೆ ಇರಬೇಕು. ತೀವ್ರ ತೆರನಾದ ಬೊಜ್ಜು ವ್ಯಕ್ತಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಹಲವು ವಿಧದ ರೋಗಗಳಿಗೆ ಸುಲಭವಾಗಿ ತುತ್ತಾಗುವಂತೆ ಮಾಡುತ್ತದೆ. ಸಕ್ಕರೆಕಾಯಿಲೆ, ಅತಿಯಾದ ರಕ್ತದೊತ್ತಡ, ಅತಿಯಾದ ಕೊಲೆಸ್ಟ್ರಾಲ್ ಮಟ್ಟ, ಲಿವರಿನಲ್ಲಿ ಕೊಬ್ಬಿನ ಸಂಗ್ರಹ, ನಿದ್ರೆಯ ತೊಂದರೆ, ಖಿನ್ನತೆ, ಸಂಧಿವಾತ ಇವೇ ಮುಂತಾದ ರೋಗಗಳು ಭಾದಿಸುತ್ತವೆ. ಅತಿಯಾದ ಕೊಬ್ಬಿನಿಂದ ದೇಹದ ಎಲ್ಲಾ ಅಂಗಾಂಗಗಳಿಗೂ ಹಾನಿಯುಂಟಾಗುತ್ತದೆ. ಅಂತೆಯೇ ಬೊಜ್ಜನ್ನು ರೋಗವೆಂದೇ ಪರಿಗಣಿಸಲಾಗುತ್ತದೆ ಮತ್ತು ಇದಕ್ಕೆ ಚಿಕಿತ್ಸೆಯ ಅಗತ್ಯವಿದೆ.
 
ಸ್ಥೂಲಕಾಯತೆಗೆ ಮುಖ್ಯ ಕಾರಣವೇನು?
ನಗರೀಕರಣ, ಸುಧಾರಿತ ಜೀವನ ಪದ್ಧತಿ (ಎಂದರೆ ಶ್ರಮರಹಿತ ಆರಾಮ ಜೀವನ), ಆಹಾರಾಭ್ಯಾಸ, ದೈಹಿಕ ಚಟುವಟಿಕೆಗಳ ಕೊರತೆ, ನಿರಂತರವಾಗಿ ಒಂದೇ ಕಡೆ ಕುಳಿತು ಕೆಲಸ ಮಾಡುವ ಅನಿವಾರ್ಯತೆ ಸೇರಿದಂತೆ ಅನೇಕ ಕಾರಣಗಳನ್ನು ಗುರುತಿಸಬಹುದು. ಬೊಜ್ಜಿಗೆ ವಾಂಶವಾಹಿನಿಯೂ ಕಾರಣ. 
 
ಸ್ಥೂಲಕಾಯತೆಯು ಸಂತಾನವಿಫಲತೆ ಅಥವಾ ಬಂಜೆತನಕ್ಕೆ ಹೇಗೆ ಕಾರಣವಾಗುತ್ತದೆ?
ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯ ಸಂತಾನೋತ್ಪತ್ತಿ ವಯಸ್ಸಿನ ಯುವ ಸಮುದಾಯವನ್ನು ಈಗ ಸ್ಥೂಲಕಾಯತೆ  ಬಾಧಿಸುತ್ತಿದೆ. ಇದರಿಂದಾಗಿ ಬೊಜ್ಜು ಸಂತಾನೋತ್ಪತ್ತಿಯ ಮೇಲೂ ಪರಿಣಾಮ ಬೀರುತ್ತಿದೆ.
 
ಪಾಲಿಸಿಸ್ಟಿಕ್ ಅಂಡಾಶಯದ ಸಮಸ್ಯೆಯ ರೋಗಿಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಬೊಜ್ಜಿನಿಂದ ಬಳಲುತ್ತಿರುತ್ತಾರೆ. ಪಾಲಿಸಿಸ್ಟಿಕ್ ಅಂಡಾಶಯ ಸಮಸ್ಯೆಯು ಬಂಜೆತನದ ಸಾಮಾನ್ಯ ಕಾರಣವಾಗಿದ್ದು, ತೂಕವನ್ನು ಇಳಿಸಿಕೊಳ್ಳುವುದೊಂದೇ ಇದಕ್ಕಿರುವ ಪರಿಹಾರವಾಗಿದೆ. ಆದರೆ ಈ ಬಗ್ಗೆ ಜಾಗೃತಿಯ ಕೊರತೆಯಿದೆ.
 
ಬೊಜ್ಜನ್ನು ಹೊಂದಿ ಬಂಜೆತನದಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಇನ್ಸುಲಿನ್, ಜೀವಕೋಶಗಳ ಇನ್ಸುಲಿನ್ ನಿರೋಧಕ ಗುಣದಿಂದಾಗಿ ಅಸಹಜ ಗ್ಲೂಕೋಸ್ ಸಹಿಷ್ಣುತೆ ಇರುವುದು ಕಂಡುಬಂದಿದೆ. ಬೊಜ್ಜಿರುವ ಮಹಿಳೆಯರಲ್ಲಿ ಟೆಸ್ಟೋಸ್ಟೆರೋನ್ (ಪುರುಷ–ಹಾರ್ಮೋನು) ಹೆಚ್ಚಳದಿಂದ ಮುಖದ ಮೇಲೆ ಕೂದಲು ಹಾಗೂ ಗುಳ್ಳೆಗಳು ಉಂಟಾಗಬಹುದು. ಹಾರ್ಮನ್‌ನ ಅಸಮತೋಲನದಿಂದಾಗಿ ಋತುಚಕ್ರವು ಅನಿಯಮಿತವಾಗುವುದಲ್ಲದೇ ಅಂಡಾಣುವಿನ ಬಿಡುಗಡೆಗೆ ಅಡ್ಡಿಯಾಗಬಹುದು. ಹೀಗಾಗಿ ಗರ್ಭ ಕಟ್ಟುವ ಸಂಭವ ಕಡಿಮೆಯಾಗುತ್ತದೆ. 
 
ತೀವ್ರ ಬೊಜ್ಜಿನ ಬಂಜೆತನದ ವ್ಯಕ್ತಿಗಳಿಗೆ ಐವಿಎಫ್ ಚಿಕಿತ್ಸೆ ಕೂಡ ವಿಫಲವಾಗಬಹುದು. ಇವರು ಔಷಧಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುವುದಿಲ್ಲ. 
ಹಾಗಿದ್ದರೆ, ಸ್ಥೂಲಕಾಯತೆ ಹೊಂದಿರುವವರ ಸಂತಾನಭಾಗ್ಯದ ಕನಸು ನನಸಾಗುವುದು ಹೇಗೆ?
ತೀವ್ರತೆರನಾದ ಬೊಜ್ಜಿನ ಸಮಸ್ಯೆ ಹೊಂದಿರುವ ವ್ಯಕ್ತಿಗಳಿಗೆ ಬ್ಯಾರಿಯಾಟ್ರಿಕ್ ಸರ್ಜರಿಯನ್ನು ಸೂಚಿಸಲಾಗುತ್ತದೆ. ಇದೇ ಸಂತಾನಭಾಗ್ಯದ ಕನಸಿಗೂ ಹೆಬ್ಬಾಗಿಲು. ಈ ಸರ್ಜರಿಯಿಂದ ಇನ್ಸುಲಿನ್ ನಿರೋಧ ಕಡಿಮೆಯಾಗಿ, ಪುರುಷ ಮತ್ತು ಸ್ತ್ರೀ – ಹಾರ್ಮೋನು ಪ್ರಮಾಣದಲ್ಲಿ ಸಮತೋಲನವುಂಟಾಗುತ್ತದೆ. ನಿಯಮಿತ ಋತುಚಕ್ರ ಹಾಗೂ ಸಹಜ ಅಂಡಾಣು ಬಿಡುಗಡೆಗೆ ನೆರವಾಗುತ್ತದೆ. ಇದರಿಂದ ಸಹಜವಾಗಿ ಗರ್ಭಧರಿಸುವ ಅವಕಾಶ ಹೆಚ್ಚುತ್ತದೆ. ಒಂದುವೇಳೆ ಸಹಜ ಗರ್ಭಧಾರಣೆ ಸಾಧ್ಯವಾಗದಿದ್ದರೂ, ವೈದ್ಯಕೀಯ ಚಿಕಿತ್ಸೆಗಳ (ಐ.ವಿ.ಎಫ್.) ಸಹಾಯದಿಂದ ಗರ್ಭ ಧರಿಸುವ ಸಂಭವನೀಯತೆ ಹೆಚ್ಚುತ್ತದೆ. 
 
ಬ್ಯಾರಿಯಾಟ್ರಿಕ್‌ ಶಸ್ತ್ರಚಿಕಿತ್ಸೆಗೆ ಒಳಗಾದ ಕಾರಣ ಗರ್ಭಧರಿಸಿದ ಉದಾಹರಣೆಗಳಿವೆಯೇ?
ಇದೆ. ಈವರೆಗೆ ಅತಿಯಾದ ಬೊಜ್ಜಿನಿಂದ ಬಂಜೆತನಕ್ಕೆ ಗುರಿಯಾದ ವ್ಯಕ್ತಿಗಳಿಗೆ ಬ್ಯಾರಿಯಾಟ್ರಿಕ್ ಶಸ್ತ್ರ ಚಿಕಿತ್ಸೆಯನ್ನು ನೀಡಲಾಗಿದೆ. ಅವರಲ್ಲಿ 12 ಮಹಿಳೆಯರು ಗರ್ಭ ಧರಿಸಿದರು. ಇವರೆಲ್ಲರೂ ಕ್ಷೇಮವಾಗಿ ಗರ್ಭಧಾರಣೆಯ ಅವಧಿಯನ್ನು ಕಳೆದು ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಿದ್ದಾರೆ. 6 ಮಂದಿ, 12 ತಿಂಗಳ ಕಡ್ಡಾಯ ಕಾಯುವಿಕೆಯ ಅವಧಿಯಲ್ಲಿದ್ದಾರೆ. 7 ಜನರು ಗರ್ಭಧರಿಸಲು ವಿಫಲರಾಗಿದ್ದು, ಬೇರೆ ರೀತಿಯ ಚಿಕಿತ್ಸೆಯ ಅಗತ್ಯವಿದೆ. 
 
ಬ್ಯಾರಿಯಾಟ್ರಿಕ್ ಸರ್ಜರಿ ನಂತರ ಗರ್ಭಧರಿಸಿದಲ್ಲಿ ಅಪಾಯದ ಮಟ್ಟ ಹೇಗಿರುತ್ತದೆ?
ಗರ್ಭಧಾರಣೆ ಸಮಯದಲ್ಲಿ ರಕ್ತದೊತ್ತಡ ಮತ್ತು ಸಕ್ಕರೆಕಾಯಿಲೆ ಉಂಟಾಗುವ ಸಾಧ್ಯತೆ ಜಾಸ್ತಿ. ಇದರಿಂದ ಕ್ಲಿಷ್ಟ ಪರಿಸ್ಥಿತಿ ಉಂಟಾಗಿ ತಾಯಿ ಮತ್ತು ಮಗು ಇಬ್ಬರಿಗೂ ಅಪಾಯ ಎದುರಾಗಬಹುದು. ಗರ್ಭಧಾರಣೆಯ ಸಮಯದಲ್ಲಿ ಆಗಾಗ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ. ಹೆಚ್ಚಿನ ಕಾಳಜಿ, ಚಿಕಿತ್ಸೆ, ಜಾಸ್ತಿ ಔಷಧಸೇವನೆ, ಆಸ್ಪತ್ರೆಗೆ ದಾಖಲು ಮಾಡಬೇಕಾಗಿಯೂ ಬರಬಹುದು. ಇವೆಲ್ಲವೂ ವೈದ್ಯರು ಮತ್ತು ರೋಗಿ ಇಬ್ಬರಿಗೂ ಆತಂಕದ ಕ್ಷಣಗಳನ್ನು ತಂದೊಡ್ಡುತ್ತವೆ. ಅವಧಿ ಮುನ್ನ ಹೆರಿಗೆ, ಹೆರಿಗೆ ಮುನ್ನ ಮತ್ತು ನಂತರದ ರಕ್ತಸ್ರಾವ, ರಕ್ತ ನೀಡಬೇಕಾದ ಸಂದರ್ಭಗಳು ಕೂಡ ಇವರಲ್ಲಿ ಜಾಸ್ತಿ.
 
ಇಂಥವರಿಗೆ ನೀವು ನೀಡುವ ಸಾಮಾನ್ಯ ಮಾರ್ಗಸೂಚಿಗಳೇನು? 
ಈ ಘಟ್ಟ ಅತಿ ಮುಖ್ಯವಾದದ್ದು. ಸಾಮಾನ್ಯವಾಗಿ, ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶು ಕೂಡ ವಂಶವಾಹಿ ನ್ಯೂನತೆಗೆ ಈಡಾಗಬಹುದು. ಗರ್ಭಧಾರಣೆಗೆ ಯತ್ನಿಸುವ ಮೊದಲು ಅವರಿಗೆ ತೂಕ ಇಳಿಸಲು ಚಿಕಿತ್ಸೆ ನೀಡಲಾಗುತ್ತದೆ. ಜೀವನಶೈಲಿ, ಆಹಾರ ಪದ್ಧತಿಗಳಿಂದ ಅವರು ತೂಕವನ್ನು ಕಳೆದುಕೊಳ್ಳಲು ವಿಫಲರಾದಲ್ಲಿ ಮಾತ್ರ ಬ್ಯಾರಿಯಾಟ್ರಿಕ್ ಸರ್ಜರಿಗೆ ಸೂಚಿಸಲಾಗುತ್ತದೆ. ಶಸ್ತ್ರಜ್ಞರು, ವೈದ್ಯರು, ಮನಃಶಾಸ್ತ್ರಜ್ಞರು ಮತ್ತು ಡಯಟಿಶಿಯನ್ನರನ್ನು ಒಳಗೊಂಡ ತಂಡವು ಹಲವು ಬಾರಿ ಈ ಬಗ್ಗೆ ಆಪ್ತ ಸಮಾಲೋಚನೆಯನ್ನು ಕೈಗೊಳ್ಳುತ್ತದೆ. ಬೆರಿಯಾಟ್ರಿಕ್ ಚಿಕಿತ್ಸೆಯ ನಂತರ ಕನಿಷ್ಠ 12 ತಿಂಗಳವರೆಗೆ ಗರ್ಭಧರಿಸದಂತೆ ಸೂಚಿಸಲಾಗುವುದು. ಒಮ್ಮೆ ಅವರು ಗರ್ಭಧರಿಸಿದ ಮೇಲೆ ಕೂಡ ಬ್ಯಾರಿಯಾಟ್ರಿಕ್ ತಂಡ ಮತ್ತು ಪ್ರಸೂತಿ ತಜ್ಞರು ಅವರ ಮೇಲೆ ಸತತ ನಿಗಾ ಇಡುತ್ತಾರೆ.
(ವೈದ್ಯರನ್ನು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 080-41312600)
 
**
ಸಂತಾನಕ್ಕೆ ಕಾಯುವವರಿಗಾಗಿ ಸ್ಥೂಲಕಾಯ ನಿಯಂತ್ರಣಕ್ಕೆ ಕೆಲವು ಕ್ರಮಗಳು:
* ವ್ಯಾಯಾಮಕ್ಕೆ ಮೊದಲ ಆದ್ಯತೆ ನೀಡಿ. ಇದರಿಂದ ಜೀರ್ಣಕ್ರಿಯೆಯ ವೇಗ ತೀವ್ರಗೊಳ್ಳುತ್ತದೆ. ನಡೆಯುವುದು, ಈಜುವುದು, ಸೈಕ್ಲಿಂಗ್ ಅಥವಾ ಯೋಗಾಭ್ಯಾಸ ಯಾವುದಾದರೂ ಸರಿ, ಪ್ರತಿದಿನ 30ರಿಂದ 35 ನಿಮಿಷ ಮಾಡಿ. 
 
* ಪ್ರತಿ ದಿನವೂ ನಿಗದಿತ ಸಮಯದಲ್ಲಿ ಊಟ ಮಾಡಿ ಮತ್ತು ಸಮತೋಲಿತ ಆಹಾರ ಸೇವಿಸಿ. 
 
* ನಿತ್ಯದ ಆಹಾರದಲ್ಲಿ ಹೆಚ್ಚುಹೆಚ್ಚು ತರಕಾರಿಗಳು, ಹಣ್ಣು ಮತ್ತು ಇಡೀ ಧಾನ್ಯಗಳನ್ನು ಬಳಸಿ.
 
* ಸಾಕಷ್ಟು ನೀರು ಕುಡಿಯಿರಿ. ಊಟದ ನಡುವೆ ಹಸಿವಾದಲ್ಲಿ ರಸಭರಿತ ಹಣ್ಣುಗಳನ್ನು ಅಥವಾ ಹಣ್ಣಿನ ರಸವನ್ನು ಸೇವಿಸಿ, (ನಿಂಬೆ, ಕಿತ್ತಲೆ, ಕ್ಯಾರೆಟ್) ಹಸಿರು ತರಕಾರಿ ಕೂಡ ಉತ್ತಮ. 
 
* ಸಕ್ಕರೆಯ ಸೇವನೆಯನ್ನು ಆದಷ್ಟೂ ತ್ಯಜಿಸಿ ಅಥವಾ ಕಡಿಮೆ ಮಾಡಿ. ದೇಹದಲ್ಲಿ ಹೆಚ್ಚುವರಿ ಕ್ಯಾಲೊರಿಯನ್ನು ಉಂಟುಮಾಡುವ ಸಿಹಿ ಪದಾರ್ಥಗಳನ್ನು ವರ್ಜಿಸಿ.
 
* ಅತಿಯಾದ ಕೊಬ್ಬನ್ನು ಹೊಂದಿರುವ ಹಾಲಿನ ಉತ್ಪನ್ನಗಳಾದ ಚೀಸ್ ಮತ್ತು ಬೆಣ್ಣೆಯನ್ನು ಬಳಸದಿರಿ.
 
* ಯಾವಾಗಲೂ ಸಂತೋಷದಿಂದಿರಲು ಪ್ರಯತ್ನಿಸಿ, ಮಾನಸಿಕವಾಗಿ ಸದೃಢವಾಗಿರಿ ಮತ್ತು ಧನಾತ್ಮಕ ಧೋರಣೆಯಿಂದ ನಿಮ್ಮ ಪ್ರಯತ್ನವನ್ನು ಮುಂದುವರೆಸಿ. ಇದರಿಂದ ಒಳ್ಳೆಯ ಫಲಿತಾಂಶ ಮತ್ತು ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT