ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆ – 2017ರ ಫಲಿತಾಂಶ

ತೀರ್ಪುಗಾರರ ಮಾತು
Last Updated 13 ಜನವರಿ 2017, 19:30 IST
ಅಕ್ಷರ ಗಾತ್ರ
ಖುಷಿ ಕೊಡುವ ಪ್ರಬಂಧಗಳು
ಇನ್ನೇನು ಮರೆತೇ ಹೋಗುತ್ತದೇನೋ ಎಂದು ಹೆದರಿಸಿದ್ದ ಲಲಿತಪ್ರಬಂಧವೆಂಬ ಸಾಹಿತ್ಯಪ್ರಭೇದ  ಇತ್ತೀಚಿನ ವರ್ಷಗಳಲ್ಲಿ ಮತ್ತೆ ಮೆಲ್ಲ ಮೆಲ್ಲನೇ ತಲೆ ಎತ್ತುತ್ತಿರುವುದೂ ಇಂತಹ ಪುನರವತಾರಕ್ಕೆ ಪ್ರಜಾವಾಣಿ ಪ್ರೋತ್ಸಾಹ ಕೊಡುತ್ತಿರುವುದೂ ಸಂತೋಷದ ಸಂಗತಿ. ಈ ಸಂದರ್ಭದಲ್ಲಿ ಪತ್ರಿಕೆ  ಏರ್ಪಡಿಸಿದ್ದ ಪ್ರಬಂಧಸ್ಪರ್ಧೆಗೆ ಬಂದ ಪ್ರಬಂಧಗಳಲ್ಲಿ ಇದು ಹೆಚ್ಚು, ಇದು ಹೆಚ್ಚಲ್ಲ ಎಂದು ನಿರ್ಣಾಯಕವಾಗಿ ಆಯ್ಕೆ  ಮಾಡುವುದು ತುಂಬ ಕಷ್ಟದ ಕೆಲಸ. 
 
ಲಲಿತಪ್ರಬಂಧಗಳನ್ನು ಹೆಚ್ಚಾಗಿ ಹರಟೆ, ಲಹರಿ ಇತ್ಯಾದಿ ಹೆಸರುಗಳಿಂದ ಕರೆದದ್ದೂ ಇದೆ. ಸಹಜವಾಗಿಯೇ ಇಂತಹ ಲಹರಿಗಳು ವ್ಯಕ್ತಿಕೇಂದ್ರಿತವಾಗಿ - Subjective ಆಗಿ ಇರುತ್ತವೆ. 
 
ಅಂತೆಯೇ ತೀರ್ಪುಗಾರರ  ತೀರ್ಪುಗಳೂ ಹೆಚ್ಚಾಗಿ ಸಬ್ಜೆಕ್ಟಿವ್ ಆಗಿಯೇ ಇರಬೇಕಾಗುತ್ತದೆ. ಮೇಲಾಗಿ ಇಂತಹ ಪ್ರಬಂಧಗಳಿಗೆ ಯಾವುದೇ ಬಂಧ, ಕಟ್ಟು ಎಂಬ ನಿಯಮಾವಳಿಗಳಿರುವುದಿಲ್ಲ. ಈ ಲಹರಿಗಳು ಬಾಲಕಿತ್ತ ಪಟಗಳಂತೆ ಎತ್ತೆತ್ತಲೋ ಹೊಯ್ದಾಡುತ್ತಿರುವಾಗಲೂ, ತಮ್ಮದೇ ಒಂದೊಂದು ವಿಶಿಷ್ಟರೇಖಾಚಿತ್ರಗಳನ್ನು ಚಿತ್ರಿಸಿಕೊಂಡು ಬಿಡುತ್ತವೆ. ಹೀಗೆ ಚಿತ್ರಿಸಿಕೊಂಡ ರೇಖೆಗಳ ಚಂದ ಚಲುವುಗಳೇ ಇವುಗಳ ತರತಮಗಳನ್ನು ನಿರ್ಧರಿಸುತ್ತವೆ.
 
ಪ್ರಸ್ತುತ ಪ್ರಬಂಧಗಳ ಒಂದೆರಡು  ಸಾಮಾನ್ಯ ಅಂಶಗಳ ಬಗ್ಗೆ ಹೇಳುವುದಾದರೆ:
* ಹೆಚ್ಚಿನ ಪ್ರಬಂಧಗಳು ಮತ್ತೆ ಮತ್ತೆ ಬಾಲ್ಯದ ಸುತ್ತಲೇ ಸುತ್ತುತ್ತಿರುತ್ತವೆ. ಹೀಗೆ ಬಾಲ್ಯದ ಸುತ್ತಲೇ ಗಿರಕಿ ಹೊಡೆಯುವಾಗ, ತಂದೆ, ತಾಯಿ, ಅಣ್ಣ, ಅಕ್ಕ, ಮಕ್ಕಳು ಎನ್ನುತ್ತ ತಮ್ಮ   ಸುಖೋಷ್ಣ, ಆರ್ದ್ರಕುಟುಂಬೀಯ ಸಂಬಂಧಗಳನ್ನು ಮತ್ತೆ ಮತ್ತೆ ನೆನೆಯುತ್ತವೆ.ಮಹಿಳೆಗೂ   ಕುಟುಂಬಕ್ಕೂ ಇರುವ ಈ ಗಟ್ಟಿ ಬೆಸುಗೆ ಮೆಚ್ಚುವಂತಥದೇ ಆದರೂ, ಈ  ಪ್ರಬಂಧಸ್ಪರ್ಧೆಯ ಮಟ್ಟಿಗೆ ವಿಷಯ ವೈವಿಧ್ಯದ ಅಭಾವ ಕೊರತೆ ಎನಿಸದೇ ಇರದು.
 
* ಮಹಿಳೆಯರೇ ಹೆಣೆದ ಈ ಪ್ರಬಂಧಗಳಲ್ಲಿ; ಪುರುಷರ ಅನ್ಯಾಯದ ವಿರುದ್ಧ ಬಂಡೆದ್ದು, ಹೋರಾಡುತ್ತ, ಆ ಹೋರಾಟದ ಫಲವಾಗಿ ಒಂದು ಹೊಸ  ಸಮಾಜದ ನಿರ್ಮಿತಿಗೆ ಹೆಣಗುತ್ತಿರುವ ಇಂದಿನ ಚಿತ್ರಣ ಇಲ್ಲಿನ ಯಾವ ಪ್ರಬಂಧದಲ್ಲಿಯೂ ಇಲ್ಲ. ಇದು ನಿಜಕ್ಕೂ ವಿಷಾದಪಡಬೇಕಾದ ಸಂಗತಿ.
 
ಇಲ್ಲಿಯ ಎಲ್ಲ  ಪ್ರಬಂಧಗಳಲ್ಲಿಯೂ ಮಹಿಳಾ  ಬದುಕಿನ ಆರ್ದ್ರತೆ ಹಾಸುಹೊಕ್ಕಾಗಿದ್ದರೂ ಅದು ಎಲ್ಲೂ ಅತಿ ಭಾವುಕತೆಗೆ ಎಡೆ ಮಾಡಿಕೊಟ್ಟಿಲ್ಲ.
ಈಗ ಬಹುಮಾನಕ್ಕೆ ಆಯ್ಕೆಯಾದ ಪ್ರಬಂಧಗಳ ಬಗ್ಗೆ:
1. ಹೂವ ಅರಸುವ ಕಾಲದ ನೆಲ 
ಮಕ್ಕಳು–ಮರಿಗಳಿಂದ ತುಂಬಿದ  ಕುಟುಂಬವನ್ನು ಮನೆ ಮುಂದಿನ ಬಿಡುವ ಕೈದೋಟಕ್ಕೆ ಹೋಲಿಸುತ್ತ, ಎರಡನ್ನೂ ಬೆಳೆಸುವುದಕ್ಕೆ ಎಂತಹ ನಾಜೂಕು, ಸೂಕ್ಷ್ಮತೆ, ಆಪುಲಕೀ, ಪ್ರೀತಿ ಬೇಕಾಗುತ್ತದೆ ಎಂಬುದನ್ನು ಚೆನ್ನಾಗಿ ಬಿಂಬಿಸಿದ್ದಾರೆ.
 
ಹೂದೋಟದಲ್ಲಿ ನೆರ್ಪಟ್ಟ  ಗುಬ್ಬಿಗಳ ಬಾಣಂತನದ ಚಿತ್ರಣ ಈಗ ಬೆಂಗಳೂರಿನಲ್ಲಿ ಗುಬ್ಬಿಗಳೇ ಇಲ್ಲದ್ದರಿಂದಲೋ ಏನೋ ತುಂಬ ಅಪ್ಯಾಯಮಾನವಾದ ಅನುಭವ ಕೊಡುತ್ತದೆ.
 
ಪ್ರಬಂಧ ಏನೋ ಒಂದು ಹೇಳ ಲಾಗದ ನೋವನ್ನು (ಲೇಖನದ ಕೊನೆಗೆ ಅನಾವರಣಗೊಂಡರೂ) ತನ್ನೊಳಗೆ ಅಡಗಿಸಿಕೊಂಡು ಬರೆದಂತಿದೆ.
 
ಅದಕ್ಕೇ ಏನೋ ಪ್ರಾರಂಭದಿಂದ  ಕೊನೆಯವರೆಗೂ ಯಾವುದೋ ಒಂದು ಕರುಣಾರ್ದ್ರರಾಗದ ದನಿಯಲ್ಲಿ ಮೂಡಿ ಬಂದಿದ್ದರೂ ಅತಿ ಭಾವುಕತೆಯಿಂದ  ದೂರವಾಗಿ ಪ್ರಬುದ್ಧತೆಯನ್ನು  ಕಾಯ್ದುಕೊಂಡಿದೆ. ಇದೊಂದು ಚೊಕ್ಕ ಕೃತಿ.
 
*
2. ಎಲ್ಲಿಂದ ಬಂದೆವ್ವಾ 
ಇದೊಂದು ವ್ಯಕ್ತಿಚಿತ್ರಣ. ಊಳಿಗಮಾನ್ಯಪದ್ಧತಿಯ ದಿನಗಳ ಕೂಡುಕುಟುಂಬದಲ್ಲಿ ದುಡಿದುಡಿದು  ಸತ್ತ ಒಬ್ಬ ಅನಾಥೆ ಬಸವ್ವಾಯಿಯ ಕತೆ.
 
ಬಸವ್ವಾಯಿಯ ಜೊತೆಜೊತೆಗೇ  ಅಂದಿನ ಜಂಟಿಕುಟುಂಬಗಳ ಒತ್ತಡಮಯ ಬದುಕೂ ಹಿನ್ನೆಲೆಯಲ್ಲಿ ಚಿತ್ರಿತವಾಗಿದೆ. ಇತ್ತೀಚೆಗೆ ಪ್ರಾದೇಶಿಕ  ಆಡುಭಾಷೆಯ ಬರಹಗಳು ಹೆಚ್ಚುಹೆಚ್ಚಾಗಿ ಬರತ್ತಾ ಇವೆ. ಇದು ಕನ್ನಡದ ವೈಶಿಷ್ಟ್ಯವೇನಿರಲಿಕ್ಕಿಲ್ಲ. ಆದರೂ (ಕುಂದಾಪುರ, ಧಾರವಾಡ, ಕೊಡಗು, ಕಲಬುರ್ಗಿ) ಕನ್ನಡದಲ್ಲಿರುವಷ್ಟು ಭಾಷಾಪ್ರಬೇಧಗಳು ಇನ್ನೆಲ್ಲೂ ಇರಲಿಕ್ಕಿಲ್ಲವೇನೋ! 
 
ಇಂತಹ ಆಡುಭಾಷೆಯ ಬರಹಗಳು ಎಲ್ಲ ಭಾಗದವರಿಗೂ ಅರ್ಥವಾಗುವುದು ಕಷ್ಟ. ಈಗ ಮೆಲ್ಲಮೆಲ್ಲನೇ, ತೀರ ಮೆಲ್ಲನೆ, ಕರ್ನಾಟಕದ ಎಲ್ಲ ಮೂಲೆಗಳ ಎಲ್ಲ ಬಳಕೆ ಭಾಷೆಗಳ ಸತ್ವವನ್ನೊಳಗೊಂಡ ಒಂದು ಹೊಸಗನ್ನಡ ರೂಪಗೊಳುತ್ತಿರುವುದು ಖರೆ. ಇನ್ನು, ಆಡುಭಾಷೆಯ ಹುಚ್ಚಿಗೆ ಬಿದ್ದು, ಒಳಗೇನೂ ಹೂರಣವಿಲ್ಲದೇ ಹೊರಮೈಗೇ ಒತ್ತು ಕೊಟ್ಟ ಬರಹಗಳೂ ಬರ್ತಾ ಇವೆ.
 
ಪ್ರಸ್ತುತ ‘ಎಲ್ಲಿಂದ ಬಂದೆವ್ವಾ’ ಹೂರಣ, ಹೊರಮೈ ಎರಡನ್ನೂ ಸಮೃದ್ಧವಾಗಿ ಹೊಂದಿ; ಹೀಗಲ್ಲದಿದ್ದರೆ ಬಸವ್ವಾಯಿಯನ್ನು ಇನ್ನು ಹೇಗೆ ಚಿತ್ರಿ ಸಬಹುದಾಗಿತ್ತು? ಎಂದು ಅನ್ನಿಸುವಂತಹ ಲೇಖನ.
 
ಬಸವ್ವಾಯಿ ಎಷ್ಟೋ ಕಾಲ ಓದುಗರ ಮನಸ್ಸಿನಲ್ಲಿ ರಿಂಗಣಗುಣಿತ ಹಾಕುತ್ತಲೇ ಇರುತ್ತಾಳೆ.
 
*
3. ನನ್ನ ಬಾಲ್ಯ ಕದ್ದ ಕಾಗೆಗಳು
ನನ್ನ ಬಾಲ್ಯ ಕದ್ದ ಕಾಗೆಗಳು ವಿಷಯದ ಆಯ್ಕೆ ಮತ್ತು ತಲೆಕಟ್ಟಿನಿಂದಾಗಿ ಈ ಬರಹ ಗಮನ ಸೆಳೆಯುತ್ತದೆ. ಕಥಾನಾಯಕರುಗಳು ಕಾಗೆಗಳೇ ಆದರೂ, ಈ ಕಾಗೆಗಳೂ ಮತ್ತೆ ಮತ್ತೆ  ಓದುಗರನ್ನು ಲೇಖಕರ ಬಾಲ್ಯಕ್ಕೇ ಕೊಂಡೊಯ್ಯುತ್ತವೆ.
 
ಕಾಗೆಗಳಿಗೂ  ಶಕುನಗಳಿಗೂ ಇರುವ ಅವಿನಾಭಾವ ಸಂಬಂಧ; ಈ ತ್ರಿಕಾಲಜ್ಞಾನೀ ಕಾಗೆಗಳ ಸಿ.ಸಿ.ಟಿ.ವಿ.ಯಂತಹ ಕಣ್ಣುಗಳು; ವಿಷಪೂರಿತ ಪಿಝ್ಝಾ (Pizza) ತುಣುಕುಗಳನ್ನು ಕುಕ್ಕುತ್ತಿರುವ ಕಾಗೆಗಳು ನಾಶವಾಗಿಬಿಡುತ್ತವೇನೋ ಎಂಬ ಆತಂಕ; ಇತ್ಯಾದಿ ವಿಚಾರಗಳು ಮನ ಸೆಳೆಯುತ್ತವೆ. ಇದೊಂದು ಚೊಕ್ಕದಾದ, crisp ಆದ ಪ್ರಬುದ್ಧ ಲೇಖನ. ಕೊನೆಯದಾಗಿ ಈ ಎಲ್ಲ ಪ್ರಬಂಧಗಳ ಓದು ತುಂಬ ಖುಷಿ ಕೊಟ್ಟಿದೆ.
-ಶ್ರೀನಿವಾಸ ವೈದ್ಯ
 
**
ತನ್ನ ಲೀಲೆಗೆ ತಾನೇ ಬೆರಗಾಗುತ್ತ...
ಲಲಿತಪ್ರಬಂಧವೆಂಬ ಪ್ರಕಾರವು ಮೇಲ್ನೋಟಕ್ಕೆ ಹಗುರ ಲಹರಿಯ ಬರವಣಿಗೆಯ ಹಾಗೆ ತೋರಿದರೂ ಅದೊಂದು ಲೋಕದೃಷ್ಟಿಯ ಮಂಥನ. ಗ್ರಹಿಕೆಗಳು ಮೂಡುತ್ತಿರುವ ಹಾಗೆಯೇ ಅದರ ಕಾವು ಆರದಂತೆ, ಕಂಪನ ಕರಗದಂತೆ ಕಟ್ಟುವ ನಾಜೂಕು ಕಲೆ. ಚೌಕಟ್ಟಿನೊಳಗಿದ್ದೇ ಅದನ್ನು ಮೀರುವ ಸೃಜನಶೀಲ ಸಾಧ್ಯತೆ. 
 
ಗಹನವಿಚಾರವೆಂದುಕೊಂಡಿರುವುದನ್ನು ಸರಳವಾಗಿಸುತ್ತಲೂ, ಸರಳವೆಂದು ತೋರುವ ಸಂಗತಿಗಳ ಆಳಕ್ಕಿಳಿದು ಅದರ ಗಹನತೆಯನ್ನು ಎತ್ತಿ ತೋರುತ್ತಲೂ ನಡೆಯುವ ನಿರಾಳ ನಡಿಗೆ ಲಲಿತಪ್ರಬಂಧದ್ದು. ನಮ್ಮ ನಡುವೆಯೇ ಇದ್ದರೂ ನಾವು ಕಾಣದ ಲೋಕವನ್ನು ಛಕ್ಕನೆ ಕಾಣಿಸುವ ಶಕ್ತಿ ಈ ಪ್ರಕಾರದ್ದು.
 
ಜೀವಂತಕ್ಷಣಗಳನ್ನು ಸೆರೆಹಿಡಿಯುವ ಫೋಟೊಗ್ರಫಿಯ ಹಾಗೆ, ತಾದಾತ್ಮ್ಯದಿಂದ ತಿದ್ದಿತೀಡಿದ ಪೇಂಟಿಂಗ್‌ನ ಹಾಗೆ, ಮಂದ್ರ ಆಲಾಪದ ಪಲಕು ಲಯಬದ್ಧವಾಗಿ ಬೆಳೆಯುತ್ತ ತನ್ನ ಚರಮಸಾಧ್ಯತೆಗಳನ್ನು ತಲುಪುವ ಹಾಗೆ ಪ್ರಬಂಧವೂ ವಿಕಾಸಗೊಳ್ಳುತ್ತದೆ. ಮುಖ್ಯ-ಅಮುಖ್ಯಗಳೆಂಬ ಮಾನದಂಡಗಳನ್ನು ನಿರಚಿಸುತ್ತಾ, ಮಹತ್ವಾಕಾಂಕ್ಷೆಯನ್ನು ಬದಿಗೊತ್ತಿ ಹರಿಯುವ ಸಹಜ ಲೀಲೆ ಅದರ ಗುರುತು. ಚಿಂತನೆಯ ಭಾರವನ್ನು ಇಳಿಸಿ ಹೃದ್ಗತಗೊಳಿಸುವ, ಆದರೆ, ಚಿಂತನೆಯನ್ನು ಅಳಿಸದೇ ಕಾಪಿಟ್ಟು ಬೆಳೆಸುವ ಅದರ ಪರಿ ಅನನ್ಯ.
 
ಸ್ಪರ್ಧೆಗೆ ಬಂದ ಐದುನೂರಕ್ಕೂ ಹೆಚ್ಚು ಪ್ರಬಂಧಗಳಲ್ಲಿ ಆಯ್ಕೆಯಾಗಿದ್ದ ಕೆಲವು ಪ್ರಬಂಧಗಳು ನಮ್ಮ ಮುಂದಿದ್ದವು. ಪ್ರಬಂಧ ಎಂದಕೂಡಲೇ ಬಾಲ್ಯದ ನೆನಪುಗಳಿಗೆ ಜಿಗಿಯುವ, ಅಲ್ಲಿಂದ ಘಟನೆಗಳನ್ನು ಹೆಕ್ಕಿ ಪೋಣಿಸುವ ಬರಹಗಳದ್ದೇ ಬಹುಪಾಲು! ಹಳತರ ಹಳಹಳಿಕೆಯಿಂದ ಹೊಸತು ಹುಟ್ಟುವುದಿಲ್ಲ. ಈ ಕ್ಷಣಕ್ಕೆ ಅದು ಕನೆಕ್ಟ್ ಆಗಬಲ್ಲ ಜೀವಂತಿಕೆಯಿಂದ ಮಾತ್ರ ಹಳತು ಹೊಸತಾಗಿ ಹೊಳೆಯುತ್ತದೆ. ಎಲ್ಲ ಬರಹಗಳನ್ನು ಒಟ್ಟಾಗಿ ಗಮನಿಸುವಾಗ ಲಲಿತ ಪ್ರಬಂಧದ ಬಂಧದ ತಿಳಿವಳಿಕೆ ಹಾಗೂ ವ್ಯಾಪಕ ಓದಿನ ಕೊರತೆ ಅನುಭವಕ್ಕೆ ಬಂತು. ಬರೆದದ್ದೇ ಬಂಧ ಎಂಬ ಆತ್ಮವಿಶ್ವಾಸವು ಅಪಾರ ಪ್ರತಿಭೆಯಿಂದ ಮಾತ್ರ ಸಾಧ್ಯವಾಗುವಂಥದ್ದು. ಅದು ಕೇವಲ ತೋರಿಕೆಯಾದಾಗ ಬರಹ ತಟ್ಟುವುದಿಲ್ಲ.
 
ಹೂದೋಟ, ತಾರಸಿ, ಓಪನ್ ಕಿಚನ್, ಕಾಗೆಗಳು, ಗೋಡೆಗೆ ತೂಗುಬಿದ್ದ ಭಾವಚಿತ್ರಗಳು, ಪತ್ರಗಳು, ಹೊಸ ಹುಡುಗಿಯರ ಪಿ.ಜಿ. ಬದುಕು, ವಾಟ್ಸಾಪ್ಪು – ಹೀಗೆ ಎಲ್ಲವೂ ಸಂವೇದನೆಯ ಭಾಗವಾಗುತ್ತ, ಸೂಕ್ಷ್ಮ ನೋಟವೊಂದನ್ನು ರೂಪಿಸುವ ಪರಿಯಿಂದಾಗಿ ಇಲ್ಲಿನ ಕೆಲವು ಪ್ರಬಂಧಗಳು ಆಯ್ಕೆಗೆ ಕಾರಣವಾದವು. ಹೆಣ್ಣಿಗೆ ಅವಳದೇ ಆದ ಅನುಭವ ಜಗತ್ತಿದೆ. ಹಾಗೂ ಅಲ್ಲಿ ಮೂಡಿದ ವಿಶಿಷ್ಟ ಸಂವೇದನೆಯಿದೆ. ಆ ಸಂವೇದನೆಯಲ್ಲಿ ಮೂಡುವ ಭಿನ್ನ ಲೋಕಗ್ರಹಿಕೆಯ ಕ್ರಮವಿದೆ ಎಂಬ ತಿಳಿವಳಿಕೆಯಲ್ಲಿ ನೋಡಿದಾಗ ಇಲ್ಲಿನ ಬರಹಗಳಲ್ಲಿ ಹೊಸ ಹೊಳಪು ಗೋಚರಿಸುತ್ತದೆ. 
 
ಮೊದಲ ಸ್ಥಾನ ಪಡೆದ ‘ಹೂವ ಅರಸುವ ಕಾಲದ ನೆಲ’ ಹೆಣ್ಣುತನದ ಅಂತಃಕರಣವನ್ನು ಪ್ರಕೃತಿಯ ಸಂವೇದನೆಯ ಜೊತೆಗೆ ಸಾವಯವವಾಗಿ ಬೆಸೆಯುತ್ತ ಕಾಣಿಸುವ ನೋಟದ ಪರಿಯಿಂದಾಗಿ ವಿಶಿಷ್ಟವೆನಿಸಿತು. ಗುಬ್ಬಚ್ಚಿಯ ಬಾಣಂತನಕ್ಕೆ ನೆರವಾಗುವ ಮಲ್ಲಿಗೆ ಬಳ್ಳಿ, ಗುಬ್ಬಚ್ಚಿ ಮರಿಗಳಿಗೆ ತಾನೇ ಅಮ್ಮನಾಗಿ ಸಂಭ್ರಮಿಸುವ ತಾಯ್ತನದ ಭಾವದ ವಿಸ್ತರಣೆ... ಮೊಳೆಯುವ, ಚಿಗುರುವ, ಹೂವಾಗಿ ವಿಕಸಿಸುವ ಸೃಷ್ಟಿಕ್ರಿಯೆಯ ಹಲವು ಸಾಧ್ಯತೆಗಳಲ್ಲಿ ಹೂವ ಅರಸುವ ಕಾಲ...
 
ಅರಳುತ್ತದೆ. ಹೂವಿನ ಮೂಲಕ ಹೆಣ್ಣುಲೋಕದ ನವಿರಾದ ಸಂಭ್ರಮದ ಕ್ಷಣಗಳನ್ನು, ಅದರ ಸಾಂಸ್ಕೃತಿಕ ಅನನ್ಯತೆಯೊಂದಿಗೆ ಕಟ್ಟುವ ಪ್ರಬಂಧವು ಗಿಡದಿಂದ ಹೂವು ಉದುರುವಂತೆ ಇದ್ದಕ್ಕಿದ್ದಂತೆ ಇಲ್ಲವಾಗುವ ಚೇತನದ ವಿಹ್ವಲತೆಯಲ್ಲಿ ಕೊನೆಯಾಗುತ್ತದೆ. ಹುಟ್ಟು-ಸಾವಿನ ನಡುವೆ ಕಾಲ ಹೂವಿನಂತೆ ಅರಳುತ್ತದೆ. ಭಾಷೆಯಲ್ಲಿರುವ ಆರ್ದ್ರತೆ ಹಾಗೂ ಧ್ವನಿಶಕ್ತಿಯಿಂದಾಗಿ ಪ್ರಬಂಧ ಪ್ರಥಮಸ್ಥಾನದಲ್ಲಿ ನಿಲ್ಲುತ್ತದೆ.
 
ಎರಡನೇ ಬಹುಮಾನ ಪಡೆದ ‘ಎಲ್ಲಿಂದಾ ಬಂದೆವ್ವಾ’ ಮಾನವೀಯ ಕಂಪನವುಳ್ಳ ಆಪ್ತ ಬರಹ. ಕೂಡುಕುಟುಂಬದ ಒಳಸುಳಿಗಳನ್ನು ಮೆಲ್ಲಗೆ ಬಿಚ್ಚಿಡುವ ಬರಹವು ಚರಿತ್ರೆಯ ಮಡಿಕೆಯಲ್ಲಿ ಸೇರಿಹೋದ ಬಸವ್ವಾಯಿಯಂಥ ಜೀವವನ್ನು ಚಿತ್ರಿಸುವ ಪರಿಯಿಂದ ಮುಖ್ಯವಾಗುತ್ತದೆ. ವ್ಯವಸ್ಥೆಯ ಕ್ರೌರ್ಯ ಹಾಗೂ ಅದರ ಮಧ್ಯೆಯೇ ತಮ್ಮ ಜೀವಪರತೆಯ ಸೆಲೆಯನ್ನು ಕಾಪಿಟ್ಟುಕೊಳ್ಳುವ ಹೆಣ್ತನದ ಮಾದರಿಯಾಗಿ ಬಸವ್ವಾಯಿ ರೂಪತಾಳುತ್ತಾಳೆ. ಅತಿಭಾವುಕತೆಯ ಒಜ್ಜೆ ಹೊರಿಸದೇ, ವ್ಯಕ್ತಿಚಿತ್ರಣವೊಂದನ್ನು ಅದರೆಲ್ಲ ಛಾಯೆಗಳೊಂದಿಗೆ ಕಟ್ಟುವ ಬಗೆ ಇಲ್ಲಿ ಅರ್ಥಪೂರ್ಣ. 
 
ಚಿಕ್ಕ ಚೊಕ್ಕಟ ಫ್ರೇಮುಗಳಲ್ಲಿ ಬಾಲ್ಯದ ಅನುಭವಲೋಕದೊಡನೆ ಅವಿನಾಭಾವವಾಗಿ ಬೆಸೆದ ಕಾಗೆಯೆಂಬ ಅಲಕ್ಷಿತ ಪಕ್ಷಿಯನ್ನು ಲಕ್ಷ್ಯವಹಿಸಿ ಚಿತ್ರಿಸುವ ಬಗೆ ವಿಶಿಷ್ಟವಾಗಿದೆ. ಬರವಣಿಗೆಯ ಬಿಗಿಬಂಧ, ಅನುಭವವನ್ನು ಜಾರದಂತೆ ಹಿಡಿಯುವ ಸೂಕ್ಷ್ಮತೆ, ಗ್ರಹಿಕೆಯ ಜಾಣ್ಮೆ, ಇವೆಲ್ಲವುಗಳ ಜೊತೆ ಬದುಕಿನೆಡೆಗಿನ ಪ್ರಬುದ್ಧ ನೋಟದಿಂದಾಗಿ ‘ನನ್ನ ಬಾಲ್ಯ ಕದ್ದ ಕಾಗೆಗಳು’ ಪ್ರಬಂಧ ಇಷ್ಟವಾಗುತ್ತದೆ.
 
ಮನೆ ಎಂಬುದು ಹೆಣ್ಣಿನ ಪಾಲಿಗೆ ಪ್ರಪಂಚ. ಅದನ್ನು ಬಂಧನವಾಗಿಸದೇ ಬಿಡುಗಡೆ ಪಡೆವ ದಾರಿಯನ್ನಾಗಿ ರೂಪಿಸಿಕೊಳ್ಳುವ ಪಕ್ವ ಚಿಂತನೆ ತಾರಸಿಯ ಮೇಲಿನ ಅನಂತ ನಡಿಗೆ ಪ್ರಬಂಧದ್ದು. ಮನೆಯ ತಾರಸಿಯಿಂದ ಅನಂತಕ್ಕೆ ಜಿಗಿವ ಧ್ಯಾನಶೀಲತೆಯಲ್ಲಿ ಈ ಬರಹವು ಆಪ್ತವಾಗುತ್ತದೆ. ಎತ್ತರದಲ್ಲಿ ನಿಂತು ನೋಡಿದಾಗ ದೈನಿಕದ ಕ್ಷುದ್ರತೆಗಳೆಲ್ಲ ಕಾಣುವ ಹಾಗೆ, ವಿಹಂಗಮ ನೋಟದಲ್ಲಿ ಬದುಕಿನ ವಿಸ್ತಾರವು ವಿಕಾಸಭಾವವನ್ನು ತುಂಬುತ್ತದೆ. ಪರಿಸರದೊಳಗೆ ಒಂದಾಗಿ ದೀಪಪ್ತಗೊಳ್ಳುತ್ತದೆ. ಮುಪ್ಪಿನ ತಬ್ಬಲಿತನವನ್ನು ಹಳಹಳಿಕೆಯಿಲ್ಲದೇ ನಿವಾರಿಸಿಕೊಳ್ಳುತ್ತ ಪ್ರಕೃತಿಯ ನಿರಾಳತೆಯನ್ನು ಬದುಕಿಗೆ ಕಸಿಕಟ್ಟುವ ಬರಹವು ಕಾಲದ ತಲ್ಲಣಗಳಿಗೆ ಧ್ವನಿಯಾಗುತ್ತದೆ. 
 
ಸ್ತ್ರೀಜಗತ್ತಿನ ಅನುಭವದ ವೈವಿಧ್ಯ, ಭಾಷಾ ವೈವಿಧ್ಯ, ನಿರೂಪಣೆಯ ಲವಲವಿಕೆಗಳನ್ನು ಗಮನಿಸುವಾಗ, ಬರಹವೆಂಬ ಒರತೆ ಎಂದೂ ಬತ್ತಲಾರದು ಎಂಬ ಆಶಾವಾದ ಸಣ್ಣಗೆ ಮೊಳೆಯುತ್ತದೆ. ಈ ಒರತೆ ಬದುಕಿನ ಎಲ್ಲ ನೆಲೆಯ ಅನುಭವಗಳನ್ನು ಒಳಗೊಳ್ಳುತ್ತಾ ವಿಸ್ತರಿಸಲಿ ಎಂಬುದು ಹಂಬಲ. ಇಲ್ಲಿ ಆಯ್ಕೆಯಾದ ಬರಹಗಳು ಎಲ್ಲ ಮಿತಿಗಳ ಮಧ್ಯೆಯೂ ಒಳ-ಹೊರ ಜಗತ್ತುಗಳನ್ನು ಬೆಸೆದು ಕಟ್ಟುತ್ತಾ ಒಂದು ಮಾಡುವ ಅಚ್ಚರಿಯನ್ನು ಉಳಿಸುತ್ತವೆ. ತನ್ನ ಲೀಲೆಗೆ ತಾನೇ ಬೆರಗಾಗುವಂತೆ ಬರವಣಿಗೆಯಲ್ಲಿ ಮೂಡುವ ಲೋಕ ಹಾಗೂ ಅದರ ಸಂವೇದನೆ ನಮ್ಮನ್ನೂ ಹಿಗ್ಗಿಸುವುದು ಸುಳ್ಳಲ್ಲ. ಅಂಥ ಅನುಭವದಲ್ಲಿ ಪಾಲ್ಗೊಳ್ಳುವ ಸಂದರ್ಭವೊದಗಿಸಿದ ಪ್ರಜಾವಾಣಿ ಬಳಗಕ್ಕೆ ಧನ್ಯವಾದ.
-ಗೀತಾ ವಸಂತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT