ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ ಸೊಗಡಿಗೆ ನಮ್ಮ ಅಡುಗೆ

ನಳಪಾಕ
Last Updated 13 ಜನವರಿ 2017, 19:30 IST
ಅಕ್ಷರ ಗಾತ್ರ
ಕೋಕೊನಟ್ ಸೋಸ್ಲೆ
ಕೋಕೊನಟ್‌ ಸೋಸ್ಲೆ ಒಂದು ವಿಧವಾದ ಸಿಹಿ ತಿನಿಸು. ಇದು ಸಂಕ್ರಾತಿಯ ವಿಶೇಷ ತಿನಿಸು ಅಲ್ಲದಿದ್ದರೂ ಕೂಡ ಇದೊಂದು ರೀತಿಯ ಹಬ್ಬದ ಸಿಹಿ. ಅಡುಗೆ ಮಾಡುವುದು ನನ್ನ ಹವ್ಯಾಸ. ಸಮಯ ಸಿಕ್ಕಾಗ ವಿಶೇಷ ಅಡುಗೆಗಳನ್ನು ತಯಾರಿಸುತ್ತೇನೆ. ಕೋಕೋನಟ್ ಸೋಸ್ಲೆ ನನ್ನ ಇಷ್ಟದ ತಿನಿಸುಗಳಲ್ಲಿ ಒಂದು. ಇದು ಸುಲಭ ಹಾಗೂ ಬೇಗನೆ ತಯಾರಿಸಬಹುದಾದ ತಿಂಡಿ. 
 
ಬೇಕಾಗುವ ಸಾಮಗ್ರಿ: ಹಾಲು – ಒಂದು ಲೀಟರ್, ಮಿಲ್ಕ್ ಮೇಡ್‌, ಒಂದು ಇಡಿ ತೆಂಗಿನಕಾಯಿಯಿಂದ ತಯಾರಿಸಿದ ತೆಂಗಿನ ಹಾಲು, ಜಲೆಟಿನ್‌ – 2 ಚಮಚ
 
ತಯಾರಿಸುವ ವಿಧಾನ: ಮೊದಲು ಚೆನ್ನಾಗಿ ಹಾಲನ್ನು ಕುದಿಸಬೇಕು. ನಂತರ ಕುದಿಸಿದ ಹಾಲಿಗೆ ತೆಂಗಿನಕಾಯಿ ಹಾಲನ್ನು ಸೇರಿಸಬೇಕು. ಆಮೇಲೆ ಅದಕ್ಕೆ 1 ಚಮಚ ಮಿಲ್ಕಮೇಡ್‌ ಹಾಕಬೇಕು. ಅದೆಲ್ಲವನ್ನು ಮಧ್ಯಮ ಉರಿಯಲ್ಲಿ ಕುದಿಸಿ. ಅದಕ್ಕೆ 2 ಟೀ ಚಮಚ ಜಲೆಟಿನ್‌ ಸೇರಿಸಿ. ನಂತರ ಈ ಎಲ್ಲವನ್ನೂ ಚೆನ್ನಾಗಿ ಮಿಕ್ಸ್‌ ಮಾಡಿ ಕುದಿಸಿ. ಅದನ್ನು ಒಲೆಯ ಮೇಲಿಂದ ಇಳಿಸಿ ತಣ್ಣಗಾಗಲು ಬಿಡಿ. ನಂತರ ತಟ್ಟೆಯೊಂದಕ್ಕೆ ತುಪ್ಪ ಸವರಿ, ಆ ಮಿಶ್ರಣವನ್ನು ತಟ್ಟೆ ಮೇಲೆ ಹಾಕಿ. ಅದನ್ನು ಪ್ರಿಜ್‌ನಲ್ಲಿ ಇರಿಸಿ. ಅದು ಸ್ವಲ್ಪ ಗಟ್ಟಿಯಾದ ಮೇಲೆ ತಿನ್ನಲು ರೆಡಿ. 
 
**
ಖಾರ ಪೊಂಗಲ್‌
ನಮಗೆ ಸಂಕ್ರಾತಿ ವಿಶೇಷ ಹಬ್ಬ. ನಾನು ಚಿಕ್ಕವಳಿದ್ದಾಗಿನಿಂದಲೂ ನಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಿಗೆ ಹೋಗಿ ಎಳ್ಳು ಬೆಲ್ಲ ಬೀರುತ್ತಿದೆ. ಇಂದಿಗೂ ಆ ಅಭ್ಯಾಸ ಮುಂದುವರಿದಿದೆ. ಈಗ ನನ್ನ ಗಂಡ ಸುಂದರ್ ಹಾಗೂ ಮಕ್ಕಳು ಕೂಡ ನನಗೆ ಸಾಥ್ ನೀಡುತ್ತಾರೆ. ನಾನು ಹಬ್ಬ ಹಾಗೂ ಹಬ್ಬದ ಮೊದಲ ದಿನದಲ್ಲಿ ಬಿಡುವು ಮಾಡಿಕೊಳ್ಳುತ್ತೇನೆ. ಹಬ್ಬಕ್ಕೆ ನಾನು ಸ್ವೀಟ್, ಖಾರ ಎರಡು ರೀತಿಯ ಪೊಂಗಲ್ ತಯಾರಿಸುವುದು ವಿಶೇಷ. 
 
ಬೇಕಾಗುವ ಸಾಮಗ್ರಿಗಳು: ಹೆಸರು ಬೇಳೆ –ಮುಕ್ಕಾಲು ಪಾವು, ಅಕ್ಕಿ – ಒಂದು ಪಾವು, ಈರುಳ್ಳಿ (ಹಬ್ಬದ ದಿನ ಬಳಸುವುದಿಲ್ಲ), ಕಾಯಿತುರಿ– ಒಂದು ಬಟ್ಟಲು, ಬೆಳ್ಳುಳ್ಳಿ (ಹಬ್ಬದ ದಿನ ಬಳಸುವುದಿಲ್ಲ), ಹಸಿಮೆಣಸಿನಕಾಯಿ – 4, ಅರಶಿನ – ಸ್ವಲ್ಪ, ಜೀರಿಗೆ – ಸ್ವಲ್ಪ, ಕಾಳುಮೆಣಸು– 4 ಕಾಳು, ಕಾಳುಮೆಣಸಿನ ಪುಡಿ – ಒಗ್ಗರಣೆಗೆ, ಇಂಗು – ಚಿಟಿಕೆ
 
ಒಗ್ಗರಣೆಗೆ: ತುಪ್ಪ, ಸಾಸಿವೆ, ಬೆಳ್ಳುಳ್ಳಿ, ಕರಿಬೇವು, ಕಾಳುಮೆಣಸಿನ ಪುಡಿ, ಗೊಡಂಬಿ
 
ತಯಾರಿಸುವ ವಿಧಾನ: ಮೊದಲು ಹೆಸರು ಬೇಳೆ ಹಾಗೂ ಅಕ್ಕಿಯನ್ನು ತೊಳೆದು ಕುಕ್ಕುರ್‌ನಲ್ಲಿ ಸ್ವಲ್ಪ ಜಾಸ್ತಿ ನೀರು ಸೇರಿಸಿ ಬೇಯಿಸಿಕೊಳ್ಳಬೇಕು. ಅದು ಸ್ವಲ್ಪ ಪೇಸ್ಟ್‌ ರೀತಿ ಬೇಯಬೇಕು. ನಂತರ ಮಿಕ್ಸಿಗೆ ಕಾಯಿತುರಿ, ಈರುಳ್ಳಿ (ಬೇಕಿದ್ದರೆ), ಬೆಳುಳ್ಳಿ (ಬೇಕಿದ್ದರೆ), ಜೀರಿಗೆ, ಹಸಿಮೆಣಸಿನ ಕಾಯಿ, ಕಾಳುಮೆಣಸು, ಇಂಗು ಸೇರಿಸಿ ರುಬ್ಬಿಕೊಳ್ಳಿ. ನಂತರ ರುಬ್ಬಿದ ಮಿಶ್ರಣವನ್ನು ಬೇಯಿಸಿಕೊಂಡ ಅನ್ನ ಹೆಸರುಬೇಳೆ ಮಿಶ್ರಣಕ್ಕೆ ಸೇರಿಸಬೇಕು, ಅದಕ್ಕೆ ಸ್ವಲ್ಪ ನೀರು ಸೇರಿಸಿ ಸ್ವಲ್ಪ ಕುದಿಸಬೇಕು. ನಂತರ ಬೇರೆ ಪಾತ್ರೆಯೊಂದರಲ್ಲಿ ತುಪ್ಪ, ಕರಿಬೇವು, ಇಂಗು, ಕಾಳುಮೆಣಸು, ಸಾಸಿವೆ, ಕಾಳುಮೆಣಸಿನ ಪುಡಿ, ಗೊಡಂಬಿ ಸೇರಿಸಿ ಒಗ್ಗರಣೆ ತಯಾರಿಸಿ. ಆ ಒಗ್ಗರಣೆಯನ್ನು ಕುದಿಯುತ್ತಿರುವ ಪೊಂಗಲ್‌ಗೆ ಸೇರಿಸದರೆ ಖಾರ ಪೊಂಗಲ್ ರೆಡಿ. 
 
**
ಚಿಗಳಿ
ಚಿಗಳಿ, ಸಂಕ್ರಾಂತಿಯ ಚಳಿಗೆ ಕರಿ ಎಳ್ಳಿನ ಕಾವು, ಬೆಲ್ಲದ ಸಿಹಿ, ಏಲಕ್ಕಿಯ ಘಮದೊಂದಿಗೆ, ನಾಲಿಗೆಗೆ ಚಪ್ಪರಿಸುವ ರುಚಿ ನೀಡುತ್ತದೆ. ದೇಹಕ್ಕೆ ಶಕ್ತಿ ಮತ್ತು ಮನಸ್ಸಿಗೆ ಮುದ ನೀಡುವ ಸಿಹಿ ತಿನಿಸು ಈ ಚಿಗಳಿ. ನನ್ನ ಅಜ್ಜಿ ಪ್ರತಿ ಸಂಕ್ರಾಂತಿಗೂ ಪ್ರೀತಿಯಿಂದ ಮಾಡಿಡುತ್ತಿದ್ದ ಸಿಹಿ ತಿನಿಸಿದು. ಬೆಳೆಯುವ ಮಕ್ಕಳಿಗಂತೂ ಚಿಗಳಿ ಪೌಷ್ಟಿಕಾಂಶಗಳ ಆಗರ. ಚಳಿಗಾಲದಲ್ಲಿ ಹದಗೆಡುವ ಚರ್ಮವನ್ನು ಕರಿಎಳ್ಳಿನ ಎಣ್ಣೆ ಮತ್ತು ಬೆಲ್ಲ ಕಾಪಿಡುತ್ತವೆ. ಇದನ್ನು ಮಾಡುವುದೂ ಸುಲಭ. 
ಬೇಕಾಗುವ ಸಾಮಗ್ರಿಗಳು: ಕರಿ ಎಳ್ಳು – 1 ಬಟ್ಟಲು, ಬೆಲ್ಲ – ಮುಕ್ಕಾಲು ಬಟ್ಟಲು, ಏಲಕ್ಕಿ – 2-3
 
ತಯಾರಿಸುವ ವಿಧಾನ: ಮೊದಲು ಕರಿ ಎಳ್ಳನ್ನು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಹದವಾಗಿ ಹುರಿಯಬೇಕು. ಕರಿ ಎಳ್ಳು ಎಣ್ಣೆ ಬಿಟ್ಟು ಹಗುರವಾಗಿ ಅರಳಿ ಘಮಿಸುವವರೆಗೆ ಹುರಿಯಿರಿ. ಹುರಿದ ಕರಿ ಎಳ್ಳನ್ನು ಪಕ್ಕಕ್ಕೆ ಇಟ್ಟುಕೊಳ್ಳಿ. ಬೆಲ್ಲವನ್ನು ಕುಟ್ಟಿಕೊಳ್ಳಿ. ಬೆಲ್ಲ, ಏಲಕ್ಕಿ ಮತ್ತು ಹುರಿದ ಕರಿ ಎಳ್ಳಿನ ಮಿಶ್ರಣವನ್ನು ಮಿಕ್ಸಿಗೆ ಹಾಕಿ ಹದವಾಗಿ ಒಂದೆರಡು ಬಾರಿ ತಿರಿವಿಕೊಳ್ಳಿ. ಮನೆಯಲ್ಲಿ ರುಬ್ಬುವ ಕಲ್ಲಿದ್ದರೆ, ಬೆಲ್ಲ, ಏಲಕ್ಕಿ, ಎಳ್ಳಿನ ಮಿಶ್ರಣವನ್ನು ಹೊರಳಿಗೆ ಹಾಕಿ ಕೈಹಾರೆಯಲ್ಲಿ ಕುಟ್ಟಿ ಹದ ಮಾಡಬೇಕು. ಬೆಲ್ಲದ ಜೊತೆಗೆ ಪೂರ್ತಿಯಾಗಿ ಬೆರೆಯುವ ಕರಿ ಎಳ್ಳಿನ ಎಣ್ಣೆ ಉಂಡೆ ಕಟ್ಟುವ ರೀತಿ ಅಂಟು ಕೊಡುತ್ತದೆ. ಈ ಮಿಶ್ರಣವನ್ನು ಕೈಗಳಲ್ಲಿ ಹದವಾಗಿ ಉಂಡೆ ಕಟ್ಟಿದರೆ ರುಚಿಯಾದ ಚಿಗಳಿ ಸಿದ್ಧ. ನಿಮಗೆ ಬೇಕಾದ ಗಾತ್ರದ ಉಂಡೆಗಳನ್ನು ಕಟ್ಟಿ. ನನ್ನ ಅಜ್ಜಿ ಕಟ್ಟುತ್ತಿದ್ದುದು ಮುದ್ದೆ ಗಾತ್ರದ ದೊಡ್ಡ ಉಂಡೆಗಳು! 
 
**
ಸಿಹಿ ಪೊಂಗಲ್‌
ನಾನು ಮೂಲತಃ ದಾವಣಗೆರೆಯವಳು. ನಮ್ಮಲ್ಲಿ ಸಂಕ್ರಾತಿ ಎಂದರೆ ಜೋಳದ ರೊಟ್ಟಿ, ಪಲ್ಯ ಮಾಡಿ ತೋಟದಲ್ಲಿ ಹೋಗಿ ಹಬ್ಬ ಆಚರಣೆ ಮಾಡುತ್ತೇವೆ. ಬೆಂಗಳೂರಿಗೆ ಬಂದ ಮೇಲೆ ನಾನು ಪೊಂಗಲ್ ತಯಾರಿಸುವುದನ್ನು ತಿಳಿದುಕೊಂಡೆ. ಈಗ ಸಂಕ್ರಾತಿ ದಿನ ರೊಟ್ಟಿಯೊಂದಿಗೆ ಪೊಂಗಲ್ ಕೂಡ ತಯಾರಿಸುತ್ತೇನೆ. 
 
ಬೇಕಾಗುವ ಸಾಮಗ್ರಿಗಳು: ಅಕ್ಕಿ, ಹೆಸರು ಬೇಳೆ, ಬೆಲ್ಲ - 3/4 ಕಪ್, ನೀರು - 4 ಕಪ್‌, ತುಪ್ಪ - 3 ಚಮಚ, ಒಣದ್ರಾಕ್ಷಿ - 12-15, ಗೇರುಬೀಜ- 8-10, ಏಲಕ್ಕಿ - 2 ಪುಡಿ ಸ್ವಲ್ಪ, ಲವಂಗ - 2 ಪುಡಿ ಮಾಡಿದ್ದು
 
ತಯಾರಿಸುವ ವಿಧಾನ
3 ಕಪ್‌ನಷ್ಟು ಅಕ್ಕಿಯನ್ನು ಚೆನ್ನಾಗಿ ತೊಳೆದು ಒಂದೆಡೆ ಇರಿಸಿ. ನಂತರ ಪಾತ್ರೆಯೊಂದಕ್ಕೆ ತುಪ್ಪ ಹಾಕಿ ಹೆಸರುಬೇಳೆಯನ್ನು ಕೆಂಪಾಗುವವರೆಗೂ ಹುರಿಯಿರಿ. ನಂತರ ಬೇರೆ ಪಾತ್ರೆ ತೆಗೆದುಕೊಂಡು ಅಕ್ಕಿ ಮತ್ತು ಹೆಸರುಬೇಳೆಯನ್ನು ಬೇಯಿಸಿಕೊಳ್ಳಿ. ಇನ್ನೊಂದು ಒಲೆಯಲ್ಲಿ ಪಾತ್ರೆ ಇರಿಸಿ ನೀರು ಹಾಕಿ ಅದಕ್ಕೆ ಬೆಲ್ಲ ಸೇರಿಸಿ.
 
ಬೆಲ್ಲ ಕರಗುವವರೆಗೂ ಕುದಿಸಿ. ನಂತರ ಬೆಲ್ಲದ ಮಿಶ್ರಣಕ್ಕೆ ಏಲಕ್ಕಿ ಹಾಗೂ ಲವಂಗವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಈ ಮಿಶ್ರಣಕ್ಕೆ ಬೇಯಿಸಿದ ಬೇಳೆ ಹಾಗೂ ಅನ್ನು ಸೇರಿಸಿ. ನಂತರ ಪಾತ್ರೆಯೊಂದರಲ್ಲಿ ತುಪ್ಪ ಹಾಕಿ ಬಿಸಿಯಾದ ನಂತರ ದ್ರಾಕ್ಷಿ, ಗೊಡಂಬಿಯನ್ನು ಹುರಿಯಿರಿ. ಹುರಿದ ದ್ರಾಕ್ಷಿ, ಗೊಡಂಬಿಯನ್ನು ತುಪ್ಪದೊಂದಿಗೆ ಪೊಂಗಲ್ ತಯಾರಿಸಿದ ಪಾತ್ರೆಗೆ ಸುರಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT