ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ: ಭೂರಮೆಗೆ ಸೂರ್ಯನ ಬೆಚ್ಚನೆಯ ತಬ್ಬುಗೆ

ಇಂದು ಸಂಕ್ರಾಂತಿ
Last Updated 13 ಜನವರಿ 2017, 19:30 IST
ಅಕ್ಷರ ಗಾತ್ರ
ಬೆಳಕಿನ ದರ್ಬಾರು ಹೆಚ್ಚಾಗುವ ಈ ಸಂಕ್ರಾಂತಿ ಎಂದರೆ ಒಂದು ತರಹದ ಪಲ್ಲಟದ ಹೊತ್ತು. ಸ್ಥಾನಪಲ್ಲಟದ, ಆ ಮೂಲಕ ಅಧಿಕಾರ ಹಸ್ತಾಂತರವೆನ್ನಬಹುದಾದ ಹೊತ್ತೂ ಹೌದು. ಆರು ತಿಂಗಳು ಕತ್ತಲಿನ ರಾಜ್ಯಭಾರ ಇದ್ದರೆ ಮುಂದೆ ಬರುವ ಆರು ತಿಂಗಳಲ್ಲಿ ಬೆಳಕಿನದ್ದೇ ಕಾರುಬಾರು. ಬೆಳಕಿಗೆ ಉಜ್ಜಿದಷ್ಟೂ ಹೊಳೆಯುವ ನಮ್ಮ ಸಂಸ್ಕೃತಿಯ ಆಚರಣೆಗಳು ಸೂರ್ಯಸಂಸ್ಕೃತಿಯವು ಎಂದರೂ ಉತ್ಪೇಕ್ಷೆಯಾಗದು. ಭೂಮಿ ಮೇಲಿನ ಎಲ್ಲ ಚಟುವಟಿಕೆಗಳ ಶಕ್ತಿಕೇಂದ್ರವೇ ಸೂರ್ಯ.
 
ಮಳೆಗೆ ಒದ್ದೆಯಾಗಿ ನಂತರದ ಚಳಿಗೆ ಮುದುಡಿ ಕುಳಿತ ಜೀವವೈವಿಧ್ಯಕ್ಕೆ ಬೆಚ್ಚನೆಯ ಸ್ಪರ್ಶಸುಖ ನೀಡುವ ಅವನು ಸಂಜೀವಿನಿಯಂತೆ ಭೂಮಿಯ ಕಸುವನ್ನು ಪುನಶ್ಚೇತನಗೊಳಿಸುತ್ತಾನೆ. ನಿಂತಲ್ಲೇ ನಿಂತು ಭೂರಮೆಯ ‘ನಡೆಯನ್ನು ನಿರ್ದೇಶಿಸುವ, ಆ ಮೂಲಕ ಋತುಭೇದ ಮೂಡಿಸುವ ಬೆಂಕಿಯುಂಡೆಯವನು; ಭೂಮಿಯ ಸುಖಸಂತಸಗಳಿಗೆ ನೇರ ಕಾರಕ. ಸಂಕ್ರಮಣದ ವಿಶೇಷವೇ ಮುಂದೆ ಹೋಗುವುದು. ಸೂರ್ಯನು ದಕ್ಷಿಣಾಯನದಿಂದ ಉತ್ತರಮುಖಿಯಾಗುವ, ಉತ್ತರಾಯಣದೆಡೆಗೆ ಸಂಕ್ರಮಿಸುವುದೇ ಸಂಕ್ರಾಂತಿ. 
 
ಪಲ್ಲಟ ಎನ್ನುವುದು ಪ್ರತೀಜೀವಿಯ ಸಹಜ ಚಟುವಟಿಕೆ. ಪಲ್ಲಟ ಸಂಭವಿಸದಿದ್ದರೇ ಆಪತ್ತು. ಹುಟ್ಟುವುದು, ಬೆಳೆಯುವುದು, ಬೆಳೆದು ಮಾಗುವುದು, ಮಾಗಿ ಬಾಗುವುದು. ಮತ್ತೆ ಪ್ರಕೃತಿಯ ಮಡಿಲು ಸೇರುವುದು. ಇದು ಎಲ್ಲ ಜೀವಿಗಳೂ ಪಲ್ಲಟ ಹೊಂದುವ ಕಥೆ. ಪುರಾಣದ ಒಂದಷ್ಟು ಸೊಲ್ಲುಗಳೂ ಇಂಥ ಕತೆಗಳನ್ನು ಪುಷ್ಟೀಕರಿಸಿ ‘ಬರುವ’, ‘ಬಂದಿರುವ’ ಹಾಗೂ ಮತ್ತೆ ‘ಹೋಗುವ’ ಜೀವಕಥೆಗಳನ್ನು ನಮ್ಮ ಮನದಲ್ಲಿ ಬಿತ್ತಿ, ಪ್ರಜ್ಞೆಯನ್ನು ತುಂಬುವ ಕೆಲಸ ಮಾಡಿವೆ. ಭಗೀರಥ ತನ್ನ ಪೂರ್ವಿಕರಿಗೆ ಸ್ವರ್ಗದ ದಾರಿಯನ್ನು ಗಂಗೆಯ ಸ್ಪರ್ಶದಿಂದ ತೋರಿದ್ದು ಇದೇ ಉತ್ತರಾಯಣದಲ್ಲಿ. ಭೀಷ್ಮನಾದ ದೇವವ್ರತನೂ ಇಹದ ಸಂಬಂಧ ಕಳಚಿಕೊಂಡಿದ್ದೂ ಇದೇ ಉತ್ತರಾಯಣದಲ್ಲಿ. ರಭಸದ ಗಂಗೆ ಮೇಲಿಂದ ಕೆಳಗೆ ಅವತರಿಸಿದರೆ, ಗಂಗಾಪುತ್ರ ಭೀಷ್ಮ, ಇಲ್ಲಿಂದ ಅಲ್ಲಿಗೆ ಪಯಣಿಸಿದ. ಒಟ್ಟಿನಲ್ಲಿ ದಾಟುವ ಪ್ರಕ್ರಿಯೆಯೇ ಈ ಸಂಕ್ರಾಂತಿಯ ಸಂಭ್ರಮ.
 
ನಮ್ಮ ಹಬ್ಬಗಳೆಂದರೆ ‘ಇಲ್ಲ’ದ್ದನ್ನು ‘ಇದೆ’ಯೆಂದು ಭಾವಿಸಿ ಬದುಕುವುದು. ಇಲ್ಲದ್ದನ್ನು ತುಂಬುವುದು. ದೀಪಾವಳಿಯ ನೀರು ತುಂಬುವುದು, ಕಾರ್ತಿಕದ ದೀಪ ಹಚ್ಚುವುದು ಎಲ್ಲವೂ ಇದಕ್ಕೆ ಸಂಕೇತ. ಕಾರ್ತಿಕಮಾಸದ ಹೆಚ್ಚುವರಿ ದೀಪಗಳು ಮುಂದೆ ಬರುವ ಸಂಕ್ರಮಣದ ನಂತರದ ಬೆಳಕಿನ ದಿನಗಳಿಗೆ ನಾಂದಿ ಹಾಡುವಂತೆ ಕಾಣುತ್ತದೆ. ಕತ್ತಲನ್ನು ಹೊಡೆದೋಡಿಸುವುದು ಬೆಳಕು ತಾನೇ. ಈ ವಿಸ್ಮಯದ ಜಗತ್ತು ನಮ್ಮ ಕಣ್ಣಿಗೆ ಗೋಚರವಾಗುವಂತೆ ಮಾಡುವ ಮಾಧ್ಯಮ ಈ ಬೆಳಕು; ಬೆಳಕಿನ ಮೂಲ ಸೂರ್ಯ ಎಂದಿಗೂ ಭೂಮಿಗೆ ದೊರೆಯೇ ಹೌದು. ಈ ಬೆಳಕಿನ ದೊರೆ ಮಗ್ಗುಲು ಬದಲಾಯಿಸುವ ಒಂದು ಆವರ್ತವಾಗಿ ಸಂಕ್ರಮಣವನ್ನು ನೋಡಬಹುದು. ‘ಮಕರ ಸಂಕ್ರಾಂತಿ’, ‘ಪೊಂಗಲ್’, ‘ಸುಗ್ಗಿಹಬ್ಬ’ – ಹೀಗೆ ಕರೆಯಲ್ಪಡುವ ಸಂಕ್ರಾಂತಿ, ದಕ್ಷಿಣಭಾರತದಲ್ಲೆಲ್ಲೆಡೆಯೂ ಆಚರಣೆಯಲ್ಲಿದೆ. ಎಳ್ಳು–ಬೆಲ್ಲ–ಕಬ್ಬನ್ನು ಹಂಚಿ ತಿನ್ನುವ, ಧಾನ್ಯ ನೀಡಿದ ಭೂಮಿತಾಯಿಗೆ, ಧಾನ್ಯದ ರಾಶಿಗೆ, ದನಕರುಗಳಿಗೂ ಪೂಜಿಸುವ, ಎತ್ತುಗಳ ರಕ್ಷೆಯಾಗಿ ಬೆಂಕಿ ಮೇಲೆ ಅವನ್ನು ಹಾಯಿಸುವ ಹಲವು ಆಚರಣೆಗಳಿರುವ ಸಂಭ್ರಮವೇ ಸಂಕ್ರಾಂತಿಹಬ್ಬ.
 
ಸಂಕ್ರಾಂತಿಯ ಖಾದ್ಯ ಪೊಂಗಲ್. ತಮಿಳುನಾಡಿನಲ್ಲಿ ಹಬ್ಬವನ್ನೇ ‘ಪೊಂಗಲ್’ ಎಂದು ಕರೆಯುತ್ತಾರೆ. ಈ ದಿನ ಹಾಲನ್ನು ಬೆಲ್ಲದೊಂದಿಗೆ ಕುದಿಸಿ ಉಕ್ಕಿಸಲಾಗುತ್ತದೆ. ಉಕ್ಕಿ ಹರಿಯುವುದೆಂದರೆ ಸಮೃದ್ಧತೆಯ ಸಂಕೇತವಲ್ಲವೇ! ಕರ್ನಾಟಕದಲ್ಲಿ ಅದರಲ್ಲೂ ಮೈಸೂರು, ಬೆಂಗಳೂರು ಸುತ್ತಮುತ್ತಲಿನಲ್ಲಿ ಸಂಕ್ರಾಂತಿಯ ವಿಶೇಷ ಆಚರಣೆಯೆಂದರೆ ‘ಎಳ್ಳು ಬೀರುವುದು. ಸಂಕ್ರಾಂತಿಗೆ ಇನ್ನೂ ತಿಂಗಳಿದೆ ಎನ್ನುವಾಗಲೇ ಎಳ್ಳು–ಬೆಲ್ಲದ ತಯಾರಿ ಆರಂಭವಾಗುತ್ತದೆ. ಶುದ್ಧೀಕರಿಸಿದ ಬಿಳಿಯ ಎಳ್ಳು, ಸಣ್ಣ ತುಂಡುಗಳಾಗಿ ಕತ್ತರಿಸಿದ ಬೆಲ್ಲ, ವಿವಿಧ ಆಕಾರದ ಸಕ್ಕರೆ ಅಚ್ಚು, ಒಣಕೊಬ್ಬರಿಯ ತೆಳುವಾಗಿ ಹಚ್ಚಿದ ತುಂಡುಗಳು, ಹುರಿಗಡಲೆ ಹಾಗೂ ಸಿಪ್ಪೆ ತೆಗೆದ ಶೇಂಗಾಬೀಜದ ಮಿಶ್ರಣವೇ ಸಂಕ್ರಾಂತಿಯ ‘ಎಳ್ಳು’. ಮನೆಯ ಪುಟ್ಟ ಹೆಣ್ಣುಮಕ್ಕಳೇ ಎಳ್ಳು ಬೀರುವ ರಾಯಭಾರಿಗಳು. ಮಮತೆಯ ಪ್ರತಿನಿಧಿಗಳೆಂತಲೋ ಮನೆಯ ಹೆಣ್ಣುಮಕ್ಕಳಿಗೆ ಆರತಿಯೆತ್ತಿ ಆಕೆಯ ಕೈಯಲ್ಲಿ ಅಕ್ಕಪಕ್ಕದ ಮನೆಗಳಿಗೆ ಎಳ್ಳು ಕೊಡಿಸುವ ಕಾರ್ಯಕ್ರಮವೇ ‘ಎಳ್ಳು ಬೀರುವುದು’. ಜರಿಲಂಗದ ಪುಟ್ಟ ಸುಂದರಿಯರು ಮನೆಮನೆಗೆ ತೆರಳಿ ಎಳ್ಳು ಬೀರುವ ಸಂಭ್ರಮ ನೋಡಿಯೇ ಆನಂದಿಸಬೇಕು. ಪಕ್ಕದ ಮಹಾರಾಷ್ಟ್ರದಲ್ಲಿ ಎಳ್ಳಿನುಂಡೆಗಳನ್ನು ನೀಡಿ ‘ತಿಳ್ಗುಳ್ ಘ್ಯಾ ಅಣಿ, ಗೋಡ್ ಗೋಡ್ ಬೋಲ (ಎಳ್ಳುಬೆಲ್ಲ ತಿನ್ನಿ, ಸಿಹಿಸಿಹಿ ಮಾತಾಡಿ) – ಎನ್ನುವ ಸಂಪ್ರದಾಯವನ್ನು ನೋಡಬಹುದು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT