ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಮೇಲೆ ದೌರ್ಜನ್ಯ: ಅಂದು, ಇಂದು

Last Updated 13 ಜನವರಿ 2017, 19:30 IST
ಅಕ್ಷರ ಗಾತ್ರ

 ಎನ್‌. ಹನುಮಂತಪ್ಪ

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಕಾಮುಕರಿಂದ ಯುವತಿಯರ ಮೇಲೆ ಆಗುತ್ತಿರುವ ಆಕ್ರಮಣಗಳ ಕುರಿತು ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಈ ಸಂಬಂಧ ಮನಕಲಕುವ ಘಟನೆ ನನ್ನ ನೆನಪಿಗೆ ಬರುತ್ತಿದೆ. ಅದನ್ನು ವಾಚಕರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.
ಇದು ಈಗ್ಗೆ ಸುಮಾರು 10 ವರ್ಷಗಳ ಹಿಂದೆ ನಡೆದ ಘಟನೆ. ನಾನು ಆಗ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್‌ ಠಾಣೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದೆ.

ಈಗಿನಂತೆ ಆಗಲೂ ಸರಗಳ್ಳರ ಹಾವಳಿ ವ್ಯಾಪಕವಾಗಿತ್ತು. ಬೆಳಿಗ್ಗೆ ಮನೆ ಮುಂದೆ ರಂಗೋಲಿ ಹಾಕುತ್ತಿದ್ದವರು, ಹಾಲು ತರಲು ಹೋಗುತ್ತಿದ್ದವರು, ವಾಯು ವಿಹಾರ ಮಾಡುತ್ತಿದ್ದವರು, ದೂರದ ಊರಿಂದ ಬಂದು ನಡೆದು ಮನೆಗೆ ಹೋಗುತ್ತಿದ್ದವರು ಹಾಗೂ ಸಂಜೆ ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದವರ ಸರಗಳನ್ನು ಕಳ್ಳರು ಕ್ಷಣಾರ್ಧದಲ್ಲಿ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಘಟನೆಗಳು ಜರುಗುತ್ತಲೇ ಇದ್ದವು. ಇವು ನಮ್ಮ ನಿದ್ದೆಗೆಡಿಸಿದ್ದಲ್ಲದೆ, ಮೇಲಧಿಕಾರಿಗಳು ಇವುಗಳನ್ನು ನಿಯಂತ್ರಿಸಲು ನಮ್ಮ ಮೇಲೆ ಒತ್ತಡ ಹಾಕುತ್ತಿದ್ದರು.

ಇಂಥ ಪ್ರಕರಣಗಳನ್ನು ತಡೆಗಟ್ಟಲು ಮತ್ತು ಕಳ್ಳರನ್ನು ಹಿಡಿಯಲು ನಮಗೆ ತಿಳಿದಿದ್ದ ಬಲ್ಲ ಮಾರ್ಗಗಳಲ್ಲಿ ಪ್ರಯತ್ನಿಸಿದರೂ ಯಶಸ್ಸು ಸಿಕ್ಕಿರಲಿಲ್ಲ. ಒಂದು ದಿನ ಸಿಬ್ಬಂದಿಯೊಂದಿಗೆ ಸಮಾಲೋಚಿಸಿದೆ. ಒಬ್ಬರು ಮಹಿಳಾ ಪೊಲೀಸರನ್ನು ‘ಡಿಕಾಯ್‌’ (ಪುಂಡರನ್ನು ಬಲೆಗೆ ಬೀಳಿಸಲು ಬಳಸುವ ವ್ಯಕ್ತಿ) ಆಗಿ ಕಳುಹಿಸಿದರೆ ಕಳ್ಳರನ್ನು ಸುಲಭವಾಗಿ ಹಿಡಿಯಬಹುದು ಎನ್ನುವ ಸಲಹೆ ಒಬ್ಬರಿಂದ ಬಂತು. ‘ಡಿಕಾಯ್‌’ ಬಳಸಿ ಅಪರಾಧಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಹೊಸದೇನಲ್ಲ. ಅದೂ ಒಂದು ಪದ್ಧತಿ. ನನಗೂ ಸಲಹೆ ಹಿಡಿಸಿತು.

ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಪೊಲೀಸ್‌ ರಾಜಮ್ಮ (ಹೆಸರು ಬದಲಿಸಲಾಗಿದೆ) ಅವರನ್ನು ಈ ಕೆಲಸಕ್ಕೆ ಸಜ್ಜುಗೊಳಿಸಲಾಯಿತು. ಕೆಲವು ದಿನ ಅವರನ್ನು ಸಮವಸ್ತ್ರ ಬಿಟ್ಟು, ಮಾಮೂಲಿಯಾಗಿ ಮಹಿಳೆಯರು ಧರಿಸುವಂಥ ಬಟ್ಟೆ ಹಾಕಿಕೊಂಡು ಒಂಟಿಯಾಗಿ ರಸ್ತೆಯಲ್ಲಿ ಓಡಾಡುವಂತೆ ಕಳುಹಿಸಲಾಯಿತು.

ಅದರಂತೆಯೇ ಆ ಮಹಿಳಾ ಪೊಲೀಸ್‌ ನಿರ್ಜನ ಪ್ರದೇಶದಲ್ಲಿ ಸ್ವಲ್ಪ ಹೊತ್ತು ಬೇಕಂತಲೇ ನಿಲ್ಲುವುದು, ತರಕಾರಿ ತೆಗೆದುಕೊಂಡು ಹೋಗುವಂತೆ ನಟಿಸುವುದನ್ನು ಮುಂದುವರಿಸಿದರು. ಅವರಿಗೆ ಬೆಂಬಲವಾಗಿ ಸ್ವಲ್ಪ ದೂರದಲ್ಲಿ ಇಬ್ಬರು ಪೊಲೀಸರು ಮೋಟಾರ್‌ ಬೈಕಿನಲ್ಲಿ ಹಿಂಬಾಲಿಸುವ ವ್ಯವಸ್ಥೆ ಮಾಡಲಾಗಿತ್ತು.

ಎರಡು ದಿನ ಕಳೆಯಿತು. ಡಿಕಾಯ್‌ ಮಾರ್ಗದಲ್ಲಿ ಕಳ್ಳರನ್ನು ಹಿಡಿಯುವ ಪ್ರಯತ್ನ ಫಲ ನೀಡಲಿಲ್ಲ. ಮೂರನೇ ದಿನ ರಾಜಮ್ಮ ನನ್ನ ಚೇಂಬರಿಗೆ ಬಂದರು. ಅವರು ಸಮವಸ್ತ್ರದಲ್ಲಿದ್ದರು. ನನ್ನ ಕೋಣೆಯ ಬಾಗಿಲನ್ನು ಒಳಗಡೆಯಿಂದ ಭದ್ರಪಡಿಸಿದರು. ನನಗ್ಯಾಕೋ ಗಾಬರಿಯಾಯಿತು. ‘ಏಕಮ್ಮ ಈ ದಿನ ಡಿಕಾಯ್‌ ಡ್ಯೂಟಿಗೆ ಹೋಗಲಿಲ್ಲವಾ? ಯೂನಿಫಾರಂನಲ್ಲಿ ಇದ್ದೀಯಾ, ಏಕೆ’ ಎಂದು ಪ್ರಶ್ನಿಸಿದೆ. ಅವರು ಎರಡೂ ಕೈಗಳನ್ನು ಜೋಡಿಸಿ ಕೈಮುಗಿಯುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ‘ಏಕಮ್ಮ ಏನಾಯ್ತು’ ಎಂದೆ.

‘ಸಾರ್‌, ನನಗೆ ಗಂಡನಿದ್ದಾನೆ, ಎರಡು ಮಕ್ಕಳಿವೆ. ನಾವು ಮರ್‍ಯಾದೆಯಿಂದ ಬದುಕುತ್ತಿದ್ದೇವೆ; ನನ್ನನ್ನು ಈ ಡಿಕಾಯ್‌ ಡ್ಯೂಟಿಗೆ ಕಳಿಸಬೇಡಿ ಸಾರ್‌; ನಾನು ರಸ್ತೆಯಲ್ಲಿ ಒಂಟಿಯಾಗಿ ಹೋಗುತ್ತಿದ್ದರೆ ಅಥವಾ ಒಂದು ಕಡೆ ನಿಂತಿದ್ದರೆ ದಾರಿಯಲ್ಲಿ ನಡೆದು ಹೋಗುತ್ತಿದ್ದವರು, ಮೋಟಾರು ಸೈಕಲ್‌, ಕಾರುಗಳಲ್ಲಿ ಹೋಗುತ್ತಿದ್ದ ಯುವಕರು ಮುದುಕರಾದಿಯಾಗಿ ಎಲ್ಲರೂ ನನ್ನನ್ನು ಕಾಮುಕ ದೃಷ್ಟಿಯಿಂದಲೇ ಕಿತ್ತು ತಿನ್ನುವಂತೆ ನೋಡುತ್ತಿದ್ದರು.

ಕೆಲವರಂತೂ ಹತ್ತಿರಕ್ಕೆ ಬಂದು ‘ಬರ್‍ತೀಯಾ? ರೇಟ್‌ ಎಷ್ಟು?’ ಎಂದೆಲ್ಲ ಕೇಳುತ್ತಿದ್ದರು. ನನ್ನ ಉದ್ದೇಶ ಬೇರೆ ಇದ್ದುದರಿಂದ ಇದನ್ನೆಲ್ಲ ಸಹಿಸಿಕೊಂಡು ಸುಮ್ಮನಿರಬೇಕಾಗಿತ್ತು. ಆಗ ನನಗಾಗುತ್ತಿದ್ದ ಮುಜುಗರ, ಅವಮಾನ ಹೇಳುವುದಕ್ಕಾಗುವುದಿಲ್ಲ ಸಾರ್‌’ ಎಂದು ಅಧೀರತೆಯಿಂದ ಅಂಗಲಾಚುತ್ತಾ ಹೇಳಿದರು.

ನನಗ್ಯಾಕೋ ಅವರನ್ನು ಡಿಕಾಯ್‌ ಡ್ಯೂಟಿಗೆ ಕಳುಹಿಸಿ ತಪ್ಪು ಮಾಡಿದೆನೇನೋ ಎಂದನಿಸಿತು. ಅವರನ್ನು ಕುಳ್ಳಿರಿಸಿ ಸಮಾಧಾನಪಡಿಸಿ, ಮುಂದೆ ಇಂಥ ಡ್ಯೂಟಿಗೆ ಕಳುಹಿಸುವುದಿಲ್ಲವೆಂದು ಭರವಸೆ ನೀಡಿ ಕಳುಹಿಸಿದೆ.

ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕಠಿಣ ತರಬೇತಿ ಪಡೆದ ಒಬ್ಬ ಮಹಿಳಾ ಪೊಲೀಸಳ ಪರಿಸ್ಥಿತಿಯೇ ಹೀಗಾದಾಗ ಇನ್ನು ಸಾಮಾನ್ಯ ಮಹಿಳೆಯರಿಗೆ ದಿನನಿತ್ಯ ಬೀದಿಯಲ್ಲಿ ಒಂಟಿಯಾಗಿ ನಿಲ್ಲುವಾಗ, ಓಡಾಡುವಾಗ ಆಗುತ್ತಿರುವ ಆಘಾತವೆಷ್ಟು? ಮಾನಸಿಕವಾಗಿ ಅವರು ಅನುಭವಿಸುತ್ತಿರುವ ನೋವೆಷ್ಟು? ಅವರು ಯಾರ ಬಳಿ ಇದನ್ನೆಲ್ಲ ಹೇಳಿಕೊಳ್ಳುತ್ತಾರೆ? ಇದು ನನ್ನನ್ನು ಅತ್ಯಂತ ತೀವ್ರವಾಗಿ ಕಾಡಿದ ಘಟನೆ.

ಈ ಘಟನೆ ನಡೆದು ಒಂದು ದಶಕ ಮೀರಿದೆ. ಬೆಂಗಳೂರು ನಗರ ಈ ಮಧ್ಯೆ ಬಹಳಷ್ಟು ಬೆಳೆದಿದೆ. ನಗರೀಕರಣವಾದಂತೆ ನಾಗರಿಕತೆಯೂ ಬೆಳೆಯಬೇಕಲ್ಲವೇ? ಮಹಿಳೆಯರ ಮೇಲಿನ ದೌರ್ಜನ್ಯಗಳು ಕೇವಲ ಕಾಮುಕ ದೃಷ್ಟಿ ಮತ್ತು ಕಾಮೋತ್ತೇಜಕ ಮಾತುಗಳಿಗೆ ಸೀಮಿತವಾಗಿದ್ದುದು, ಸಾರ್ವಜನಿಕವಾಗಿ ತಬ್ಬಿ ಮುದ್ದಾಡಿ ದೈಹಿಕವಾಗಿ ಗಾಸಿಗೊಳಿಸುವಷ್ಟರಮಟ್ಟಿಗೆ ಬದಲಾಗಿರುವುದು ಶೋಚನೀಯ.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಅನೇಕ ಕಾನೂನುಗಳನ್ನು ಹೊಸದಾಗಿ ತರಲಾಗಿದೆ. ಇವುಗಳ ಪ್ರಚಾರ ಮತ್ತು ಅನುಷ್ಠಾನ ಪರಿಣಾಮಕಾರಿಯಾಗಿ ಆಗಬೇಕು. ಆಗ ಮಾತ್ರ ಇಂಥ ಪ್ರಸಂಗಗಳು ಮರುಕಳಿಸದಂತೆ ತಡೆಯಲು ಸಾಧ್ಯ. ಜತೆಗೆ ಜನರ ಮನೋಭಾವದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು.
–ಲೇಖಕ ನಿವೃತ್ತ ಎಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT