ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರುಪಾಲಾದ ನೋಟು ಮತ್ತು ಅವಳ ದೂರಿ ಪದ

ಬಡವರಿಗೂ ಹಣ ಇಡಲು ಗುಡಿಸಲಲ್ಲಿ ಎಡೆಯಿಲ್ಲ, ಅತ್ತ ಭ್ರಷ್ಟರಿಗೂ ಹಣ ಬಚ್ಚಿಡಲು ಸರಿಯಾದ ಜಾಗವಿಲ್ಲ
Last Updated 13 ಜನವರಿ 2017, 19:30 IST
ಅಕ್ಷರ ಗಾತ್ರ

ಸವದತ್ತಿಯ ಜೋಗುಳ ಬಾವಿಯ ಕಡೆಗೆ ಐಷಾರಾಮಿ ಕಾರಿನಲ್ಲಿ ಒಂದು ಶ್ರೀಮಂತ ಕುಟುಂಬವು ಬಂದಿತು. ಮುಂಬೈ ಕಡೆಯ ಮಧ್ಯವಯಸ್ಕ ಶ್ರೀಮಂತನು ದೈವಸಾನ್ನಿಧ್ಯಕ್ಕೆ ಬರುವ ನಿಮಿತ್ತವಾಗಿಯೇ ಮೈಯೆಲ್ಲ ರೇಷ್ಮೆ ವಸ್ತ್ರದಲ್ಲಿದ್ದನು. ಇದರೊಂದಿಗೆ ಕತ್ತಿನಚೈನು, ಕೈಯ್ಯ ಚಿನ್ನದ ಕಡಗ, ಬೆರಳ ಉಂಗುರ. ಚೌಡಿಕೆ ಬಾರಿಸುತ್ತ ಬಂದ ಜೋಗತಿ, ಕಾರಿಂದ ಇಳಿದ ಕುಟುಂಬವು ಬಲವಂತರೆಂಬುದನ್ನು ಗ್ರಹಿಸಿ ಹತ್ತಿರವಾಗಿ ಕಾಸು ಕೇಳಿದಳು. ಹತ್ತು ರೂಪಾಯಿ ಸಂದಾಯವಾಯಿತು.


ಆಮೇಲಿಂದ ಜೋಗತಿಯು ‘ನಿನ್ನ ಜೇಬಿನಲ್ಲಿರುವ ನೋಟುಗಳಲ್ಲಿ ಒಂದು ದೊಡ್ಡ ನೋಟು ಕೊಡು. ಅದಕ್ಕೆ ಭಂಡಾರ ಹಚ್ಚಿ ಅಮ್ಮನ ಹೆಸರು ಹೇಳಿ ಮಂತ್ರಿಸಿಕೊಡುತ್ತೇನೆ. ಆಗ ನೋಡು ಜೇಬಿನೊಳಗೆ ತುಂಬಿರುವ ನೋಟಿನಂತೆಯೇ ನಿನ್ನ ತಿಜೋರಿಯಲ್ಲಿಯೂ ಜಾಗವಿಲ್ಲದೆ ಹಣ ಭರ್ತಿಯಾಗದಿದ್ದರೆ ಕೇಳು. ಅಮ್ಮನ ಮಹಿಮೆ ಅಂದರೆ ಏನಂದುಕೊಂಡಿರುವೆ.

ನೀನು ವರ್ಷಕ್ಕೊಮ್ಮೆ ಬರುವವ. ನಾನು ಇಲ್ಲಿಯೇ ಅವ್ವನ ಧ್ಯಾನ ಮಾಡಿಕೊಂಡು ತಿರುಗುವವಳೋ ತಮ್ಮಾ’ ಎಂದು ದನಿಯೇರಿಸಿ ಮಾತಾಡಿದಳು. ಶ್ರೀಮಂತನ ಮುಖದಲ್ಲಿ ಕೊಂಚ ಅಪರಾಧಿ ಭಾವವೂ, ಆಮೇಲೆ ನೋಟು ದ್ವಿಗುಣ, ತ್ರಿಗುಣವಾಗುವ ಕಾರಣಕ್ಕೆ ಆಶಾಭಾವವೂ ಮೂಡಿ ಆನಂತರ ಪ್ರಸನ್ನ ವದನಕ್ಕೆ ತಿರುಗಿ ಅದೇ ಜೇಬಿಂದ ದೊಡ್ಡ ನೋಟೊಂದನ್ನು ಕೊಟ್ಟ.

ಚೌಡಿಕೆ ಬಾರಿಸುತ್ತಿದ್ದವಳ ಬಳಿಯೇ ಇದ್ದ ಇನ್ನೊಬ್ಬ ಜೋಗತಿ ಆ ನೋಟು ಈಸಿಕೊಂಡು ಮಂತ್ರ ಹೇಳುವವಳಂತೆ ಕೈಯಲ್ಲಿರಿಸಿ ಮುದುರತೊಡಗಿದಳು. ಇತ್ತ ಚೌಡಿಕೆ ಹಿಡಿದ ಜೋಗತಿ ಪರಶುರಾಮನ, ಜಮದಗ್ನಿಯ ಅಟಾಟೋಪವೆಂಬಂತೆ ಪದ ಹೇಳುತ್ತಿದ್ದಳು. ನೋಟಿಗೆ ಭಂಡಾರ ಹಚ್ಚಿ ಮಂತ್ರವೋ, ಮಾತೋ, ಬರಿದೆ ಗೊಣಗಾಟವೋ ನೋಡ ನೋಡುತ್ತಲೇ ಜೋಗತಿ ಕೈಯ್ಯ ನೋಟನ್ನು ಇನ್ನಷ್ಟು ಮುದುರಿ ಜೋಗುಳದ ಬಾವಿಯ ಸನಿಹವೇ ಇದ್ದ ರೇಣುಕಾ ಸರೋವರಕ್ಕೆ ಎಸೆದುಬಿಟ್ಟಳು. ಶ್ರೀಮಂತನು ಅವಾಕ್ಕಾಗಿ ನಿಂತುಬಿಟ್ಟ.

ಅವನ ಸುತ್ತ ನಿಂತ ಕುಟುಂಬದ ಸದಸ್ಯರೂ ‘ಎಲಾ ಈ ಗತಿಗೆಟ್ಟ ಭಿಕ್ಷುಕಿಯ ದುರಹಂಕಾರವೇ’ ಎಂಬ ಸಿಟ್ಟಿನಲ್ಲಿ ಗಡುಸಾದರು. ದೃಢಮುಖದ, ಇನ್ನೂ ದಪ್ಪದನಿಯ ಜೋಗತಿ ‘ತಮ್ಮಾ, ದುಡ್ಡಿನ ಧಣಿಯೇ ನನಗೂ, ನಿನಗೂ ಕಷ್ಟಕೊಟ್ಟದ್ದು ಇದೇ ನೋಟು. ನನ್ನ ನಿತ್ಯವೂ ಹಸಿವಿನಲ್ಲಿಡುವ ಈ ಕಾಸು, ನಿನಗೆ ನಿತ್ಯವೂ ಹೊಟ್ಟೆ ತುಂಬಿಸಿ ಕೆಡುವಂತೆ ಮಾಡುತ್ತದೆ ನೋಡು, ಅದರಿಂದ ಗಂಗಾದೇವತೆಗೆ ಸಲ್ಲಿಸಿಬಿಟ್ಟೆ, ನಿನಗೆ ಅಮ್ಮ ಒಳ್ಳೇದು ಮಾಡುವಳು, ಜೋಗುಳ ಬಾವಿಯ ನೀರನ್ನು ತಲೆಗೆ ಸುರಿದುಕೊಂಡು ಅಮ್ಮನ ದರ್ಶನಕ್ಕೆ ನಡೆಯುವವನಾಗು’ ಎಂದುಬಿಟ್ಟಳು.

ಈ ದೃಶ್ಯದ ಹಿಂಚು ಮುಂಚೆಯೇ ದೇಶದಾದ್ಯಂತ ನೋಟುಗಳ ರದ್ದತಿ ಜರುಗಿಹೋಯಿತು. ಕಾಸು ಇಲ್ಲದವರ ಬವಣೆ ಒಂದು ಬಗೆಯಲ್ಲಿ ಹೈರಾಣಾದರೆ, ಉಳ್ಳವರ ಚಿಂತೆ ಬೇರೆ ಬಗೆಯದಾಯಿತು. ಕಪ್ಪು ಕಪ್ಪಾದ ಕಾಸಿಗೆ ಬಿಳಿಯ ಬಣ್ಣ ಹಚ್ಚುವ ಕಷ್ಟ ಎರಗಿತು. ಆಮೇಲಾಮೇಲೆ ರೈಲು, ಬಸ್ಸು, ಕಾರಿನಲ್ಲಿ ಓಡಾಡುವ ಜನ ಅಲ್ಲಲ್ಲೇ ಕುಂತರು. ಐಷಾರಾಮಿ ಹೋಟೆಲಲ್ಲೂ ಜನವಿಲ್ಲ, ಗುಡಿಸಲು ಹೋಟೆಲ್‌ ಮುಂದೂ ಬಡವರಿಲ್ಲ.

ಬೆಳಿಗ್ಗೆ ಹೊತ್ತು ಮೂಡುವ ಮೊದಲೇ ಚಳಿಯ ಕಾರಣ ತಲೆಗೆ ಟವೆಲ್ಲು ಸುತ್ತಿ ಅದೇ ಪಂಚೆ, ಅಂಗಿಯಲ್ಲಿ ಚಾಮರಾಜನಗರ ಸುತ್ತಿನ ಬದನಗುಪ್ಪೆ, ಕೊಣನೂರು, ಕವಲಂದೆ, ನರಸಾಂಬುಧಿ, ಪಣ್ಯದಹುಂಡಿ ಮುಂತಾಗಿ ಹತ್ತಾರು ಗ್ರಾಮಗಳ ಕಡೆಯಿಂದ ಪ್ಯಾಸೆಂಜರ್ ರೈಲು ಹತ್ತಿ, ಮೈಸೂರಿನ ಸರ್ಕಲುಗಳಲ್ಲಿ ಮೇಸ್ತ್ರಿ, ಕಂಟ್ರಾಕ್ಟರುಗಳಿಗಾಗಿ ದಾರಿಕಾಯ್ದು, ಸುಸ್ತಾಗಿ ಅದೇ ಹನ್ನೊಂದು ಗಂಟೆಯ ರೈಲಿಗೆ ಅಶೋಕಪುರಂ ಸ್ಟೇಷನ್ನಿಗೆ ವಾಪಸಾಗಿ ತಿರುಪತಿಯಿಂದ ಬರುವ ರೈಲಿಗೆ ಕಾಯುತ್ತ ಕೂರುವುದಿದೆ.

ಕೇಳಿದರೆ ‘ಕಾಸಿನ ವಹಿವಾಟು ನಿಂತಿದ್ದರಿಂದ ಈ ಒಂದೂವರೆ ತಿಂಗಳಿಂದ ಕೂಲಿ ಹುಟ್ಟುತ್ತಿಲ್ಲ, ಖಾಲಿ ಕೈಲಿ ವಾಪಸಾಗಿ ಹಟ್ಟಿಯಲ್ಲಿ ಹೆಂಡತಿಯರಿಂದ ಬೈಗುಳ ಉಣ್ಣಬೇಕು. ಅವರಿಗೂ ಕೂಲಿ ಸಿಗುವುದಿಲ್ಲ, ದಿನಕ್ಕೆ ಚಾಮರಾಜನಗರ ಸುತ್ತಿನಿಂದ ಇತ್ತ ಬರುವವರ ಲೆಕ್ಕ ಸರಿಸುಮಾರು ಐದು ಸಾವಿರ’ ಎಂದರು.

ರಾಜಕಾರಣಿಗಳ, ಅಧಿಕಾರಿಗಳ, ಉಳ್ಳವರ ಮನೋಭಾವ ಬದಲಾಗುವವರೆಗೂ ಈ ದೇಶದಲ್ಲಿ ಏನಾದರೂ ಬದಲಾವಣೆ ಸಾಧ್ಯವೇ? ಸತ್ಯವನ್ನು ಬದುಕಲಾಗದ, ನುಡಿಯಲಾಗದ ದುರ್ಬರ ಸ್ಥಿತಿಯಲ್ಲಿರುವ ನಮಗೆ ಪ್ರಾಮಾಣಿಕತೆಯೆಂಬುದು ಜೀವವಿಲ್ಲದ ಭಾರಿ ಬಂಡೆಯಂತೆ ಕಾಣುತ್ತದೆ. ‘ಕಾಳಸಂತೆಕೋರರು ಖತಂ’ ಎಂದು ನೀರು ಪಾಲಾದ ನೋಟುಗಳ ಸುದ್ದಿಯನ್ನೇನೋ ಟಿ.ವಿ. ಚಾನೆಲ್‌ಗಳು ನಿರಂತರವಾಗಿ ಬಿತ್ತರಿಸಿದವು.

ಆದರೆ ಆ ಬಗೆಯ ಭ್ರಷ್ಟರಿಂದಲೇ ನಮ್ಮ ನಿತ್ಯರಾಜಕಾರಣ ಸಮಾರಂಭ, ವಿಜೃಂಭಣೆಯ ಗೃಹಕಾರ್ಯಗಳು ನಡೆಯುತ್ತಿರುವುದು! ಅದರ ಯಜ್ಞಕ್ಕೆ ನೋಟಿನ ಕಂತೆ ಸುರಿಯದಿದ್ದರೆ ಹೋತೃವಿಗೆ ಮುಂದೆ ರಾಜಕಾರಣದ ಗತಿಯುಂಟೆ? ದುಡ್ಡು, ಕಾಸು ತೋರಿಸದಿದ್ದರೆ ಯಜ್ಞದರ್ಶನಕ್ಕೆ ಜನ ಬರುವುದಿಲ್ಲ.

ಬಡವರಿಗೆ ದಾಸೋಹದ ವ್ಯವಸ್ಥೆ ಆಗಬೇಕು. ಅನ್ನಸಂತರ್ಪಣೆಯಲ್ಲಿ ಸಿಹಿ ಇದ್ದರೆ ಒಳ್ಳೆಯದು. ಆದರೆ ಅದನ್ನು ಒದಗಿಸಿ ನಿಭಾಯಿಸುವುದು ಕಷ್ಟ. ಕಾಸನ್ನೂ, ಸಿಹಿಯನ್ನೂ ತೋರಿಸಿಯೂ ಕಾರ್ಯಕರ್ತರು ಹೇಳುವುದೆಂದರೆ: ‘ಈ ಹಳ್ಳಿ ಜನಾನ ನಂಬುವುದು ಕಷ್ಟ, ಒಂದೊಂದು ಮನೆಯಲ್ಲೇ ಪಾರ್ಟಿ ಜಗಳದ ಮೇಲೆ ವೋಟುಗಳು ಡಿವೈಡಾಗಿ ಬಿಟ್ಟಿರುತ್ತವೆ’. ಅದರಿಂದಲೇ ನೀರು ಪಾಲಾದ ನೋಟಿನ ಬದಲಾವಣೆಗೆ ಬಿಳಿಯ ಬಣ್ಣ ಬಳಿಯುವ ನಿಮಿತ್ತ, ಅಲ್ಲಿಯೂ ಕೋಟಿಗಟ್ಟಲೆ ವಹಿವಾಟು ನಡೆದು ಹೋಯಿತು.

ಶ್ರೀಸಾಮಾನ್ಯರ ತಲೆಕಾಯುವ, ದೊಡ್ಡಪದವಿಯ ಪ್ರಜ್ಞಾವಂತ ಅಧಿಕಾರಿಗಳು ಯಾಕೆ ಲಂಚಕೋರರಾಗುತ್ತಾರೆಂಬುದು ಲೋಕ ಅರಿಯದ ಸಂಗತಿಯೇನಲ್ಲ. ಅವರ ತಲೆಯ ಮೇಲೆ ಕೂತಿರುವವರು ರಾಜಕಾರಣಿಗಳು. ಈ ಬಗೆಯ ಸಾಮೂಹಿಕ ಲೂಟಿಗೆ ಶಿಕ್ಷೆಯಾಗುತ್ತದೋ, ಇಲ್ಲ ಅದು ನಿಧಾನಗತಿಯಲ್ಲಿ ತೆರೆಮರೆಗೆ ಜರುಗಿಬಿಡುತ್ತದೋ, ಕಡೆಗೆ ಯಾವ ದಾಖಲೆಯೂ ದೊರೆಯದಂತಾಗಿ ಭ್ರಷ್ಟರು ಮುಂದೊಂದು ದಿನ ಎರಡು ಬೆರಳಾಡಿಸಿಕೊಂಡು ಕೋರ್ಟಿನ ಕಟಕಟೆಯಿಂದ ಹೊರಬಂದು ಐಷಾರಾಮಿ ಕಾರಿನ ಕಿಟಕಿಯಿಂದ ಕೇಕೆ, ಸಿಳ್ಳೆ, ಪಟಾಕಿ ಹಚ್ಚುವ ಸೈನಿಕರತ್ತ ಕೈಬೀಸಿ ಮುಗುಳ್ನಗುತ್ತಾ ಜಾರುತ್ತಾರೋ; ಇದು ಕಾಲವೇ ಬಲ್ಲ ಸತ್ಯಸಂಗತಿ. ಅಲ್ಲದೆ ಇದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿಂತ ನ್ಯಾಯದೇವತೆಯ ಕೈಯ್ಯ ತಕ್ಕಡಿಯ ಏರುಪೇರು ಕೂಡ.

ಗತ ಇತಿಹಾಸದ ಸಂದರ್ಭಕ್ಕೂ, ಈ ಹೊತ್ತಿನ ಕೋಟಿಲೂಟಿಗೂ ಇರುವ ಸಣ್ಣ ವ್ಯತ್ಯಾಸವನ್ನು ಗಮನಿಸಬೇಕು. ರಾಜ, ಮಹಾರಾಜರು ತಂತಮ್ಮ ಅರಮನೆಯ ಭಂಡಾರಭರ್ತಿಗೆ, ವೈಭವದ ವಹಿವಾಟಿಗೆ, ಸೈನಿಕರ ಹೊಟ್ಟೆ ತುಂಬಿಸಲಿಕ್ಕೆ ಗ್ರಾಮಸ್ಥ ರೈತಾಪಿಗಳನ್ನು ಬೆದರಿಸಿ ಲೂಟಿಗೈಯ್ಯುತ್ತಿದ್ದರು. ಒಂದು ವೇಳೆ ಪ್ರತಿಭಟಿಸಿದರೆಂದರೆ ಮುಗಿಯಿತು.

ಹದಿನೈದನೇ ಶತಮಾನದ ಪ್ರವಾಸಿಯೊಬ್ಬ ತಾನು ದಾರಿಯಲ್ಲಿ ಬರುವಾಗ ಭಯಂಕರ ದುರ್ವಾಸನೆ ಬಡಿಯಿತು. ಮೂಗು ಮುಚ್ಚಿಕೊಂಡು ಎಷ್ಟು ದೂರ ಓಡಿದರೂ ದುರ್ನಾತ ತಗ್ಗಲಿಲ್ಲ. ‘ಎಲಾ ಭಾರತವೇ ಹೀಗೋ’ ಎಂದುಕೊಳ್ಳುವಂತಾಯಿತು. ಹಾಗೆ ಓಡುತ್ತಾ ಮುಂದಿನ ಗ್ರಾಮಕ್ಕೆ ಬಂದು ವಿಚಾರಿಸಲಾಗಿ, ಅವರು ಕಂದಾಯ ಕಟ್ಟದೇ ಹೋದದ್ದಕ್ಕಾಗಿ ಸೀಮೆಯ ರಾಜನು ರೈತರ ಶಿರಚ್ಛೇದನ ಮಾಡಿಸಿ ರುಂಡಮುಂಡಗಳನ್ನು ಊರಾಚೆ ಹಾಕಿಸಿದ್ದಾನೆಂದರಂತೆ.

ಆಗ ಅರಸೊತ್ತಿಗೆಯ ಲೂಟಿ ಗ್ರಾಮದ ಕಡೆಯಿಂದ ಆದರೆ, ಈಗ ಸಾಮಾನ್ಯರ ಕಡೆಗೆ ಸಲ್ಲುವ ನಾನಾ ಅನುದಾನವೆಂಬ ಬೆಲ್ಲದ ಪಿಂಡಿಯು ಘನಸರ್ಕಾರದಿಂದ ಶ್ರೀಸಾಮಾನ್ಯರತ್ತ ಸಲ್ಲುವ ದಾರಿಯಲ್ಲಿಯೇ ಅಧಿಕಾರಸ್ಥರು ಎಷ್ಟು ಸಾಧ್ಯವೋ ಅಷ್ಟು ನೆಕ್ಕಿಬಿಡುವ ಪರಿಪಾಠವೊಂದು ವ್ಯಾಪಕವಾಗಿ ಹಬ್ಬಿಬಿಟ್ಟಿದೆ. ವಾಚಕರಿಗೆ ಈ ಹಗಲು ಸತ್ಯಸಂಗತಿಯನ್ನು ವಿಸ್ತರಿಸಿ ಹೇಳಬೇಕಾದ ಅಗತ್ಯವಿಲ್ಲ.

ತಿರುಪತಿ ತಿಮ್ಮಪ್ಪನ ಮೇಲೆ ಯಾವುದಾದರೂ ಪದ ಬರುವುದೇ ಎಂದು ಹನುಮಜ್ಜಿಯನ್ನು ಕೇಳಿದರೆ ಅವಳು ದನಿಯೆತ್ತಿ ‘ಆಲಗಿರಿ, ಲೋಲಗಿರಿ, ಮೇಲುಗಿರಿಯವನೇ ತಿರುಪತಿ ವೆಂಕಟಾರಮಣನೆ, ನಮ್ಮ ಸಂಕಟವಾ ಪರಿಹರಿಸೊ’ ಎಂದು ಹಾಡಿದಳು. ಆದರೆ ಒಂದು ಕಾಲಕ್ಕೆ ಜನಪದರ ಮತ್ತು ಬುಡಕಟ್ಟು ದೇವತೆಯಾಗಿದ್ದ ತಿರುಪತಿ ತಿಮ್ಮಪ್ಪನಂಥವರು, ಲೋಕದ ದೊರೆಗಳ ಮರ್ಜಿಗೆ ಸಿಕ್ಕಿಕೊಂಡು ಪಾಲು ಪಡೆಯುತ್ತ ಅವರಿಗೆ ಬೇಗ ಬೇಗ ದರ್ಶನ ನೀಡುತ್ತಲಿದ್ದಾರೆ.

ತಿರುಮಲ ದೇವಾಲಯದ ದಕ್ಷಿಣ ಭಾಗದ ಐದು ಇಲ್ಲವೇ ಆರನೆಯ ತೊಟ್ಟಿಯ ಕಡೆ ನಿಂತು ದೇವರ ದರ್ಶನ ಎಷ್ಟೊತ್ತಿಗೆ ಎಂದರೆ ‘ಮಂತ್ರಿಗಳು ಬರುವವರಿದ್ದಾರೆ, ಅವರು ಬಂದು ಹೋಗುವವರೆಗೂ ತೊಟ್ಟಿಯಲ್ಲಿ ಕೂಡಿಹಾಕಿದವರಿಗೆ ದರ್ಶನವಿಲ್ಲ. ನೀವು ಈ ಆರನೆಯ ತೊಟ್ಟಿಯಲ್ಲಿ ಕೂತರೆ ರಾತ್ರಿ ಹತ್ತರ ಹೊತ್ತಿಗೆ ದರ್ಶನ ಸಿಗಬಹುದು’ ಎನ್ನುತ್ತಾರೆ. ಅಲ್ಲಿಗೆ ಒಂದರಿಂದ ಐದನೆಯ ತೊಟ್ಟಿಯವರೆಗೆ ಕೂಡಿಹಾಕಿದ ಹೆಂಗಸರು, ಮಕ್ಕಳು, ಮುದುಕರ ಗತಿಯನ್ನು ಆ ವೈಕುಂಠವಾಸಿಯೇ ಬಲ್ಲ.

ಸಾವಿರಾರು ರೂಪಾಯಿ ಕೊಟ್ಟು ಕಲ್ಯಾಣೋತ್ಸವ ಮಾಡಿಸಿದರೆ, ಕುಟುಂಬದ ಎಲ್ಲರೂ ಕೂತು ದೇವರ ವೈವಾಹಿಕ ವಿಜೃಂಭಣೆಯನ್ನು ಮುಂಜಾನೆಯ ನಸುಕಿನಲ್ಲಿಯೇ ಕಣ್ಣಿಗೆ ತುಂಬಿಕೊಳ್ಳಬಹುದು. ಜನಪದರ ಬುಡಕಟ್ಟು ದೇವತೆಗಳು ಈಗ ಅವರಿಗೆ ಸುಲಭದಲ್ಲಿ ನಿಲುಕುವಂಥವಾಗಿ ಉಳಿದಿಲ್ಲ. ಕಾಳಸಂತೆಯ ಹಣ ದೈವಗಳ ಕಿರೀಟಗಳಾಗಿವೆ, ವಜ್ರಖಚಿತ ಹಸ್ತಗಳಾಗಿವೆ. ಬಡವರ ಮೌಢ್ಯಕ್ಕೆ ಇದು ಅರಿವಾಗುವ ಸಂಗತಿಯಲ್ಲ.

ಕಾಲಾನುಕಾಲದಿಂದ ಜನಪದರು ದೈವಗಳನ್ನು ತಮ್ಮಂತೆಯೇ ಸರಳ ಎಂದು ತಿಳಿದು ಅವನ್ನು ಯಾವತ್ತೂ ಹಾಗೆಯೇ ನೋಡಬಯಸುತ್ತಾರೆ, ಹಾಡಬಯಸುತ್ತಾರೆ, ಕುಣಿಯಬಯಸುತ್ತಾರೆ. ಆದರೆ ಈ ಹೊತ್ತು ಸಂತರು, ದೈವಗಳು ಮತ್ತು ಭಕ್ತಿಯ ರೂಪವೂ ರಾಜಕಾರಣಕ್ಕೆ ಹೇಗೆ ಬಳಕೆಯಾಗುತ್ತಿದೆಯೆಂಬುದೂ ಕೂಡ ಪ್ರತ್ಯೇಕ ಕಥನ.

ಸರಳತೆಯ ಘನತೆ, ಒಂದಿಷ್ಟಾದರೂ ಸರಿಯಾದ ಶಿಕ್ಷಣದ ಸಾಮಾನ್ಯಜ್ಞಾನ, ಲೋಕಸೇವೆಯ ಔದಾರ್ಯವಿದ್ದರೆ ಈ ಹೊತ್ತು ಇಷ್ಟೆಲ್ಲ ನಿಯಮಗಳ, ಕಾನೂನುಗಳ ಅಗತ್ಯವಿರಬೇಕಿರಲಿಲ್ಲ. ಇದೆಲ್ಲದರ ಲೋಪವೇ ಅಧಿಕಾರಸ್ಥರನ್ನು, ರಾಜಕಾರಣಿಗಳನ್ನು ದಿಕ್ಕುಗೆಡಿಸಿದೆ. ಅಪರಾಧ ಕೂಪಕ್ಕೆ ತಳ್ಳುತ್ತಿದೆ. ಆದರೆ ಈ ಬಗೆಯ ಕೂಪವೇ ಭ್ರಷ್ಟರ ಹಾಸಿಗೆ, ತಲೆದಿಂಬಾಗಿದೆ. ಜೈಲಿನಲ್ಲಿಯೂ ಕೂಡ!

ಓ.ಎಲ್. ನಾಗಭೂಷಣಸ್ವಾಮಿಯವರು ನೊಬೆಲ್ ಪ್ರಶಸ್ತಿ ವಿಜೇತ ಲೇಖಕ ಐಸಾಕ್ ಬಾಸೆವಿಶ್ ಸಿಂಗರನ ಕಥೆಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಅದರಲ್ಲಿ ‘ಮಗ ಅಮೇರಿಕದಿಂದ’ ಎಂಬ ಕಥೆಯಿದೆ. ವಯಸ್ಸಾದ ತಂದೆ ತಾಯಿ ಗ್ರಾಮವೊಂದರ ಗುಡಿಸಲಲ್ಲಿ ವಾಸಿಸುತ್ತಿದ್ದಾರೆ. ಗುಡಿಸಲ ಸುತ್ತ ಅವರೇ ಮಾಡಿಕೊಂಡ ತೋಟವಿದೆ. ಬೇಕಾದದ್ದನ್ನೆಲ್ಲ ಅಲ್ಲೇ ಬೆಳೆದುಕೊಳ್ಳುತ್ತಾರೆ.

ಇವರಿಗೆ ಹುಟ್ಟಿದ ಮಗ ಓದಿ ಅಮೆರಿಕ ಸೇರಿಬಿಟ್ಟಿರುತ್ತಾನೆ. ಅಲ್ಲಿ ಅಪಾರ ಹಣ ಗಳಿಸಿ ಅದರ ಒಂದಷ್ಟು ಭಾಗವನ್ನು ತಂದೆಯ ವಿಳಾಸಕ್ಕೆ ಕಳುಹಿಸಿರುತ್ತಾನೆ. ಒಮ್ಮೆ ಅಮೆರಿಕದಿಂದ ಬಂದ ಮಗನು, ತಾನು ಅಷ್ಟು ಹಣ ಕಳುಹಿಸಿದರೂ, ಇವರು ಈ ಮುರುಕು ಗುಡಿಸಲಲ್ಲೇ ವಾಸವಾಗಿರುವರಲ್ಲಾ ಎಂಬ ಕಿರಿಕಿರಿಯಿಂದ, ‘ನೀವು ಯಾಕೆ ಇನ್ನೂ ಇಲ್ಲಿಯೇ ಇರುವಿರಲ್ಲಾ’ ಎಂದ. ಮುದಿ ತಂದೆ ‘ನಮಗೇನು ತೊಂದರೆ, ಚೆನ್ನಾಗಿಯೇ ಇದ್ದೇವಲ್ಲ, ನಿದ್ದೆ ಇಲ್ಲಿಯೂ ಬರುತ್ತದಲ್ಲ, ತೋಟದಲ್ಲಿ ಬೇಕಾದುದೆಲ್ಲ ಸಿಗುತ್ತಿದೆಯಲ್ಲ’ ಎಂದು ನಿರುಮ್ಮಳ ಉತ್ತರ ಕೊಡುತ್ತಾನೆ.

ಕಡೆಗೆ ಮಗ ‘ನಾನು ಕಳುಹಿಸಿದ ಹಣ ಏನಾಯಿತು’ ಎಂದರೆ, ತಂದೆ ಅದನ್ನು ಗುಡಿಸಲಲ್ಲಿ ಇಡಲು ಜಾಗವಿಲ್ಲದೆ ವ್ಯವಸಾಯದ ವೇಳೆ ಹಾಕಿಕೊಳ್ಳುವ ಮೊಣಕಾಲುದ್ದದ ಹಳೆಯ ಬೂಟಿನೊಳಗೆ ತುರುಕಿ ಇಟ್ಟಿರುವುದಾಗಿ ಹೇಳುತ್ತಾನೆ. ಬಂಡವಾಳಶಾಹಿ ರಾಷ್ಟ್ರದ ಡೌಲನ್ನು ಇದಕ್ಕಿಂತಲೂ ಚಂದದ ರೂಪಕದಲ್ಲಿ ಹೇಳಲು ಸಾಧ್ಯವಿಲ್ಲ. ಇತ್ತ ನೋಡಿದರೆ ವಯಸ್ಕ ತಾಯಿ, ಅವಳ ಅಜ್ಜಿ ಕಲಿಸಿದ ಯಾವುದೋ ಜನಪದ ನುಡಿಯನ್ನು ಗುನುಗುತ್ತಾ ಸಂತೋಷದಲ್ಲಿ ತಲೆಯಾಡಿಸುತ್ತಾ ಕೂತಿದ್ದಳಂತೆ.

ಜೋಗುಳ ಬಾವಿಯ ಕಡೆ ನೋಟನ್ನು ನೀರಿಗೆ ಎಸೆದ ಜೋಗತಿಯನ್ನು ಸ್ವಲ್ಪ ಹೊತ್ತಿನ ನಂತರ, ಒಂದು ಪದ ಹೇಳೆಂದರೆ, ಮಕ್ಕಳನ್ನೇ ಪಡೆಯದ ಆಕೆ ಮಗು ಮಲಗಿಸುವಾಗಿನ ದೂರಿಪದವೊಂದನ್ನು ಹಾಡಿಕೊಳ್ಳುತ್ತ ಮುಂದಿನ ಭಿಕ್ಷಾಟನೆಯ ದಾರಿ ಹಿಡಿದಳು. ಆ ಜೋಗತಿಗೆ ಶ್ರೀಮಂತ ಕೊಟ್ಟ ನೋಟನ್ನು ನೀರಿಗೆ ಎಸೆಯದೆ ಲಪಟಾಯಿಸುವ ಮನಸ್ಸು ಬರಲಿಲ್ಲವಲ್ಲ! ನಿಜ, ಬಡವರಿಗೂ ಹಣ ಇಡಲು ಗುಡಿಸಲಲ್ಲಿ ಎಡೆಯಿಲ್ಲ, ಅತ್ತ ಭ್ರಷ್ಟರಿಗೂ ಹಣ ಬಚ್ಚಿಡಲು ಸರಿಯಾದ ಜಾಗವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT