ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡವಾಗಿದೆ ಪರಿಸರ

ಏನು ಕಾರಣ? ಹೇಗೆ ನಿಯಂತ್ರಣ?
Last Updated 13 ಜನವರಿ 2017, 19:30 IST
ಅಕ್ಷರ ಗಾತ್ರ

ತುಮಕೂರು: ಇದೊಂದು ದಿಡ್ಡಿ ಬಾಗಿಲಿಲ್ಲದ ನಗರ. ನಗರಕ್ಕೆ ಅಂಟಿಕೊಂಡಿರುವ ಬಲಭಾಗದ ಬೆಟ್ಟಗುಡ್ಡಗಳಲ್ಲಿ ನಡೆಯುತ್ತಿರುವ ಜಲ್ಲಿ ಕ್ರಷರ್‌, ಎಂ- ಸ್ಯಾಂಡ್‌ (ಬಂಡೆ ಕಲ್ಲು ಪುಡಿಮಾಡಿ ತಯಾರಿಸುವ ಕೃತಕ ಮರಳು) ಘಟಕಗಳು, ಫಿಲ್ಟರ್‌ ಮರಳು ಗಣಿಗಾರಿಕೆ ಹಾವಳಿ ತುಮಕೂರು ನಗರದ ಪರಿಸರವನ್ನು ವಿಷಮಕಾರಿ ಸ್ಥಿತಿಗೆ ತಂದು ನಿಲ್ಲಿಸಿವೆ.

ಈ ಚಿಕ್ಕ ನಗರದಲ್ಲಿ ಕೈಗಾರೀಕರಣದ ದಟ್ಟಣೆ ಇಲ್ಲದಿದ್ದರೂ ಪರಿಸರದ ವಿಷಯದಲ್ಲಿ ಇಂಥ ಕೆಟ್ಟ ಸ್ಥಿತಿ ಮುಟ್ಟಲು ಪಾಲಿಕೆ, ಜಿಲ್ಲಾಡಳಿತದ ಕೊಡುಗೆಯೂ ಸಾಕಷ್ಟಿದೆ. ನಗರದ ಒಳಗೆ ಕಾರ್ಯ ನಿರ್ವಹಿಸುತ್ತಿರುವ ಅಕ್ಕಿ ಗಿರಣಿಗಳನ್ನು ಈವರೆಗೂ ಹೊರಹಾಕಲು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ.

‘ಮಂಡಳಿಯ ಅಧ್ಯಕ್ಷರು, ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿ ಪ್ರತ್ಯೇಕವಾಗಿ ಸಭೆ ನಡೆಸಿ ಗೋಗರೆದರೂ ಅಕ್ಕಿ ಗಿರಣಿ ಮಾಲೀಕರು ಜಪ್ಪಯ್ಯ ಅನ್ನುತ್ತಿಲ್ಲ’ ಎಂದು ಮಂಡಳಿಯ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

‘ನಾವು ತಪಾಸಣೆಗೆ ಹೋದಾಗಲೆಲ್ಲ ಯಂತ್ರಗಳು ಸರಿ ಇರುತ್ತವೆ. ವಾಯುಮಾಲಿನ್ಯ ಆಗದಂತೆ ಮಾಡುವ ವೈಜ್ಞಾನಿಕ ಯಂತ್ರಗಳು ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತಾರೆ. ನಾವು ಗಿರಣಿ ಬಿಟ್ಟು ಆಚೆ ಬರುತ್ತಿದ್ದಂತೆ ಡೀಸೆಲ್‌ ಉಳಿಸಲು, ವಿದ್ಯುತ್ ಬಿಲ್ ತಗ್ಗಿಸಲು ಆ ಯಂತ್ರಗಳನ್ನು ನಿಲ್ಲಿಸಿ ಬಿಡುತ್ತಾರೆ. ನಾವು ಏನೂ ಮಾಡಲಾಗುತ್ತಿಲ್ಲ’ ಎಂದು ಹೇಳಿದರು.

ಅಕ್ಕಿ ಗಿರಣಿಗಳಿರುವ ಬಡಾವಣೆಗಳ ಜನರು ಎರಡು–ಮೂರು ವರ್ಷಗಳಿಂದ ಪದೇಪದೇ ಪ್ರತಿಭಟನೆ ಮಾಡಿದರೂ ಬೆಲೆ ಸಿಕ್ಕಿಲ್ಲ. ನಗರದ ಆಸುಪಾಸು 40 ಬೃಹತ್‌ ಕೈಗಾರಿಕೆಗಳಿವೆ. 25ಕ್ಕೂ ಹೆಚ್ಚು ಮಧ್ಯಮ ಕೈಗಾರಿಕೆಗಳಿವೆ. ಪರಿಸರ ಹದಗೆಡಲು ಕೈಗಾರಿಕೆಗಳಿಗಿಂತ ರಸ್ತೆಗಳು, ವಾಹನಗಳ ಕೊಡುಗೆ ಹೆಚ್ಚಿದೆ.

‘ಬೆಂಗಳೂರಿನ ಕಟ್ಟಡ ನಿರ್ಮಾಣಕ್ಕೆ ಜೆಲ್ಲಿ, ಎಂ–ಸ್ಯಾಂಡ್‌, ಸೈಜುಗಲ್ಲು, ಸ್ಲ್ಯಾಬ್‌ಗಳನ್ನು ನಗರದ ಆಸುಪಾಸಿನಿಂದ ತೆರೆದ ರೀತಿಯಲ್ಲಿ ಸಾಗಣೆ ಮಾಡುತ್ತಿರುವುದು ಮಾಲಿನ್ಯಕ್ಕೆ ಕಾರಣ’ ಎನ್ನುತ್ತಾರೆ ಪರಿಸರವಾದಿ ಬಿ.ವಿ.ಗುಂಡಪ್ಪ.

ಇಲ್ಲಿ ಯಾವ ರಸ್ತೆಗಳಿಗೂ ಪಾದಚಾರಿ ಮಾರ್ಗಗಳೇ ಇಲ್ಲ. ರಸ್ತೆಗಳ ಪಕ್ಕ ಮರಗಳಿದ್ದರೆ ದೂಳಿನ ಕಣ ವಾಯು ಪ್ರದೇಶವನ್ನು ಸೇರದಂತೆ ತಡೆಯತ್ತವೆ. ಆದರೆ ಇಲ್ಲಿ ಮರಗಳನ್ನು ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ ಕಡಿದುರುಳಿಸಿ ದಶಕಗಳು ಕಳೆದಿವೆ. ಮತ್ತೆ ಗಿಡ ನೆಟ್ಟು ಬೆಳೆಸುವ ಕೆಲಸ ಮಾತ್ರ ನಡೆದಿಲ್ಲ. ಡಾಂಬರು ರಸ್ತೆಗಳ ಅಂಚಿನಲ್ಲಿ ಸಂಗ್ರಹವಾಗುವ ಮಣ್ಣು ಎತ್ತುವ ಕೆಲಸವನ್ನು ಪಾಲಿಕೆ ಮಾಡುತ್ತಿಲ್ಲ. ಇದು ಸಹ ದೂಳಿನ ಪ್ರಮಾಣ ಹೆಚ್ಚುವಂತೆ ಮಾಡಿದೆ.

ಹೆಚ್ಚು ಹೊಗೆ ಉಗುಳುವ ವಾಹನಗಳ ತಪಾಸಣೆಯೇ ನಡೆಯುತ್ತಿಲ್ಲ. ಹಳೆ ಟೈರುಗಳಲ್ಲಿನ ತಂತಿ ತೆಗೆಯಲು ನಗರದ ಸುತ್ತಮುತ್ತ ಇರುವ ಕೆರೆ ಅಂಗಳ, ಹಳೆಯ ನಿವೇಶನಗಳ ಜಾಗದಲ್ಲಿ ಅವುಗಳನ್ನು ಸುಡಲಾಗುತ್ತಿದೆ. ಇವೆಲ್ಲವೂ ಪರಿಸ್ಥಿತಿ ವಿಷಮವಾಗಲು ಕಾರಣ ಎನ್ನುತ್ತಾರೆ ಪರಿಸರ ತಜ್ಞರು.

‘ಮನೆಗಳ ಮುಂದೆ ಗಿಡ ನೆಡಲು ಹೋದರೆ ಎಲೆಗಳು ಉದುರಿ ಕಸ ಬೀಳುತ್ತದೆ ಎಂದು ಜನ ವಿರೋಧಿಸುತ್ತಾರೆ.  ನಗರಾಡಳಿತ ಪರಿಸರ ಕಾಪಾಡಲು ಗಮನ ಹರಿಸುತ್ತಿಲ್ಲ’ ಎನ್ನುತ್ತಾರೆ ಅಭಿವೃದ್ಧಿ ರೆವಲ್ಯೂಷನ್‌ ಫೋರಂನ ಕುಂದರನಹಳ್ಳಿ ರಮೇಶ್‌.

ವಾಯುಮಾಲಿನ್ಯ ತಪಾಸಣೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಬಳಿ ಇರುವುದು ಒಂದೇ ಯಂತ್ರ (ಆ್ಯಬಿಯೆಂಟ್‌ ಏರ್‌ ಕ್ವಾಲಿಟಿ ಮಾನಿಟರಿಂಗ್‌ ಮಶೀನ್‌). ಅದನ್ನು ಸಹ ನಗರದಲ್ಲಿರುವ ಮಂಡಳಿ ಕಚೇರಿಯ ಚಾವಣಿಯಲ್ಲಿ ಇಡಲಾಗಿದೆ. ನಗರದ ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿ ಅಷ್ಟೇನೂ ದೂಳಿನ ಪ್ರಮಾಣ ಇಲ್ಲ. ಈ ಯಂತ್ರ ದಿನವಿಡೀ  ಕಾರ್ಯ ನಿರ್ವಹಿಸಲು ಮೂವರು ಸಿಬ್ಬಂದಿ ಬೇಕು. ಆದರೆ ಹೊರಗುತ್ತಿಗೆ ಮೇಲೆ ಒಬ್ಬರನ್ನಷ್ಟೇ  ನೇಮಕ ಮಾಡಲಾಗಿದೆ.

‘ನಗರಕ್ಕೆ ಸಮೀಪದ ದೇವರಾಯನದುರ್ಗ ಸಂರಕ್ಷಿತ ಅರಣ್ಯ ಪ್ರದೇಶ ಹಾಳಾಗುತ್ತಿದೆ. ಕೇಂದ್ರೀಯ ವಿದ್ಯಾಲಯ ಬಳಿಯ ಬೆಟ್ಟಗಳ ತುಂಬೆಲ್ಲ ಜೆಲ್ಲಿ ಕ್ರಷರ್‌ಗಳನ್ನು ನಡೆಸಲಾಗುತ್ತಿದೆ. ಸಿದ್ದಗಂಗಾ ಮಠದ ಬೆಟ್ಟದ ಸುತ್ತಲೂ ಕಲ್ಲು ಗಣಿಗಾರಿಕೆ ಇದೆ. ಅಕ್ರಮ ಮರಳು ಫಿಲ್ಟರ್‌ ಗಣಿಗಾರಿಕೆಯೂ ಜೋರಿದೆ. ಈ ಎಲ್ಲ ಕಾರಣಗಳಿಂದ ನಗರ ದೂಳುಮಯವಾಗಿದೆ’ ಎನ್ನುತ್ತಾರೆ ಪರಿಸರವಾದಿ ಪ್ರೊ. ರುದ್ರಮೂರ್ತಿ.

ಗಂಭೀರ ಸ್ಥಿತಿ
ಗ್ರೀನ್‌ ಪೀಸ್‌ ಸಂಸ್ಥೆ ಹೇಳಿರುವುದಕ್ಕಿಂತಲೂ ತುಮಕೂರಿನ ಸ್ಥಿತಿ ಹೆಚ್ಚು ಗಂಭೀರವಾಗಿದೆ. ಸಂಸ್ಥೆ ಹೇಳಿರುವಂತೆ ನಗರದ ಪಿ.ಎಂ ಪ್ರಮಾಣ 118 ಮೈಕ್ರೊಗ್ರಾಂ ಕ್ಯೂಬಿಕ್‌ ಮೀಟರ್‌. ಆದರೆ ಕೆಲವೊಮ್ಮೆ ಇಲ್ಲಿನ ಮಾಲಿನ್ಯದ ಪ್ರಮಾಣ ಇದನ್ನೂ ಮೀರಿರುತ್ತದೆ. ಕೆಲವು ತಿಂಗಳಲ್ಲಿ ಇದು 174 ಪಿ.ಎಂ ನಷ್ಟಿರುತ್ತದೆ. ಸರಾಸರಿ ಪ್ರಮಾಣವೇ 129.58ರಷ್ಟಿದೆ.

ಕ್ಯಾನ್ಸರ್‌ಗೆ ಕಾರಣವಾಗುವ ಎನ್‌ಒ2 (ಸಲ್ಫರ್‌ ಡಯಾಕ್ಸೈಡ್‌, ನೈಟ್ರೋಜನ್‌ ಆಕ್ಸೈಡ್‌) ಪ್ರಮಾಣವೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದೆ. ರಾಷ್ಟ್ರೀಯ ಮಿತಿ ಪ್ರಕಾರ 30 ಗ್ರಾಂನಷ್ಟು ಇರಬೇಕಾದ ಈ ಪ್ರಮಾಣ ಕಳೆದ ವರ್ಷ ಕೆಲ ತಿಂಗಳು 36ನ್ನು ಮೀರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT