ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸಿರುಗಟ್ಟೀತು ಜೋಕೆ! ಇದು ಮಾಲಿನ್ಯದ ಸುಳಿ

ಏನು ಕಾರಣ? ಹೇಗೆ ನಿಯಂತ್ರಣ?
Last Updated 13 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು ಮಹಾನಗರವು ಅಭಿವೃದ್ಧಿ ಎಂಬ ಮಾಯಾಜಿಂಕೆಯ ಬೆನ್ನುಬಿದ್ದ ಬಳಿಕ ಅದರ ಸ್ವಾಸ್ಥ್ಯ ಸರಿಯಾಗಿ ಉಳಿದಿಲ್ಲ. ಅದು ಸಮುದ್ರ ಮಥನವೇ ಆಗಿರಲಿ, ಪರಿಸರವನ್ನು ಬಲಿಕೊಟ್ಟು ಅಭಿವೃದ್ಧಿ ಸಾಧಿಸುವುದೇ ಆಗಿರಲಿ, ಪ್ರಕೃತಿಗೆ ವಿರುದ್ಧವಾದ ಹೆಜ್ಜೆ ಇಟ್ಟಾಗ ಕೊನೆಗೆ ಸಿಗುವುದು ವಿಷವೇ. ಅಕ್ಷರಶಃ ವಿಷದ ಗಾಳಿ ಸೇವಿಸುತ್ತಿದ್ದರೂ ಅಭಿವೃದ್ಧಿಯ ನಾಗಾಲೋಟದ ವೇಗ ತಗ್ಗಿಸಲು ನಾವು ಸುತರಾಂ ಸಿದ್ಧರಿಲ್ಲ.

ಹೌದು, ದೇಶದ ಇತರ ಮಹಾನಗರಗಳಂತೆ ಬೆಂಗಳೂರು ಕೂಡ ವಾಯುಮಾಲಿನ್ಯದ ಕಪಿಮುಷ್ಟಿಯಲ್ಲಿ ಸಿಕ್ಕಿಬಿದ್ದಿದೆ. ತುಮಕೂರು, ದಾವಣಗೆರೆ, ಹುಬ್ಬಳ್ಳಿ–ಧಾರವಾಡ, ವಿಜಯಪುರ, ಕಲಬುರ್ಗಿಯಂತಹ ನಗರಗಳು ಸಹ ವಿಷವರ್ತುಲದ ಜಾಲದೊಳಗೆ ಬಂದಿಯಾಗುತ್ತಿವೆ. ಬೆಂಗಳೂರಿನ ವಾತಾವರಣದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ದೂಳಿನ ಕಣಗಳ ಪ್ರಮಾಣ ಶೇಕಡ 57ರಷ್ಟು ಹೆಚ್ಚಾಗಿದೆ. ನಮ್ಮ ‘ಸೆಂಟರ್‌ ಫಾರ್‌ ಸೈನ್ಸ್‌ ಅಂಡ್‌ ಎನ್ವಿರಾನ್‌ಮೆಂಟ್‌’ (ಸಿಎಸ್‌ಇ) ವತಿಯಿಂದ ಈ ನಗರದಲ್ಲಿ ವಾಯುವಿನ ಗುಣಮಟ್ಟದ ಪರೀಕ್ಷೆ ನಡೆಸಿದ್ದೇವೆ. ನಾವು ತಪಾಸಣೆ ನಡೆಸಿದ ಎಲ್ಲ ಕಡೆಗಳಲ್ಲೂ ವಾತಾವರಣದ ಆರೋಗ್ಯ ಹದಗೆಟ್ಟಿರುವುದು ದೃಢಪಟ್ಟಿದೆ.

ವಾಯುಮಾಲಿನ್ಯ ಈ ಪ್ರಮಾಣದಲ್ಲಿ ಏರಿಕೆಯಾಗಲು ಏನು ಕಾರಣ ಎಂಬುದನ್ನು ತಿಳಿದುಕೊಳ್ಳಲು ದೊಡ್ಡ ಸಂಶೋಧನೆಯ ಅಗತ್ಯವೇನೂ ಇಲ್ಲ. ವಿಪರೀತ ಎನಿಸುವಂತಹ ವಾಹನ ದಟ್ಟಣೆ (ಬೆಂಗಳೂರಿನ ವಾಹನ ದಟ್ಟಣೆಯಲ್ಲಿ ಸಿಕ್ಕಿ ಹಾಕಿಕೊಂಡರೆ ಉಸಿರು ಕಟ್ಟುತ್ತದೆ), ಕಿಷ್ಕಿಂಧೆಯಾದ ರಸ್ತೆಗಳು (ಅಕ್ಷರಶಃ ಕಿಷ್ಕಿಂಧೆಯೇ ಆಗಿವೆ; ಗುಂಡಿಗಳಿಂದ ತುಂಬಿದ ಈ ರಸ್ತೆಗಳು ದೂಳನ್ನು ಮೊಗೆ ಮೊಗೆದು ನಭಕ್ಕೆ ಚಿಮ್ಮಿಸುತ್ತಿವೆ) ಹಾಗೂ ಮಿತಿಮೀರಿದ ಡೀಸೆಲ್‌ ಯಂತ್ರಗಳ ಬಳಕೆ– ನಗರದಲ್ಲಿ ಹೊಂಜು (ಹೊಗೆ ಮಂಜು) ಆವರಿಸಲು ಮುಖ್ಯ ಕಾರಣ.

ತ್ಯಾಜ್ಯಕ್ಕೆ ಬೆಂಕಿ ಹಾಕುತ್ತಿರುವ ಪ್ರವೃತ್ತಿ ಹೆಚ್ಚಾಗಿದ್ದರಿಂದ ವಾತಾವರಣದಲ್ಲಿ ರಾಸಾಯನಿಕ ಬಲು ವೇಗವಾಗಿ ಸೇರ್ಪಡೆಯಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ನಗರಗಳಲ್ಲೂ ಇದರ ಹಾವಳಿ ಹೆಚ್ಚಾಗಿದೆ. ಮನೆಮಂದಿಗೆಲ್ಲ ಸ್ನಾನಕ್ಕಾಗಿ ನೀರು ಕಾಯಿಸಲು ಸೌದೆ ಬಳಕೆ ಈಗಲೂ ನಿಂತಿಲ್ಲ. ಯಾವುದೇ ನಗರದ ಸಂದಿಗಳಲ್ಲಿ ಬೆಳ್ಳಂಬೆಳಿಗ್ಗೆ ಒಂದು ಸುತ್ತು ಹಾಕಿದರೆ, ಮನೆಗಳ ಮುಂದೆಯೇ ಕಟ್ಟಿಗೆ ಒಲೆಗಳು ಉರಿಯುವುದನ್ನು ಕಾಣಬಹುದು. ಶುದ್ಧ ಇಂಧನದ ಬಳಕೆಗೆ ಸಾಕಷ್ಟು ಉತ್ತೇಜನ ನೀಡಲಾಗುತ್ತಿದ್ದರೂ ಜನರ ಪ್ರವೃತ್ತಿಯಲ್ಲಿ ಬದಲಾವಣೆ ಕಾಣುತ್ತಿಲ್ಲ. 

ಬೆಂಗಳೂರಿನ ಜನ ಈಗೀಗ ನಡೆಯುವುದನ್ನೇ ಮರೆತುಬಿಟ್ಟಿದ್ದಾರೆ. ಗಿಜಿಗುಡುವ, ಬೆವರಿನ ವಾಸನೆ ಮೂಗಿಗೆ ಅಡರಿಸುವ ಬಸ್‌ಗಳು ಅವರಿಗೆ ಬೇಡವಾಗಿವೆ. ಹೀಗಾಗಿ ಈ ಊರಿನಲ್ಲಿ ಎತ್ತ ನೋಡಿದರೂ ಬರಿ ಕಾರುಗಳೇ ಕಾಣಿಸುತ್ತವೆ. ಕಾರುಗಳಲ್ಲಿ ನಡೆಸುವ ಐಷಾರಾಮಿ ಯಾತ್ರೆಗಾಗಿ ಜನ ಪರಿಶುದ್ಧ ಗಾಳಿ ಮತ್ತು ಸಾರ್ವಜನಿಕ ಆರೋಗ್ಯ ಎಂಬ ಅಮೂಲ್ಯ ಬೆಲೆಯನ್ನೇ ತೆತ್ತಿದ್ದಾರೆ.

ಉತ್ತರ ಭಾರತದ ನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಂತಹ ದಖನ್‌ ಪ್ರಸ್ಥಭೂಮಿಯಲ್ಲಿ ಇರುವ ನಗರಗಳಲ್ಲಿ ದೂಳಿನ ಪ್ರಮಾಣ ಕಡಿಮೆ. ಹಾಗೆಂದು ಈ ಊರು ಸಮಾಧಾನದಿಂದ ನಿಟ್ಟುಸಿರು ಬಿಡುವ ಸ್ಥಿತಿಯಲ್ಲಿಲ್ಲ.

ಬೆಂಗಳೂರಿನ ವಾತಾವರಣದಲ್ಲಿರುವ ನೈಟ್ರೋಜನ್‌ ಆಕ್ಸೈಡ್‌ ಪ್ರಮಾಣ ಕಂಡಾಗ ತುಂಬಾ ಭಯವಾಗುತ್ತದೆ. ವೈಟ್‌ಫೀಲ್ಡ್‌ನ ಗ್ರಾಫೈಟ್‌ ಇಂಡಿಯಾ, ಹೊಸೂರು ರಸ್ತೆಯ ಸಿಲ್ಕ್‌ ಬೋರ್ಡ್‌, ತುಮಕೂರು ರಸ್ತೆಯ ಪೀಣ್ಯ ಹಾಗೂ ನಗರದ ಹೃದಯ ಭಾಗದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಯ ಸರಹದ್ದಿನಲ್ಲಿ ಮಾಲಿನ್ಯದ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿದೆ. ವಿಷದ ಕಾಕ್‌ಟೇಲ್‌ ಅದರೊಳಗೆ ತುಂಬಿದೆ.

ಮಾಲಿನ್ಯದ ಮಟ್ಟ ಪರೀಕ್ಷಿಸಲು ಸಿಎಸ್‌ಇ ಸಂಶೋಧನಾ ತಂಡ ಪುಟ್ಟ ಯಂತ್ರವೊಂದನ್ನು ಹೊತ್ತು ಸಾಗಿತ್ತು. ಶಾಲೆ, ಆಸ್ಪತ್ರೆ, ವಸತಿ ಹಾಗೂ ಕೈಗಾರಿಕೆ ಹೀಗೆ ಭಿನ್ನ ಭೂಬಳಕೆ ಪ್ರದೇಶಗಳನ್ನು ಪರೀಕ್ಷೆಗೆ ಆಯ್ಕೆ ಮಾಡಲಾಗಿತ್ತು. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಹಾಗೂ ಆಟೊ ಪ್ರಯಾಣಿಕರು ವಿಷಕಾರಿಯಾದ ಗಾಳಿಯನ್ನು ನೇರವಾಗಿ ಸೇವನೆ ಮಾಡುತ್ತಿರುವುದು ಆಗ ಕಂಡುಬಂದಿತ್ತು. ಪ್ರತಿ ಕ್ಯೂಬಿಕ್‌ ಮೀಟರ್‌ ಗಾಳಿಯಲ್ಲಿ 260 ಮೈಕ್ರೊ ಗ್ರಾಂನಷ್ಟು  ದೂಳಿನ ಕಣಗಳಿದ್ದವು. ಎಲ್ಲವನ್ನೂ ನೇರವಾಗಿ ಶ್ವಾಸಕೋಶಕ್ಕೆ ಬಿಟ್ಟುಕೊಳ್ಳುವ ಜನರ ಆರೋಗ್ಯದ ಸ್ಥಿತಿ ಕುರಿತು ಆಲೋಚಿಸಿದಾಗ ಭಯ ಆವರಿಸುತ್ತದೆ.

ನಗರದ ಜನಸಂಖ್ಯೆಯ ಶೇ 60ರಷ್ಟು ಮಂದಿ ರಸ್ತೆಗಳ ಬದಿಯಲ್ಲೇ ಕೆಲಸ ಮಾಡುತ್ತಾರೆ ಇಲ್ಲವೆ ವಾಸವಾಗಿದ್ದಾರೆ. ಅವರೆಲ್ಲರ ಆರೋಗ್ಯಕ್ಕೆ ವಾಹನಗಳ ಮಾಲಿನ್ಯ ಮಾರಕವಾಗಿದೆ. ವಾತಾವರಣದ ಶೇ 42ರಷ್ಟು ದೂಳಿನ ಕಣಗಳಿಗೂ ಶೇ 67ರಷ್ಟು ನೈಟ್ರೋಜನ್‌ ಆಕ್ಸೈಡ್‌ಗೂ ವಾಹನಗಳೇ ಕಾರಣವಾಗಿವೆ.

ಬೆಂಗಳೂರಿನ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ಗೆ ದೇಶದ ಅತಿದೊಡ್ಡ ಪಾರ್ಕಿಂಗ್‌ ಪ್ರದೇಶ ಎಂದು ಕುಹಕವಾಡಲಾಗುತ್ತದೆ. ಸದಾಕಾಲ ಅಷ್ಟೊಂದು ಪ್ರಮಾಣದ ದಟ್ಟಣೆ ಅಲ್ಲಿರುತ್ತದೆ. ನಗರದ ಸಿಗ್ನಲ್‌ಗಳಲ್ಲಿ ವಾಹನಗಳು ತುಂಬಾ ಹೊತ್ತು ನಿಲ್ಲಬೇಕಾದ ಕಾರಣ ಪ್ರತಿದಿನ ಲಕ್ಷಾಂತರ ಲೀಟರ್‌ ಇಂಧನ ಪೋಲಾಗುತ್ತಿದೆ. ಕಡಲೆ ಸಿಪ್ಪೆಗೆ ಬೆಂಕಿ ಇಟ್ಟಂತೆ ಸಿಗ್ನಲ್‌ಗಳಲ್ಲಿ ನಿರಂತರವಾಗಿ ಹೊಗೆ ಮೇಲೇಳುತ್ತದೆ. ಉಪಗ್ರಹಗಳು ಸೆರೆ ಹಿಡಿದ ನಗರದ ಚಿತ್ರಗಳ ಮೇಲೆ ಕಣ್ಣು ಹಾಯಿಸಿದರೆ ಪ್ರಮುಖ ಸಿಗ್ನಲ್‌ಗಳೆಲ್ಲ ಕುಲುಮೆಗಳಂತೆ ಹೊಗೆ ಸೂಸುವುದು ಎದ್ದು ಕಾಣುತ್ತದೆ. ನಗರದಲ್ಲಿ ಗಂಟೆಗೆ 12 ಕಿ.ಮೀ. ವೇಗದಲ್ಲಿ ಮಾತ್ರ ಚಲಿಸಲು ಸಾಧ್ಯ. ಇಂಧನದ ಪೋಲು, ಹೆಚ್ಚುವ ಹೊಂಜು, ಅಪವ್ಯಯವಾಗುವ ಸಮಯ, ಕುಸಿಯುವ ಕೆಲಸದ ಸಾಮರ್ಥ್ಯ, ಶ್ವಾಸಕೋಶ ಸೇರಿಕೊಳ್ಳಲಿರುವ ರಾಸಾಯನಿಕ– ಅಭಿವೃದ್ಧಿಯ ನಾಗಾಲೋಟ ನಮಗೆ ದಯಪಾಲಿಸಿರುವ ಕೊಡುಗೆಗಳಿವು.

ಡೀಸೆಲ್‌ ಯಂತ್ರಗಳು ಉಗುಳುವ ಹೊಗೆಯಿಂದ ಶ್ವಾಸಕೋಶದ ಕ್ಯಾನ್ಸರ್‌ ಬರುತ್ತದೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಪೆಟ್ರೋಲ್‌ ಕಾರುಗಳಿಗಿಂತ ಡೀಸೆಲ್‌ ಕಾರುಗಳು ಏಳು ಪಟ್ಟು ಅಧಿಕ ಮಾಲಿನ್ಯಕಾರಕವಾಗಿವೆ. ಹೀಗಿದ್ದೂ ನಮ್ಮ ಜನಕ್ಕೆ ಓಡಾಡಲು ಡೀಸೆಲ್‌ ಕಾರುಗಳೇ ಬೇಕು. ವಿದ್ಯುತ್‌ ಜನರೇಟರ್‌ಗಳಿಗೂ ಡೀಸೆಲ್‌ ಬೇಕೇಬೇಕು. ವಿದ್ಯುತ್‌ ಜನರೇಟರ್‌ಗಳ ಹಾವಳಿ ಬೆಂಗಳೂರಿಗಿಂತ ತುಮಕೂರು, ದಾವಣಗೆರೆ, ಹುಬ್ಬಳ್ಳಿ–ಧಾರವಾಡ, ಬೆಳಗಾವಿ ನಗರಗಳಲ್ಲಿ ಹೆಚ್ಚಾಗಿದೆ. ಏಕೆಂದರೆ, ವಿದ್ಯುತ್‌ ಅಭಾವ ಎದುರಿಸುತ್ತಿರುವ ರಾಜ್ಯದಲ್ಲಿ ರಾಜಧಾನಿಗೆ ಹೊರತಾದ ಪ್ರದೇಶಗಳಲ್ಲಿ ವಿದ್ಯುತ್‌ ಪದೇ ಪದೇ ಕೈಕೊಡುತ್ತದೆ.

70 ಫ್ಲೈಓವರ್‌ಗಳನ್ನು ನಿರ್ಮಿಸಿ ಸಾರಿಗೆ ಸೌಕರ್ಯದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದ ಭ್ರಮೆಯಲ್ಲಿ ತೇಲುತ್ತಿತ್ತು ನವದೆಹಲಿ. ಆದರೆ, ದೇಶದ ಅತ್ಯಂತ ಮಾಲಿನ್ಯ ನಗರ ಎಂಬ ಹಣೆಪಟ್ಟಿ ಅಂಟಿಕೊಂಡಾಗ ವಾಸ್ತವ ಅರಿವಿಗೆ ಬಂದಿತ್ತು. ಡೀಸೆಲ್‌ ಬಳಕೆಯಿಂದ ಮಾಲಿನ್ಯ ಉಂಟು ಮಾಡುತ್ತಿದ್ದ ಪ್ರವೃತ್ತಿಯ ವಿರುದ್ಧ ಸುಪ್ರೀಂ ಕೋರ್ಟ್‌ ಗದಾಪ್ರಹಾರವನ್ನೇ ಮಾಡಿತು. ಅದರ ಪರಿಣಾಮವಾಗಿ ನವದೆಹಲಿಯ ಟ್ಯಾಕ್ಸಿಗಳು ಸಾಂದ್ರೀಕೃತ ನೈಸರ್ಗಿಕ ಅನಿಲದಿಂದ (ಸಿಎನ್‌ಜಿ) ಓಡಾಡಲು ಆರಂಭಿಸಿದವು. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಡೀಸೆಲ್‌ ಬಳಕೆಯ ಐಷಾರಾಮಿ ಕಾರುಗಳ ನೋಂದಣಿಯನ್ನೇ  ಸ್ಥಗಿತಗೊಳಿಸಲಾಯಿತು. ಇಂತಹದ್ದೇ ಕ್ರಮ ಬೆಂಗಳೂರು ಹಾಗೂ ಇತರ ನಗರಗಳಿಗೂ ಅಗತ್ಯ.
ಸರ್ಕಾರಗಳು ಮಾಲಿನ್ಯ ತಗ್ಗಿಸುವ ಕುರಿತ ಮಾತುಗಳನ್ನೇನೋ ಆಡುತ್ತಿವೆ. ಆದರೆ, ಮಾತಿಗೂ ಕೃತಿಗೂ ಅಜಗಜಾಂತರವಿದೆ. ಮಾಲಿನ್ಯ ತಡೆಗಟ್ಟಲು ಆಟೊ ಇಂಧನ ನೀತಿಯನ್ನು ಜಾರಿಗೆ ತರಲಾಗಿತ್ತು. ಆದರೆ, ಡೀಸೆಲ್‌ ಬಳಕೆ ವಾಹನಗಳ ತಯಾರಿಕೆಗೆ ಎಗ್ಗಿಲ್ಲದಂತೆ ಅವಕಾಶ ನೀಡಿ, ಇಂತಹ ನೀತಿಗಳನ್ನು ತಂದರೆ ಏನು ಪ್ರಯೋಜನ? ವಾಹನಗಳ ತಯಾರಿಕೆಗೂ ಮಾಲಿನ್ಯರಹಿತ ತಂತ್ರಜ್ಞಾನದ ಬಳಕೆಗೂ ಇಂಧನ ನೀತಿಗೂ ಒಂದಕ್ಕೊಂದು ಸಂಬಂಧವೇ ಇಲ್ಲದಂತಹ ಸನ್ನಿವೇಶ ಇದು.

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ನಗರಗಳಲ್ಲಿ ಯುರೊ–6 (ಹೊಗೆ ಹೊರಸೂಸುವ ಯುರೋಪಿಯನ್‌ ಮಾಪಕ; ಲಘು ವಾಹನಗಳ ಹೊಗೆ ಹೊರಸೂಸುವ ಪ್ರಮಾಣದ ನಿಯಂತ್ರಣಕ್ಕಾಗಿ ಈ ಮಾರ್ಗಸೂಚಿಯನ್ನು ರೂಪಿಸಲಾಗಿದೆ) ಮಾರ್ಗಸೂಚಿಯ ಅನುಷ್ಠಾನಕ್ಕಾಗಿ ಕಾಲಮಿತಿ ನಿಗದಿ ಮಾಡಬೇಕಿದೆ.  ಕಾರುಗಳು ಹೊರಸೂಸುವ ನೈಟ್ರೋಜನ್‌ ಆಕ್ಸೈಡ್‌, ಕಾರ್ಬನ್‌ ಮೊನಾಕ್ಸೈಡ್‌, ಹೈಡ್ರೋಕಾರ್ಬನ್‌ ಹಾಗೂ ದೂಳಿನ ಕಣಗಳ ನಿಯಂತ್ರಣಕ್ಕೆ ಈ ಮಾರ್ಗಸೂಚಿ ಅವಕಾಶ ಕಲ್ಪಿಸುತ್ತದೆ.

ನಮ್ಮ ಆಡಳಿತಗಾರರ ಮನಸ್ಥಿತಿ ಹೇಗಿದೆ ಎಂದರೆ ಇನ್ನಷ್ಟು ಶ್ವಾಸಸಂಬಂಧಿ ಕಾಯಿಲೆಗಳು ಹಾಗೂ ಕ್ಯಾನ್ಸರ್‌ ಚಿಕಿತ್ಸಾ ಆಸ್ಪತ್ರೆಗಳ ನಿರ್ಮಾಣಕ್ಕಾಗಿ ಒಪ್ಪಿಗೆ ಕೊಡಲು ಅವರು ಸಿದ್ಧರಿದ್ದಾರೆಯೇ ಹೊರತು ಕಾರುಗಳ ಬಳಕೆಯನ್ನು ನಿಯಂತ್ರಿಸಲು ಅವರಿಗೆ ಮನಸ್ಸಿಲ್ಲ. ನೀತಿ ನಿರೂಪಕರೇ ಇಂತಹ ನಿಲುವು ತಾಳಿದರೆ ಏನು ಮಾಡುವುದು? ದೇಶದ ಮುಕ್ಕಾಲುಪಾಲು ನಗರವಾಸಿಗಳು ಅಶುದ್ಧ ಗಾಳಿಯನ್ನು ಸೇವಿಸುತ್ತಾ, ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮಾಲಿನ್ಯದ ಸುಳಿಗೆ ಬಲು ವೇಗದಲ್ಲಿ ಸಣ್ಣ–ಸಣ್ಣ ನಗರಗಳು, ಪಟ್ಟಣಗಳು ಬೀಳುತ್ತಿರುವುದು ಆತಂಕಕಾರಿ ವಿದ್ಯಮಾನ.

ನಗರಗಳು ಉಸಿರುಗಟ್ಟದೆ, ಉಬ್ಬಸದಿಂದ ಬಳಲದೆ ಬಾಳಬೇಕಾದರೆ ತಕ್ಷಣ ಅದಕ್ಕೆ ಪೂರಕವಾದ ಕ್ರಮ ಕೈಗೊಳ್ಳುವುದು ಅಗತ್ಯ. ವಾತಾವರಣ ಪರಿಶುದ್ಧಗೊಳಿಸಲು ಸುಲಭದ ದಾರಿಗಳು ಯಾವುವೂ ಈಗ ಉಳಿದಿಲ್ಲ. ನಗರಗಳು ಇರುವುದು ಜನರಿಗಾಗಿಯೇ ಹೊರತು ವಾಹನಗಳಿಗಲ್ಲ ಎಂಬುದನ್ನು ಪ್ರತಿಯೊಬ್ಬರೂ ಮನವರಿಕೆ ಮಾಡಿಕೊಳ್ಳಬೇಕು.

ಸಮೂಹ ಸಾರಿಗೆ, ಸೈಕಲ್‌ ಸವಾರಿ ಹಾಗೂ ಕಾಲ್ನಡಿಗೆಗೆ ಪೂರಕವಾದ ರಸ್ತೆಗಳು ನಮಗೆ ಬೇಕಾಗಿವೆಯೇ ಹೊರತು ಐಷಾರಾಮಿ ಕಾರುಗಳು ಓಡಾಡುವ ರಸ್ತೆಗಳಲ್ಲ. ಸಮೂಹ ಸಾರಿಗೆ ಸಾಧನಗಳು ಕಡಿಮೆ ಮಾಲಿನ್ಯಕಾರಕವಾಗಿವೆ; ಆದರೆ, ಹೆಚ್ಚಿನ ಜನರನ್ನು ಸಾಗಿಸುತ್ತವೆ. ಸೈಕಲ್‌ ಸವಾರಿ ಹಾಗೂ ನಡಿಗೆಯಿಂದ ಒಂದಿನಿತೂ ಮಾಲಿನ್ಯ ಉಂಟಾಗದು. ವಾಯುಮಾಲಿನ್ಯಕ್ಕೂ ಸಂಚಾರ ಸೌಲಭ್ಯದ ಬಳಕೆಗೂ ನೇರವಾದ ಸಂಬಂಧ ಇರುವುದರಿಂದ ಜನ ಎಚ್ಚರಿಕೆಯಿಂದ ಸಾರಿಗೆ ಸಾಧನವನ್ನು ಆಯ್ಕೆ ಮಾಡಿಕೊಳ್ಳಬೇಕು.

ಖಾಸಗಿ ವಾಹನಗಳ ಬಳಕೆ ಮೇಲೆ ಕಡಿವಾಣ ಹಾಕಬೇಕು, ಸಮೂಹ ಸಾರಿಗೆ ಸೌಲಭ್ಯವನ್ನು ಹೆಚ್ಚಿಸಬೇಕು. ಎರಡು ಕಾರುಗಳ ಸ್ಥಳವನ್ನು ಒಂದು ಬಸ್‌ ಆಕ್ರಮಿಸುತ್ತದೆ ನಿಜ. ಕಾರು ನಾಲ್ಕು ಜನರನ್ನು ಕರೆದೊಯ್ದರೆ ಬಸ್‌ 40 ಪ್ರಯಾಣಿಕರನ್ನು ಕರೆದೊಯ್ಯುತ್ತದೆ ಎಂಬುದನ್ನು ನೆನಪಿಡಬೇಕು. ಸೈಕಲ್‌ ಸವಾರಿ ಹಾಗೂ ಕಾಲ್ನಡಿಗೆಯನ್ನು ಉತ್ತೇಜಿಸುವಂತಹ ಸೌಕರ್ಯ ಕಲ್ಪಿಸಬೇಕು. ಡೀಸೆಲ್‌ ಬಳಕೆಯನ್ನು ಸಂಪೂರ್ಣವಾಗಿ ತಗ್ಗಿಸಬೇಕು. ತ್ಯಾಜ್ಯ ಸುಡುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಹಾಗೂ ರಸ್ತೆಗಳು ದೂಳು ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು.
ಆಶಯಗಳು, ಅಗತ್ಯಗಳು ಹಾಗೂ ನಿರೀಕ್ಷೆಗಳು ಬೆಟ್ಟದಷ್ಟಿವೆ. ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಒಂದು ಸಣ್ಣ ಹೆಜ್ಜೆ ಮುಂದಿರಿಸಿ, ನಮ್ಮಿಂದ ಸಾಧ್ಯವಿರುವ ಅಳಿಲು ಸೇವೆಯನ್ನು (ಸೇವೆಗಿಂತ ಕರ್ತವ್ಯ ಎನ್ನುವುದೇ ಸರಿಯಾದ ಪದ) ಸಲ್ಲಿಸೋಣ.

* ನಮ್ಮ ಆಡಳಿತಗಾರರ ಮನಸ್ಥಿತಿ ಹೇಗಿದೆ ಎಂದರೆ ಇನ್ನಷ್ಟು ಶ್ವಾಸಸಂಬಂಧಿ ಕಾಯಿಲೆಗಳು ಹಾಗೂ ಕ್ಯಾನ್ಸರ್‌ ಚಿಕಿತ್ಸಾ ಆಸ್ಪತ್ರೆಗಳ ನಿರ್ಮಾಣಕ್ಕಾಗಿ ಒಪ್ಪಿಗೆ ಕೊಡಲು ಅವರು ಸಿದ್ಧರಿದ್ದಾರೆಯೇ ಹೊರತು ಕಾರುಗಳ ಬಳಕೆಯನ್ನು ನಿಯಂತ್ರಿಸಲು ಅವರಿಗೆ ಮನಸ್ಸಿಲ್ಲ.

ನಿರೂಪಣೆ: ಪ್ರವೀಣ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT