ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ತಾಲ್ಲೂಕುಗಳಿಗೆ ತಲಾ ₹60 ಲಕ್ಷ

ಬರ ಪರಿಹಾರ ನಿಧಿಯಿಂದ ಕುಡಿಯುವ ನೀರಿಗೆ ತಲಾ 40 ಲಕ್ಷ ಅನುದಾನ
Last Updated 14 ಜನವರಿ 2017, 5:37 IST
ಅಕ್ಷರ ಗಾತ್ರ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬರಪೀಡಿತ ಪ್ರದೇಶವಾಗಿ ಘೋಷಿಸಿರುವ 4 ತಾಲ್ಲೂಕುಗಳಿಗೆ ಕುಡಿಯುವ ನೀರು ಪೂರೈಸಲು ರಾಜ್ಯ ಸರ್ಕಾರ ಬರ ಪರಿಹಾರ ನಿಧಿಯಿಂದ ತಲಾ ₹40 ಲಕ್ಷ ಅನುದಾನ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ತಲಾ ₹60 ಲಕ್ಷ ಅನುದಾನ ಬಿಡುಗಡೆ ಮಾಡಿದೆ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ತಿಳಿಸಿದರು.
 
ನಗರದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಆರ್‌ಎಫ್‌ ಅನುದಾನದಿಂದ ಕೊಳವೆಬಾವಿ ಕೊರೆಸಲು ಅವಕಾಶವಿಲ್ಲ. ಪೈಪ್‌ಲೈನ್‌, ರಿಡ್ರಿಲ್ಲಿಂಗ್‌ಗೆ ಮಾತ್ರ ಅವಕಾಶವಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಅನುದಾನದಲ್ಲಿ ಮಾತ್ರ ಕೊಳವೆ ಬಾವಿ ಕೊರೆಸಬಹುದು. ಈಗಾಗಲೇ ಕ್ರಿಯಾಯೋಜನೆ ಸಿದ್ಧಪಡಿಸಲು ಕ್ರಮ ತೆಗೆದುಕೊಂಡಿದ್ದೇವೆ ಎಂದರು.
 
ಜಿಲ್ಲೆಯಲ್ಲಿ ಮೇವಿನ ಕೊರತೆ ಯೂ ಉಂಟಾಗಿದೆ. ಜಿಲ್ಲೆಯಲ್ಲಿ 4 ಲಕ್ಷ ಜಾನು ವಾರುಗಳಿದ್ದು, 220 ಟನ್‌ ಮೇವಿನ ಅಗತ್ಯವಿದೆ. ಮೇವು ಬ್ಯಾಂಕ್‌ ತೆರೆಯಲು ಸರ್ಕಾರ ₹80 ಲಕ್ಷ ಅನು ದಾನ ಬಿಡುಗಡೆ ಮಾಡಿದೆ. ಚಿಕ್ಕಮಗಳೂರಿ ನಲ್ಲಿ 6 ಮತ್ತು ಕಡೂರಿನಲ್ಲಿ 8 ಸೇರಿದಂತೆ 14 ಹೋಬಳಿಗಳಲ್ಲಿ ಮೇವು ಬ್ಯಾಂಕ್‌ ತೆರೆಯಲಾಗಿದೆ.
 
ಮೇವಿಗಾಗಿ 11 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಹೊರ ಜಿಲ್ಲೆಗಳಿಂದ ಮೇವು ಖರೀದಿಸಿ ಪೂರೈಸಲು ಟೆಂಡರ್‌ ಕರೆಯಲಾಗಿದೆ. ಶೇ 50 ರಿಯಾಯಿತಿ ದರದಲ್ಲಿ ರೈತರಿಗೆ ಮೇವು ಒದಗಿಸಲಾಗುವುದು. ಟನ್‌ ಮೇವಿಗೆ ₹6 ಸಾವಿರ ನಿಗದಿಪಡಿಸ ಲಾಗಿದೆ ಎಂದು ಮಾಹಿತಿ ನೀಡಿದರು.
 
ಬೆಳೆಹಾನಿ ಬಗ್ಗೆ ಜಂಟಿ ಸಮೀಕ್ಷೆ ನಡೆಸಲಾಗಿದೆ. ‘ಪರಿಹಾರ’ ಸಾಫ್ಟ್‌ವೇರ್‌ ನಲ್ಲಿ ಬೆಳೆಹಾನಿ ವಿವರ ನಮೂದಿಸ ಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಸಬ್ಸಿಡಿ ಹಣ ಬಿಡುಗಡೆಯಾದ ನಂತರ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ವಿತರಣೆ ಮಾಡಲಾಗುತ್ತದೆ. ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡುವ ಸಾಧ್ಯತೆ ಇದೆ ಎಂದರು.
 
ಅಕ್ರಮ ಬಹುಮಹಡಿ ಕಟ್ಟಡಗಳಿಗೆ ಬಿಸಿ: ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದ ನಕ್ಷೆ ಉಲ್ಲಂಘಿಸಿ ಬಹುಮಹಡಿ ಕಟ್ಟಡ ಕಟ್ಟಿದ್ದರೆ ಕ್ರಮ ತೆಗೆದುಕೊಳ್ಳಬೇಕಾದುದು ನಗರಸಭೆ ಜವಾಬ್ದಾರಿ. ಈಗಾಗಲೇ 7ರಿಂದ 8 ಕಟ್ಟ ಡಗಳ ಮಾಲೀಕರಿಗೆ ನೋಟಿಸ್‌ ನೀಡ ಲಾಗಿತ್ತು. ಈ ಬಗ್ಗೆ ಕ್ರಮ ತೆಗೆದುಕೊಳ್ಳಲು  ಆಯುಕ್ತರಿಗೆ ಸೂಚನೆ ಕೂಡ ಕೊಡಲಾ ಗಿದೆ ಎಂದು ಪ್ರತಿಕ್ರಿಯಿಸಿದರು.
 
ದುಪ್ಪಟ್ಟು ದಂಡ ಪಾವತಿಸಿಕೊಂಡರೆ ಯಾವುದೇ ಅನಧಿಕೃತ ಕಟ್ಟಡ ಸಕ್ರಮವಾಗುವುದಿಲ್ಲ. ಅಂತಹ ತಪ್ಪು ಭಾವನೆಯಿಂದ ಕಟ್ಟಡ ಮಾಲೀಕರು ಮತ್ತು ಸ್ಥಳೀಯರು ಸಂಸ್ಥೆಗಳು ನಿಯಮ ಉಲ್ಲಂಘಿಸುತ್ತಿರುವುದು ಕಂಡು ಬಂದಿದೆ. ಸ್ಥಳೀಯ ಸಂಸ್ಥೆಗಳ ಅಧಿಕಾ ರಿಗಳ ಸಭೆ ಸದ್ಯದಲ್ಲೇ ನಡೆಸಲಾಗು ವುದು. ನಿಯಮ ಬಾಹಿರ ನಿರ್ಮಿಸಿರುವ ಬಹುಮಹಡಿ ಕಟ್ಟಡಗಳ ವಿರುದ್ಧ ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಎಚ್ಚರಿಸಿದರು.
 
ಎಂ.ಜಿ.ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇನ್ನು ವಾರದ ಕಾಮಗಾರಿ ಮಾತ್ರ ಬಾಕಿ ಇದೆ ಎಂದರು.
 
**
ಮಕ್ಕಳ ಹಕ್ಕು ರಕ್ಷಣೆಗೆ ಆಂದೋಲನ
ಜಿಲ್ಲೆಯಲ್ಲಿ ಫೆಬ್ರುವರಿ ತಿಂಗಳ ಅಂತ್ಯದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾಡಳಿತ ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಲು ಬೃಹತ್‌ ಆಂದೋಲನ ನಡೆಸಲು ನಿರ್ಧರಿಸಿದೆ.
 
ಜಿಲ್ಲೆಯಲ್ಲಿ ಪೋಕ್ಸೊ ಪ್ರಕರಣಗಳು ಹೆಚ್ಚುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಳೆದ ಏಪ್ರಿಲ್‌ನಿಂದ ಜಿಲ್ಲೆಯಲ್ಲಿ ಏರಿಕೆಯಾಗಿವೆ. ಪೋಕ್ಸೊ ಅಡಿ 40 ಪ್ರಕರಣಗಳು ಜಿಲ್ಲೆಯಲ್ಲಿ ದಾಖ ಲಾಗಿವೆ. ಅದರಲ್ಲೂ ಎಳೆಯ ಪ್ರಾಯ ದ ಹೆಣ್ಣುಮಕ್ಕಳು ಅತ್ಯಾಚಾರಕ್ಕೀ ಡಾಗಿ ಬಾಲ್ಯಾವಸ್ಥೆಯಲ್ಲೇ ಗರ್ಭಿಣಿಯರಾದ ಘಟನೆಗಳು ಕಾಫಿ ತೋಟಗಳ ಕೂಲಿಲೈನಲ್ಲಿ ಹೆಚ್ಚು ಕಂಡುಬಂದಿವೆ. ಇದೊಂದು ಎಚ್ಚರಿಕೆ ಗಂಟೆ. ಮಕ್ಕಳ ಹಕ್ಕು ರಕ್ಷಣೆ ಮಾಡುವುದು ಮತ್ತು ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆಂದೋಲನ ನಡೆಸ ಲಾಗುತ್ತಿದೆ ಎಂದು  ಡಿಸಿ ತಿಳಿಸಿದ್ದಾರೆ.
 
**
ಚಿಕ್ಕಮಗಳೂರು ತಾಲ್ಲೂಕಿನಲ್ಲಿ 22 ಗ್ರಾಮ ಮತ್ತು ಕಡೂರು ತಾಲ್ಲೂಕಿನಲ್ಲಿ 25 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. 
-ಜಿ. ಸತ್ಯವತಿ
ಜಿಲ್ಲಾಧಿಕಾರಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT