ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿನ ಅಭಾವ ನೀಗಿಸಲು ಮಹತ್ವದ ಹೆಜ್ಜೆ

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಜಿ.ಸತ್ಯವತಿ ಪ್ರಕಟ
Last Updated 14 ಜನವರಿ 2017, 5:52 IST
ಅಕ್ಷರ ಗಾತ್ರ

ಹೊಸ ಮರಳು ನೀತಿ ಜಾರಿ * ಮುಂದಿನ ವಾರ ಮರಳು ವಿತರಣೆ * ಪ್ರಾಯೋಗಿಕವಾಗಿ ಜಾರಿ

**
ಚಿಕ್ಕಮಗಳೂರು:  ಜಿಲ್ಲೆಯಲ್ಲಿ 2 ವರ್ಷಗಳಿಂದ ಉಂಟಾಗಿರುವ ಮರಳಿನ ಅಭಾವ ನೀಗಿಸಲು ಮಹತ್ವದ ಹೆಜ್ಜೆ ಇಡಲಾಗಿದೆ. ಮುಂದಿನ ವಾರದಿಂದ ಜಿಲ್ಲೆಯ ಜನರಿಗೆ ಸ್ಟಾಕ್‌ಯಾರ್ಡ್‌ಗಳಲ್ಲಿ ಸಂಗ್ರಹವಿರುವ ಮರಳು ವಿತರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ತಿಳಿಸಿದರು.
 
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಅವರು, ಮರಳು ವಿತರಣೆಗೆ ಬಾಕಿ ಇರುವ 156 ಅರ್ಜಿದಾರರಿಗೆ ಎಸ್‌ಎಂಎಸ್‌ ಕಳುಹಿಸಿದ್ದೇವೆ. ಸೋಮವಾರ ದಿಂದ ಮರಳು ವಿತರಣೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು. 
 
2016ರ ಆಗಸ್ಟ್‌ 12ರಿಂದ ಹೊಸ ಮರಳು ನೀತಿ ಜಾರಿಗೆ ಬಂದಿದೆ. ಲೋಕೋಪಯೋಗಿ ಇಲಾಖೆ ಜತೆಗೆ ಚರ್ಚಿಸಿ ಹೊಸ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಪಾರದರ್ಶಕವಾಗಿ ಮರಳು ವಿತರಣೆಗೆ ಸಾಕಷ್ಟು ಶ್ರಮ ಹಾಕಿದ್ದೇವೆ. ಹೊಸ ಮರಳು ನೀತಿ ವ್ಯವಸ್ಥೆಯನ್ನು 3 ತಿಂಗಳು ಅವಧಿಗೆ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ಹೊಸದಾಗಿ ಗುರುತಿಸಿರುವ 4 ಬ್ಲಾಕ್‌ಗಳಿಗೆ ಟೆಂಡರ್‌ ಕರೆದಿದ್ದು, ಟೆಂಡರ್‌ ಪ್ರಕ್ರಿಯೆ ಮುಗಿದ ನಂತರ ಮರಳು ವಿತರಣೆ ಆರಂಭವಾಗಲಿದೆ. ಇದರಿಂದ ಜಿಲ್ಲೆಯಲ್ಲಿ ಮರಳು ಅಭಾವ ಸಮಸ್ಯೆ ನಿವಾರಣೆಯಾಗುವ ವಿಶ್ವಾಸವಿದೆ ಎಂದರು.
 
ನಾಲ್ಕೈದು ಮರಳು ಸ್ಟಾಕ್‌ ಯಾರ್ಡ್‌ಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದು, ಮರಳು ವಿತರಿಸದಿದ್ದರೆ ಅಕ್ರಮ ಮರಳು ಸಾಗಣೆಯಾಗುವ ಪರಿಸ್ಥಿತಿ ಉಂಟಾಗುವ ಅಪಾಯವಿದೆ. ಇದನ್ನು ಮನಗಂಡು, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಒಳಗೊಂಡ ಉಪಸಮಿತಿ ರಚಿಸಿ, ನಿರಂತರ 2 ತಿಂಗಳು ಸಭೆ ನಡೆಸಲಾಗಿದೆ. ಮರಳು ಸಮಸ್ಯೆ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದರು.
 
ಟಾಸ್ಕ್‌ಫೋರ್ಸ್‌ಗೆ ಆಯ್ಕೆ ಮಾಡಿಕೊಂಡಿರುವ ಇಲಾಖೆ ಸಿಬ್ಬಂದಿ ಸರದಿ ಮೇಲೆ ಮರಳು ಸ್ಟಾಕ್‌ ಯಾರ್ಡ್‌ಗಳಲ್ಲಿ ಮರಳು ವಿತರಣೆ ದಿನಗಳಲ್ಲಿ ಪಾಳಿ ಮೇಲೆ ಕರ್ತವ್ಯ ನಿರ್ವಹಿಸಲಿದ್ದಾರೆ. ಲೋಡಿಂಗ್‌, ಅನ್‌ಲೋಡಿಂಗ್‌ಗೆ ಹೆಚ್ಚುವರಿ ಶುಲ್ಕ ಪಡೆಯದಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಮರಳು ಬೇಕಿರುವ ಅರ್ಜಿದಾರರು ಸ್ಟಾಕ್‌ಯಾರ್ಡ್‌ಗೆ ಬರುವುದನ್ನು ಕಡ್ಡಾಯಗೊಳಿಸಿದ್ದೇವೆ ಎಂದು ತಿಳಿಸಿದರು.
 
ತಾಲ್ಲೂಕುವಾರು ಹಂಚಿಕೆ: ಜಿಲ್ಲೆಯ ಮೊದಲು ಯಾವುದೇ ಭಾಗದಿಂದ ಮರಳು ಸಾಗಿಸಲು ಅವಕಾಶ ಇತ್ತು. ಈಗ ತಾಲ್ಲೂ ಕುವಾರು ಮರಳು ಸ್ಟಾಕ್‌ ಯಾರ್ಡ್‌ ನಿಗದಿಪಡಿಸಲಾಗಿದೆ. ಚಿಕ್ಕಮಗಳೂರು ತಾಲ್ಲೂಕಿಗೆ ಮೂಡಿಗೆರೆಯ ಕಣಚೂರು ಮತ್ತು ದೋಣಗುಡಿಗೆ ಸ್ಟಾಕ್‌ಯಾರ್ಡ್‌ ಮೀಸಲಿಡಲಾಗಿದೆ. ಮೂಡಿಗೆರೆ ತಾಲ್ಲೂಕಿಗೆ ಜಿ.ಅಗ್ರಹಾರ, ಕಡೂರು ಮತ್ತು ತರೀಕೆರೆ ತಾಲ್ಲೂಕುಗಳಿಗೆ ಹಿರೇಸಿಗರ, ಕೊಪ್ಪ, ಎನ್‌.ಆರ್‌.ಪುರ ತಾಲ್ಲೂಕುಗಳಿಗೆ ಭುವನಕೋಟೆ ಹಾಗೂ ಶೃಂಗೇರಿ ತಾಲ್ಲೂಕಿಗೆ ಅಡ್ಡಗದ್ದೆ ಸ್ಟಾಕ್‌ಯಾರ್ಡ್‌ ಮೀಸಲಿಡಲಾಗಿದೆ. ಆಯಾ ತಾಲ್ಲೂಕಿಗೆ ಮೀಸಲಿಟ್ಟಿರುವ ಸ್ಟಾಕ್‌ಯಾರ್ಡ್‌ಗಳಲ್ಲಿ ಮಾತ್ರ ಆಯಾಯ ತಾಲ್ಲೂಕಿನ ಸಾರ್ವಜನಿಕರು ಮತ್ತು ಸರ್ಕಾರಿ ಇಲಾಖೆಗಳು ಹಾಗೂ ಗುತ್ತಿಗೆದಾರರು ಮರಳು ಪಡೆಯಬೇಕು. 
 
ಚಿಕ್ಕಮಗಳೂರು ತಾಲ್ಲೂಕಿನ ಜನರು ಮರಳು ಬೇಕೆಂದರೆ ಉಪವಿಭಾಗಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಉಳಿದಂತೆ ಆಯಾಯ ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಬೇಕು. ಚಿಕ್ಕಮಗಳೂರು ತಾಲ್ಲೂಕಿಗೆ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಪ್ರವೇಶದ್ವಾರದಲ್ಲಿದ್ದ ಸಣ್ಣ ಉಳಿತಾಯ ಇಲಾಖೆ ಕಚೇರಿಯನ್ನು ಮರಳು ಪರವಾನಗಿ ವಿತರಣಾ ಕೇಂದ್ರಕ್ಕೆ ಮೀಸಲಿಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
 
ಹಿರಿತನ ಪರಿಗಣಿಸಿ ಮರಳು ವಿತರಣೆ: ಜಿಲ್ಲೆಯಲ್ಲಿ ಮರಳು ಬೇಡಿಕೆಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸಲ್ಲಿಕೆಯಾದ ಅವಧಿ ಆಧರಿಸಿ ಅರ್ಜಿ ವಿಂಗಡಿಸಲಾಗಿದೆ. ಸಾರ್ವಜನಿಕರು, ಸರ್ಕಾರಿ ಇಲಾಖೆಗಳು ಹಾಗೂ ಗುತ್ತಿಗೆದಾರರ ಅರ್ಜಿಗಳನ್ನು ಪ್ರತ್ಯೇಕವಾಗಿ ವಿಂಗಡಿಸಲಾಗಿದೆ. ಸಾರ್ವಜನಿಕರಿಗೆ ಮರಳು ವಿತರಿಸಲು ಮೊದಲ ಆದ್ಯತೆ ನೀಡಲಾಗಿದೆ. ಸರ್ಕಾರಿ ಕಾಮಗಾರಿಗಳಿಗೆ ಎಂ.ಸ್ಯಾಂಡ್‌ ಬಳಸಲು ಸರ್ಕಾರದ ಸುತ್ತೋಲೆ ಇರುವುದರಿಂದ ಎಂ.ಸ್ಯಾಂಡ್‌ ಬಳಕೆಗೆ ಸೂಚಿಸಲಾಗಿದೆ.
 
ಗ್ರಾಮೀಣ ಪ್ರದೇಶದಲ್ಲಿ ವಸತಿ ಯೋಜನೆಗಳ ಫಲಾನುಭವಿಗಳು ಮತ್ತು ಶೌಚಾಲಯ ಫಲಾನುಭವಿಗಳು ಎದುರಿಸುತ್ತಿರುವ ಮರಳು ಅಭಾವ ಸಮಸ್ಯೆ ಪರಿಹರಿಸಲು ಮೊದಲ ಆದ್ಯತೆ ನೀಡಲಾಗಿದೆ. ಅರ್ಜಿ ಸಲ್ಲಿಸಿಯೂ ಇದುವರೆಗೆ ಮರಳು ಪಡೆಯದವರಿಗೆ, ಈಗಾಗಲೇ ಅರ್ಧದಷ್ಟು ಮರಳು ಪಡೆದಿರುವವರಿಗೆ, ಸರ್ಕಾರಿ ಕಾಮಗಾರಿಗಳಿಗೆ ಆದ್ಯತಾನುಸಾರ ಕ್ರಮವಾಗಿ ಮರಳು ಪೂರೈಸಲು ಜಿಲ್ಲಾಡಳಿತ ನಿರ್ಧರಿಸಿದೆ.
 
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್‌.ವೈಶಾಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ, ಉಪವಿಭಾಗಾಧಿಕಾರಿ ಸಂಗಪ್ಪ ಇದ್ದರು.
 
 
**
ಮರಳಿಗೂ ದರ– ಲಾರಿಗೂ ಬಾಡಿಗೆ ನಿಗದಿ
ಮರಳು ಕೊಡಲು ಗುತ್ತಿಗೆದಾರರು ಅಥವಾ ಸಂಬಂಧಿಸಿದ ಇಲಾಖೆಯವರು ಮನಸೋಇಚ್ಛೆ ದರ ವಸೂಲಿ ಮಾಡುವಂತಿಲ್ಲ. 1 ಕ್ಯುಬಿಕ್‌ ಮೀಟರ್‌ ಮರಳಿಗೆ ₹750 ನಿಗದಿಪಡಿಸಲಾಗಿದೆ. ಮೊದಲು ಒಂದು ಟಿಪ್ಪರ್‌ ಅಥವಾ ಲಾರಿ ಮರಳು ಸಾಗಣೆಗೆ ₹38ರಿಂದ ₹40 ಸಾವಿರದವರೆಗೆ ಪಡೆಯುತ್ತಿದ್ದರೆ ನ್ನುವ ದೂರುಗಳಿದ್ದ ಕಾರಣ ಲಾರಿ ಮಾಲೀಕರ ಜತೆ ಸಭೆ ನಡೆಸಿ, ಬಾಡಿಗೆ ದರ ನಿಗದಿಪಡಿಸಲಾಗಿದೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
 
ಕಣಚೂರು ಮತ್ತು ದೋಣಗುಡಿಗೆ ಯಿಂದ ಚಿಕ್ಕಮಗಳೂರು ತಾಲ್ಲೂಕಿನ ಯಾವುದೇ ಹಳ್ಳಿಗಳಿಗೆ ಮರಳು ಸಾಗಿಸಿದರೆ 1 ಟಿಪ್ಪರ್‌ (8 ಕ್ಯುಬಿಕ್‌ ಮೀಟರ್‌)ಗೆ ₹6,500 ಬಾಡಿಗೆ ನಿಗದಿಪಡಿಸಲಾಗಿದೆ. 
 
ಮೂಡಿಗೆರೆಯಲ್ಲಿ ಮರಳು ಸಾಗಣೆಗೆ ಹೆಚ್ಚಾಗಿ ಟ್ರ್ಯಾಕ್ಟರ್‌ ಬಳಸುವುದ ರಿಂದ ಜಿ.ಅಗ್ರಹಾರದಿಂದ 20 ಕಿ.ಮೀ. ವ್ಯಾಪ್ತಿಯೊಳಗೆ ಮರಳು ಸಾಗಿಸಲು ₹1500 ದರ ನಿಗದಿ. 35 ಕಿ.ಮೀ. ವ್ಯಾಪ್ತಿಯಲ್ಲಿ ಲಾರಿ ಅಥವಾ ಟಿಪ್ಪರ್‌ ಬಾಡಿಗೆ ₹4500 ನಿಗದಿ ಮಾಡಲಾಗಿದೆ. ಕಡೂರು ಮತ್ತು ತರೀಕೆರೆ ತಾಲ್ಲೂಕಿನವರಿಗೆ ಹಿರೇಸಿಗರ ಸ್ಟಾಕ್‌ಯಾರ್ಡ್‌ನಿಂದ ಮರಳು ಸಾಗಿಸಲು ಅಂದಾಜು 270 ಕಿ.ಮೀ ವ್ಯಾಪ್ತಿ ಪರಿಗಣಿಸಿ ಟಿಪ್ಪರ್‌ಗೆ ₹11500 ಬಾಡಿಗೆ ನಿಗದಿಪಡಿಸ ಲಾಗಿದೆ. ಜಿಲ್ಲೆಯಲ್ಲಿ ಜಿಪಿಎಸ್‌ ಅಳವಡಿಸಿರುವ 43 ಲಾರಿಗಳು ಮಾತ್ರ ನೋಂದಣಿಯಾಗಿದ್ದು, ಅರ್ಜಿದಾರರಿಗೆ ಎಂಡಿಪಿ (ಮಿನರಲ್‌ ಡಿಸ್ಪ್ಯಾಚ್‌ ಪರ್ಮಿಟ್‌) ನೀಡಿದ ತಕ್ಷಣ ಈ ಲಾರಿಗಳಿಗೆ ಸಾಗಣೆ ಅವಕಾಶ ತಾರತಮ್ಯವಿಲ್ಲದೆ ಹಂಚಿಕೆಯಾಗಲಿದೆ. ಕಂಪ್ಯೂಟರ್ ಮೂಲಕವೇ ಲಾರಿ ಮಾಲೀಕರಿಗೆ ಮಾಹಿತಿ ರವಾನೆಯಾಗಲಿದೆ. 1 ಲಾರಿಗೆ ಒಂದು ದಿನದ ಸಾಗಣೆಯ ಪರ್ಮಿಟ್‌ಗಿಂತ ಹೆಚ್ಚಿಗೆ ನೀಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT