ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಐಡಿ ತನಿಖೆಗೆ ಕಾಂಗ್ರೆಸ್‌ ಆಗ್ರಹ

ಶೃಂಗೇರಿ ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿ ಅಭಿಷೇಕ್ ಸಾವು ಪ್ರಕರಣ
Last Updated 14 ಜನವರಿ 2017, 6:02 IST
ಅಕ್ಷರ ಗಾತ್ರ

ಶೃಂಗೇರಿ: ಬಿಜೆಪಿ ತನ್ನ ಓಟು ಬ್ಯಾಂಕ್ ಹೆಚ್ಚಿಸಿಕೊಳ್ಳಲು ಎಬಿವಿಪಿ ಸಂಘಟನೆಯನ್ನು ಬಳಸಿಕೊಳ್ಳುತ್ತಿದೆ. ಶಾಸಕರಾದ ಡಿ.ಎನ್.ಜೀವರಾಜ್ ಯುವಕರಿಗೆ ಕೇಸರಿ ಶಾಲು ಹೊದಿಸಿ, ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕೊಪ್ಪ ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಸುಧೀರ್‌ಕುಮಾರ್ ಮುರೊಳ್ಳಿ ಆರೋಪಿಸಿದರು.

ಅವರು ಶುಕ್ರವಾರ ಕೆ.ವಿ.ಆರ್. ವೃತ್ತದಲ್ಲಿ ಶೃಂಗೇರಿ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ ಸಭೆಯಲ್ಲಿ ಮಾತನಾಡಿದರು. ಅಭಿಷೇಕ್ ಸಾವಿಗೆ ಕಾಂಗ್ರೆಸ್ ಕಾರಣವಲ್ಲ. ಶಿಡ್ಲೆಯ ಗಣಪತಿ ದೇವಾಲಯದಲ್ಲಿ ಪ್ರಮಾಣ ಮಾಡಿ ಬಂದಿದ್ದೇವೆ. ಜೀವರಾಜ್ ಅಧಿಪತ್ಯ ಪ್ರಾರಂಭವಾದ ನಂತರ ತನ್ನ ಹಿತಾಸಕ್ತಿಗಾಗಿ ಎಬಿವಿಪಿ ಸಂಘಟನೆ ಯನ್ನು ಬೆಳೆಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ರಾಜಕೀಯ ವಿಷಬೀಜ ಬಿತ್ತಿ ಅಮಾಯಕ ವಿದ್ಯಾರ್ಥಿ ಸಾವಿಗೆ ನೇರವಾಗಿ ಕಾರಣರಾಗಿದ್ದಾರೆ ಎಂದು ದೂರಿದರು.

ಅಭಿಷೇಕ್‌ ತಂದೆ ನಮ್ಮ ಪಕ್ಷದ ಬೂತ್ ಕಮಿಟಿ ಅಧ್ಯಕ್ಷರಾಗಿರುತ್ತಾರೆ. ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸಕ್ರಿಯವಾಗಿ ಪಕ್ಷದ ಪರ ಕೆಲಸ ಮಾಡಿದ್ದರು. ಇದರಿಂದಲೇ ಅವನ ಊರಿನಿಂದಲೇ ಮೌನ ಮೆರವಣಿಗೆ ಹೊರಟಿದ್ದೇವೆ. ತಾಕತ್ತಿದ್ದರೆ ಅಭಿಷೇಕ್ ಆತ್ಮಹತ್ಯೆಯನ್ನು ಸಿಐಡಿ ತನಿಖೆಗೆ ಒಪ್ಪಿಸಲಿ. ವಿದ್ಯಾರ್ಥಿ ಸಾವಿನ ಹಿಂದೆ ಯಾರ ಕೈವಾಡ ಇದೆ ಎಂಬುದು ತನಿಖೆಯಿಂದ ಗೊತ್ತಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಬೇಕು. ನಮ್ಮ ತಪ್ಪು ಎಂದು ಸಾಬೀತಾದರೆ ನಾವು ಯಾವ ಶಿಕ್ಷೆಯನ್ನು ಅನುಭವಿಸಲು ಸಿದ್ದರಿದ್ದೇವೆ ಎಂದರು.

ಕಾಂಗ್ರೆಸ್ ಮುಖಂಡ ಟಿ.ಡಿ.ರಾಜೇಗೌಡ ಮಾತನಾಡಿ, ಸುಳ್ಳು ಭಾಷಣ ಮಾಡುವ ಕೆಲವು ಡೋಂಗಿ ಹಿಂದುತ್ವವಾದಿ ಮುಖಂಡರನ್ನು ಕರೆಸಿ ಭಾಷಣ ಮಾಡಿಸಿ, ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲಾಗುತ್ತಿದೆ ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಾರನಕೂಡಿಗೆ ನಟರಾಜ್ ಮಾತನಾಡಿ, ಬಜರಂಗದಳದ ಸ್ವಯಂ ಸೇವಕನೊಬ್ಬ ಹಿಂದೆ ಹೊಳೆಗೆ ಬಿದ್ದು ಮೃತಪಟ್ಟ ಕುಟುಂಬಕ್ಕೆ ₹ 10ಲಕ್ಷಕ್ಕೂ ಮಿಗಿಲಾಗಿ ಸಂಗ್ರಹಿಸಿದ ಹಣವನ್ನು ಕೆಲವು ವ್ಯಕ್ತಿಗಳು ನುಂಗಿದ್ದಾರೆ. ಈ ಕುಟುಂಬಕ್ಕೆ ಡಿ.ಎನ್.ಜೀವರಾಜ್ ಅವರು ಏನು ನ್ಯಾಯಕೊಡಿಸಿದರೆಂದು ಕ್ಷೇತ್ರದ ಜನತೆಗೆ ಅವರು ತಿಳಿಸಲಿ ಎಂದರು.

ಕಾಂಗ್ರೆಸ್ ಮುಖಂಡರಾದ ಡಾ. ಅಂಶುಮಂತ್, ಅಸುಗೋಡು ನಾಗೇಶ್, ರಮೇಶ್ ಭಟ್, ಉಮೇಶ್ ಪೊದು ವಾಳ್, ಕೆ.ಸಿ.ವೆಂಕಟೇಶ್, ಪೂರ್ಣಿಮಾ ಸಿದ್ಧಪ್ಪ, ಶಕೀಲಾ ಗುಂಡಪ್ಪ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಚಂದ್ರಮತಿ ತಿಮ್ಮಪ್ಪ, ಸದಸ್ಯೆ ರೇಖಾ, ಕುರಾದಮನೆ ವೆಂಕಟೇಶ್, ಡಿ.ಸಿ.ಸಿ ಬ್ಯಾಂಕ್ ದೀನೆಶ್ ಹೆಗ್ಡೆ, ನವೀನ್ ಕಲ್ಕುಳಿ, ನೂತನ್ ಕಲ್ಕುಳಿ, ದಿನೇಶ್ ಶೆಟ್ಟಿ, ರಫೀಕ್ ಮೊದಲಾದವರು ಹಾಜರಿದ್ದರು. ಇದಕ್ಕೂ ಮೊದಲು ಕಪ್ಪುಪಟ್ಟಿ ಯನ್ನು ಧರಿಸಿಕೊಂಡು ಕೆ.ವಿ.ಆರ್ ವೃತ್ತದ ತನಕ ಮೌನ ಮೆರವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT