ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಣ, ಬಿರುಸುಗಳ ನಡುವೆ ಚಾಲನೆ

ಇತಿಹಾಸ ನಿರ್ಮಿಸಲಿರುವ ಜೂನಿಯರ್‌ ವಾಲಿಬಾಲ್ ಚಾಂಪಿಯನ್‌ಷಿಪ್‌: ಸಚಿವ ಆಂಜನೇಯ
Last Updated 14 ಜನವರಿ 2017, 6:30 IST
ಅಕ್ಷರ ಗಾತ್ರ
ಚಿತ್ರದುರ್ಗ: ನಭದಲ್ಲಿ ಚಿಮ್ಮಿದ ಬಾಣ ಬಿರುಸುಗಳು, ಪುಷ್ಪವಲ್ಲಿ ಚೆಲ್ಲಿದ ರಾಕೆಟ್‌ಗಳು, ಡಮ್ ಡಮಾರ್ ಎಂದು ಶಬ್ದ ಮಾಡುತ್ತಲೇ ಚಿತ್ತಾರ ಮೂಡಿಸಿದ ಪಟಾಕಿಗಳ ನಡುವೆ ಐತಿಹಾಸಿಕ ಕೋಟೆನಾಡು ಚಿತ್ರದುರ್ಗದಲ್ಲಿ ಶುಕ್ರ ವಾರ ಸಂಜೆಯಲ್ಲಿ 43ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿ ಯನ್‌ಷಿಪ್‌ ವಿಧ್ಯುಕ್ತವಾಗಿ ಆರಂಭವಾಯಿತು.
 
ದೆಹಲಿ, ಪಂಜಾಬ್, ಚಂಡಿಗಡ, ಉತ್ತರ ಪ್ರದೇಶ, ಮಧ್ಯಪ್ರದೇಶ, ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ 26 ಬಾಲಕರ ತಂಡ ಮತ್ತು 15 ಬಾಲಕಿಯರ ತಂಡ ಮತ್ತು ನೂರಾರು ಕ್ರೀಡಾಭಿಮಾನಿಗಳ ಸಮ್ಮುಖ­ದಲ್ಲಿ ವಾಲಿಬಾಲ್ ಪಂದ್ಯಾ ವಳಿಗೆ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಚಾಲನೆ ನೀಡಿದರು.
 
‘ಕ್ರಿಕೆಟ್ ಅಬ್ಬರದಲ್ಲಿ ಮರೆ ಯಾಗುತ್ತಿರುವ ವಾಲಿ ಬಾಲ್‌ನಂತಹ ದೇಸಿ ಕ್ರೀಡೆಯನ್ನು ರಾಷ್ಟ್ರೀಯ ಪಂದ್ಯಾವಳಿ ಆಯೋಜಿಸುವ ಮೂಲಕ ಚಿತ್ರದುರ್ಗ ಪ್ರೋತ್ಸಾಹಿಸುತ್ತಿದೆ. ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಈ ಪಂದ್ಯ ನಡೆಯುತ್ತಿ ರುವುದು ಅಭಿನಂದನೀಯ ಕಾರ್ಯ’ ಎಂದು ಸಿದ್ದೇಶ್ವರ ಶ್ಲಾಘಿಸಿದರು.
 
‘ರಿಯೋ ಒಲಿಪಿಂಕ್ಸ್‌ನಲ್ಲಿ ಪಿ.ವಿ.ಸಿಂಧು, ಸಾಕ್ಷಿ ಮಲ್ಲಿಕ್, ದೀಪಾ ಕರ್ಮಾಕರ್ ಸೇರಿದಂತೆ ಹಲವರು ದೇಶಕ್ಕೆ ಪದಕಗಳನ್ನು ತಂದುಕೊಟ್ಟು ಭಾರತದ ಕೀರ್ತಿಯನ್ನು ಬೆಳಗಿಸಿದರು. ದೇಶದ ನಾನಾ ಭಾಗಗಳಿಂದ ಪಾಲ್ಗೊಂಡಿರುವ ಕ್ರೀಡಾಪಟುಗಳು ಅಂಥ ಸಾಧಕ ಕ್ರೀಡಾಪಟುಗಳಾಗ ಬೇಕು’ ಎಂದು ಅವರು ಹಾರೈಸಿದರು. 
 
ಬಳ್ಳಾರಿ ಸಂಸದ ಶ್ರೀರಾಮುಲು ಮಾತನಾಡಿ, ಇತಿಹಾಸ ಸೃಷ್ಟಿಸುವಂತಹ ಪಂದ್ಯವನ್ನು ಆಯೋಜಿಸಿದ ಮಾದಾರ ಚನ್ನಯ್ಯ ಶ್ರೀಗಳನ್ನು ಅಭಿನಂದಿಸಿದರು. ‘ದೇಶದ ಬೇರೆ ಬೇರೆ ದಿಕ್ಕುಗಳಿಂದ ಕ್ರೀಡಾಪಟುಗಳು ಬಂದಿದ್ದೀರಿ. ನಿಮ್ಮ ಪ್ರತಿಭೆ ತೋರಿಸಿ. ಸೋಲು–ಗೆಲುವು ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಕ್ರೀಡಾ ಸ್ಫೂರ್ತಿ ಯಿಂದ ಪಾಲ್ಗೊಳ್ಳಿ’ ಎಂದು ಶುಭ ಹಾರೈಸಿದರು.
 
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಎಚ್. ಆಂಜನೇಯ, ‘ಚಿತ್ರದುರ್ಗ ಐತಿಹಾಸಿಕ ಸ್ಥಳ. ಕಲ್ಲಿಕೋಟೆಯಿಂದ ಪ್ರಸಿದ್ಧ. ಇಂಥ ಸ್ಥಳದಲ್ಲಿ ಇತಿಹಾಸ ಸೃಷ್ಟಿಸುವಂತಹ ರಾಷ್ಟ್ರೀಯ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಮಾದಾರ ಚನ್ನಯ್ಯ ಶ್ರೀಗಳು ಸೇರಿದಂತೆ ಅನೇಕ  ಕ್ರೀಡಾ ಪ್ರೇಮಿಗಳು ಇತಿಹಾಸ ಸೃಷ್ಟಿಸುತ್ತಿದ್ದಾರೆ’ ಎಂದು ಶ್ಲಾಘಿಸಿದರು.
 
‘ಕ್ರೀಡಾಪಟುಗಳಿಗೆ ವಸತಿ ಬಹಳ ಮುಖ್ಯ. ಅದಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯ ಎರಡು ಹೊಸ ಹಾಸ್ಟೆಲ್‌ಗಳನ್ನೇ  ಬಿಟ್ಟುಕೊಟ್ಟಿದ್ದೇವೆ. ವಸತಿ ವ್ಯವಸ್ಥೆಯನ್ನು ಕಂಡು ರಾಷ್ಟ್ರೀಯ ವಾಲಿಬಾಲ್ ಫೆಡರೇಷನ್ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮೆಚ್ಚುಗೆ ಸೂಚಿಸಿ ದ್ದಾರೆ’ ಎಂದು ಅವರು ಹೇಳಿದರು. 
 
‘ಕುಸ್ತಿ ಪೈಲ್ವಾನರನ್ನು ನಾಡಿಗೆ ಕೊಟ್ಟ ಜಿಲ್ಲೆ ಇದು. ಇಂಥ ನೆಲದಲ್ಲಿ ರಾಷ್ಟ್ರೀಯ ಕ್ರೀಡೆ ನಡೆಯುತ್ತಿದೆ. ಅಂತರರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸುವ ಆಶಯ ವಿದೆ’ ಎಂದು ಅವರು ತಿಳಿಸಿದರು. 
 
ಪಂದ್ಯಾವಳಿ ಆಯೋಜಕರಲ್ಲಿ ಪ್ರಮುಖರಾದ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ‘ಕಳೆದ ವರ್ಷ ಈ ಪಂದ್ಯಾವಳಿ ನಡೆಯಬೇಕಿತ್ತು. ಆಗ ಜಿ.ಎಂ.ಸಿದ್ದೇಶ್ವರ ಕೇಂದ್ರದ ಸಚಿವ ರಾಗಿದ್ದರು. ಈಗ ನಡೆಯುತ್ತಿದೆ. ನಮ್ಮೂರಿನ ಪುತ್ರರಾಗಿ ಪಂದ್ಯಾ ವಳಿಯನ್ನು ಸಿದ್ದೇಶ್ವರ ಅವರೇ ಉದ್ಘಾ ಟಿಸುತ್ತಿದ್ದಾರೆ’ ಎಂದು ಹೇಳಿದರು.
 
‘ಕ್ರೀಡಾಕೂಟಕ್ಕೆ ಅನೇಕ ತೊಡಕು ಗಳು ಎದುರಾದವು. ಅವೆಲ್ಲವನ್ನೂ  ಅಸೋಸಿಯೇಷನ್‌ ಅಧ್ಯಕ್ಷ, ಕಾರ್ಯ ದರ್ಶಿ ನಿವಾರಿಸಿ­ದರು. ಇಷ್ಟು ದೊಡ್ಡ ಕ್ರೀಡಾಕೂಟಕ್ಕೆ ಚಿತ್ರದುರ್ಗದ ಸ್ಥಳೀಯ ಕೊಡುಗೈ ದಾನಿಗಳು ಬಹಳ ದೊಡ್ಡ ಸಹಾಯ ಮಾಡಿದ್ದಾರೆ. ಜತೆಗೆ ಸಚಿವ ಆಂಜನೇಯ, ಸಂಸದ ಚಂದ್ರಪ್ಪ ಗಟ್ಟಿಯಾಗಿ ಕೈಜೋಡಿಸಿದ್ದಾರೆ. ಮಾಜಿ ಸಂಸದ ಎಚ್. ಹನುಮಂತಪ್ಪ ಮಾರ್ಗ ದರ್ಶನ ನೀಡಿದ್ದಾರೆ’ ಎಂದರು. 
 
ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿ, ‘ಬರಗಾಲವಿದ್ದರೂ  ಕ್ರೀಡೆ ಸಾಹಿತ್ಯ ಲೋಕಕ್ಕೆ ಬರವಿಲ್ಲ. ಇಲ್ಲಿನ ದಾನಿಗಳು ಇಂಥ ಕ್ರೀಡಾಕೂಟಕ್ಕೆ ತನು ಮನ ಧನವನ್ನು ಪ್ರೀತಿಯಿಂದ ಧಾರೆಯೆರೆದಿದ್ದಾರೆ. ಏಳು ದಿನಗಳ ಕ್ರೀಡಾಕೂಟ ಯಶಸ್ವಿಯಾಗಲಿ’ ಎಂದು ಹಾರೈಸಿದರು. ಮಾಜಿ ಸಂಸದ ಎಚ್. ಹನುಮಂತಪ್ಪ ಸ್ವಾಗತಿಸಿದರು.
 
ಕಾರ್ಯಕ್ರಮದಲ್ಲಿ ಚಿತ್ರದುರ್ಗ ತಾಲ್ಲೂಕಿನ ಮೆದೇಹಳ್ಳಿ ಮೂಲದ ಸಿನಿಮಾ ನಟ ಶಿವಕುಮಾರ್ ಮತ್ತು ಪತ್ನಿ ಶ್ರೀರಕ್ಷಾ ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.  ವೇದಿಕೆಯಲ್ಲಿ ರಾಷ್ಟ್ರೀಯ ವಾಲಿಬಾಲ್ ಫೆಡರೇಷನ್‌ ಅಧ್ಯಕ್ಷ ಬೆಟ್ಟೇಗೌಡ, ಪ್ರಧಾನ ಕಾರ್ಯದರ್ಶಿ ನಂದಕುಮಾರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ನವೀನ್, ಕಾಂಗ್ರೆಸ್ ಮುಖಂಡ ಮೆಹಬೂಬ್ ಖಾನ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ನರಸಿಂಹರಾಜು, ನಾಗೇಂದ್ರ ನಾಯ್ಕ್ ಮತ್ತಿತರರು ಹಾಜರಿದ್ದರು. ಮುರಾರ್ಜಿ ಸಂಗಡಿಗರು ವಂದೇಮಾತರಂ, ನಾಡಗೀತೆ ಹಾಡಿದರು. ಬೆಂಗಳೂರಿನ ಚೈತ್ರಾ ನಿರೂಪಿಸಿದರು.
 
**
ನಗರದಲ್ಲಿ ಮೆರವಣಿಗೆ 
ನಗರದ ಹಳೆಮಾಧ್ಯಮಿಕ ಶಾಲಾ ಮೈದಾನದಲ್ಲಿ ಶುಕ್ರವಾರದಿಂದ ಆರಂಭವಾದ 43ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಬಂದಿದ್ದ ವಿವಿಧ ರಾಜ್ಯಗಳ ಕ್ರೀಡಾಪಟುಗಳನ್ನು ಮೆರವಣಿಗೆ ಮೂಲಕ ಆಯೋಜಕರು ಸ್ವಾಗತಿಸಿದರು.
 
ನಗರದ ಮದಕರಿನಾಯಕನ ವೃತ್ತದಲ್ಲಿ ಕ್ರೀಡಾಪಟುಗಳ ಮೆರವಣಿಗೆಗೆ ಸಂಸದ ಬಿ.ಎನ್.ಚಂದ್ರಪ್ಪ ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು. ಸಂಜೆ 4ಕ್ಕೆ ಆರಂಭವಾಗಬೇಕಿದ್ದ ಮೆರವಣಿಗೆ ಒಂದು ಗಂಟೆ ತಡವಾಗಿ ಆರಂಭವಾಯಿತು. ಪ್ರತಿ  ರಾಜ್ಯದ ತಂಡವನ್ನು ಒಬ್ಬೊಬ್ಬ ಸ್ಕೌಟ್ಸ್‌ ವಿದ್ಯಾರ್ಥಿ ಆಯಾ ರಾಜ್ಯದ ಹೆಸರಿನ ಫಲಕವನ್ನು ಹಿಡಿದು ಮುನ್ನಡೆಸಿದರು. 
 
ಮದಕರಿವೃತ್ತದಿಂದ ಆರಂಭ ವಾದ ಮೆರವಣಿಗೆ, ರಂಗಯ್ಯನ ಬಾಗಿಲು, ಬಸವಮಂಟಪ , ಗುರುಭವನದ ಮೂಲಕ ಬಿ.ಡಿ. ರಸ್ತೆಯಲ್ಲಿ ಎಸ್‌.ಬಿ.ಎಂ. ವೃತ್ತ, ಗಾಂಧಿ ವೃತ್ತವನ್ನು ಸುತ್ತು ಹಾಕಿ, ಸಭಾ ಕಾರ್ಯಕ್ರಮ ನಡೆಯುವ ಹಳ ಮಾಧ್ಯಮಿಕ ಶಾಲಾ ಮೈದಾನಕ್ಕೆ ಕರೆತರಲಾಯಿತು. ಮೈದಾನ ಪ್ರವೇಶಿಸಿದ ಕ್ರೀಡಾಪಟುಗಳನ್ನು ಪುಷ್ಪವೃಷ್ಟಿ ಸುರಿಸುವ ಮೂಲಕ ಸ್ಥಳೀಯ ಕ್ರೀಡಾಪ್ರೇಮಿಗಳನ್ನು  ಸ್ವಾಗತಿಸಿದರು. ಕರ್ನಾಟಕದ ಕ್ರೀಡಾಪಟುಗಳು ಮೈದಾನ ಪ್ರವೇಶಿಸುತ್ತಿದ್ದಂತೆ ಕ್ರೀಡಾ ಪ್ರೇಮಿಗಳು ಜೈಕಾರ ಕೂಗಿದರು. ನಂತರ ಸಭಾ ವೇದಿಕೆಯ ಮುಂಭಾಗದಲ್ಲಿ ರಾಜ್ಯವಾರು ಕ್ರೀಡಾಪಟುಗಳು ಸಾಲು ಸಾಲಾಗಿ ನಿಂತರು.  
 
ಮೆರವಣಿಗೆಯಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ, ಸಂಸದ ಬಿ.ಎನ್. ಚಂದ್ರಪ್ಪ, ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ, ಉಪಾಧ್ಯಕ್ಷ ಮಲ್ಲೇಶಪ್ಪ, ಮಾಜಿ ಶಾಸಕ ಎಸ್. ಕೆ.ಬಸವರಾಜನ್, ಸೌಭಾಗ್ಯ ಬಸವರಾಜನ್, ಜಿಲ್ಲಾ ಪಂಚಾಯ್ತಿ ಸದಸ್ಯ ಪ್ರಕಾಶ್ ಮೂರ್ತಿ ಮತ್ತು ಪಂದ್ಯಾವಳಿ ಆಯೋಜಕ ಸಮಿತಿ ಸದಸ್ಯರು ಹಾಜರಿದ್ದರು.
 
**
ಪಂದ್ಯಾವಳಿಯಲ್ಲಿ ಇಂದು 
ರಾಷ್ಟ್ರೀಯ  ಜೂನಿಯರ್ ವಾಲಿಬಾಲ್ ಚಾಂಪಿಯನ್‌ಷಿಪ್: ನೇತೃತ್ವ: ಸಾಣೇಹಳ್ಳಿ ಮಠದ ಪಂಡಿತರಾಧ್ಯ ಶಿವಚಾರ್ಯ ಸ್ವಾಮೀಜಿ. ಕಬೀರಾನಂದಾಶ್ರಮದ ಶಿವಾಲಿಂಗಾನಂದ ಸ್ವಾಮೀಜಿ. ಹೊನಲು ಬೆಳಕಿನ ಉದ್ಘಾಟನೆ: ಕಾನೂನು ಮತ್ತು ಸಂಸದೀಯ ವ್ಯವ ಹಾರಗಳ ಸಚಿವ ಟಿ.ಬಿ. ಜಯಚಂದ್ರ.
 
ಅಧ್ಯಕ್ಷತೆ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವ ರಾಜನ್.
ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ: ಶಾಸಕ ಡಿ.ಸುಧಾಕರ್,  ಸಂಸದ ಮುದ್ದ ಹನುಮೇಗೌಡ.
ಅತಿಥಿಗಳು: ಮಾಜಿ ಸಚಿವರಾದ ಆರ್.ಬಿ.ತಿಮ್ಮಾಪುರ, ಅಳಕೊಡು ಹನುಮಂತಪ್ಪ, ಶಾಸಕರಾದ ರಾಜೇಶ್, ರಘು ಆಚಾರ್,  ಮಾಜಿ ಶಾಸಕರಾದ ಎಂ.ಚಂದ್ರಪ್ಪ, ಎಸ್.ವಿ. ರಾಮ ಚಂದ್ರಪ್ಪ, ಡಾ.ಎಲ್. ಹನು ಮಂತಯ್ಯ, ದಾವಣಗೆರೆ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ, ಸದಸ್ಯ ಕೆ.ಎಸ್. ಬಸವರಾಜ್,ಆರ್‌ಟಿಐ ಆಯುಕ್ತ  ನೆಲಮಂಗಲ ಕೃಷ್ಣಮೂರ್ತಿ, ಜೆಡಿಎಸ್ ಮುಖಂಡ ಹೊದಿಗೆರೆ ರಮೇಶ್, ಹೊಳಲ್ಕೆರೆ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮೋಹನ್ ನಾಗರಾಜ್. ನಿರೂಪಣೆ: ಮಮತಾ ನೇರ್ಲಗಿ.  ಕ್ಲಾಸಿಕಲ್ ನೃತ್ಯ ತಂಡದಿಂದ ಆಕರ್ಷಕ ನೃತ್ಯ ಪ್ರದರ್ಶನ. ಹಳೇ ಮಾಧ್ಯಮಿಕ ಶಾಲಾ ಆವರಣ. ಸಂಜೆ 6ಕ್ಕೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT