ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿಗೆ ಬರದ ಛಾಯೆ

Last Updated 14 ಜನವರಿ 2017, 6:42 IST
ಅಕ್ಷರ ಗಾತ್ರ
ಹರಿಹರ: ಸಂಕ್ರಮಣ ಕಾಲದಲ್ಲಿ ನದಿಯಲ್ಲಿ ಸ್ನಾನ ಹಾಗೂ ಸಹ ಭೋಜನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ಪ್ರತೀತಿ. ನದಿ ನೀರು ಹರಿಯುವುದನ್ನು ಮರೆತು ಮಡುಗಟ್ಟಿ ದುರ್ನಾತ ಬೀರುತ್ತಿರುವುದು ಪುಣ್ಯಸ್ನಾನಕ್ಕೆ ಸಂಚಕಾರ ಉಂಟುಮಾಡಿರುವ ಜತೆಗೆ ಹಬ್ಬದ ಸಂಭ್ರಮಕ್ಕೂ ಅಡ್ಡಿಯೊಡ್ಡಿದೆ.
 
ನಗರದ ಇತಿಹಾಸ ಪ್ರಸಿದ್ಧ ಸಂಕ್ರಾಂತಿ ಆಚರಣೆಗೆ ಸುತ್ತಮುತ್ತಲಿನ ಹಲವಾರು ಜಿಲ್ಲೆಗಳ ಸಾವಿರಾರು ಜನರು ಕುಟುಂಬ ಹಾಗೂ ಬಂಧುಮಿತ್ರರ ಸಮೇತ ಪುಣ್ಯಸ್ನಾನಕ್ಕಾಗಿ ನದಿಗೆ ಬರುತ್ತಾರೆ. ಈ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾಗುವುದು ಸಾಮಾನ್ಯ. ನದಿಪಾತ್ರದಲ್ಲಿ ಹಾಗೂ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆಯ ಪರಿಣಾಮ, ನಿಂತ ನದಿ ನೀರಿನಲ್ಲಿ ಎಲ್ಲೆಲ್ಲಿ ಗುಂಡಿಗಳಿವೆ ಎನ್ನುವುದು ಸಾರ್ವಜನಿಕರಿಗೆ ತಿಳಿಯದಂತಾಗಿದೆ. ಅಪಾಯದ ಸಾಧ್ಯತೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಅಪಾಯಕಾರಿ ಸ್ಥಳಗಳ ಬಳಿ ಸೂಚನಾ ಫಲಕಗಳನ್ನು ಹಾಕುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.
 
ಹರಿಹರೇಶ್ವರ ದೇವಸ್ಥಾನ ಹಿಂಭಾಗ ನದಿ ಮಧ್ಯದಲ್ಲಿರುವ ಮಂಟಪಕ್ಕೆ ಚಿಕ್ಕ ಮಕ್ಕಳೂ ಸಲೀಸಾಗಿ ನಡೆದುಕೊಂಡು ಹೋಗಬಹುದಾದಷ್ಟು ನೀರಿನ ಮಟ್ಟ ಇಳಿದಿದೆ. ಆದರೆ, ಅಕ್ರಮ ಮರಳು ಗಾರಿಕೆ ಸೃಷ್ಟಿಸಿರುವ ಗುಂಡಿಗಳು ಮಕ್ಕಳ ಜೀವಕ್ಕೆ ಅಪಾಯ ಒಡ್ಡುವ ಸಾಧ್ಯತೆ ಇದೆ.
 
ಸೇತುವೆ ಕಾಮಗಾರಿ ನಡೆಯು ತ್ತಿರುವ ಹಿನ್ನೆಲೆ ಎಲ್ಲೆಂದರಲ್ಲಿ ಕಬ್ಬಿಣ ತುಂಡು ಹಾಗೂ ಕಾಂಕ್ರೀಟ್‌ ಅವಶೇಷ ಗಳಿದ್ದು, ಸ್ನಾನಕ್ಕೆ ಬರುವವರಿಗೆ ಅಪಾಯ ಸೃಷ್ಟಿಸಿವೆ. ಪ್ಲಾಸ್ಟಿಕ್‌ ಹಾಗೂ ಬಳಸಿ ಬಿಸಾಡಿದ ಬಟ್ಟೆಗಳಿಂದ ಪರಿಸರ ಹಾಗೂ ನೀರು ಸಂಪೂರ್ಣವಾಗಿ ಕಲುಷಿತ ಗೊಂಡಿದೆ. ನದಿ ತೀರಕ್ಕೆ ಕುಟುಂಬ ಸಮೇತ ಸಹಭೋಜನಕ್ಕೆ ಆಗಮಿಸು ವವರು ಶುದ್ಧ ಕುಡಿಯುವ ನೀರನ್ನು ಒಯ್ಯಬೇಕಾದ ದುಃಸ್ಥಿತಿ ಸೃಷ್ಟಿಸಿದೆ ಎಂದು ಮಂಜುನಾಥ ಗದ್ಗಿಮಠ ಅಭಿಪ್ರಾಯ ಹಂಚಿಕೊಂಡರು. 
 
ಹರಿಹರವನ್ನು ಯಾತ್ರಾಸ್ಥಳವನ್ನಾಗಿ ಅಭಿವೃದ್ಧಿಪಡಿಸಿಬೇಕು ಎಂಬುದು ಇಲ್ಲಿನ ನಾಗರಿಕರ ಹಲವಾರು ದಿನಗಳ ಕನಸು. ಈ ಬಗ್ಗೆ ಜನಪ್ರತಿನಿಧಿಗಳು ಭರವಸೆ ನೀಡುತ್ತಿದ್ದರೂ, ಅದಕ್ಕೆ ಬೇಕಾದ ಸೌಲಭ್ಯಗಳ ಒದಗಿಸುವುದರಲ್ಲಿ ವಿಫಲರಾಗಿದ್ದಾರೆ. ಪ್ರತಿವರ್ಷ ಆಚರಿಸುವ ಸಂಕ್ರಾಂತಿಗೆ ನದಿ ದಡದಲ್ಲಿ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ನಿರ್ಮಿಸಿಕೊಡುವ ಬದ್ಧತೆಯನ್ನು ತಾಲ್ಲೂಕು ಆಡಳಿತ ಹಾಗೂ ಅಧಿಕಾರಿಗಳು ಪ್ರದರ್ಶಿಸಬೇಕು ಎಂಬುದು ನಾಗರಿಕರ ಆಗ್ರಹ.
 
**
ಪುಣ್ಯಸ್ನಾನಕ್ಕೆ  ನೀರಿನ  ಕೊರತೆ
ಮಲೇಬೆನ್ನೂರು: ಸಮೀಪದ ಉಕ್ಕಡಗಾತ್ರಿಯಲ್ಲಿ ತುಂಗಭದ್ರಾ ನದಿ ನೀರಿಲ್ಲದೇ ಒಣಗಿ ಹೋಗಿದ್ದು, ಸಂಕ್ರಮಣದ ಪುಣ್ಯ ಸ್ನಾನಕ್ಕೆ ನೀರಿನ ಕೊರತೆ ಎದುರಾಗಿದೆ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಿದ್ದ ದೃಶ್ಯ ಶುಕ್ರವಾರ ಕಂಡುಬಂತು.
 
ಪ್ರತಿ ಬಾರಿ ತುಂಬಿ ಹರಿಯುತ್ತಿದ್ದ ನದಿ ಮಳೆ ಕೊರೆತೆಯಿಂದ ಬರಿದಾಗಿದೆ. ಒಡಲು ಬರಿದಾಗಿ ಕಾಲುವೆ ಮಾದರಿಯಲ್ಲಿ ನದಿ ಮಧ್ಯಭಾಗದಲ್ಲಿ ಸ್ವಲ್ಪವೇ ನೀರು ಹರಿಯುತ್ತಿದೆ.
 
ನದಿ ದಂಡೆ ತ್ಯಾಜ್ಯ ವಸ್ತುಗಳಿಂದ ತುಂಬಿ ಹೋಗಿದೆ. ಜನತೆ ಕೊಳಕು ನೀರಿನಲ್ಲಿ ಸಂಕ್ರಮಣದ ಪುಣ್ಯಸ್ನಾನ ಮಾಡುವ ಪರಿಸ್ಥಿತಿ ಎದುರಾಗಿದೆ.
 
ಮರಳ ಹೊಂಡ: ನದಿಪಾತ್ರದಲ್ಲಿ ಕಳೆದ ಎರಡು ವರ್ಷದಿಂದ ಜೆಸಿಬಿ ಯಂತ್ರ ಬಳಸಿ ಮರಳು ತೆಗೆದ ಕಾರಣ ಹೊಂಡ ಗುಂಡಿ ನಿರ್ಮಾಣವಾಗಿ ಅಪಾಯಕಾರಿ ಸ್ಥಳ ನಿರ್ಮಾಣ ವಾಗಿವೆ. ಎರಡು ವರ್ಷಗಳ ಹಿಂದೆ  ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಪ್ರಾಣಕ್ಕೆ ಕೂಡ ಹಾನಿ ಆಗಿದೆ. ಆದರೆ, ಎಲ್ಲಿಯೂ ಅಪಾಯಕಾರಿ ಸ್ಥಳದ 
ನಾಮಫಲಕ ಬರೆಸದಿರುವುದು ವಿಪರ್ಯಾಸ.
 
ಮಳೆಗಾಲದಲ್ಲಿ ಹೆಚ್ಚು ನೀರು ಹರಿದು ಬರುವ ಮುನ್ನ ಎಚ್ಚರಿಸುವ ಕಂದಾಯ ಇಲಾಖೆ ಸಂಕ್ರಮಣದ ವೇಳೆ ಮುನ್ನೆಚ್ಚರಿಕೆ ವಹಿಸಬೇಕು ಎನ್ನುತ್ತಾರೆ ನದಿ ಪಾತ್ರದ ಗೋವಿನಹಾಳು, ನಂದಿಗುಡಿ, ಪಾಳ್ಯ, ಎಳೆಹೊಳೆ, ಉಕ್ಕಡಗಾತ್ರಿ ಗ್ರಾಮಸ್ಥರು. 
 
**
–ಆರ್‌. ರಾಘವೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT