ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ನೆಲದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರು

ಚಿಂತನ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ವಿಷಾದ
Last Updated 14 ಜನವರಿ 2017, 6:45 IST
ಅಕ್ಷರ ಗಾತ್ರ
ದಾವಣಗೆರೆ: ರಾಜ್ಯದಲ್ಲಿ ಕನ್ನಡ ಭಾಷೆಗೆ ಆತಂಕ ಎದುರಾಗಿದ್ದು, ಕಳೆದ 10 ವರ್ಷಗಳ ಅವಧಿಯಲ್ಲಿ 11,784 ಕನ್ನಡ ಶಾಲೆಗಳು ಮುಚ್ಚಿಹೋಗಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.
 
ಕರ್ನಾಟಕ ಏಕೀಕರಣಗೊಂಡು 60 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಕನ್ನಡ ಕನ್ನಡಿಗ ಮತ್ತು ಕರ್ನಾಟಕ’ ಕುರಿತ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕನ್ನಡ ಭಾಷೆಯ ಬೆಳವಣಿಗೆ ಬಗ್ಗೆ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ, ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.
 
‘ಬೆಂಗಳೂರು ಕನ್ನಡದ ನೆಲ ಎಂದು ಧೈರ್ಯವಾಗಿ ಹೇಳಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ವರ್ಷದಿಂದ ವರ್ಷಕ್ಕೆ ಕನ್ನಡ ಭಾಷಿಕರ ಸಂಖ್ಯೆ ಕ್ಷೀಣಿಸುತ್ತಿದೆ. ಬೆಂಗಳೂರಿನ ಆಡಳಿತ ಅನ್ಯಭಾಷಿಕರ ಕೈಸೇರುವ ಆತಂಕ ಎದುರಾಗಿದೆ. ಇದು ರಾಜ್ಯದ ರಾಜಧಾನಿಗೆ ಮಾತ್ರ ಸೀಮಿತವಾಗಿರದೆ ತುಮಕೂರು, ಮೈಸೂರು, ಮಂಗಳೂರು ಹೀಗೆ ರಾಜ್ಯವ್ಯಾಪಿ ವಿಸ್ತರಿಸಲಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಅನ್ಯಭಾಷಿಕರು ಬಲವಂತವಾಗಿ ಹಕ್ಕು ಚಲಾಯಿಸುತ್ತಿದ್ದರೆ, ಕನ್ನಡ ಭಾಷಿಕರು ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ’ ಎಂದು ವಿಷಾದಿಸಿದರು.
 
‘ತಮಿಳುನಾಡಿನಲ್ಲಿ ನೆಲ, ಜಲ, ಭಾಷೆಯ ಬಗ್ಗೆ ಅಭಿಮಾನ ಹೆಚ್ಚಾಗಿದೆ. ಇದೇ ಕಾರಣಕ್ಕೆ ತಮಿಳುನಾಡಿಗೆ ಯಾವ ವಿಚಾರದಲ್ಲೂ ಅನ್ಯಾಯವಾಗದು. ಕರ್ನಾಟಕದಲ್ಲಿ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಕಾವೇರಿ, ಮಹಾದಾಯಿ ಸೇರಿದಂತೆ ಗಡಿ ವಿವಾದಗಳಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕನ್ನಡ ಭಾಷೆಯು ಸಾರ್ವಭೌಮತ್ವವನ್ನೇ ಕಳೆದುಕೊಳ್ಳುತ್ತಿದೆ’ ಎಂದರು.
 
‘ಯುವಕರ ಬದುಕನ್ನು ರೂಪಿಸುವ ಶಿಕ್ಷಣ ಕ್ಷೇತ್ರದಲ್ಲಿ ತಲ್ಲಣ ಶುರುವಾಗಿದೆ. ಗ್ರಾಮೀಣ ಭಾಗದಲ್ಲಿ ಒಂದು ಇಂಗ್ಲಿಷ್‌ ಶಾಲೆ ಹುಟ್ಟಿಕೊಂಡರೆ, ಸುತ್ತಮುತ್ತಲಿನ ಸರ್ಕಾರಿ ಶಾಲೆಗಳು ಬಡವಾಗುತ್ತಿವೆ. ಕನ್ನಡ ಶಾಲೆಗಳು ಮಕ್ಕಳ ದಾಖಲಾತಿ ಇಲ್ಲದೆ ಸೊರಗಿ ಮುಚ್ಚುವ ಹಂತ ತಲುಪುತ್ತಿವೆ. ಈ ನಿಟ್ಟಿನಲ್ಲಿ ಶಿಕ್ಷಕರು, ಬಿಇಒಗಳು, ಡಿಡಿಪಿಐಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
 
‘ಮಾತೃಭಾಷೆ ಹೆಸರಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದಂಧೆ ನಡೆಯುತ್ತಿದೆ. ಕನ್ನಡ ಮಾಧ್ಯಮದ ಹೆಸರಲ್ಲಿ ಪರವಾನಗಿ ಪಡೆದು ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧಿಸುತ್ತಿರುವ ಶಾಲೆಗಳು ಅಕ್ರಮ–ಸಕ್ರಮದಡಿ ಕಾನೂನುಬದ್ಧ ವಾಗುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಕನ್ನಡ ಭಾಷೆ ಬೆಳವಣಿಗೆಗೆ ರಾಜ್ಯದಲ್ಲಿರುವಷ್ಟು ಅಕಾಡೆಮಿಗಳು, ಸಾಹಿತ್ಯ ಪರಿಷತ್‌ಗಳು, ಸಂಘ ಸಂಸ್ಥೆಗಳು ನೆರೆಯ ಯಾವ ರಾಜ್ಯಗಳಲ್ಲೂ ಇಲ್ಲ. ಆದರೂ ಕನ್ನಡ ಭಾಷೆಗೆ ಆತಂಕ ಎದುರಾಗಿರುವುದು ದುರಂತ ಎಂದರು.
 
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್‌.ಎಸ್‌.ಮಂಜುನಾಥ ಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡಪರ ಹೋರಾಟಗಾರ ಬಂಕಾಪುರದ ಚನ್ನಬಸಪ್ಪ ಹಾಗೂ  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾಮಲ್ಲಿಕಾರ್ಜುನ ಕಲಮರಳ್ಳಿ ಕನ್ನಡ ನಾಡು ನುಡಿ ಕುರಿತು ಮಾತನಾಡಿದರು.
 
ಕಾರ್ಯಕ್ರಮದಲ್ಲಿ ಡಿಡಿಪಿಐ ಎಚ್‌.ಎಂ.ಪ್ರೇಮಾ, ಪ್ರೊ.ಸಿ.ಎಚ್‌. ಮುರಿಗೇಂದ್ರಪ್ಪ, ಎನ್‌.ಎಸ್‌.ರಾಜು, ಪಿ.ನಾಗಭೂಷಣ ತೌಡೂರು, ಎ.ಆರ್.ಉಜ್ಜನಪ್ಪ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
 
**
‘ಕನ್ನಡದಲ್ಲಿ ನೀಟ್‌ಗೆ ಅನುಮತಿ ನೀಡಿ’
ಕನ್ನಡ ಭಾಷೆಯಲ್ಲಿ ‘ನೀಟ್‌’ ಪರೀಕ್ಷೆ ಬರೆಯಲು ಕೇಂದ್ರ ಸರ್ಕಾರ ಅನುಮತಿ ನೀಡದಿರುವುದು ಸರಿಯಲ್ಲ. ಸಂವಿಧಾನದಲ್ಲಿ ಕನ್ನಡ ಭಾಷೆಗೆ ಮಾನ್ಯತೆ ಇದ್ದು, ಇತರ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಿರುವಂತೆ ಕನ್ನಡ ಭಾಷೆಗೂ ನೀಡಬೇಕು. ಆದರೆ, ಮುಖ್ಯವಾಗಿ ಕನ್ನಡ ಭಾಷೆಯಲ್ಲಿ ‘ನೀಟ್’ ಪರೀಕ್ಷೆ ಬರೆಯಲು ತೊಡಕುಗಳಿವೆ. ಕನ್ನಡ ಭಾಷೆ ಯಲ್ಲಿ ವಿಜ್ಞಾನ ವಿಷಯಗಳ ಪಠ್ಯ ಲಭ್ಯವಿಲ್ಲದಿರುವಾಗ ವಿದ್ಯಾರ್ಥಿಗಳು ಕನ್ನಡದಲ್ಲಿ ಹೇಗೆ ಪರೀಕ್ಷೆ ಬರೆಯಲು ಸಾಧ್ಯ ಎಂದು ಪ್ರಶ್ನಿಸಿದರು.
 
ಈ ಬಗ್ಗೆ ಹಂಪಿ ಕನ್ನಡ ವಿವಿ ಕುಲಪತಿ ಅವರ ಬಳಿ ಚರ್ಚಿಸಿ ದಾಗ, ವಿಜ್ಞಾನ ವಿಷಯದ ಪಠ್ಯವನ್ನು ಕನ್ನಡಕ್ಕೆ ತರ್ಜುಮೆ ಮಾಡಲು ಹಿಂದಿನ ಸರ್ಕಾರದಲ್ಲಿ ಅನುದಾನ ಸ್ಥಗಿತಗೊಳಿಸಿರುವ ವಿಚಾರ ತಿಳಿಯಿತು ಎಂದು ಸಿದ್ದರಾಮಯ್ಯ ಆರೋಪಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT