ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೋಗಿಗಳ ರಕ್ಷಣೆ ನಮ್ಮದು, ನಮ್ಮ ರಕ್ಷಣೆ ನಿಮ್ಮದು’

ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಬೀದಿಗಿಳಿದ ವೈದ್ಯರು
Last Updated 14 ಜನವರಿ 2017, 8:50 IST
ಅಕ್ಷರ ಗಾತ್ರ
ದಾವಣಗೆರೆ: ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಈಚೆಗೆ ಮೂವರು ಕರ್ತವ್ಯ ನಿರತ ತರಬೇತಿ ವೈದ್ಯರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಶುಕ್ರವಾರ ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
 
ಕರ್ತವ್ಯ ಬಹಿಷ್ಕರಿಸಿ, ಕಪ್ಪುಪಟ್ಟಿ ಧರಿಸಿ ಪ್ರತಿಭಟನೆಗಿಳಿದ ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳು ಹಾಗೂ ವೈದ್ಯರು ಜಯದೇವ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರವೀಂದ್ರ ಮಾತನಾಡಿ, ‘ವೈದ್ಯರ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿದ್ದು, ಭಯದ ವಾತಾವರಣದಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಚಿಕಿತ್ಸೆ ವೇಳೆ ರೋಗಿ ಮೃತಪಟ್ಟರೆ ವೈದ್ಯರನ್ನೇ ಹೊಣೆ ಮಾಡಿ, ಹಲ್ಲೆ ನಡೆಸಲಾಗುತ್ತಿದೆ. ರೋಗಿಯ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೆ ವೈದ್ಯರ ಮೇಲೆ ದೈಹಿಕ ಹಲ್ಲೆ ನಡೆಸುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
‘ಚಿಕಿತ್ಸೆ ನೀಡುವಾಗ ವೈದ್ಯರು ಕರ್ತವ್ಯ ಲೋಪ ಎಸಗಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬೇಕು. ಆದರೆ, ಕೆಲವು ಕಿಡಿಗೇಡಿಗಳು ದುರುದ್ದೇಶಪೂರಿತವಾಗಿ ಹಲ್ಲೆಗೆ ಮುಂದಾಗಿ ಆಸ್ಪತ್ರೆಯ ಪೀಠೋಪರಣಗಳನ್ನು ಧ್ವಂಸಗೊಳಿಸು ತ್ತಿದ್ದಾರೆ. ಇದರಿಂದ ತಪ್ಪು ಮಾಡದ ಇತರ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ’ ಎಂದರು.
 
ಡಾ.ಕಾರ್ತಿಕ್‌, ಡಾ.ಹರ್ಷ ಹಾಗೂ ಡಾ.ಶಾಲಿನಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣದ ಇತರ ಆರೋಪಿಗಳನ್ನೂ ಶೀಘ್ರ ಬಂಧಿಸಬೇಕು. ವೈದ್ಯರು ನಿರ್ಭಯವಾಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕು ಎಂದು ಡಾ.ರವೀಂದ್ರ ಒತ್ತಾಯಿಸಿದರು.
 
ಹಲ್ಲೆಗೊಳಗಾದ ವೈದ್ಯೆ ಡಾ.ಶಾಲಿನಿ ಮಾತನಾಡಿ, ಚಿಕಿತ್ಸೆಗೆ ಬರುವಾಗ ರೋಗಿಗಳ ಕೆಲವು ಸಂಬಂಧಿಗಳು ಪಾನಮತ್ತರಾಗಿ ಬರುತ್ತಾರೆ. ಅವಾಚ್ಯವಾಗಿ ಮಾತನಾಡುತ್ತಾರೆ. ಇವೆಲ್ಲವನ್ನು ಸಹಿಸಿಕೊಂಡು ಚಿಕಿತ್ಸೆ ನೀಡಬೇಕಾಗುತ್ತದೆ. ಆಕಸ್ಮಿಕವಾಗಿ ರೋಗಿ ಮೃತಪಟ್ಟರೆ ವೈದ್ಯರನ್ನು ಹೊಣೆಮಾಡಿ ಹಲ್ಲೆ ನಡೆಸಲಾಗುತ್ತದೆ. ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರಿಗೆ ಅಗತ್ಯ ಭದ್ರತೆ ಒಗಗಿಸಬೇಕು ಎಂದು ಒತ್ತಾಯಿಸಿದರು.
 
ಪ್ರತಿಭಟನೆಯಲ್ಲಿ ಡಾ.ಸುನೀಲ್ ಕುಮಾರ್, ಡಾ.ರವಿ, ಡಾ.ಶಿವಲಿಂಗಪ್ಪ, ಡಾ.ಸಂಗಮೇಶ್, ಡಾ.ಚಂದನ್‌, ಡಾ.ಧರ್ಮರಾವ್ ಸೇರಿದಂತೆ ಐಎಂಎ ಸದಸ್ಯರು, ಕದಳಿ ಮಹಿಳಾ ವೇದಿಕೆ ಸದಸ್ಯರು, ಜಿಲ್ಲಾ ಮಕ್ಕಳ ಘಟಕ, ಜಿಲ್ಲಾ ನರ್ಸಿಂಗ್ ಹೋಂ ಸಂಘ, ಜಿಲ್ಲಾ ಶುಶ್ರುತ ಸಂಘ, ಔಷಧ ವ್ಯಾಪಾರಿಗಳ ಸಂಘದ ಸದಸ್ಯರು ಭಾಗವಹಿಸಿದ್ದರು.
 
**
ರೋಗಿಗಳ ಪರದಾಟ
ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ನಗರದ ಹಲವು ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಮುಷ್ಕರ ತಿಳಿಯದೆ ಗ್ರಾಮೀಣ ಭಾಗಗಳಿಂದ ಆಸ್ಪತ್ರೆಗೆ ಬಂದಿದ್ದ ರೋಗಿಗಳು ದಿಕ್ಕುತೋಚದೆ ಕುಳಿತಿದ್ದ ದೃಶ್ಯ ಕಂಡುಬಂತು. ಜಿಲ್ಲಾ ಆಸ್ಪತ್ರೆಯಲ್ಲಿ ಬೆರಳೆಣಿಕೆಯ ಸರ್ಕಾರಿ ವೈದ್ಯರು ಚಿಕಿತ್ಸೆ ನೀಡಿದರು.
 
**
ವೈದ್ಯರ ಮುಷ್ಕರದ ಬಿಸಿ ಜಿಲ್ಲಾ ಆಸ್ಪತ್ರೆಗೆ ತಟ್ಟಿಲ್ಲ, ಸರ್ಕಾರಿ ವೈದ್ಯರು ಅಗತ್ಯ ಸೇವೆ ಒದಗಿಸಿದ್ದಾರೆ. ಮುಷ್ಕರ ನಿರತ ವೈದ್ಯರು ಶೀಘ್ರ ಸೇವೆಗೆ ಹಾಜರಾಗುವ ವಿಶ್ವಾಸವಿದೆ.
–ಡಾ.ನೀಲಾಂಬಿಕೆ, ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT