ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಯ ನಿವೇಶನಕ್ಕೆ ಹಣದ ಬೇಡಿಕೆ

ನಗರಸಭೆ ಸಾಮಾನ್ಯ ಸಭೆಯಲ್ಲಿ ವಿರೋಧಪಕ್ಷದ ಸದಸ್ಯರ ಗಂಭೀರ ಆರೋಪ
Last Updated 14 ಜನವರಿ 2017, 8:59 IST
ಅಕ್ಷರ ಗಾತ್ರ
ಸಾಗರ: ‘ಆಶ್ರಯ ನಿವೇಶನ ಪಡೆಯುವ ಫಲಾನುಭವಿಗಳು ₹ 50 ಸಾವಿರದಿಂದ ₹ 1 ಲಕ್ಷದವರೆಗೆ ನಗರಸಭೆಯ ಆಡಳಿತ ಪಕ್ಷದ ಸದಸ್ಯರಿಗೆ ಹಣ ನೀಡಬೇಕಾಗಿದೆ ಎಂಬ ಗಂಭೀರವಾದ ಆರೋಪ ಕೇಳಿ ಬರುತ್ತಿದೆ’ ಎಂದು ನಗರಸಭೆಯ ವಿರೋಧ ಪಕ್ಷದ ಸದಸ್ಯ ಎಸ್.ಎಲ್‌.ಮಂಜುನಾಥ್ ದೂರಿದ್ದಾರೆ.
 
ಶುಕ್ರವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯ ಶೂನ್ಯ ವೇಳೆಯಲ್ಲಿ ಈ ಕುರಿತು ಮಾತನಾಡಿದ ಅವರು, ‘ಆಶ್ರಯ ನಿವೇಶನ ಹಂಚಿಕೆಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ದೂರು ಕೇಳಿ ಬರುತ್ತಿದೆ. ಈ ಸಂಬಂಧ ನಗರಸಭೆ ಆಡಳಿತ ಸ್ಪಷ್ಟನೆ ನೀಡಬೇಕು’ ಎಂದು ಒತ್ತಾಯಿಸಿದರು.
 
ನಗರ ಆಶ್ರಯ ಸಮಿತಿ ರಚನೆಯಾಗಿ ಎರಡು ವರ್ಷಗಳಿಗೂ ಹೆಚ್ಚಿನ ಕಾಲ ಪೂರೈಸಿದೆ. ಆದಾಗ್ಯೂ ಈವರೆಗೆ  ಒಂದು ನಿವೇಶನವನ್ನೂ ವಿತರಿಸಲು ಸಮಿತಿಗೆ ಸಾಧ್ಯವಾಗಿಲ್ಲ’ ಎಂದು ಹೇಳಿದರು.
 
ಪ್ರತಿಪಕ್ಷ ನಾಯಕ ಸಂತೋಷ್‌ ಆರ್‌.ಶೇಟ್ ಮಾತನಾಡಿ, ‘ಆಯಾ ವಾರ್ಡ್‌ಗಳಲ್ಲಿನ ನಿವೇಶನರಹಿತರ ಪಟ್ಟಿಯನ್ನು ಎಲ್ಲಾ ಸದಸ್ಯರು ಈಗಾಗಲೇ ಆಶ್ರಯ ಸಮಿತಿಗೆ ನೀಡಿದ್ದಾರೆ. ಆದರೆ ಆಶ್ರಯ ಸಮಿತಿ ಸದಸ್ಯರು ನಿವೇಶನವನ್ನು ನಾವೇ ಹಂಚುತ್ತೇವೆ ಎಂದು ಕೆಲವು ವಾರ್ಡ್‌ಗಳಿಗೆ ಭೇಟಿ ನೀಡುತ್ತಿದ್ದಾರೆ. ಹಾಗಾದರೆ ನಗರಸಭೆ ಸದಸ್ಯರು ನೀಡಿರುವ ಪಟ್ಟಿಗೆ ಗೌರವ ಇಲ್ಲವೆ?’ ಎಂದರು.
 
ಈ ಮಾತಿಗೆ ಪೂರಕವಾಗಿ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ಸದಸ್ಯ ಎನ್‌.ಶ್ರೀನಾಥ್‌, ‘ಆಶ್ರಯ ಸಮಿತಿ ನಿವೇಶನ ವಿತರಿಸಿದ ನಂತರ ಲೇಔಟ್‌ ನಿರ್ಮಿಸಿ ಅಗತ್ಯ ಮೂಲ ಸೌಕರ್ಯ ಒದಗಿಸುವುದು ನಗರಸಭೆಯ ಜವಾಬ್ದಾರಿ. ಆದರೆ, ಆಶ್ರಯ ಸಮಿತಿ ಸದಸ್ಯರು ತಮ್ಮ ಮೂಗಿನ ನೇರಕ್ಕೆ ವರ್ತಿಸಿ ನಗರಸಭೆ ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ’ ಎಂದು ದೂರಿದರು. 
 
ಸದಸ್ಯ ರವಿ ಜಂಬಗಾರು ಮಾತನಾಡಿ, ‘ನಿವೇಶನರಹಿತರ ಪಟ್ಟಿಯನ್ನು ನಗರಸಭೆ ಸದಸ್ಯರು ನೀಡಿದರೂ ಅದಕ್ಕೆ ಆಶ್ರಯ ಸಮಿತಿ ಮಾನ್ಯತೆ ನೀಡದೆ ಇದ್ದರೆ ಈ ಸ್ಥಾನಕ್ಕೆ ಏನು ಬೆಲೆ’ ಎಂದು ಪ್ರಶ್ನಿಸಿದ ಅವರು, ‘ನಿವೇಶನ ಹಂಚಿಕೆ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದನ್ನು ಆಶ್ರಯ ಸಮಿತಿ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.
 
ನಗರಸಭೆ ಅಧ್ಯಕ್ಷೆ ಎನ್‌.ಉಷಾ ಮಾತನಾಡಿ, ಆಶ್ರಯ ನಿವೇಶನ ಹಂಚಿಕೆ ವಿಚಾರದಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಅವರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
 
ಮಾರಿಕಾಂಬಾ ಜಾತ್ರೆ ಹತ್ತಿರ ಬರುತ್ತಿದ್ದರೂ ಒಳ ಚರಂಡಿ ಕಾಮಗಾರಿಯಿಂದ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳದೆ ಇರುವ ಬಗ್ಗೆ ಸದಸ್ಯರಾದ ಸುಂದರ್‌ಸಿಂಗ್‌, ಅರವಿಂದ್ ರಾಯ್ಕರ್‌, ಆರ್‌.ಶ್ರೀನಿವಾಸ್‌, ನಂದಾ ಗೊಜನೂರು, ಎಸ್‌.ಎಲ್‌.ಮಂಜುನಾಥ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
 
ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಉಷಾ, ಈಗಾಗಲೇ ಮುಖ್ಯ ರಸ್ತೆಗಳ ಡಾಂಬರೀಕರಣಕ್ಕೆ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ತುರ್ತು ಕಾಮಗಾರಿ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
 
ನಗರಸಭೆ ಉಪಾಧ್ಯಕ್ಷೆ ಮರಿಯಾ ಲೀಮಾ, ಪ್ರಭಾರಿ ಪೌರಾಯುಕ್ತ ಎಚ್‌.ಕೆ.ನಾಗಪ್ಪ ಹಾಜರಿದ್ದರು. 
 
**
ನಗರಸಭೆ ಸದಸ್ಯರು ಹಾಗೂ ಆಶ್ರಯ ಸಮಿತಿ ನಡುವೆ ಸಮನ್ವಯತೆ ಕೊರತೆ ಇದೆ. ಹೀಗಾದರೆ ನಿವೇಶನ ವಿತರಿಸುವುದು ಯಾವಾಗ?
-ಎಸ್.ಎಲ್‌. ಮಂಜುನಾಥ್
ನಗರಸಭೆ ವಿರೋಧ ಪಕ್ಷದ ಸದಸ್ಯ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT