ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜನ ತೇರು ಎಳೆಯಲು ಭಕ್ತರ ಉತ್ಸಾಹ

ಗವಿಮಠದ ಗವಿಸಿದ್ದೇಶ್ವರ ಮಹಾರಥೋತ್ಸವ ಇಂದು
Last Updated 14 ಜನವರಿ 2017, 9:24 IST
ಅಕ್ಷರ ಗಾತ್ರ

* ಭಾರೀ ಪ್ರಮಾಣದಲ್ಲಿ ಸಂಗ್ರಹವಾದ ದವಸಧಾನ್ಯ, ರೊಟ್ಟಿ  * ಮೊಬೈಲ್‌ನಲ್ಲೂ ನೇರಪ್ರಸಾರ ಲಭ್ಯ * ಕೇಬಲ್‌ ಟಿವಿಯಲ್ಲಿ ನೇರಪ್ರಸಾರ * ಗವಿಸಿದ್ದೇಶ್ವರ ಕಾಲೇಜಿನಲ್ಲಿ ಮಾಧ್ಯಮ ಕೇಂದ್ರ

**
ಕೊಪ್ಪಳ: ಈ ಬಾರಿ ಬರವಿದ್ದರೂ ಗವಿಸಿದ್ದೇಶ್ವರ ಜಾತ್ರೆಯ ಸಂಭ್ರಮ ಕುಂದಿಲ್ಲ. ಕುಂದುವುದೂ ಇಲ್ಲ. ಇದು ಗವಿಸಿದ್ದೇಶ್ವರ ಸ್ವಾಮಿಯ ಭಕ್ತರ ವಿಶ್ವಾಸ.
 
ಈ ಬಾರಿ ಬರವಿದೆ. ಜಾತ್ರೆಯ ಅವಧಿ ಕಡಿಮೆಯಾಗುವುದಂತೆ ಎಂಬ ಚರ್ಚೆಗಳು ಗ್ರಾಮೀಣ ಪ್ರದೇಶದಲ್ಲಿ ಹರಡಿದ್ದಾಗ ಮಠದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅನೌಪಚಾರಿಕವಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ  ಗವಿಸಿದ್ದೇಶ್ವರ ಎಷ್ಟು ದಿನ ಜಾತ್ರೆ ನಡೆಸಬೇಕು ಎಂದು ಸಂಕಲ್ಪಿಸಿದ್ದಾನೋ ಅಷ್ಟು ದಿನ ನಡೆಯುತ್ತದೆ. 
 
ಜಾತ್ರೆಗೆ ಭಕ್ತರು ಕೊಟ್ಟ ದವಸಧಾನ್ಯಗಳ ಕಾಣಿಕೆಯಲ್ಲಿ ಎಷ್ಟು ದಿನ ಜಾತ್ರೆ ಮಾಡಲು ಸಾಧ್ಯವೋ ಅಷ್ಟು ದಿನ ಜಾತ್ರೆ, ದಾಸೋಹ ನಡೆಯುತ್ತದೆ. ಮತ್ತೂ ಕಡಿಮೆಯಾದರೆ ಭಕ್ತರು ಬುತ್ತಿಕಟ್ಟಿಕೊಂಡು ಬಂದು ಜಾತ್ರೆ ಮಾಡಿಕೊಂಡು ಹೋಗುತ್ತಾರೆ. ಆದರೆ, ಜಾತ್ರೆಯ ಹೆಸರಿನಲ್ಲಿ ಯಾವ ಭಕ್ತರಿಗೂ ನಾವು ಇಂತಿಷ್ಟು ದೇಣಿಗೆ, ಕಾಣಿಕೆ ಕೊಡಿ ಎಂದು ಕೇಳುವುದಿಲ್ಲ. ಕೇಳಲೂ ಆಗದು. ಉಗ್ರಾಣದ ಧಾನ್ಯ ಸಂಗ್ರಹ ಇರುವಷ್ಟು ಕಾಲ ದಾಸೋಹಕ್ಕೇನೂ ಕೊರತೆಯಾಗದು. ನಾನು ಆ ಬಗ್ಗೆ ಯೋಚಿಸಿಯೇ ಇಲ್ಲ ಎಂದು ನಿಶ್ಚಿಂತೆಯಿಂದ ಹೇಳಿದ್ದರು. 
 
ಜಾತ್ರೆ ನಿಗದಿಯಂತೆ 15 ದಿನಗಳ ಕಾಲ ನಡೆಯಲಿದೆ. ನಿತ್ಯ ದಾಸೋಹಕ್ಕೆ ಯಾವುದೇ ಕೊರತೆ ಇಲ್ಲ ಎಂದು ಮಠದ ವಕ್ತಾರರು ತಿಳಿಸಿದ್ದಾರೆ.
 
ಜ. 10ರಂದು ಬಸವಪಟ ಏರಿದಂದಿನಿಂದ ನಗರದಲ್ಲಿ ಜಾತ್ರೆಯ ಕಳೆ ಮೂಡಿದೆ. ಶುಭಾಶಯ ಕೋರುವ ಫಲಕಗಳು ರಾರಾಜಿಸುತ್ತಿವೆ. ದುಃಖ ದುಮ್ಮಾನಗಳು, ಬರದ ಕಾರ್ಮೋಡ ಎಲ್ಲವನ್ನೂ ಜಾತ್ರೆಯ ಹೆಸರಿನಲ್ಲಿ ಗವಿಸಿದ್ದೇಶ್ವರ ಮರೆಮಾಚುತ್ತಾನೆ ಎಂಬ ವಿಶ್ವಾಸ ಭಕ್ತರದ್ದು. 
 
ಇಲ್ಲಿ ಎಲ್ಲರೂ ಮುಖ್ಯರು. ಯಾರೂ ಅಮುಖ್ಯರಲ್ಲ ಎನ್ನುತ್ತದೆ ಮಠದ ಸಿದ್ಧಾಂತ. ಅದಕ್ಕಾಗಿಯೇ ನೂರಾರು ಮಂದಿ ಸೇವಕರು ಬಂದು ಸೇರಿದ್ದಾರೆ. ಸಾವಿರಾರು ಕೈಗಳು ತಟ್ಟಿದ ರೊಟ್ಟಿ, ಮಾದಲಿ ಕಾಣಿಕೆಯಾಗಿ ಹರಿದುಬಂದಿದೆ. 
 
ಜಾತ್ರೆಯ ಹೆಸರಿನಲ್ಲಿ ಒಂದಿಷ್ಟು ಚಿಂತನ ಮಂಥನಗಳು ನಡೆಯುತ್ತವೆ. ನಾಡಿನ ಖ್ಯಾತ ಚಿಂತಕರು, ಸಂತರು ಭಕ್ತ ಹಿತಚಿಂತನ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಲಕ್ಷಾಂತರ ಭಕ್ತರ ಜಾತ್ರೆ ಯಾವುದೇ ವಿಪರೀತ ಬಂದೋಬಸ್ತ್‌ ಇಲ್ಲದೇ ಸ್ವಯಂ ಶಿಸ್ತಿನಿಂದ ನಡೆಯುವುದು ವಿಶೇಷ.
 
ಮಠದ ಪರಂಪರೆ: ಸಂಸ್ಥಾನ ಗವಿಮಠ 1008ರ ಪೂರ್ವದಲ್ಲಿ ರುದ್ರಮುನಿ ಶಿವಯೋಗಿ ಅವರಿಂದ ಸ್ಥಾಪನೆಗೊಂಡಿತು. ಇವರು ಮಠದ ಪ್ರಥಮ ಪೀಠಾಧಿಪತಿ. ಇದೇ ಪರಂಪರೆಯಲ್ಲಿ ಸಾಗಿ ಬಂದ ಹನ್ನೊಂದನೇ ಪೀಠಾಧಿಪತಿ ಗವಿಸಿದ್ದೇಶ್ವರ ಸ್ವಾಮೀಜಿ. 
 
ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಮಾಡಿದ ಅವರು ಜನಮಾನಸದಲ್ಲಿ ನೆಲೆಯೂರಿದ್ದಾರೆ. 
 
ಜನನ – ಬಾಲ್ಯ: ಕೊಪ್ಪಳ ಸಮೀಪದ ಮಂಗಳಾಪುರ ಗವಿಸಿದ್ದೇಶ್ವರ ಸ್ವಾಮಿಯ ಜನ್ಮಸ್ಥಳ. ಗುರುಲಿಂಗಮ್ಮ, ಮಹಾದೇವಯ್ಯ ದಂಪತಿ ತಂದೆ ತಾಯಿ. ಗವಿಸಿದ್ದೇಶ್ವರರ ಬಾಲ್ಯ ನಾಮ ಗುಡ್ಡದಯ್ಯ, ದನಗಾಹಿಗಳೊಂದಿಗೆ ದಿನ ಮಳೆಮಲ್ಲೇಶ್ವರನ ಬೆಟ್ಟಕ್ಕೆ ತೆರಳುತ್ತಿದ್ದ ಗುಡ್ಡದಯ್ಯ ಅಲ್ಲಿ ಧ್ಯಾನಾಸಕ್ತನಾಗಿರುತ್ತಿದ್ದ. ಅಲ್ಲಿಗೆ ಮೇಯಲು ಬರುತ್ತಿದ್ದ ಕೊಪ್ಪಳದ ಬಸವನಗೌಡರ ಒಂದು ಹಸು ಬೇಸಿಗೆಯ ಬಿಸಿಲಿನ ತಾಪಕ್ಕೆ ಅಲ್ಲಿಯೇ ಅಸು ನೀಗಿತು. ಧ್ಯಾನ ಮಗ್ನನಾಗಿದ್ದ ಗುಡದಯ್ಯ ವಿಷಯ ತಿಳಿದು ಮೃತ ಗೋವಿಗೆ ಜಲ–ಭಸ್ಮಾದಿಗಳಿಂದ ಪೂಜಿಸಿದ. ಮೃತ ಗೋವು ಜೀವದಳೆದು ಎದ್ದು ನಿಂತಿತು. ಬಸವನಗೌಡರು ಗುಡ್ಡದಯ್ಯನನ್ನು ತಮ್ಮ ಮನೆಗೆ ಕರೆತಂದರು. ನಿತ್ಯ ಶಿವಾನುಭವ ಅಲ್ಲಿ ನಡೆಯತೊಡಗಿತು. 
 
ಗೌಡರ ಮನೆಯೇ ಮಠವಾಯಿತು. ಇದನ್ನರಿತ ಬಸವನಗೌಡರು ಗುಡದಯ್ಯನನ್ನು ಶ್ರೀಗವಿಮಠಕ್ಕೆ ಅರ್ಪಿಸಬೇಕೆಂಬ ಹವಣಿಕೆಯಲ್ಲಿ ಇದ್ದರು. ಗುಡ್ಡದಯ್ಯನಿಗೂ ಸಹ ಗವಿಮಠದ ಶಿವಯೋಗಿಯವರನ್ನು ಕಾಣುವ ಹಂಬಲ ಉಂಟಾಗಿತ್ತು. ಗುಡ್ಡದಾರ್ಯನು ಗವಿಮಠಕ್ಕೆ ಪಯಣಿಸುವ ಮುನ್ನ ಬಸವನಗೌಡರ ಮನೆಯಲ್ಲಿ ತನ್ನ ಶಿಖೆ (ಜಡೆ) ಇಟ್ಟು ಹೊರಡುತ್ತಾನೆ. ಹೀಗಾಗಿ ಬಸವನಗೌಡರ ಮನೆತನ ಇಂದು ಜಡೇಗೌಡರ ಮನೆತನ ಎಂದು ಹೆಸರಾಯಿತು ಎಂಬುದು ಗವಿಸಿದ್ದೇಶ್ವರ ಸ್ವಾಮಿ ಬಗೆಗೆ ಕೇಳಿಬರುವ ಕಥೆ.
 
₹ 7 ಲಕ್ಷ ದೇಣಿಗೆ:  ಪ್ರೊ.ಸಿ.ಎನ್.ಆರ್.ರಾವ್ ಮತ್ತು ಅವರ ಪತ್ನಿ ಪ್ರೊ. ಇಂದುಮತಿ ರಾವ್ ಅವರು ತಮ್ಮ ಸಿ.ಎನ್.ಆರ್. ರಾವ್ ಎಜುಕೇಶನ್ ಫೌಂಡೇಷನ್ ವತಿಯಿಂದ ₹ 7 ಲಕ್ಷ ದೇಣಿಗೆಯನ್ನು ಗವಿಮಠಕ್ಕೆ ನೀಡಿದ್ದಾರೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೂಲ ವಿಜ್ಞಾನದ ವಿಷಯಗಳನ್ನು ಕಲಿಯುವಂತೆ ಪ್ರೋತ್ಸಾಹಿಸುವುದು ಹಾಗೂ ಮೂಲ ವಿಜ್ಞಾನದ ವಿಷಯಗಳ ಶಿಕ್ಷಕರ ಸೇವೆ ಗುರುತಿಸುವುದು ಈ ಫೌಂಡೇಷನ್‌ನ ಪ್ರಮುಖ ಉದ್ದೇಶ.
 
ಈ ನಿಧಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಪ್ರತಿ ವರ್ಷ  ಜಾತ್ರಾ ಮಹೋತ್ಸವದಲ್ಲಿ ಪುರಸ್ಕರಿಸಲಾಗುವುದು ಎಂದು ಮಠದ ಪ್ರಕಟಣೆ ತಿಳಿಸಿದೆ. ಡೆನ್‌ ನೆಟ್‌ವರ್ಕ್‌ ಚಾನೆಲ್‌ನ ನಂ–716ರಲ್ಲಿ ನೇರಪ್ರಸಾರವಿದೆ.
 
ಮೊಬೈಲ್‌ನಲ್ಲಿ  ಜಾತ್ರೆ ವೀಕ್ಷಿಸಲು ಲಿಂಕ್: tinyurl.com/citytvkoppal  ವೀಕ್ಷಿಸಬಹುದು.
 
**
ಭಕ್ತರ ಸೇವೆ
ಜಾತ್ರೆಗೆ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ಭಕ್ತರು ಮಹಾದಾಸೋಹಕ್ಕೆ 208 ಬಾಳೆಹಣ್ಣಿನ ಗೊನೆಗಳನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ. ಗಂಗಾವತಿಯ ನಾಗರಾಜ ಅವರು 104 ಪ್ಯಾಕೆಟ್ ಅಕ್ಕಿ ಅರ್ಪಿಸಿದ್ದಾರೆ. ಕಂದಕೂರ ಗ್ರಾಮಸ್ಥರು 50 ಕೆ.ಜಿ ಜಿಲೇಬಿ, ಚಳ್ಳಾರಿ ಗ್ರಾಮಸ್ಥರು ಒಂದು ಕ್ವಿಂಟಲ್ ಬೆಲ್ಲ ಹಾಗೂ 60 ಕೆ.ಜಿ ರವೆ, ಹಳೆ ಕನಕಾಪುರ ಗ್ರಾಮಸ್ಥರು 105 ಕೆಜಿ ಮಾದಲಿ ಅರ್ಪಿಸಿದ್ದಾರೆ. 
 
**
ಲಘು ರಥೋತ್ಸವ
ಶುಕ್ರವಾರ ಸಂಜೆ ವೇಳೆ ಮಠದ ಆವರಣದಲ್ಲಿ ಲಘು ರಥೋತ್ಸವ ನಡೆಯಿತು. ಜನಪದ ವಾದ್ಯಮೇಳಗಳ ಜತೆಗೆ ಲಘು ರಥ ಎಳೆಯಲಾಯಿತು. ನೂರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಜ. 14ರಂದು ಎಳೆಯಲಿರುವ ಮಹಾರಥ ಅಲಂಕೃತಗೊಂಡಿದೆ. ಕೊನೆಯ ಕ್ಷಣದ ಸಿದ್ಧತೆಯಲ್ಲಿ ಕಾರ್ಮಿಕರು ತೊಡಗಿದ್ದಾರೆ. ಕೈಲಾಸ ಮಂಟಪದ ಭಕ್ತ ಹಿತಚಿಂತನ ಸಭೆಯ ವೇದಿಕೆಯೂ ಸಜ್ಜುಗೊಂಡಿದೆ.
 
**
ಮಾಧ್ಯಮ ಕೇಂದ್ರ ಉದ್ಘಾಟನೆ
ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್‌ ಮಾಧ್ಯಮ ಕೇಂದ್ರ ಉದ್ಘಾಟಿಸಿದರು. 
 
‘ಜಾತ್ರೆಯಲ್ಲಿ ಕೇವಲ ಧಾರ್ಮಿಕ ಕಾರ್ಯಕ್ರಮಗಳು ನಡೆಯದೇ ಸಮಾಜಮುಖಿಯಾದ ಕಾರ್ಯಕ್ರಮಗಳೂ ನಡೆಯುತ್ತಿವೆ. ಆ ಎಲ್ಲಾ ಕಾರ್ಯಕ್ರಮಗಳನ್ನು ಮಾಧ್ಯಮಗಳಲ್ಲಿ ಪ್ರಸಾರಮಾಡಬೇಕು ಎಂದು ತುಕಾರಾಂ ಹೇಳಿದರು. 
 
ಹೂವಿನಹಡಗಲಿಯ ಹಿರಿಶಾಂತವೀರ ಸ್ವಾಮೀಜಿ ಜಾತ್ರೆ ಸಿದ್ಧತೆ ವಿವರಿಸಿದರು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಸೋಮಶೇಖರ ದೇವರು, ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ, ಆಡಳಿತಾಧಿಕಾರಿ ಡಾ.ಮರೇಗೌಡ, ಪ್ರಾಂಶುಪಾಲ  ಎಂ.ಎಸ್.ದಾದ್ಮಿ ಇದ್ದರು.
 
ಡಾ.ಪ್ರಕಾಶ ಬಳ್ಳಾರಿ ಮಾಧ್ಯಮ ಕೇಂದ್ರದ ಕುರಿತು ವಿವರಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪರೀಕ್ಷಿತರಾಜ್‌ ನಿರೂಪಿಸಿದರು. ಗಂಗಾಧರ ಸೊಪ್ಪಿಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT