ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದಲೇ ರೈತರಿಗೆ ತರಬೇತಿ!

ರಾಯಚೂರು ಕೃಷಿ ವಿಶ್ವವಿದ್ಯಾಲಯ ಸಿದ್ಧತೆ; ಆವಿಷ್ಕಾರ ಪರಿಚಯ
Last Updated 14 ಜನವರಿ 2017, 11:33 IST
ಅಕ್ಷರ ಗಾತ್ರ
ಬಳ್ಳಾರಿ: ಕೃಷಿ ಚಟುವಟಿಕೆಗಳ ಕುರಿತು ರೈತರಿಗೆ ವಿಶ್ವವಿದ್ಯಾಲಯಗಳ ತಜ್ಞರು ತರಬೇತಿ ನೀಡುವುದು ಹಳೆಯ ಸಂಗತಿ. ಪ್ರಗತಿಪರ ರೈತರು ಇತರ ರೈತರಿಗೆ ತಮ್ಮ ಪ್ರಯೋಗಗಳ ಮೂಲಕ ತರಬೇತಿ ನೀಡುವುದು ಹೊಸ ಬೆಳವಣಿಗೆ. ಅದಕ್ಕೆ ರಾಯಚೂರಿನ ಕೃಷಿ ವಿಶ್ವವಿದ್ಯಾಲಯ ಮುನ್ನುಡಿ ಬರೆಯಲು ‘ರೈತರಿಂದ ರೈತರಿಗೆ’ ಕಾರ್ಯಕ್ರಮವನ್ನು ರೂಪಿಸಿದೆ. ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
 
ಜಿಲ್ಲೆಯ ರೈತರ ಆವಿಷ್ಕಾರಗಳನ್ನು ಅವರ ಮೂಲಕವೇ ಉಳಿದ ರೈತ ಸಮುದಾಯಕ್ಕೆ ತಲುಪಿಸುವ ತರಬೇತಿ ಕಾರ್ಯಕ್ರಮವೊಂದು ರೂಪುಗೊಂಡಿದ್ದು, ಮೊದಲ ತರಬೇತಿಯು ಜನವರಿ ಕೊನೆಯಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ನಡೆಯಲಿದೆ. 
 
ಇದುವರೆಗೆ ಉತ್ತಮ ಕೃಷಿಕ ಪ್ರಶಸ್ತಿ ಪಡೆದ ರೈತರು ತರಬೇತಿ ಕಾರ್ಯಾಗಾರ ಮತ್ತು ಕ್ಷೇತ್ರ ಭೇಟಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಲಿದ್ದಾರೆ.
ವಿಶ್ವವಿದ್ಯಾಲಯದ ಅಧೀನ ಸಂಸ್ಥೆಯಾದ, ತಾಲ್ಲೂಕಿನ ಹಗರಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ರೈತರಿಗೆ ತರಬೇತಿ ದೊರಕಲಿದೆ.  
 
ಸಮಗ್ರ ಕೃಷಿ ಪದ್ಧತಿ, ಸಾವಯವ ಕೃಷಿ, ತೋಟಗಾರಿಕೆ, ಸಿರಿ ಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ವಿವಿಧ ಬೆಳೆಗಳ ಬೀಜೋತ್ಪಾದನೆ ಮತ್ತು ಸಂಸ್ಕರಣೆ, ಖುಷ್ಕಿ ಮತ್ತು ಮಳೆಯಾಶ್ರಿತ ಬೇಸಾಯದಲ್ಲಿ ಯಶಸ್ವಿ ಬೆಳೆ ಉತ್ಪಾದನೆ ಕುರಿತು ರೈತರಿಗೆ ಮೂರು ದಿನ ತರಬೇತಿ ನೀಡಲಾಗುವುದು ಎಂದು ಕೇಂದ್ರದ ಕಾರ್ಯಕ್ರಮ ಸಂಯೋಜಕ ರವಿಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.
 
20 ರೈತರು: ಜಿಲ್ಲೆಯ ಏಳು ತಾಲ್ಲೂಕಿನ ಇಪ್ಪತ್ತು ರೈತರನ್ನು ವಿಶ್ವವಿದ್ಯಾಲಯವು ಸಂಪನ್ಮೂಲ ವ್ಯಕ್ತಿಗಳೆಂದು ಗುರುತಿಸಿದೆ. 
 
ಪ್ರತಿ ವಿಷಯದ ಕುರಿತು ಮೂವರು ರೈತರು ತಮ್ಮ ಪ್ರಯೋಗ–ಅನುಭವದ ಕುರಿತು ರೈತರಿಗೆ ಮಾಹಿತಿ ನೀಡಲಿದ್ದಾರೆ. ಅವರು ನೀಡುವ ಮಾಹಿತಿಗೆ                      ಪೂರಕವಾದ ವಿವರಣೆಗಳನ್ನು ವಿಶ್ವವಿದ್ಯಾಲಯ ಮತ್ತು ಕೇಂದ್ರದ ತಜ್ಞರು ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
 
180 ರೈತರಿಗೆ ತರಬೇತಿ: ಪ್ರತಿ ಬಾರಿ 30 ರೈತರಂತೆ ಜಿಲ್ಲೆಯ 180 ರೈತರಿಗೆ ಆರು ತಂಡಗಳಲ್ಲಿ ತರಬೇತಿಯನ್ನು ನೀಡಲು ಉದ್ದೇಶಿಸಲಾಗಿದೆ. ರೈತರನ್ನು ಕೃಷಿ ಇಲಾಖೆಯು ಆಯ್ಕೆ ಮಾಡಲಿದೆ. ಅವರಿಗೆ ತರಬೇತಿಯನ್ನು ಕೇಂದ್ರವು ಆಯೋಜಿಸುತ್ತದೆ ಎಂದು ವಿವರಿಸಿದರು.
 
ಸಂಪರ್ಕ–ಸಾಧನೆ: ಪ್ರಗತಿಪರ ಕೃಷಿಕರು ಹಾಗೂ ಜಿಲ್ಲೆಯ ರೈತ ಸಮುದಾಯದ ನಡುವೆ ವೃತ್ತಿಪರ ಕೃಷಿ ಸಂಬಂಧಿತವಾದ ಸಂಪರ್ಕವನ್ನು ಏರ್ಪಡಿಸಿ, ಎಲ್ಲ ರೈತರನ್ನು ಸಾಧನೆಯ ಹಾದಿಯತ್ತ ಕೊಂಡೊಯ್ಯುವುದು ವಿಶ್ವವಿದ್ಯಾಲಯದ ಆಶಯ. ಅದಕ್ಕೆ ಪೂರಕವಾಗಿ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.
 
**
ರೈತರಿಂದ ರೈತರಿಗೆ ಕಾರ್ಯಕ್ರಮದ ಅಡಿ ತರಬೇತಿ ಪಡೆಯಲು ಆಸಕ್ತ ರೈತರನ್ನು ಆಯ್ಕೆ ಮಾಡಲು ಇಲಾಖೆ ಸಿದ್ಧವಾಗಿದೆ. ರೈತರು ಅರ್ಜಿ ಸಲ್ಲಿಸಬೇಕಷ್ಟೇ.
-ಶರಣಪ್ಪ ಮುದುಗಲ್,
ಕೃಷಿ ಇಲಾಖೆ ಜಂಟಿ ನಿರ್ದೇಶಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT