ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿಕಾರ್ಮಿಕರ ಗುಳೆ ತಪ್ಪಿಸಲು ನೆರವಾದ ನರೇಗಾ

ಡಿ.ರಾಂಪುರ ಕೆರೆ ಅಭಿವೃದ್ಧಿ ಕಾಯಕ
Last Updated 14 ಜನವರಿ 2017, 11:42 IST
ಅಕ್ಷರ ಗಾತ್ರ

* ಕೊಳವೆ ಬಾವಿಗಳಿಗೆ ಜಲಮರುಪೂರಣಕ್ಕೆ ಅನುಕೂಲ * ಕೂಲಿ ಕಾರ್ಮಿಕರು, ಮಕ್ಕಳು ಕುಟುಂಬ ಸದಸ್ಯರು ಗುಳೆ ಬಂದ್‌ * ನರೇಗಾ ಕೂಲಿ ಹಣ ಇನ್ನೂ ಬಾಕಿ * ಆದಾಯ ಭದ್ರತೆ ನೀಡಿದ ಕಾಮಗಾರಿ

 
***
ರಾಯಚೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ)  ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದ ಬರದ ಕಾರಣ ಊರು ತೊರೆಯಲು ಸಿದ್ಧರಾದ ಕೂಲಿಕಾರ್ಮಿಕರಿಗೆ ಒಂದಿಷ್ಟು ನೆರವಾದ ಯಶೋಗಾಥೆ ಇದು.
 
ತಾಲ್ಲೂಕಿನ ಆತ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿ.ರಾಂಪುರದ ಅಯ್ಯನ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಗ್ರಾಮದ 128 ಪುರುಷರು ಮತ್ತು 131 ಮಹಿಳೆಯರು ಒಟ್ಟು 259 ಕಾರ್ಮಿಕರು ದುಡಿದಿದ್ದಾರೆ. 
 
ಸುಮಾರು ₹ 9 ಲಕ್ಷದಷ್ಟು ಬಿಲ್‌ ಆಗಿದೆ. ಐದು ಎಕೆರೆ ವಿಸ್ತೀರ್ಣದ ಈ ಕೆರೆ ಗ್ರಾಮದ ಜಮೀನುಗಳಿಗೆ ನೀರಿನ ಮೂಲ. ಮಳೆಗಾಲದಲ್ಲಿ ಮಾತ್ರ ನೀರು ಸಂಗ್ರಹವಾಗುತ್ತದೆ. 
 
ಆದರೆ, ಈ ಕೆರೆಯಲ್ಲಿ ಸುಮಾರು ಐದು ಅಡಿ ಹೂಳುತುಂಬಿಕೊಂಡಿತ್ತು. ಇದನ್ನು ತೆಗೆಯಲು ನರೇಗಾ ಅಡಿ ಗ್ರಾಮ ಪಂಚಾಯಿತಿಯಿಂದ ಉದ್ಯೋಗ ನೀಡಲಾಯಿತು. 
 
ಕೆರೆಯಲ್ಲಿ  10X10 ಅಳತೆಯ ನಾಲ್ಕು ಅಡಿ ಆಳದ ಸುಮಾರು 200 ಹೊಂಡಗಳನ್ನು ಮಾಡಿ ನೀರು ಶೇಖರಣೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ.
 ಇದರಿಂದ ಸುತ್ತಮುತ್ತಲಿನ ಕೊಳವೆ ಬಾವಿಗಳಿಗೂ ಜಲಮರುಪೂರ್ಣಕ್ಕೆ ಅನುಕೂಲವಾಗಲಿದೆ.
 
‘ಗ್ರಾಕೂಸ್‌ ಕೂಲಿ ಕಾರ್ಮಿಕರ ಸಂಘಟನೆ ಅಲ್ಲಿ ನೋಂದಣಿಯಾದ ಕಾರ್ಮಿಕರು ಕೆಲಸ ಕೇಳಿಕೊಂಡು ಬರುತ್ತಿದ್ದರು. ಆದರೆ, ಡಿ.ರಾಂಪುರದಲ್ಲಿ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಅವಕಾಶ ಇರಲಿಲ್ಲ. 
 
ಹಾಗಾಗಿ ಸಮುದಾಯ ಆಧಾರಿತ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕೆಲಸ ನೀಡಬೇಕಾಯಿತು. ಈ ನಿಟ್ಟಿನಲ್ಲಿ ಕೆರೆ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು’ ಎಂದು ತಾಲ್ಲೂಕು ಪಂಚಾಯಿತಿಯ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ತಿಳಿಸಿದರು.
 
‘ಬೇರೆ ಊರುಗಳಿಗೆ ಹೋಗಿದ್ದರೆ ಕೆಲಸವೇನೋ ಸಿಗುತ್ತಿತ್ತು ಆದರೆ, ಅರ್ಧದಷ್ಟು ಹಣ ಊಟ, ವಸತಿಗೆಂದೇ ಖರ್ಚಾಗುತ್ತಿತ್ತು ಏನೂ ಉಳಿಯುತ್ತಿರಲಿಲ್ಲ. ಆದರೆ, ನಮ್ಮೂರಿನಲ್ಲೆ ಕೆಲಸ ಸಿಕ್ಕಿದ್ದು ಅನುಕೂಲವಾಯಿತು’ ಎಂದು ಕೂಲಿ ಕಾರ್ಮಿಕ ನಾಗರಾಜ ಹೇಳಿದರು.
 
**
ಕಾಮಗಾರಿ ಪ್ರಯೋಜನ
‘ಬರಗಾಲದ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಗುಳೆ ಹೋಗುವುನ್ನು ತಪ್ಪಿಸಲು ಡಿ.ರಾಂಪುರದಲ್ಲೆ ಅವರಿಗೆ ಉದ್ಯೋಗ ನೀಡಿದೆವು. 100 ದಿನಗಳಿಗೂ ಹೆಚ್ಚು ಕಾಲ ಕೂಲಿ ಕೆಲಸ ದೊರೆತು, 3800ರಿಂದ 4000 ಮಾನವ ದಿನಗಳ ಸೃಜನೆಯಾದವು’ ಎಂದು ತಾಲ್ಲೂಕು  ಪಂಚಾಯಿತಿ ಸಹಾಯ ನಿರ್ದೇಶಕ ವಿಜಯಕುಮಾರ್‌ ಹೇಳಿದರು. 
 
‘ಈ ಕಾಮಗಾರಿಯಲ್ಲಿ 9 ಗುಂಪುಗಳು (ಒಂದು ಗುಂಪಿನಲ್ಲಿ ಸರಾಸರಿ 30 ಕಾರ್ಮಿಕರು) ಕೆಲಸ ಮಾಡಿವೆ. ಪ್ರತಿ ಕಾರ್ಮಿಕರಿಗೆ ₹ 224 ಕೂಲಿ ಹಣದ ಜೊತೆಗೆ ಸಲಕರಣಗೆ ಪ್ರತ್ಯೇಕವಾಗಿ ₹ 10 ನೀಡಲಾಗುತ್ತದೆ.  ಈ ಹಣವನ್ನು ಇನ್ನೊಂದು ವಾರದಲ್ಲಿ ಕೂಲಿಕಾರರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ’ ಎಂದು ಆತ್ಕೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮಾದೇವಿ ತಿಳಿಸಿದರು. 
 
*
 ಕೂಲಿ ಬಾಕಿ : ಆರೋಪ
‘ಬೇರೊಂದು ಕಾಮಗಾರಿಯಲ್ಲಿ ಎಂಟು ತಿಂಗಳ ಹಿಂದೆ 15 ದಿನಗಳ ಕಾಲ ದುಡಿದೆವು. ಐವರಿಗೆ ಹಣ ಪಾವತಿ ಆಗಿದೆ. ಮೂವರಿಗೆಹಣ ಬಂದಿಲ್ಲ’ ಎಂದು ಶಂಕ್ರಪ್ಪ ಮತ್ತು ಚಂದಯ್ಯ ದೂರಿದರು. ‘ಕೂಲಿಪಾವತಿಯಾದ ಕಾರ್ಮಿಕರಿಗೆ ಶೀಘ್ರದಲ್ಲೆ ಕೂಲಿ ಪಾವತಿಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಹೇಳಿದರು.
 
**
ಏಪ್ರಿಲ್‌ನಿಂದ  ಆಧಾರ್‌  ಕಡ್ಡಾಯ
‘ಮುಂದಿನ ಏಪ್ರಿಲ್‌ನಿಂದ ಕೂಲಿಕಾರ್ಮಿಕರಿಗೆ ಆಧಾರ್‌ ಸಂಖ್ಯೆ ಜೋಡಣೆ ಕಡ್ಡಾಯವಾಗಿದ್ದು, ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಕೊಳ್ಳಲು ಕೂಲಿಕಾರ್ಮಿಕರು ಬ್ಯಾಂಕ್‌ ಖಾತೆ ಪುಸ್ತಕವನ್ನು ಗ್ರಾಮ ಪಂಚಾಯಿತಿ ಕಾರ್ಯಾಲಕ್ಕೆ ತರಬೇಕು. ಅಲ್ಲಿ ಅಗತ್ಯ ದಾಖಲೆ ಪತ್ರಗಳನ್ನು ಹಾಜರು ಪಡಿಸಿ, ಖಾತೆಗೆ ಸಂಖ್ಯೆ ಜೋಡಣೆ ಕಾರ್ಯದ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಎಂಇಸಿ ಸಂಯೋಜಕ ಧನರಾಜ ಹೇಳಿದರು.
 
**
ನಮ್ಮೂರಿನಲ್ಲೆ ಕೂಲಿ (ಕೆಲಸ) ಸಿಕ್ಕಿದ್ದು ಒಳ್ಳೆಯದ್ದಾಯಿತು. ಮನೆಗೆಲಸ, ಮಕ್ಕಳ ಪೋಷಣೆ ಸಾಧ್ಯವಾಯಿತು. 
-ಸೌರಮ್ಮ, ಕೂಲಿಯಾಳು
 
**
ನೆಲ– ಜಲ ಸಂರಕ್ಷಣೆಗಾಗಿ ಕೆರೆ ಕಾಮಗಾರಿ  ನಡೆಯಿತು.ಗ್ರಾಮಕ್ಕೆ ಒಂದು ಆಸ್ತಿಯೂ ನಿರ್ಮಾಣ ಆಯಿತು 
-ರಮೇಶ, ತಾ.ಪಂ. ಪ್ರಭಾರ , ಇಒ
 
**
ಕೆಲಸಕ್ಕೆ ಮುನ್ನ ಮತ್ತು ನಂತರ  ಹಾಜರಾತಿ ತೆಗೆದುಕೊಂಡು ಪ್ರತಿ ಕಾರ್ಮಿಕರು ಕೆಲಸ ಮಾಡಿದ್ದನ್ನು ದೃಢೀಕರಿಸಿಕೊಳ್ಳಲಾಯಿತು. ಇದರಿಂದ ಕೂಲಿಕಾರರ ಹೆಸರು ಬಿಟ್ಟುಹೋಗಲಿಲ್ಲ. 
-ಅಂಬಣ್ಣ , ಸಮೂಹ ಸಂಸ್ಥೆಯ ಸಂಯೋಜಕ , ನರೇಗಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT