ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮಹಿಳಾ ಕಾರಾಗೃಹ ಕೊರತೆ

ವಿಚಾರಣೆಗಾಗಿ ಕಲಬುರ್ಗಿ ಕೇಂದ್ರ ಕಾರಾಗೃಹದಿಂದ ಯಾದಗಿರಿಗೆ ಅಲೆದಾಟ
Last Updated 14 ಜನವರಿ 2017, 11:44 IST
ಅಕ್ಷರ ಗಾತ್ರ
ಯಾದಗಿರಿ: ಜಿಲ್ಲೆಯಲ್ಲಿ ಮಹಿಳಾ ಕಾರಾಗೃಹ ಇಲ್ಲದಿರುವುದು ಯಾದಗಿರಿ–ಕಲಬುರ್ಗಿಗೆ ವಿಚಾರಣಾಧೀನ ಕೈದಿಗಳ ಮತ್ತು ಪೊಲೀಸರ ಅಲೆದಾಟ ತಪ್ಪಿಲ್ಲ. ಮಹಿಳಾ ಆರೋಪಿಗಳ ಮೇಲೆ ಜಿಲ್ಲೆಯ ಸ್ಥಳೀಯ ಠಾಣೆಗಳಲ್ಲಿ ಪ್ರಕರಣ ದಾಖಲಾದ ತಕ್ಷಣ ನ್ಯಾಯಾಂಗ ಬಂಧನದಲ್ಲಿರುವ ಅವರನ್ನು ನ್ಯಾಯಾಂಗ ವಿಚಾರಣಾಧೀನ ಬಂಧಿಗಳನ್ನಾಗಿ ಕಾರಾಗೃಹಕ್ಕೆ ಒಪ್ಪಿಸುತ್ತದೆ.  
 
ಆದರೆ, ಜಿಲ್ಲೆಯಲ್ಲಿ ಮಹಿಳಾ ಬಂಧಿಗಳನ್ನ ಇರಿಸಲು ಕಾರಾಗೃಹ ಕೊರತೆ ಎದುರಾಗುತ್ತದೆ. ಹಾಗಾಗಿ, ಅವರನ್ನು ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗುತ್ತಿದೆ. ಯಾದಗಿರಿ ಪ್ರಧಾನ ಜಿಲ್ಲಾ ನ್ಯಾಯಾಲಯ ವಿಚಾರಣೆ ದಿನಾಂಕ ನಿಗದಿಪಡಿಸಿದಾಗಲೆಲ್ಲಾ ಈ ಮಹಿಳಾ ಬಂಧಿಗಳನ್ನು ನ್ಯಾಯಾಲಯಕ್ಕೆ ಕರೆತರಬೇಕಾಗುತ್ತದೆ. 80 ಕಿಲೊಮೀಟರ್‌ ದೂರದಿಂದ ವಿಚಾರಣೆ ಎದುರಿಸಲು ಅವರೊಂದಿಗೆ ಪೊಲೀಸರು ಆಗಾಗ ಬರಲೇಬೇಕು. ಈ ಅಲೆದಾಟ ಸಾಕುಬೇಕಾಗಿದೆ ಎನ್ನುತ್ತಾರೆ ಪೊಲೀಸರು.
 
‘ನ್ಯಾಯಾಲಯದಲ್ಲಿ ವಿಚಾರಣೆ ಇದ್ದಾಗ ಒಬ್ಬ ಮಹಿಳಾ ಕೈದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದರೆ ಪ್ರತಿಬಾರಿ ಕನಿಷ್ಠ ₹2 ಸಾವಿರ ಖರ್ಚು ಬರುತ್ತದೆ. ಅಲ್ಲದೇ ಪೊಲೀಸ್‌ ಇಲಾಖೆಯೇ ಇದರ ಖರ್ಚುವೆಚ್ಚ ಭರಿಸಬೇಕಾಗುತ್ತದೆ’ ಎನ್ನುತ್ತಾರೆ ಅವರು.
 
ಅಚ್ಚರಿ ಎಂದರೆ ಯಾದಗಿರಿ ಜಿಲ್ಲೆಯಲ್ಲಿ ಪುರುಷ ಸಜಾ ಕೈದಿಗಳಿಗೂ ಕಾರಾಗೃಹ ಇಲ್ಲ. ನಿಜಾಮ್‌ ಸರ್ಕಾರ ನಿರ್ಮಿಸಿದ್ದ ತಾಲ್ಲೂಕು ಉಪ ಕಾರಾಗೃಹ ಮಾತ್ರ ಇದೆ. ಮೂರು ಕೋಣೆ ಹೊಂದಿರುವ ಉಪಕಾರಾಗೃಹ 50 ಮಂದಿ ಕೈದಿಗಳ ಸಾಮರ್ಥ್ಯ ಹೊಂದಿದೆ. ಆದರೆ, ಸದ್ಯ ಉಪ ಕಾರಾಗೃಹದಲ್ಲಿ 82 ವಿಚಾರಣಾಧೀನ ಕೈದಿಗಳನ್ನು ಇರಿಸಿದ್ದಾರೆ. ಒಂದೊಂದು ಕೋಣೆಯಲ್ಲಿ 25ಕ್ಕೂ ಹೆಚ್ಚು ಮಂದಿ ವಿಚಾರಣಾ ಬಂಧಿಗಳು ಇದ್ದಾರೆ. ಕಾರಾಗೃಹದಲ್ಲಿ ಇರುವ ಮೂರು ಶೌಚಾಲಯವನ್ನು 82 ಮಂದಿ ಬಳಸಬೇಕಿದೆ. ಕೈದಿಗಳಿಗೆ ನಿತ್ಯಕರ್ಮದ ಸಮಸ್ಯೆ ನಿತ್ಯ ಕಾಡುತ್ತಲೇ ಇದೆ.
 
‘ಉಪ ಕಾರಾಗೃಹವನ್ನು ಮೇಲ್ದರ್ಜೆಗೇರಿಸಿ ನೂತನ ಜಿಲ್ಲಾ ಕಾರಾಗೃಹ ನಿರ್ಮಿಸಿ ಇಲ್ಲಿನ ಒತ್ತಡ ತಗ್ಗಿಸುವಂತೆ ಕೇಂದ್ರ ಕಾರಾಗೃಹ ಅಧೀಕ್ಷರಿಗೆ ಹಲವು ಬಾರಿ ಪತ್ರ ಕೂಡ ಬರೆದಿದ್ದೇನೆ. ಆದರೆ, ನಿವೇಶನ ಕೊರತೆ ಜಿಲ್ಲಾ ಕಾರಾಗೃಹ ನಿರ್ಮಾಣಕ್ಕೆ ಹಿನ್ನಡೆಯಾಗಿದೆ’ ಎನ್ನುತ್ತಾರೆ ಇಲ್ಲಿನ ಉಪ ಕಾರಾಗೃಹದ ಅಪರ ಅಧೀಕ್ಷಕ ಮಹಮ್ಮದ್ ಇಬ್ರಾಹಿಂ. 
 
ಇಬ್ರಾಹಿಂ ನಗರ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಅವರಿಗೆ ಅಧೀಕ್ಷಕರ ಜವಾಬ್ದಾರಿ ಹೊರಿಸಲಾಗಿದೆ. 82 ಮಂದಿ ವಿಚಾರಣಾಧೀನ ಕೈದಿಗಳನ್ನು 24 ಗಂಟೆ ಕಾಯುವುದು ಅಷ್ಟು ಸುಲಭವಲ್ಲ ಎನ್ನುತ್ತಾರೆ ಅವರು.
 
**
ಕಾರಾಗೃಹ ಎಷ್ಟು ಸುರಕ್ಷಿತ?
ಯಾದಗಿರಿ: ನಗರದ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಹಿಂಭಾಗದಲ್ಲಿರುವ ಉಪಕಾರಾಗೃಹದ ಭದ್ರತೆ ಕೂಡ ಸರಿಯಿಲ್ಲ. ಕಾಂಪೌಂಡ್‌ಗೆ ತಾಗಿಕೊಂಡೇ ಬೃಹತ್ ಅರಳಿಮರ ಇದೆ. ಅಲ್ಲದೇ ಲೋಕೋಪಯೋಗಿ ಇಲಾಖೆ ಕಚೇರಿ–ಕಾರಾಗೃಹ ಎರಡಕ್ಕೂ ಒಂದೇ ಕಾಂಪೌಂಡ್‌ ಇದೆ. ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಸರಿಯಲ್ಲ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.
 
**
ಯಾದಗಿರಿಯ ಉಪಕಾರಾಗೃಹ ದುರಸ್ತಿಗೊಳಿಸುವಂತೆ ಅಲ್ಲಿನ ಜೈಲರ್‌ ಮನವಿ ಮಾಡಿದ್ದಾರೆ. ಹಾಗಾಗಿ, ಅದೂ ಸಹ ಕಲಬುರ್ಗಿಗೆ ಸ್ಥಳಾಂತರ ಆಗುವ ಸಂಭವ ಇದೆ
-ಅನಿತಾ,
ಜೈಲರ್,  ಕಲಬುರ್ಗಿ ಕೇಂದ್ರ ಕಾರಾಗೃಹ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT