ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಬದುಕಿನ ಕನ್ನಡಿ ಇದ್ದಂತೆ

ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ಅಭಿಮತ
Last Updated 14 ಜನವರಿ 2017, 12:02 IST
ಅಕ್ಷರ ಗಾತ್ರ
ಬೀದರ್‌: ರಂಗಭೂಮಿ ಬದುಕಿನ ಕನ್ನಡಿಯಾಗಿದೆ. ನಾಟಕಗಳು ಬದುಕಿನ ಸತ್ಯಾಸತ್ಯತೆಯನ್ನು ಅನಾವರಣಗೊಳಿಸುತ್ತವೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಅಭಿಪ್ರಾಯಪಟ್ಟರು.
 
ಇಲ್ಲಿನ ಜಿಲ್ಲಾ ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಕಲಬುರ್ಗಿ ರಂಗಾಯಣದ ಆಶ್ರಯದಲ್ಲಿ ಶುಕ್ರವಾರ ನಡೆದ ನಾಟಕ ಮತ್ತು ಜಾನಪದ ನೃತ್ಯಗಳ ಸ್ಪರ್ಧೆಯ ‘ಕಾಲೇಜು ರಂಗೋತ್ಸವ’ದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ಸಿನಿಮಾ ರೀಲ್‌ ಆದರೆ ನಾಟಕ ರಿಯಲ್. ಭಾವೈಕ್ಯತೆಗೆ ಸಾಕ್ಷಿಯಾಗಿ ನಿಲ್ಲುವ ನಾಟಕಗಳು ನಾವೆಲ್ಲ ಒಂದೇ ಎನ್ನುವ ಭಾವನೆ ಮೂಡಿಸುತ್ತವೆ. ಮಾನವೀಯ ಮೌಲ್ಯಗಳನ್ನು ಬಿತ್ತರಿಸುವ ಕಾರ್ಯವನ್ನೂ ಮಾಡುತ್ತವೆ. ಮನಸ್ಸು ಅರಳಿಸುವ ಜತೆಗೆ ಹೃದಯವನ್ನು ಹಿಗ್ಗಿಸುವ ಕೆಲಸ ಮಾಡುತ್ತವೆ. ಒಟ್ಟಾರೆಯಾಗಿ ಅವುಗಳಿಗೆ ಬದುಕನ್ನು ಬದಲಾಯಿಸುವ ಶಕ್ತಿ ಇದೆ ಎಂದು ತಿಳಿಸಿದರು.
 
ನಾಟಕ ವೀಕ್ಷಿಸುವುದರಿಂದ ಮೆದುಳು ಚುರುಕುಗೊಂಡು ವ್ಯಕ್ತಿಯಲ್ಲಿನ ಅಹಂಕಾರ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳು ನಾಟಕದಂತಹ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಂಡರೆ ಭಾವನೆಗಳನ್ನು ಅರಳಿಸಲು ಸಾಧ್ಯವಾಗಲಿದೆ. ಶಿಕ್ಷಕರು ಹಾಗೂ ಪಾಲಕರು ಒಗ್ಗೂಡಿ ಶಾಲಾ ಕಾಲೇಜುಗಳಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡಲು ಯತ್ನಿಸಬೇಕು ಎಂದು ಹೇಳಿದರು.
 
ಸಿನಿಮಾ, ಟಿವಿಗಳು ಬಂದ ಮೇಲೆ ರಂಗಭೂಮಿಯ ಉತ್ಸಾಹ ಕಡಿಮೆಯಾಗಿದೆ. ಡಾ.ಬಿ.ಆರ್.ಅಂಬೇಡ್ಕರ್‌ ಅವರು ಇತಿಹಾಸ ತಿಳಿಯದವ ಇತಿಹಾಸ ಸೃಷ್ಟಿಸಲಾರ ಎಂದು ಹೇಳಿದ್ದಾರೆ. ಬಬ್ರುವಾಹನ, ಸತ್ಯ ಹರಿಶ್ಚಂದ್ರ, ಹೇಮರಡ್ಡಿ ಮಲ್ಲಮ್ಮ ಮತ್ತಿತರ ನಾಟಕಗಳಲ್ಲಿನ ನವರಸಗಳು ಅಚ್ಚಳಿಯದಂತೆ ಉಳಿದುಕೊಂಡಿವೆ. ನಾಟಕದ ಹಿಂದಿನ ಪೌರಾಣಿಕ ಕಲ್ಪನೆಗಳನ್ನು ಅರಿತುಕೊಳ್ಳಬೇಕು ಎಂದರು.
 
ದಕ್ಷಿಣ ಕರ್ನಾಟಕದ ಯಕ್ಷಗಾನವು ಅಂತರರಾಷ್ಟ್ರೀಯ ಖ್ಯಾತಿ ಪಡೆದಿದೆ. ಆದರೆ ಉತ್ತರ ಕರ್ನಾಟಕದ ಸಣ್ಣಾಟಗಳು ಜನರ ನಿರಾಸಕ್ತಿಯಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. 
 
ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ.ಕುಚಬಾಳ, ಪತ್ರಕರ್ತರಾದ ರಿಷಿಕೇಶ ಬಹಾದ್ದೂರ ದೇಸಾಯಿ, ಅಪ್ಪಾರಾವ್ ಸೌದಿ ಮಾತನಾಡಿದರು. ರಂಗಭೂಮಿ ಕಲಾವಿದ ಚಂದ್ರಗುಪ್ತ ಚಾಂದಕವಠೆ ಅಧ್ಯಕ್ಷತೆ ವಹಿಸಿದ್ದರು.
 
ನಾಟಕ ನಿರ್ದೇಶಕರಾದ ನೀನಾಸಂ ತರಬೇತಿ ಪಡೆದ ಜೈರಾಮ, ಯೋಗೇಶ ಹಾಗೂ ಮಹಾಸತಿ ಉಪಸ್ಥಿತರಿದ್ದರು. ರಂಗಭೂಮಿ ಕಲಾವಿದ ಯಶವಂತ ಕುಚಬಾಳ ನಿರೂಪಿಸಿದರು.
 
ಹುಮನಾಬಾದ್‌ ತಾಲ್ಲೂಕಿನ ಹಳ್ಳಿಖೇಡದ ಬಸವತೀರ್ಥ ವಿದ್ಯಾಪೀಠ, ಬೀದರ್‌ನ ವಿ.ಕೆ.ಇಂಟರ್‌ನ್ಯಾಷನಲ್ ಆರ್ಟ್ಸ್‌ ಆ್ಯಂಡ್‌ ಕಾಮರ್ಸ್‌ ಕಾಲೇಜ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಿ.ವಿ.ಭೂಮರೆಡ್ಡಿ ಕಾಲೇಜು ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸಿದರು.
 
**
ನಾಟಕಗಳು ವೈಜ್ಞಾನಿಕ ಭಾವನೆಗಳನ್ನು ಬೆಳೆಸುವ ಜತೆಗೆ ವಿಶ್ವ ಬಂಧುತ್ವವನ್ನು ಉದ್ದಿಪನಗೊಳಿಸುತ್ತವೆ. ವಿಶ್ವಮಾನವನ ಭಾವನೆಯನ್ನು
ಜಾಗೃತಗೊಳಿಸುತ್ತವೆ.
-ಡಾ. ಜಗನ್ನಾಥ ಹೆಬ್ಬಾಳೆ
ಜಾನಪದ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT