ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಯಾ ಯೋಜನೆ ಸಲ್ಲಿಸಲು ಸೂಚನೆ

ನಗರೋತ್ಥಾನ 3ನೇ ಹಂತದ ಯೋಜನೆ: ಅಧಿಕಾರಿಗಳ ಸಭೆ
Last Updated 14 ಜನವರಿ 2017, 12:10 IST
ಅಕ್ಷರ ಗಾತ್ರ
ಬೀದರ್: ನಗರೋತ್ಥಾನ ಯೋಜನೆ ಅಡಿಯಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ 15 ದಿನಗಳ ಒಳಗೆ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ನಗರೋತ್ಥಾನ 3ನೇ ಹಂತದ ಯೋಜನೆ ಹಾಗೂ ಕಾರಂಜಾ ಯೋಜನೆ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
 
ಈ ಯೋಜನೆಯಡಿ ಬಿಡುಗಡೆಯಾದ ಒಟ್ಟು ₹134.50 ಕೋಟಿ ಅನುದಾನವನ್ನು ಈಗಾಗಲೇ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
 
ಬೀದರ್ ನಗರಸಭೆಗೆ ₹60 ಕೋಟಿ, ಬಸವಕಲ್ಯಾಣ ನಗರಸಭೆಗೆ ₹25 ಕೋಟಿ, ಭಾಲ್ಕಿ ಪುರಸಭೆಗೆ ₹32.50 ಕೋಟಿ, ಹುಮನಾಬಾದ್, ಚಿಟಗುಪ್ಪ ಪುರಸಭೆಗಳಿಗೆ ತಲಾ ₹7.50 ಕೋಟಿ ಹಾಗೂ ಔರಾದ್ ಪಟ್ಟಣ ಪಂಚಾಯಿತಿಗೆ ₹2 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಡಳಿತಾತ್ಮಕ ಅನುಮೋದನೆ ಪಡೆದು ಫೆಬ್ರುವರಿ 12ರ ಒಳಗೆ ಟೆಂಡರ್‌ ಕರೆಯಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
 
ಕಾರಂಜಾ ಯೋಜನೆಯ 131 ಕಿ.ಮೀ. ಬಲದಂಡೆ ಕಾಲುವೆ, 31 ಕಿ.ಮೀ. ಎಡದಂಡೆ ಕಾಲುವೆಗಳ ನವೀಕರಣಕ್ಕೆ ₹405 ಕೋಟಿ ವೆಚ್ಚದ ಅಂದಾಜು ಪಟ್ಟಿ ತಯಾರಿಸಲಾಗಿದೆ. ಒಟ್ಟು 22 ಕಿ.ಮೀ ವ್ಯಾಪ್ತಿಯ ಕಾರಂಜಾ ಏತ ನೀರಾವರಿ ಯೋಜನೆಯಲ್ಲಿ ಈಗಾಗಲೇ 21 ಕಿ.ಮೀ. ಕಾಲುವೆ ಪೂರ್ಣಗೊಂಡಿದೆ. ಬಾಕಿ ಉಳಿದ ಕಾಲುವೆಗಳ ನವೀಕರಣಕ್ಕೆ ₹ 36 ಕೋಟಿ ವೆಚ್ಚದ ಅಂದಾಜು ಪಟ್ಟಿ ತಯಾರಿಸಲಾಗಿದೆ. ಇದಲ್ಲದೇ ₹ 915 ಕೋಟಿ ವೆಚ್ಚದ ಸಣ್ಣ ನೀರಾವರಿ ಯೋಜನೆ ಅಂದಾಜು ಪಟ್ಟಿ ಸಹ ತಯಾರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
 
ಕಾರಂಜಾ ಜಲಾಶಯ ತುಂಬಿದೆ. ಅಧಿಕಾರಿಗಳು ಕಾಲುವೆಗಳ ಈಗಿನ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು.  ನೀರು ಕೊನೆಯ ಅಂಚಿನವರೆಗೂ ತಲುಪುವ ವ್ಯವಸ್ಥೆ ಮಾಡಬೇಕು. ಕಾರಂಜಾ ಮತ್ತು ಚುಳುಕಿನಾಲಾ ಯೋಜನೆಯಡಿ ಜಮೀನು ಕಳೆದುಕೊಂಡ ಕೆಲ ರೈತರಿಗೆ ಇನ್ನೂ ಪರಿಹಾರ ದೊರಕಿಲ್ಲ ಎನ್ನುವ ದೂರುಗಳಿವೆ. ಬಾಕಿ ಪರಿಹಾರ ಪಾವತಿಸಲು ತಕ್ಷಣ ಪ್ರಸ್ತಾವ ಸಲ್ಲಿಸಬೇಕು ಎಂದು ತಿಳಿಸಿದರು.
 
ಫಲಿತಾಂಶ ಸುಧಾರಿಸಿ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿ ನಡೆಸಬೇಕು. ಎಸ್ಸೆಸ್ಸೆಲ್ಸಿ  ಫಲಿತಾಂಶ ಸುಧಾರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
 
ರಾಜ್ಯ ಉಗ್ರಾಣ ಅಭಿವೃದ್ಧಿ ನಿಗಮದ ಅಧ್ಯಕ್ಷ ರಹೀಂ ಖಾನ್, ಜಿಲ್ಲಾಧಿಕಾರಿ ಡಾ. ಎಚ್.ಆರ್. ಮಹಾದೇವ ಉಪಸ್ಥಿತರಿದ್ದರು.
 
**
ಕಾರಂಜಾ ನೀರಾವರಿ ಯೋಜನೆ 50 ವರ್ಷಗಳಿಂದ ಅರ್ಧಕ್ಕೆ ನಿಂತಿದೆ. ಜನರಿಗೆ ನೀಡಿದ ಭರವಸೆಯಂತೆ ಈ ಯೋಜನೆಯನ್ನು ಪೂರ್ಣಗೊಳಿಸಲು ಅಧಿಕಾರಿಗಳು ಕಾಮಗಾರಿಯ ವೇಗ ಹೆಚ್ಚಿಸಬೇಕು 
-ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT