ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರ್ಮ’ಯೋಗಿಗಳ ಪಾಲಿನ ‘ಜೀವ’ದಾತ ಬೇಜವಾಡ ವಿಲ್ಸನ್

ಮುಸಾಫಿರ್
Last Updated 14 ಜನವರಿ 2017, 19:30 IST
ಅಕ್ಷರ ಗಾತ್ರ

‘ನೀವು ಕೂತಿರುವ ಕುರ್ಚಿಯಿದೆಯಲ್ಲಾ, ಅದರ ಹಿಂದೆಯೇ ಚಾಪೆ ಹಾಕಿಕೊಂಡು ಮಲಗುತ್ತೇನೆ. ಈ ಬಾತ್‌ರೂಮ್‌ನಲ್ಲಿಯೇ ಸ್ನಾನ. ಆ ಚೀಲ ಇದೆಯಲ್ಲಾ ಅದರಲ್ಲೇ ನನ್ನ ನಾಲ್ಕೈದು ಜೊತೆ ಬಟ್ಟೆ–ಬರೆ. ದೆಹಲಿಯಲ್ಲಿ ಇದ್ದಾಗ ಇದೇ ನನ್ನ ಕಚೇರಿ–ಮನೆ ಎಲ್ಲ. ಇಲ್ಲದಿದ್ದರೆ ರೈಲು, ಬಸ್ಸು, ಯಾರದೋ ಕಚೇರಿ, ಯಾವುದೋ ಹೊಟೇಲ್! ಬದುಕು ಬಹಳ ಸರಳ’.

ಅಚ್ಚ ಕನ್ನಡದಲ್ಲಿ ಬೇಜವಾಡ ವಿಲ್ಸನ್ ಅವರ ವೈಯಕ್ತಿಕ ಮತ್ತು ದಿನಚರಿಯ ಬದುಕಿನ ಪುಟಗಳನ್ನು ಬಿಚ್ಚುತ್ತಾ ಸಾಗಿದರು. ಬಿಳಿ ಪೈಜಾಮ. ನೀಲಿ ಜುಬ್ಬ. ಮೂಗಿನ ಮೇಲೊಂದು ಕನ್ನಡಕ. ತುಂಬಿತುಳುಕುವ ಆತ್ಮವಿಶ್ವಾಸ. ಬದ್ಧತೆಯ ಪ್ರತೀಕ ಈ ಜೀವ. 
 
ಕಳೆದ ಮೂರು ದಶಕಗಳ ಅವಧಿಯಲ್ಲಿ ಭಾರತದೆಲ್ಲೆಡೆ ಇರುವ ಸಫಾಯಿ ಕರ್ಮಚಾರಿಗಳ ಬದುಕನ್ನು ಹಸನಾಗಿಸಲು ಬದುಕನ್ನೇ ಅಡವಿಟ್ಟಿರುವ ಬೇಜವಾಡ ಅವರಿಗೆ ಕೆಲವೇ ತಿಂಗಳ ಹಿಂದೆ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸ್ಸೆ ಬಂದಿತ್ತು. ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತರಾದ, ಕರ್ನಾಟಕ ಮೂಲದ ಕೆ.ವಿ.ಸುಬ್ಬಣ್ಣ ಮತ್ತು ಹರೀಶ್ ಹಂದೆ ಅವರನ್ನು ಅತಿ ಹತ್ತಿರದಿಂದ ಬಲ್ಲವನಾಗಿದ್ದ ನನಗೆ ಬೇಜವಾಡ ಜೀವನ ಶೈಲಿ ಕಂಡು ಅಚ್ಚರಿಯೇನೂ ಆಗಲಿಲ್ಲ. ಆದರೆ, ಎಷ್ಟೋ ಬಾರಿ ನೊಬೆಲ್ ಪ್ರಶಸ್ತಿ ಬಂದವರನ್ನು ಹತ್ತಿರದಿಂದ ಕಂಡಾಗ, ಒಡನಾಡಿದಾಗ, ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯೇ ಹೆಚ್ಚು ಅರ್ಥಪೂರ್ಣ ಎಂದೆನ್ನಿಸಿದ್ದೂ ಇದೆ!
 
ಮ್ಯಾಗ್ಸೆಸ್ಸೆ ಅವರನ್ನು ಹುಡುಕಿಕೊಂಡು ಬರುವುದಕ್ಕಿಂತ ಮೊದಲೇ, ವೈಯಕ್ತಿಕವಾಗಿ ಪರಿಚಯವಿದ್ದ ಬೇಜವಾಡ ನಮ್ಮ ಕರ್ನಾಟಕದ ಬಂಗಾರದೂರು ಕೆ.ಜಿ.ಎಫ್‌ನವರು. ಇತ್ತೀಚೆಗಷ್ಟೆ ನವದೆಹಲಿಗೆ ಭೇಟಿ ನೀಡಿದಾಗ ಬಹು ದಿನಗಳಿಂದ ಬಾಕಿಯುಳಿದಿದ್ದ ನಮ್ಮಿಬ್ಬರ ಭೇಟಿಗಾಗಿ ಅರ್ಧ ದಿನ ಮೀಸಲಿಟ್ಟಿದ್ದೆ. 30 ವರ್ಷಗಳ ಹಿಂದೆ ಪೌಲ್ ದಿವಾಕರ್ ಮತ್ತು ಎಸ್.ಆರ್. ಸಂಕರನ್ ಜೊತೆ ಬೇಜವಾಡ ಸ್ಥಾಪಿಸಿದ್ದ ‘ಸಫಾಯಿ ಕರ್ಮಚಾರಿ ಆಂದೋಲನ’ (ಎಸ್‌ಕೆಎ) ಕಚೇರಿ ಈಗ ದೆಹಲಿಯ ಜನನಿಬಿಡ ಪಟೇಲ್ ನಗರದಲ್ಲಿದೆ. ಸುಮಾರು ಹದಿನೈದು ಜನರು ಕೆಲಸ ಮಾಡುವ ಮೂರು ಕೋಣೆ, ಒಂದು ಹಾಲ್ ಮತ್ತು ಒಂದು ಅಡುಗೆ ಕೋಣೆ. ಆ ಮನೆಯ ಒಂದು ಕೋಣೆಯೇ ದೆಹಲಿಯಲ್ಲಿದ್ದಾಗ ಬೇಜವಾಡ ಸರ್ವಸ್ವ. ಅಲ್ಲಿಯೇ ಮಲಗುವುದು, ಏಳುವುದು, ಕೂರುವುದು, ಸಭೆ ನಡೆಸುವುದು... ಎಲ್ಲವೂ. 
ಅಲ್ಲಿಯೇ ಅವರ ಜೊತೆ ಮಾತನಾಡುತ್ತಿದ್ದ ಕುಳಿತಿದ್ದವ,
 
‘ಸಂಸಾರ ಏನಾದ್ರೂ!?’
 
‘ಇಲ್ಲಪ್ಪ’ – ತುಂಟ ನಗುವಿನ ಉತ್ತರ ನೀಡುತ್ತಲೇ, ಅವರ ದನಿ ಭಾರವಾಗಿತ್ತು. ‘ಭಾರತದ ಮೂಲೆ–ಮೂಲೆಯಲ್ಲಿ ಬರಿಗೈಯಲ್ಲಿಯೇ ಮಲ ಸಂಗ್ರಹಿಸಿ, ತಲೆಯ ಮೇಲೆ ಅದನ್ನು ಹೊತ್ತು ಬೇರೆಯವರ ಬದುಕನ್ನು ಚೊಕ್ಕವಾಗಿಸುವ ಸುಮಾರು ಏಳೆಂಟು ಲಕ್ಷ ಮಂದಿ ಮನುಷ್ಯರು ಈಗಲೂ ಇದ್ದಾರೆ. ಆ ಕರ್ಮಯೋಗಿಗಳ ಸಂಸಾರಕ್ಕೆ ಸೇರಿದವ ನಾನು. ಅವರು ಕೂಡ ಉಳಿದ ಮನುಷ್ಯರಂತೆ ಸಮಾಜದಲ್ಲಿ ಗೌರವದಿಂದ ತಲೆಯೆತ್ತಿ ಬದುಕುವಂತೆ ಮಾಡಬೇಕು ಎನ್ನುವುದು ನನ್ನ ಬದುಕಿನ ಗುರಿ. ಆ ಗುರಿ ತಲುಪುವುದಕ್ಕಾಗಿಯೇ ಮದುವೆ–ಮನೆ–ಮಠ ಏನೂ ಬೇಡ ಎಂದು ಮೂವತ್ತು ವರ್ಷಗಳ ಹಿಂದೆಯೇ ನಿರ್ಧಾರ ಮಾಡಿದ್ದೆ’. ಬೇಜವಾಡ ಕಣ್ಣಲ್ಲಿ ಮಿಂಚಿತ್ತು.
 
50 ವರ್ಷಗಳ ಹಿಂದಿನ ಮಾತು. ಕೆಜಿಎಫ್ ಫಳಫಳನೆ ಹೊಳೆಯುತ್ತಿತ್ತು. ಆಗ ಭಾರತದ ಚಿನ್ನದ ಖಜಾನೆಯಾಗಿದ್ದ ಊರದು. ಜಪಾನ್‌ನ ಟೋಕಿಯೋ ನಂತರ ಅತಿ ಹೆಚ್ಚು ವಿದ್ಯುತ್ ಸಂಪರ್ಕ ಹೊಂದಿದ್ದ ಪಟ್ಟಣ ಎಂಬ ಹೆಗ್ಗಳಿಕೆ ಬಂಗಾರದೂರಿನದಾಗಿತ್ತು. ಅಂತಹ ಬಂಗಾರದೂರಿನಲ್ಲಿದ್ದ ಎಲ್ಲರ ಬದುಕೂ ಬಂಗಾರವೇನೂ ಆಗಿರಲಿಲ್ಲ! 
 
ಪ್ರತಿ ದಿನ ಬೆಳಿಗ್ಗೆ ಬುಟ್ಟಿ–ಬರಲು ಹಿಡಿದು ಮನೆ–ಮನೆಗೆ ಹೋಗಿ ಮಲ ಸಂಗ್ರಹಿಸಿ, ತಲೆಯ ಮೇಲೆ ಆ ಬುಟ್ಟಿಯನ್ನು ಹೊತ್ತು ಸಾಗುವ, ‘ತೋಟಿ’ ಎನ್ನಲಾಗುತ್ತಿದ್ದ ಮನುಷ್ಯರ ದೊಡ್ಡ ಗುಂಪೇ ಅಲ್ಲಿತ್ತು. ಅಂತಹ ಬದುಕನ್ನೇ ಸಾಗಿಸುತ್ತಿದ್ದ ರಚೆಲ್ ಮತ್ತು ಜಾಕೋಬ್ ಬೇಜವಾಡ ಅವರ ಕಿರಿಯ ಪುತ್ರನಾಗಿ ಹುಟ್ಟಿದವರು ಬೇಜವಾಡ ವಿಲ್ಸನ್. ಅವರ ತಂದೆ–ತಾಯಿ, ಅಣ್ಣ ಮತ್ತು ಸಂಬಂಧಿಕರೆಲ್ಲರೂ ಕರ್ಮಯೋಗಿಗಳೇ ಆಗಿದ್ದವರು. ಚಿನ್ನದ ಗಣಿ ಕಂಪೆನಿಯೇ ಅವರನ್ನು ನೇಮಕ ಮಾಡಿಕೊಂಡಿತ್ತು.
 
‘‘ಶಾಲೆಯಲ್ಲಿ ಎಲ್ಲರೂ ನನ್ನನ್ನು ತೋಟಿ ಎಂದು ಅಪಹಾಸ್ಯ ಮಾಡುತ್ತಿದ್ದರು. ಮೊದಮೊದಲು ನನಗೆ ಅದು ಏಕೆಂದು ಅರ್ಥವಾಗುತ್ತಿರಲಿಲ್ಲ. ತಂದೆ–ತಾಯಿ–ಅಣ್ಣ ಕೂಡ ಅವರೇನು ಕೆಲಸ ಮಾಡುತ್ತಾರೆ ಎಂದು ನನ್ನ ಬಳಿ ಹೇಳಿರಲಿಲ್ಲ. ಕೊನೆಗೊಮ್ಮೆ ತಂದೆ–ತಾಯಿ ಕೆಲಸಕ್ಕೆ ಹೊರಟಾಗ ಕದ್ದು ಅವರನ್ನು ಹಿಂಬಾಲಿಸಿದೆ. ಕಣ್ಣಾರೆ ನನ್ನ ತಂದೆ–ತಾಯಿ ಮಲ ಸಂಗ್ರಹಿಸುವ, ತಲೆಯ ಮೇಲೆ ಅದನ್ನು ಹೊತ್ತು ಸಾಗುವುದನ್ನು ಕಂಡೆ. ಆ ಕ್ಷಣ ನಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೂಡ ಮಾಡಿದ್ದೆ. ಆದರೆ, ಬದುಕು ನಾವೆಣಿಸಿಕೊಂಡಂತೆ ಇರುವುದಿಲ್ಲ. ಆತ್ಮಹತ್ಯೆ ಆಸೆ ಬಿಟ್ಟು, ಆತ್ಮ ಹೇಳಿದ ಹಾದಿ ಹಿಡಿದೆ’’. ಬೇಜವಾಡ ಕೆ.ಜಿ.ಎಫ್‌ನ ಬಾಲ್ಯದ ಬದುಕಿನ ಪುಟಗಳನ್ನು ತಿರುವುತ್ತಿದ್ದರು. 
 
ಅವಮಾನಗಳ ನಡುವೆಯೇ ವಿದ್ಯಾಭ್ಯಾಸ ಮುಂದುವರಿಸಿ ಪದವಿಗಳಿಸಿದ ಮೇಲೆ ಮರಳಿದ್ದು ಊರಿಗೆ. ವ್ಯವಸ್ಥೆಯ ವಿರುದ್ಧ ತಿರುಗಿ ನಿಂತಾಗ, ಮನುಷ್ಯರನ್ನು ಮನುಷ್ಯರನ್ನಾಗಿಸಲು ಮುಂದಾದಾಗ ತಂದೆ–ತಾಯಿ ಕೂಡ ‘‘ನಿನಗೇಕೆ ಈ ಉಸಾಬರಿ. ತಲೆತಲಾಂತರದಿಂದ ಇದನ್ನೇ ಮಾಡಿಕೊಂಡು ಬಂದಿದ್ದೇವೆ. ಈಗ ಕೂಡ ಅದು ಮುಂದುವರಿದಿದೆ. ಎಲ್ಲಾದರೂ ಹೋಗಿ ನೀನು ಬೇರೆ ದಾರಿ ನೋಡಿಕೋ’’ ಎಂದರು. ಸಮಾಜ ಕೂಡ ಮೂಗು ಮುರಿಯಿತು. ಕೆಜಿಎಫ್ ಆಡಳಿತ ಮಂಡಳಿ ಕೂಡ ಕ್ಯಾರೇ ಎನ್ನಲಿಲ್ಲ. ಅದೇ ವೇಳೆ ದೇಶದೆಲ್ಲೆಡೆ 1993ರಲ್ಲಿ ಮಲಹೊರುವ ಪದ್ಧತಿ ನಿಷೇಧ ಕಾಯಿದೆ ಜಾರಿಗೆ ಬಂತು. ಆದರೂ, ಸಮಾಜದ ಕಣ್ಣು ತೆರೆಯಲಿಲ್ಲ. ಕೊನೆಗೆ 1994ರಲ್ಲಿ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರ–ಲೇಖನ ಸಂಸತ್ತಿನಲ್ಲಿ ಬಹಳ ದೊಡ್ಡ ಗದ್ದಲ ಎಬ್ಬಿಸಿತು. ಕೇವಲ ಗದ್ದಲ ಮಾತ್ರ ಎದ್ದಿತು. ಆ ಬಲವಾದ ಕಾಯಿದೆಯ ನೆರಳಲ್ಲಿಯೇ ಮನುಷ್ಯನ ಮಲವನ್ನು ಮನುಷ್ಯನೇ ಕೈಯಲ್ಲಿ ಬಾಚುವ, ತಲೆಯ ಮೇಲೆ ಹೊರುವ ಪದ್ಧತಿ ಮಾತ್ರ ಜೀವಂತವಾಗಿ ಉಳಿಯಿತು. ಇನ್ನೂ ಉಳಿದಿದೆ.
 
ಹೋರಾಟದ ಹಾದಿ ಹಿಡಿದಿದ್ದ ಬೇಜವಾಡ ಕೆ.ಜಿ.ಎಫ್‌ನಿಂದ ಆಂಧ್ರದ ಗಡಿ ದಾಟಿದರು. ದಲಿತ ಹೋರಾಟಗಾರ ಪೌಲ್ ದಿವಾಕರ್ ಮತ್ತು ಸಂಕರನ್ ಜೊತೆಯಾದರು. ‘ಎಸ್‌ಕೆಎ’ ಜನ್ಮ ತಾಳಿತು. ಸುಮಾರು ಹತ್ತು ವರ್ಷಗಳ ಕಾಲ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಮಲಹೊರುವ ಪದ್ಧತಿಯ ನಿರ್ನಾಮಕ್ಕೆ ಪ್ರಯತ್ನ ಮಾಡಿದ ಬೇಜವಾಡ ತಮ್ಮ ಕಾರ್ಯಸ್ಥಾನವನ್ನು ನವದೆಹಲಿಗೆ ಸ್ಥಳಾಂತರಿಸಿದರು. ಕಳೆದ ಹದಿಮೂರು ವರ್ಷಗಳಿಂದ ಈ ಅಮಾನುಷ ಪದ್ಧತಿಗೆ ಕೊನೆ ಹಾಡುವ ಯತ್ನದಲ್ಲಿ ಹಗಲು–ರಾತ್ರಿ ದುಡಿಯುತ್ತಿರುವ ಬೇಜವಾಡ ಹೋರಾಟ ನ್ಯಾಯಾಂಗ, ಕಾರ್ಯಾಂಗ ಮತ್ತು ಆಡಳಿತಾಂಗ ಎಲ್ಲ ನೆಲೆಯಲ್ಲೂ ನಡೆಯುತ್ತಲೇ ಇದೆ. 
 
‘‘ದುರಂತವೆಂದರೆ ಸರ್ಕಾರವೇ ಕಾಯಿದೆ ಜಾರಿಗೆ ತಂದಿದೆ. ದೇಶದ ಸರ್ವೋಚ್ಛ ನ್ಯಾಯಾಲಯ ಆ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ ಎಂದು ಹಲವು ಬಾರಿ ಆದೇಶ–ಎಚ್ಚರಿಕೆ ನೀಡಿದೆ. ಆದರೆ, ಆ ನಿಟ್ಟಿನಲ್ಲಿ ರಾಜಕೀಯ ಮತ್ತು ಸಾಮಾಜಿಕ ಸಂಕಲ್ಪದ ಕೊರತೆಯಿದೆ. ಅದರ ಪರಿಣಾಮದಿಂದಾಗಿಯೇ ಈಗ ಕೂಡ ಮಲಹೊರುವ ಮನುಷ್ಯರನ್ನು ಕಾಣಬಹುದು’’ ಬೇಜವಾಡ ನೊಂದು ಹೇಳಿದರು.
 
ಕಳೆದ ಮೂವತ್ತು ವರ್ಷಗಳಲ್ಲಿ ಕೇಂದ್ರ ಮತ್ತು ವಿವಿಧ ರಾಜ್ಯಗಳಲ್ಲಿ ಹಲವಾರು ಸರ್ಕಾರಗಳು ಅಧಿಕಾರಕ್ಕೆ ಬಂದುಹೋಗಿವೆ. ಆದರೆ, ಒಂದೇ ಒಂದು ಸರ್ಕಾರದ ಕಣ್ಣಿಗೆ ಈ ಸಾಮಾಜಿಕ ಸಮಸ್ಯೆ ಮನುಷ್ಯತ್ವದ ಸಮಸ್ಯೆ ಎಂದೆನ್ನಿಸಲೇ ಇಲ್ಲ. ಇದೊಂದು ಮನುಷ್ಯತ್ವದ ಮೇಲಿನ ಕಪ್ಪು ಚುಕ್ಕೆ ಎಂದೆನ್ನಿಸಲಿಲ್ಲ. ಕೈಯಲ್ಲಿಯೇ ಮಲ ಬಾಚಿ, ಅದನ್ನು ತಲೆಯ ಮೇಲೆ ಹೊರುವ ಜನರ ಬದುಕು ನರಕಕ್ಕಿಂತ ಕಡೆಯಾಗಿರುತ್ತದೆ. ಆ ಕೆಲಸ ಮಾಡಬೇಕೆಂದರೆ ಅವರು ಯಥೇಚ್ಛ ಮದ್ಯಪಾನ ಮಾಡಲೇಬೇಕು. ಹಾಗೆ ಮದ್ಯಪಾನ ಮಾಡಿ ಅವರನ್ನು ಅವರೇ ಮರೆಯುವ ಸ್ಥಿತಿ ತಲುಪಿದಲ್ಲಿ ಮಾತ್ರ, ಯಾವುದೇ ಹಿಂಜರಿಕೆಯಿಲ್ಲದೇ ಆ ಕೆಲಸಕ್ಕೆ ಕೈಹಾಕಬಹುದು. ಅದರ ಪರಿಣಾಮ ಇಡೀ ಕುಟುಂಬದ ಮೇಲಾಗುತ್ತದೆ. ತಂದೆ–ತಾಯಿ ಹಗಲು–ರಾತ್ರಿ ಮದ್ಯಪಾನದ ಮತ್ತಿನಲ್ಲಿ ಇದ್ದರೆ, ಮಕ್ಕಳು ವಿದ್ಯಾಭ್ಯಾಸ ವಂಚಿತರಾಗಿ ಕೊನೆಗೊಂದು ದಿನ ಅದೇ ಹಾದಿ ಹಿಡಿಯುತ್ತಾರೆ. ಎಲ್ಲೋ ಬೇಜವಾಡ ಅವರಂತಹ ಕೆಲವೇ ಕೆಲವು ಮಕ್ಕಳು ಆ ಬದುಕಿಂದ ಮುಕ್ತಿ ಪಡೆಯಲು ಸಾಧ್ಯ. ದುರಂತವೆಂದರೆ ಸರ್ಕಾರಿ ಅಂಗಗಳಾದ ರೈಲ್ವೇಸ್, ಕಾರ್ಪೊರೇಷನ್ ಮತ್ತು ಮುನ್ಸಿಪಾಲಿಟಿಗಳು ಈಗ ಕೂಡ ಇದೇ ‘ಕರ್ಮ’ಯೋಗಿಗಳನ್ನು ಸ್ವಚ್ಛತೆಗಾಗಿ ಬಳಸಿಕೊಳ್ಳುತ್ತಿವೆ.
 
‘‘ಇದು ಬದ್ಧತೆ ಕೊರತೆಯ ಪರಿಣಾಮ. ಈ ಸಮಸ್ಯೆ ಇನ್ನೂ ಜೀವಂತವಾಗಿ ಉಳಿದಿದೆ ಎನ್ನುವುದನ್ನೇ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಸಂಸ್ಥೆಗಳು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಅವರ ಪ್ರಕಾರ ಭಾರತದಲ್ಲಿ ಮಲ ಹೊರುವ ಪದ್ಧತಿ ಮಾಯವಾಗಿ ಹೋಗಿದೆ. ಅದು ಪೇಪರ್ ಮೇಲೆ. ವಾಸ್ತವದ ನೆಲೆಯಲ್ಲಿ ಈ ಸಮಸ್ಯೆಯನ್ನು ಒಪ್ಪಿಕೊಂಡು, ಅದಕ್ಕೊಂದು ಪರಿಹಾರ ನೀಡಲು ಮುಂದಾದರೆ ಖಂಡಿತ ಮಲ ಹೊರುವ ಪದ್ಧತಿಗೆ ಕೊನೆ ಹಾಡಬಹುದು. ಆದರೆ, ಯಾರೂ ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲು ಮುಂದಾಗುತ್ತಿಲ್ಲ. ಏಕೆಂದರೆ ಇದು ಸಾವಿರಾರು ಕೋಟಿಯ ಬೃಹತ್ ಯೋಜನೆ ಅಲ್ಲವಲ್ಲ!’’ – ಬೇಜವಾಡ ಮಾತಿನಲ್ಲಿ ಉತ್ಪ್ರೇಕ್ಷೆಯಿಲ್ಲ. 
 
ಇಂತಹ ವಾತಾವರಣದ ನಡುವೆಯೇ ‘ಎಸ್‌ಕೆಎ’ ಕಳೆದ ಒಂದು ದಶಕದಲ್ಲಿ ಸುಮಾರು ಮೂರು ಲಕ್ಷ ಕರ್ಮಯೋಗಿಗಳಿಗೆ ಮುಕ್ತಿ ನೀಡಿದೆ. ಸಾಧ್ಯವಾದಷ್ಟರ ಮಟ್ಟಿಗೆ ಅವರ ಬದುಕಿಗೆ ಹೊಸ ರೂಪು ನೀಡುವಲ್ಲಿ ಯಶಸ್ವಿಯಾಗಿದೆ. ‘ಎಸ್‌ಕೆಎ’ ಆರಂಭದಲ್ಲಿ ಒಂದಿಷ್ಟು ವರ್ಷ ನ್ಯಾಯಾಂಗದ ಮೂಲಕ ಹೋರಾಟ ನಡೆಸಿತು. ಆನಂತರ ಕಾರ್ಯಾಂಗದ ಮನಸ್ಸು ತಿದ್ದುವ ಪ್ರಯತ್ನ ಮಾಡಿತು. ಇತ್ತೀಚಿನ ವರ್ಷಗಳಲ್ಲಿ ಆ ಸಮುದಾಯದ ಮೂಲಕವೇ, ಸಾಮಾಜಿಕ ಜಾಗೃತಿ ಮೂಡಿಸಿ ಮುಕ್ತಿ ಪ್ರಾಪ್ತಿ ಮಾಡುವ ಯತ್ನಕ್ಕೆ ಕೈಹಾಕಿದೆ. 
 
‘ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗ’ದ ಪ್ರಕಾರ ಈಗಲೂ ನಮ್ಮ ರಾಜ್ಯದಲ್ಲಿ ಸುಮಾರು 25 ಸಾವಿರ ಕರ್ಮಯೋಗಿಗಳು ಇದ್ದಾರೆ. ಬೇಜವಾಡ ವಿಲ್ಸನ್ ಬೆಳೆದ, ಹೋರಾಟ ಆರಂಭಿಸಿದ ಕೆಜಿಎಫ್‌ನಲ್ಲಿಯೇ ಅಂತಹ 800 ಕುಟುಂಬಗಳು ಇನ್ನೂ ಮಲ ಹೊರುವ ಕೆಲಸದಲ್ಲಿ ತೊಡಗಿಕೊಂಡವೆ ಎಂದು ಅಂದಾಜು ಮಾಡಲಾಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ 1370 ಕರ್ಮಯೋಗಿಗಳು ಈ ದೇಶದ ತೊಟ್ಟಿಗಳಲ್ಲಿ, ಚರಂಡಿಗಳಲ್ಲಿ ಹೆಣವಾಗಿದ್ದಾರೆ. ಅದೂ ‘ಸ್ವಚ್ಛ ಭಾರತ’, ‘ಡಿಜಿಟಲ್ ಇಂಡಿಯ’ ಮತ್ತು ‘ಮೇಕ್ ಇನ್ ಇಂಡಿಯ’ದಲ್ಲಿಯೇ!
 
‘‘ನಾವು ‘ಸ್ವಚ್ಛ ಭಾರತ್’ ಎನ್ನುತ್ತಿದ್ದೇವೆ. ಇದೇ ಭಾರತದಲ್ಲಿ ಇನ್ನೂ ಮಲಹೊರುವ ಪದ್ಧತಿ ಜೀವಂತವಾಗಿದೆ. ಇದ್ಯಾವ ‘ಸ್ವಚ್ಛ ಭಾರತ್’ ಅನ್ನೋದೆ ಅರ್ಥವಾಗುವುದಿಲ್ಲ. ಮೊಬೈಲ್ ಆ್ಯಪ್ ಒತ್ತಿ ಮನೆಯ ಮುಂದಿರುವ ಕಾರು ತೊಳೆಯುವ ಸೇವೆ ತಂತ್ರಜ್ಞಾನವಿದೆ. ಸ್ಮಾರ್ಟ್ ಸಿಟಿಗಳ ಬಗ್ಗೆ ಕನಸು ಕಾಣುತ್ತಿದ್ದೇವೆ. ಆದರೆ, ತಲೆಯ ಮೇಲೆ ಮಲ ಹೊರುವ ಸುಮಾರು ಏಳೆಂಟು ಲಕ್ಷ ಜನರ ಬದುಕನ್ನು ಬದಲಿಸಲು ನಮ್ಮ ಕೈಯಲ್ಲಿ ಆಗುತ್ತಿಲ್ಲ. ದೇಶದ ರಾಜಧಾನಿ ನವದೆಹಲಿಯ ಮಡಿಲಲ್ಲಿ, ಅಂಚಿನಲ್ಲಿಯೇ ಈ ಪದ್ಧತಿ ಈಗಲೂ ಜಾರಿಯಲ್ಲಿದೆ. ಈ ಅಮಾನವೀಯ ಪದ್ಧತಿ ಎಲ್ಲರ ಕಣ್ಣಿಗೆ ಬೀಳುತ್ತಲೂ ಇದೆ. ಆದರೂ ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ’’. ಆ ವಿಷಾದದ ಮಾತುಗಳಿಗೆ ಬಹಳಷ್ಟು ಅರ್ಥವಿತ್ತು. 
 
‘‘2014ರ ಅಕ್ಟೋಬರ್ 2ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ಪ್ರತಿಯೊಬ್ಬರೂ ಸ್ವಚ್ಛತೆಯಲ್ಲಿ ತೊಡಗಬೇಕು’ ಎಂಬ ಕರೆ ನೀಡಿದರು. 2019ರ ಅಂತ್ಯದೊಳಗೆ ಸ್ವಚ್ಛ ಭಾರತ್ ಅಭಿಯಾನದಡಿ 12 ಕೋಟಿ ಶೌಚಾಲಯಗಳನ್ನು ಕಟ್ಟುವ ನಿರ್ಧಾರ ಮಾಡಲಾಗಿದೆ. ಆ ಯೋಜನೆಯಡಿ ನಿರ್ಮಾಣವಾಗುವ ಎಲ್ಲ ಶೌಚಾಲಯಗಳಲ್ಲಿ ನೀರಿನ ಸೌಲಭ್ಯ ಇರುತ್ತದೆಯೇ? ಒಳಚರಂಡಿ ವ್ಯವಸ್ಥೆ ಇರುವ ಸಾಧ್ಯತೆಯಿದೆಯೇ? ಅವನ್ನು ಚೊಕ್ಕ ಮಾಡುವವರು ಯಾರು? ನನ್ನ ಕುಟುಂಬದ ಸದಸ್ಯರೇ! ಈ ದೇಶದ ಯಾವುದಾದರೂ ಮೇಲ್ವರ್ಗದ ಜಾತಿಯ; ಯಾವುದೇ ವ್ಯಕ್ತಿ, ಎಷ್ಟೇ ಬಡವನಾಗಿದ್ದರೂ, ಅವನ ಮಲವನ್ನು ಅವನೇ ಚೊಕ್ಕ ಮಾಡಿ ಅವನ ತಲೆಯ ಮೇಲೆ ಹೊತ್ತುಕೊಂಡು ಹೋಗುವ ದೃಶ್ಯ ಎಂದಾದರೂ ಊಹಿಸಿಕೊಳ್ಳಲು ಸಾಧ್ಯವೇ? ಮನೆಯ ಟಾಯ್ಲೆಟ್, ಎದುರಿರುವ ಚೇಂಬರ್ ಬ್ಲಾಕ್ ಆಗಿದ್ದರೆ ಅವರನ್ನು ಕರೆಸಿ ಎನ್ನುವ ಸಮಾಜದ-ವ್ಯವಸ್ಥೆಯ ಈ ಮನಸ್ಥಿತಿಗೆ ಏನನ್ನುವುದು?’’ ಬೇಜವಾಡ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ. 
 
ಕೆಜಿಎಫ್‌ನಲ್ಲಿ ಹುಟ್ಟಿದ ಈ ‘ಫಕೀರ’ ಎಂತಹವನೆಂದರೆ ಮ್ಯಾಗ್ಸೆಸ್ಸೆ ಕೊಡುವುದಾದರೆ ನಮ್ಮ ಸಂಸ್ಥೆ ‘ಎಸ್‌ಕೆಎ’ಗೆ ಕೊಡಬೇಕು. ವೈಯಕ್ತಿಕವಾಗಿ ನನಗೆ ಕೊಟ್ಟರೆ ನಾನದನ್ನು ಸ್ವೀಕರಿಸುವುದಿಲ್ಲ ಎಂದು ಸಡ್ಡು ಹೊಡೆದಾತ. ಕೊನೆಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಸಮಿತಿ ಬೇಜವಾಡ ಪಟ್ಟಿಗೆ ಮಣಿಯಿತು. ‘ಎಸ್‌ಕೆಎ’ ಹೆಸರಿಗೆ ಪ್ರಶಸ್ತಿ ಮತ್ತು ಹಣ ಎರಡೂ ಬಂತು. ಪ್ರಶಸ್ತಿ ಮೊತ್ತವಿಡೀ ‘ಎಸ್‌ಕೆಎ’ ಖಾತೆಗೆ ಸಂದಾಯವಾಯಿತು. 
 
ಮ್ಯಾಗ್ಸೆಸ್ಸೆ ಬೆನ್ನಲ್ಲೇ ನವೆಂಬರ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಬೇಜವಾಡಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿತು. ಪ್ರಶಸ್ತಿ ಪ್ರಕಟವಾದ ತಕ್ಷಣ ನಾನೇ ಸ್ವತಃ ದೂರವಾಣಿ ಕರೆ ಮಾಡಿ, ‘‘ವಿಲ್ಸನ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನಿಮಗೆ ಈ ಬಾರಿ ನೀಡಲಾಗಿದೆ. ಶುಭಾಶಯಗಳು’’ ಎಂದೆ. ‘‘ಕರ್ನಾಟಕದಲ್ಲಿ ಈಗ ಕೂಡ ಮಲಹೊರುವ ಪದ್ಧತಿ ಜೀವಂತವಾಗಿದೆ. ಆ ಕಾರಣ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದಿಲ್ಲ. ಯಾವ ಕ್ಷಣದಲ್ಲಿ ನನ್ನ ರಾಜ್ಯದಲ್ಲಿ ಮಲಹೊರುವ ಪದ್ಧತಿ ಸಂಪೂರ್ಣವಾಗಿ ಇಲ್ಲವಾಗುತ್ತದೋ, ಅದೇ ಕ್ಷಣದಲ್ಲಿ ನನಗೊಂದು ದೊಡ್ಡ ಪ್ರಶಸ್ತಿ ಬಂತು ಎಂದು ಹೆಮ್ಮೆ ಪಡುತ್ತೇನೆ’’ ಎಂದಿದ್ದರು. ಬೇಜವಾಡ ನವೆಂಬರ್ 1ರಂದು ಬೆಂಗಳೂರಿಗೆ ಬರಲಿಲ್ಲ. ಪ್ರಶಸ್ತಿ ಸ್ವೀಕರಿಸಲಿಲ್ಲ. ಆ ಬಗ್ಗೆ ಕರ್ನಾಟಕದ ಘನವೆತ್ತ ಸರ್ಕಾರ ಕೂಡ ಕ್ಯಾರೇ ಎನ್ನಲಿಲ್ಲ! ಎನ್ನುತ್ತಿಲ್ಲ!
 
ಎದುರಿದ್ದ ಬೇಜವಾಡ ಬಳಿ, ಮತ್ತೆ ಆ ವಿಷಯ ಪ್ರಸ್ತಾಪಿಸಿದೆ. ‘‘ನನಗ್ಯಾಕೆ ಪ್ರಶಸ್ತಿ!? ನನಗೆ ಯಾವ ಪ್ರಶಸ್ತಿಯೂ ಬೇಡ. ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಲಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ಅಳಿಸಿ ಹಾಕಲಿ. ಅದೇನು ಮಹಾನ್ ಕೆಲಸವಲ್ಲ. ಅದಕ್ಕೇನೂ ಸಾವಿರ–ಸಾವಿರ ಕೋಟಿ ರೂಪಾಯಿಗಳ ಯೋಜನೆಗಳ ಅಗತ್ಯವಿಲ್ಲ. ಈಗಾಗಲೇ ಇರುವ ಕಾಯಿದೆಯನ್ನು, ಕಾನೂನನ್ನು ಕಠಿಣವಾಗಿ ಜಾರಿಗೆ ತಂದರೆ ಸಾಕು. ಜೊತೆಗೆ ಆ ನರಕದಿಂದ ಹೊರಬರುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿಕೊಡುವುದು ಮತ್ತು ಸಮಾಜದ ಮುಖ್ಯವಾಹಿನಿಗೆ ಅವರನ್ನು ಕರೆದುಕೊಳ್ಳುವುದು’’, ಮಾತುಗಳು ಸ್ಪಷ್ಟವಾಗಿದ್ದವು. 
 
‘ಎಸ್‌ಕೆಎ’ ಸ್ನೇಹಿತರಿಗೆ ವಿದಾಯ ಹೇಳಿ ಹೊರಟ ನನ್ನ ಜೊತೆ ಬೇಜವಾಡ ಹೊರಗೆ ಹೆಜ್ಜೆ ಹಾಕಿದರು. ಹೊರಗೆ ಗೇಟ್ ಬಳಿ ನಿಂತಿದ್ದವನ ಬಳಿ, ‘‘ನನಗೀಗ 50 ವರ್ಷ. ಕಳೆದ ಸುಮಾರು 30 ವರ್ಷಗಳನ್ನು ಈ ಉದ್ದೇಶಕ್ಕಾಗಿಯೇ ಕಳೆದಿದ್ದೇನೆ. ಬದುಕಿ ಇರುವವರೆಗೆ ಮಲಹೊರುವ ಪದ್ಧತಿ ನಿಷೇಧಕ್ಕೆ ಮತ್ತು ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗಾಗಿಯೇ ದುಡಿಯುತ್ತೇನೆ. ಈ ದೇಶದಲ್ಲಿ ಒಬ್ಬನೇ ಒಬ್ಬ ಮಲಹೊರುವ ಮನುಷ್ಯ ಉಳಿದಿಲ್ಲ ಎಂದು ಗೊತ್ತಾದ ದಿನ ನನಗೆ ನಾನು ಕೊಟ್ಟುಕೊಳ್ಳುವ ಪ್ರಶಸ್ತಿ ಎಲ್ಲಕ್ಕಿಂತ ದೊಡ್ಡದಾಗಿರುತ್ತದೆ’’ ಎಂದರು. ನನ್ನ ಬಾಯಿಂದ ಮಾತು ಹೊರಡಲಿಲ್ಲ. ಬೇಜವಾಡ ಅವರನ್ನು ಬಾಚಿ ತಬ್ಬಿಕೊಂಡೆ. ಅವರು ಕೂಡ ನನ್ನನ್ನು ಅಪ್ಪಿಕೊಂಡು, ‘‘ಜನವರಿ ಕೊನೆ, ಹುಬ್ಬಳ್ಳಿಯಲ್ಲಿ ಸಿಗೋಣ’’ ಎಂದರು. ಡಿಸೆಂಬರ್‌ನ ಕೊರೆವ ಚಳಿಯ ನಡುವೆ, ಪಟೇಲ್ ನಗರದ ಹಾದಿಯಲ್ಲಿ ಒಂಟಿಯಾಗಿ ಹೆಜ್ಜೆ ಹಾಕಿದೆ. ದೇವರು! ಎಲ್ಲೆಲ್ಲೋ! ಯಾವ್ಯಾವ ರೂಪದಲ್ಲೋ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT