ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಸಮೂಹದ ‘ಪೂರ್ಣಚಂದ್ರ’

Last Updated 14 ಜನವರಿ 2017, 19:30 IST
ಅಕ್ಷರ ಗಾತ್ರ

ಕೊಯಮತ್ತೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಕಾಲೇಜಿನಲ್ಲಿ ಆನ್ವಯಿಕ ವಿಜ್ಞಾನ ಪದವಿ ಮುಗಿಸಿದ ತರುಣ ಭತ್ತದ ಗದ್ದೆಗಳ ಮಧ್ಯೆ ನಿಂತಿದ್ದ. ತಮ್ಮಿಷ್ಟದ ಕೆಲಸಗಳನ್ನು ಹಿಡಿದು ಅಣ್ಣಂದಿರು ಬದುಕು ಕಟ್ಟಿಕೊಳ್ಳತೊಡಗಿದ್ದ ಕಾಲಘಟ್ಟ ಅದು. ತಮಿಳುನಾಡಿನ ನಮ್ಮಕ್ಕಳ್ ಜಿಲ್ಲೆಯ ಮೋಹನೂರು ಎಂಬ ಹಳ್ಳಿಯಲ್ಲಿದ್ದ 15 ಎಕರೆ ಕೃಷಿ ಭೂಮಿಯನ್ನು ಈ ಮಗನಾದರೂ ನೋಡಿಕೊಳ್ಳಲಿ ಎನ್ನುವ ಅಪ್ಪನ ಬಯಕೆ ಈಡೇರಿಸಲೆಂದು ತರುಣ ಭತ್ತದ ಗದ್ದೆಗಳ ನಡುವೆ ಇದ್ದುದು.

ಐದೇ ತಿಂಗಳು. ಹೊಲ, ತೋಟಗಳನ್ನು ನೋಡಿ ಹುಡುಗನ ತಲೆಕೆಟ್ಟುಹೋಯಿತು. ಅಪ್ಪನನ್ನು ಎದುರಲ್ಲಿ ಕೂಡ್ರಿಸಿಕೊಂಡು ‘ಕಂಪ್ಯೂಟರ್‌ನಲ್ಲಿ ನನಗೆ ಆಸಕ್ತಿ ಇದೆ. ನಾನು ಎಂಸಿಎ ಮಾಡುವೆ’ ಎಂದು ಹೇಳುವಷ್ಟು ದಾರ್ಷ್ಟ್ಯ ತರುಣನಿಗೆ ಇತ್ತು. ‘ಮಾಡುವ ಒಳಿತು-ಕೆಡುಕು ಎಲ್ಲವನ್ನೂ ಬರೆದಿಡು. ಆಮೇಲೆ ಅವುಗಳ ಮೇಲೆ ಕಣ್ಣಾಡಿಸು. ಬದುಕು ಹಸನಾಗುತ್ತದೆ’ ಎಂಬ ಅಪ್ಪನ ಪಾಠ ತರುಣನಿಗೆ ಹವ್ಯಾಸವೇ ಆಗಿತ್ತು. ಅಪ್ಪ ಮಗನನ್ನು ಓದಲು ಕಳುಹಿಸಿಕೊಟ್ಟರು. ತಿರುಚಿನಾಪಳ್ಳಿಯ ರೀಜನಲ್ ಕಾಲೇಜಿನಲ್ಲಿ ಎಂಸಿಎ ಪದವಿ ಮುಗಿಯುವ ಹೊತ್ತಿಗೆ ಟಾಟಾ ಕನ್ಸಲ್ಟೆನ್ಸಿ ಕಂಪೆನಿಗೊಂದು ಪ್ರಾಜೆಕ್ಟ್ ಮಾಡಿಕೊಟ್ಟ. ಅದನ್ನು ನೋಡಿ ಕಂಪೆನಿಯ ಅಧಿಕಾರಿಗಳ ಕಣ್ಣರಳಿತು. ಪ್ರಾಜೆಕ್ಟ್ ಅವಧಿ ಮುಗಿಯುವ ಮೊದಲೇ ತರುಣನ ಕೈಲಿ ಅದೇ ಕಂಪೆನಿಯ ಕೆಲಸದ ಆಮಂತ್ರಣವಿತ್ತು. ಟಾಟಾ ಕನ್ಸಲ್ಟೆನ್ಸಿ ಅರ್ಥಾತ್ ಟಿಸಿಎಸ್ ಆಗ 500 ಕೆಲಸಗಾರರಿದ್ದ ಕಂಪೆನಿ.

1987ರಲ್ಲಿ ಹಾಗೆ ಕೆಲಸಕ್ಕೆ ಸೇರಿಕೊಂಡ ತರುಣನ ಹೆಸರು ನಟರಾಜನ್ ಚಂದ್ರಶೇಖರನ್. ಈಗ ಅವರು ಟಾಟಾ ಸನ್ಸ್‌ನ ಹೊಸ ಕಾರ್ಯನಿರ್ವಾಹಕ ಅಧ್ಯಕ್ಷ. ಫೆಬ್ರುವರಿ 21ಕ್ಕೆ ಅಧಿಕೃತವಾಗಿ ಅವರು ಹೊಸ ಜವಾಬ್ದಾರಿಯ ಕುರ್ಚಿ ಮೇಲೆ ಕೂರಲಿದ್ದಾರೆ. ಟಿಸಿಎಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಇದುವರೆಗೆ ಮಾಡಿರುವ ಕೆಲಸಗಳೇ  ಅವರನ್ನು ಈ ಮಟ್ಟಕ್ಕೆ ಏರಿಸಿವೆ.

ಆಪ್ತ ವಲಯದಲ್ಲಿ ‘ಚಂದ್ರ’ ಎಂದೇ ಖ್ಯಾತರಾದ ನಟರಾಜನ್ ಶಿಸ್ತಿನ ಮನುಷ್ಯ. ಶ್ರಮಜೀವಿ. ಸಾಂಸ್ಥಿಕ ಕಾರ್ಯವೈಖರಿಯನ್ನು ಯಃಕಶ್ಚಿತ್ ಇಲಾಖಾವಾರು ಕೆಲಸವೆಂದು ಪರಿಗಣಿಸದಿರಿ ಎಂದೇ ತಮ್ಮ ಸಹೋದ್ಯೋಗಿಗಳಿಗೆ ಹೇಳುತ್ತಾ ಬಂದವರು. ಪ್ರತಿಬಿಂಬಾತ್ಮಕ ವ್ಯಕ್ತಿತ್ವ ತನ್ನದೆಂದು ಲಾಗಾಯ್ತಿನಿಂದಲೂ ಹೇಳುತ್ತಲೇ ಇದ್ದಾರೆ.

2009ರ ಅಕ್ಟೋಬರ್‌ನಲ್ಲಿ ಟಿಸಿಎಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಆಯ್ಕೆಯಾದ ಮೇಲೆ ಚಂದ್ರ ಮಾಡಿದ ಮೊದಲ ಕೆಲಸ ಇಡೀ ಕಂಪೆನಿಯನ್ನು 23 ವಿಭಾಗಗಳಾಗಿ ವಿಂಗಡಿಸಿದ್ದು. ಕಾರ್ಪೊರೇಟ್ ಸಂರಚನೆ ದೃಷ್ಟಿಯಲ್ಲಿ ಅದೊಂದು ಸಪಾಟಾದ ವ್ಯವಸ್ಥೆಯಾದರೂ ಸಹೋದ್ಯೋಗಿಗಳ ನಡುವೆ ಕೊಡು-ಕೊಡುಗೆಯ ಮನೋಭಾವ ಬಿತ್ತುವಂಥ ಪ್ರಕ್ರಿಯೆಯಾಗಿ ಹೊಮ್ಮಿತು. ಒಬ್ಬ ನೌಕರ ಕನಿಷ್ಠ ಇನ್ನೊಬ್ಬನ ಜ್ಞಾನಭಿತ್ತಿಗೆ ಕಾಣ್ಕೆ ಸಲ್ಲಿಸಿದರೆ ಕಂಪೆನಿ ಬೆಳೆಯುತ್ತದೆ. ‘ಹನಿ ಹನಿಗೂಡಿದರೆ ಮನಿ’ ಎಂಬ ಚಂದ್ರ ಪಠಿಸಿದ ಈ ಆಧುನಿಕ ನಾಣ್ನುಡಿ ಸಾಂಘಿಕ ಯತ್ನಕ್ಕೆ ಕಾರಣವಾಯಿತು. ಟಿಸಿಎಸ್ ಆರ್ಥಿಕವಾಗಿ ಬೆಳೆಯಿತು. 2015-16ರಲ್ಲಿ ಕಂಪೆನಿಯ ಆದಾಯ 1,13,355 ಕೋಟಿ ರೂಪಾಯಿ (1650 ಕೋಟಿ ಡಾಲರ್).

ಏಷ್ಯಾದ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪೆನಿಗಳ ವ್ಯವಸ್ಥಾಪಕರೆಲ್ಲ ಸೇರಿ ಪ್ರತಿವರ್ಷ ‘ಶ್ರೇಷ್ಠ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ’ ಎಂದು ಒಬ್ಬರನ್ನು ಆಯ್ಕೆ ಮಾಡುತ್ತಾರೆ. ಸತತ ಐದು ವರ್ಷ ಚಂದ್ರ ಆ ಗೌರವಕ್ಕೆ ಪಾತ್ರರಾದದ್ದು ಅವರೆಷ್ಟು ಜನಾನುರಾಗಿ ಎನ್ನುವುದಕ್ಕೆ ಸಾಕ್ಷಿ.

ವ್ಯವಸ್ಥಾಪಕರು ಭಾಗವಹಿಸುವ ಸಭೆಗಳನ್ನು ಚಂದ್ರ ಆತ್ಮವಿಮರ್ಶೆಗೆ ಮೀಸಲಿಟ್ಟಿದ್ದೇ ಹೆಚ್ಚು. ಚರ್ಚೆಗಳೇನೇ ಇರಲಿ, ಸೋಲು ಹಾಗೂ ಗೆಲುವಿನ ಅನುಭವಗಳನ್ನು ಪ್ರಾಮಾಣಿಕವಾಗಿ ಹಂಚಿಕೊಂಡರಷ್ಟೇ ಮುಂದಿನ ನಡೆಗಳನ್ನು ಎಚ್ಚರದಿಂದ ಇಡಲು ಸಾಧ್ಯವೆನ್ನುವುದು ಅವರ ನಂಬಿಕೆ. ಪಕ್ಕದಲ್ಲಿ ಕುಳಿತ ಸಹೋದ್ಯೋಗಿ ಶ್ರದ್ಧೆಯಿಂದ ಮಾಡುವ ಕೆಲಸಕ್ಕೆ ಸಣ್ಣದೊಂದು ಸಲಹೆ ಕೊಟ್ಟರೂ ಸಿಗುವ ಆತ್ಮಾನಂದ ದೊಡ್ಡದು ಎಂದು ಅವರು ಪದೇ ಪದೇ ಹೇಳುತ್ತಲೇ ಬಂದಿದ್ದಾರೆ.

ಮೊದಲು ಸೇರಿದ ಕಂಪೆನಿಯಲ್ಲೇ ಮೂರು ದಶಕ ಅನುಭವವನ್ನು ಗಟ್ಟಿ ಮಾಡಿಕೊಂಡವರು. ರಾಮದೊರೈ ಟಿಸಿಎಸ್‌ನ ಸಿಇಒ ಆದಾಗ ಅವರ ಆಪ್ತ ಸಹಾಯಕರಾಗಿ ಚಂದ್ರ ಆಯ್ಕೆಯಾದರು. ಅದಕ್ಕೂ ಮೊದಲು ಎರಡು ಮೂರು ಬಾರಿ ಮಾತ್ರ ರಾಮದೊರೈ ಹಾಗೂ ಚಂದ್ರ ಮುಖಾಮುಖಿಯಾಗಿದ್ದರು. 33 ವರ್ಷ ವಯಸ್ಸಿನ ಚಂದ್ರ ಅವರ ಕಾರ್ಯವೈಖರಿಯನ್ನು ಆಗಲೇ ಮೆಚ್ಚಿಕೊಂಡಿದ್ದವರು ರಾಮದೊರೈ.

ಚಂದ್ರ ಸವಾಲುಗಳಿಗೆ ಎದೆಗೊಟ್ಟವರು. ಸಾಫ್ಟ್‌ವೇರ್‌ ಪ್ರೋಗ್ರಾಂ ಎಂಜಿನಿಯರ್ ಆಗಿ ಟಿಸಿಎಸ್ ಸೇರಿಕೊಂಡ ಅವರು ಆಮೇಲೆ ದೊಡ್ಡ ಗ್ರಾಹಕ ವರ್ಗದ ಜತೆ ವ್ಯವಹರಿಸುತ್ತಾ ನಿಕಷಕ್ಕೆ ಒಡ್ಡಿಕೊಂಡರು. 1993ರಲ್ಲಿ ಅಮೆರಿಕ ಫೆಡರಲ್ ಸರ್ಕಾರದ ಯೋಜನೆ ಕಂಪೆನಿಗೆ ಸಿಕ್ಕಾಗ ಅದನ್ನು ಹೆಗಲ ಮೇಲೆ ಹೊತ್ತು ಅಚ್ಚುಕಟ್ಟಾಗಿ ನಿಭಾಯಿಸಿದರು. ಜನರಲ್ ಎಲೆಕ್ಟ್ರಿಕ್‌ನ ಜತೆ ಕೆಲಸ ಮಾಡಿದ್ದು ಅವರಿಗೆ ಖುಷಿ ಕೊಟ್ಟ ವೃತ್ತಿಬದುಕಿನ ಅನುಭವಗಳಲ್ಲಿ ಮುಖ್ಯವಾದುದು.
‘ನ್ಯೂಯಾರ್ಕ್ ಟೈಮ್ಸ್‌’ನ ಪತ್ರಕರ್ತ ಆಡಂ ಬ್ರಯಾಂಟ್ ಕಳೆದ ವರ್ಷ ಚಂದ್ರ ಅವರ ದೊಡ್ಡ ಸಂದರ್ಶನ ಪ್ರಕಟಿಸಿದ್ದರು. ಅದರಲ್ಲಿ ಅವರು ಕೇಳಿದ ಒಂದು ಪ್ರಶ್ನೆ ಆಸಕ್ತಿಕರವಾಗಿತ್ತು-‘ಸಂದರ್ಶನ ಮಾಡಿ ಕೆಲಸಕ್ಕೆ ತೆಗೆದುಕೊಳ್ಳುವಾಗ ಉದ್ಯೋಗಾಕಾಂಕ್ಷಿಗೆ ನೀವು ಕೇಳುವ ಮುಖ್ಯ ಪ್ರಶ್ನೆ ಯಾವುದು?’. ಇದಕ್ಕೆ ಚಂದ್ರ ಕೊಟ್ಟಿದ್ದ ಉತ್ತರವಿದು- ‘ನೀನು ಏನು ಬಯಸುತ್ತಿದ್ದೀಯೆ? ಇನ್ನು ಹತ್ತು ವರ್ಷ ನಮ್ಮ ಕಂಪೆನಿಯಲ್ಲಿ ಕೆಲಸ ಮಾಡುವೆಯಾದರೆ ನೀನು ಏನೆಲ್ಲಾ ನಿರೀಕ್ಷಿಸುವೆ? ಇದಕ್ಕೆ ಎರಡೇ ವಾಕ್ಯಗಳಲ್ಲಿ ಉತ್ತರಿಸು ಎಂದು ಕೇಳುತ್ತೇನೆ. ಆ ಉತ್ತರ ಆಧರಿಸಿ ಅಭ್ಯರ್ಥಿ ಸಮರ್ಥ ಹೌದೋ ಅಲ್ಲವೋ ಎಂದು ನಿರ್ಧರಿಸುತ್ತೇವೆ’.

ಖಾಸಗಿ ಹಾಗೂ ವೃತ್ತಿಬದುಕನ್ನು ತೂಗಿಸಿಕೊಂಡು ಹೋಗುವುದರಲ್ಲಿಯೂ ಚಂದ್ರ ನಿಷ್ಣಾತರು. ಮೇ ಹಾಗೂ ಡಿಸೆಂಬರ್‌ನಲ್ಲಿ ಅವರಿಗೆ ಪ್ರವಾಸ ಹೋಗುವುದು ಅಭ್ಯಾಸ. ಆರೋಗ್ಯದ ಕಾಳಜಿಯಿಂದಾಗಿ, ವಯಸ್ಸು 43 ಆದಾಗಿನಿಂದ ಮ್ಯಾರಥಾನ್ ಹವ್ಯಾಸ ರೂಢಿಸಿಕೊಂಡರು. ಆಮ್ಸ್‌ಟರ್‌ಡ್ಯಾಮ್‌, ಬೋಸ್ಟನ್, ಷಿಕಾಗೊ, ಬರ್ಲಿನ್, ಮುಂಬೈ, ನ್ಯೂಯಾರ್ಕ್, ಪ್ರಾಗ್, ಸ್ಟಾಕ್‌ಹೋಮ್‌, ಸಾಲ್ಜ್‌ಬರ್ಗ್‌, ಟೋಕಿಯೊ ಎಲ್ಲ ಕಡೆ ಅವರು ಮ್ಯಾರಥಾನ್‌ನಲ್ಲಿ ಭಾಗವಹಿಸಿ ಬೆವರಿಳಿಸಿದ್ದಾರೆ. ಫೋಟೊಗ್ರಫಿ ಅವರ ಇನ್ನೊಂದು ಹವ್ಯಾಸ. ಸಂಗೀತ ಪ್ರೇಮಿಯೂ ಹೌದು. ಮುಂಬೈನ ಅವರ ಐಷಾರಾಮಿ ಮನೆ ಸಾಗರಮುಖಿ. ಅದರಲ್ಲಿ ಇಚ್ಛೆಯನರಿತ ಮಡದಿ ಲಲಿತಾ ಇದ್ದಾರೆ. ಕನಸುಗಳ ರೆಕ್ಕೆ ಕಟ್ಟಿಕೊಂಡಿರುವ ಒಬ್ಬನೇ ಮಗ ಪ್ರಣವ್ ಇದ್ದಾನೆ.

ಜವಾಹರಲಾಲ್ ನೆಹರೂ ತಾಂತ್ರಿಕ ವಿಶ್ವವಿದ್ಯಾಲಯ 2014ರಲ್ಲಿ, ನೆದರ್‌ಲ್ಯಾಂಡ್‌ನ ನ್ಯೆನ್್ರೋಡ್ ಬಿಜಿನೆಸ್ ಯೂನಿವರ್ಸಿಟಿ 2013ರಲ್ಲಿ ಗೌರವ ಡಾಕ್ಟರೇಟ್ ನೀಡಿ ಚಂದ್ರ ಅವರನ್ನು ಗೌರವಿಸಿವೆ. ಭಾರತೀಯ ರಿಸರ್ವ್ ಬ್ಯಾಂಕ್, ಭಾರತೀಯ ಸೆಂಟ್ರಲ್ ಬ್ಯಾಂಕ್‌ನ ಬೋರ್ಡ್ ಸದಸ್ಯತ್ವದ ಹೊಣೆಗಾರಿಕೆ ನಿಭಾಯಿಸಿರುವ ಅವರು, 2012-13ರಲ್ಲಿ ನಾಸ್್ಕಾಮ್‌ನ ಅಧ್ಯಕ್ಷರಾಗಿಯೂ ಕೆಲಸ ಮಾಡಿದರು.

ಸಿಎನ್‌ಬಿಸಿ ಟಿ.ವಿ.18 ‘ಭಾರತದ ಬಿಜಿನೆಸ್ ಐಕಾನ್’ ಎಂದು 2014ರಲ್ಲಿ ಚಂದ್ರ ಅವರನ್ನು ಗುರುತಿಸಿತ್ತು. ಅದೇ ವರ್ಷ ಸಿಎನ್ಎನ್- ಐಬಿಎನ್ ಟಿ.ವಿ. ವಾಹಿನಿ ‘ವರ್ಷದ ವ್ಯಕ್ತಿ’ ಎಂದೂ ಅವರನ್ನು ಆಯ್ಕೆ ಮಾಡಿತ್ತು.

ಇಪ್ಪತ್ತನಾಲ್ಕರ ಹರೆಯದಲ್ಲಿ ಸೇರಿದ ಕಂಪೆನಿಯ ನೊಗವನ್ನು ಐವತ್ತಮೂರರಲ್ಲೂ ಹೊತ್ತೇ ಇರುವ ಚಂದ್ರ ಈಗಂತೂ ಟಾಟಾ ಸಮೂಹದ ಪಾಲಿಗೆ ‘ಪೂರ್ಣಚಂದ್ರ’! ಸೈರಸ್ ಮಿಸ್ತ್ರಿ ಅವರನ್ನು ವಜಾಗೊಳಿಸಿದ ಜಾಗದಲ್ಲಿ ಹೊಸ ಹೊಣೆಗಾರಿಕೆ ಎದುರಲ್ಲಿದೆ. ಅಪ್ಪ ಹೇಳಿಕೊಟ್ಟ ಒಳಿತು-ಕೆಡುಕಿನ ಲೆಕ್ಕದ ಪಾಠವಿನ್ನೂ ಅವರ ತಲೆಯಲ್ಲಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT