ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣೀರ ಹಿಂದಿತ್ತು ಕಾಣದ ಕಥೆ...

Last Updated 14 ಜನವರಿ 2017, 19:30 IST
ಅಕ್ಷರ ಗಾತ್ರ

-ಅರುಣ್‌ ಕೆ.ಎಸ್‌.

2012ರ ಸುಮಾರಿಗೆ ನಡೆದ ಘಟನೆಯಿದು. 40–45 ವರ್ಷದ ಮಹಿಳೆಯೊಬ್ಬರು ನನ್ನ ಕಚೇರಿಗೆ ಬಂದರು. ಮುಖ ಕಳಾಹೀನವಾಗಿತ್ತು. ಮಾತನಾಡುವ ಸ್ಥಿತಿಯಲ್ಲಿಯೂ ಅವರು ಇರಲಿಲ್ಲ. ದನಿ ಗದ್ಗದಿತವಾಗಿತ್ತು.

ಅವರನ್ನು ನೋಡಿ ಕುಳಿತುಕೊಳ್ಳುವಂತೆ ಹೇಳಿದೆ. ಕಣ್ಣೀರನ್ನು ಒರೆಸಿಕೊಳ್ಳುತ್ತಲೇ ಅವರು ಕುಳಿತುಕೊಂಡರು. ವಿಷಯ ಏನೆಂದು ವಿಚಾರಿಸಿದೆ. ಅದಕ್ಕವರು ‘ನನಗೆ ಗಂಡ ಬೇಕು. ಅವರು ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ. ಅವರನ್ನು ಹುಡುಕಿ ಹುಡುಕಿ ಸಾಕಾಗಿ ಹೋಗಿದೆ. ಅವರಿಲ್ಲದೆ ನಾನು ಜೀವನ ಮಾಡುವುದೇ ಕಷ್ಟವಾಗಿದೆ. ದಯವಿಟ್ಟು ನನ್ನ ಗಂಡನನ್ನು ಹುಡುಕಿಕೊಡಿ ಸಾರ್‌...’ ಎಂದು ಬಿಕ್ಕಿದರು.

ಹಿಂದೆ ಮುಂದೆ ಏನೆಂದು ತಿಳಿಯದ ನಾನು, ‘ಸ್ವಲ್ಪ ಸುಧಾರಿಸಿಕೊಳ್ಳಿಯಮ್ಮ, ವಿಷಯ ಏನೆಂದು ಸರಿಯಾಗಿ ಹೇಳಿ. ಹೀಗೆ ನೀವು ಗಂಡ ಬೇಕು, ಗಂಡ ಬೇಕು ಎಂದರೆ ನನಗೆ ಏನು ಅರ್ಥ ಆಗುತ್ತದೆ? ಮೊದಲು ನಿಮ್ಮ ಹೆಸರು ಹೇಳಿ, ನಿಮ್ಮ ಪರಿಚಯ ಮಾಡಿಕೊಳ್ಳಿ. ನಿಮ್ಮ ಗಂಡ ಎಲ್ಲಿ ಹೋದರು, ಅವರಿಗೆ ಏನಾಗಿತ್ತು ಎಂದು ವಿವರವಾಗಿ ಹೇಳಿ. ಆಗ ಮಾತ್ರ ನಾನು ಏನಾದರೂ ಸಹಾಯ ಮಾಡಲು ಸಾಧ್ಯ’ ಎಂದೆ.

ಅದಕ್ಕೆ ಅವರು, ‘ನನ್ನ ಹೆಸರು ರಮಾ. ಇಲ್ಲೇ ಕಾಮಾಕ್ಷಿಪಾಳ್ಯದ (ಬೆಂಗಳೂರು) ನಿವಾಸಿ. ನನ್ನ ಗಂಡ ಸೋಮೇಗೌಡ. ಅವರು ಚಿಕ್ಕ ಬಟ್ಟೆ  ಅಂಗಡಿಯೊಂದನ್ನು ನಡೆಸುತ್ತಿದ್ದರು. ದಿನವೂ ಬೆಳಿಗ್ಗೆ ಏಳೂವರೆ–ಎಂಟು ಗಂಟೆಗೆ ಅಂಗಡಿಗೆ ಹೋಗಿ ಕಸ ಗುಡಿಸಿ ಹತ್ತು–ಹತ್ತೂವರೆ ಹೊತ್ತಿಗೆ ಮನೆಗೆ ತಿಂಡಿ ತಿನ್ನಲು ಬರುತ್ತಿದ್ದರು. ಆದರೆ ಅಂದು ಏನಾಯಿತೋ ಗೊತ್ತಿಲ್ಲ. ಹೋದವರು ಬರಲೇ ಇಲ್ಲ. ಹುಡುಕಿ ಹುಡುಕಿ ಸುಸ್ತಾಗಿದ್ದೇನೆ. ದೂರು ಕೊಟ್ಟರೂ ಪೊಲೀಸರು ಸಹಕಾರ ನೀಡುತ್ತಿಲ್ಲ. ಕೋರ್ಟ್‌ನಲ್ಲಿ ಅದ್ಯಾವುದೋ ಅರ್ಜಿ ಸಲ್ಲಿಸಿದರೆ ನನ್ನ ಗಂಡ ಸಿಗುತ್ತಾನೆ ಎಂದು ಯಾರೋ ಹೇಳಿದರು. ಅವರು ಸಿಗುತ್ತಾರೆ ಎಂಬ ಆಶಾಭಾವದಿಂದ ಬಂದಿದ್ದೇನೆ. ನಿಮ್ಮನ್ನೇ ನಂಬಿದ್ದೇನೆ ಸಾರ್‌... ಏನಾದರೂ ಮಾಡಿ ಸಾರ್‌’ ಎಂದರು.

ಇದನ್ನು ಕೇಳಿ ಅವರ ಗಂಡ ಕಾಣೆಯಾಗಿ ಒಂದೋ–ಎರಡೋ ವಾರ ಆಗಿರಬೇಕು ಎಂದುಕೊಂಡೆ. ಆಮೇಲೆ ಅವರ ಬಳಿ ಸವಿಸ್ತಾರವಾಗಿ ವಿಚಾರಿಸಿದಾಗ ತಿಳಿದುಬಂದದ್ದು ಏನೆಂದರೆ ಅವರ ಗಂಡ ಒಂದೂವರೆ ವರ್ಷದ ಹಿಂದೆ ಕಾಣೆಯಾಗಿದ್ದಾರೆ ಎಂದು. ಕಾಣೆಯಾದ ಒಂದೆರಡು ದಿನಗಳಲ್ಲೇ ಅವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ವರ್ಷ ಗತಿಸಿದರೂ ಪೊಲೀಸರು ಗಂಡನನ್ನು ಹುಡುಕಿರಲಿಲ್ಲ. ಅದಕ್ಕಾಗಿ ಪೊಲೀಸರ ವಿರುದ್ಧ ಹೈಕೋರ್ಟ್‌ನಲ್ಲಿ ಕೇಸು ದಾಖಲು ಮಾಡಲು ಅವರು ನನ್ನ ಬಳಿ ಬಂದಿದ್ದರು. (ಇಂಥ ನಾಪತ್ತೆ ಪ್ರಕರಣಗಳಲ್ಲಿ ನಾಪತ್ತೆಯಾದವರನ್ನು ಪೊಲೀಸರು ಹುಡುಕುವಲ್ಲಿ ವಿಫಲರಾದರೆ ದೂರುದಾರರು ಹೈಕೋರ್ಟ್‌ಗೆ ‘ಹೇಬಿಯಸ್‌ ಕಾರ್ಪಸ್‌’ ಅರ್ಜಿ ಸಲ್ಲಿಸಬಹುದು. ಈ ರೀತಿ ಅರ್ಜಿ ಸಲ್ಲಿಸಿದರೆ ಸಂಬಂಧಿತ ಪೊಲೀಸ್‌ ಠಾಣೆಗಳ ಇನ್‌ಸ್‍ಪೆಕ್ಟರ್‌ ಅವರನ್ನು ನ್ಯಾಯಮೂರ್ತಿಗಳು ಕೋರ್ಟ್‌ಗೆ ಕರೆಸಿ, ಅವರಿಗೆ ಇಂತಿಷ್ಟು ಗಡುವು ನೀಡಿ ಕಾಣೆಯಾದವರನ್ನು ಹುಡುಕುವಂತೆ ಹೇಳುತ್ತಾರೆ. ಕಾಣೆಯಾದವರನ್ನು ಹುಡುಕಲು ಪೊಲೀಸರು ಅಲ್ಲಿಯವರೆಗೆ ಯಾವುದೇ ರೀತಿಯ ಶ್ರಮ ವಹಿಸದೇ ಹೋಗಿದ್ದರೆ ಛೀಮಾರಿಯನ್ನೂ ಕೋರ್ಟ್‌ ಹಾಕುತ್ತದೆ).

ರಮಾ ಅವರು ದುಃಖಿಸುತ್ತಿದ್ದುದನ್ನು ನನ್ನಿಂದ ನೋಡಲು ಆಗಲಿಲ್ಲ.  ಅವರನ್ನು ಸಮಾಧಾನ ಪಡಿಸಿದೆ. ‘ಹೇಬಿಯಸ್‌ ಕಾರ್ಪಸ್‌’ ಅರ್ಜಿ ಹಾಕಲು ಒಪ್ಪಿಕೊಂಡೆ.  ನಾನು ಒಪ್ಪಿಕೊಂಡ ವಿಷಯ ತಿಳಿಯುತ್ತಲೇ, ಧನ್ಯತಾ ಭಾವದಿಂದ, ‘ಸಾರ್‌, ಹೀಗೆ ಕೇಸ್‌ ಹಾಕಿದರೆ ನಿಜವಾಗಿಯೂ ನನ್ನ ಗಂಡ ಸಿಗುತ್ತಾರಾ?, ಒಂದೂವರೆ ವರ್ಷದಿಂದ ಹುಡುಕದ ಪೊಲೀಸರು ಈಗ ಹುಡುಕುತ್ತಾರಾ...? ಎಂದು ಪ್ರಶ್ನೆ ಕೇಳತೊಡಗಿದರು. ಅದಕ್ಕೆ ನಾನು, ‘ನೋಡಿಯಮ್ಮ, ಇಂಥ ಅನೇಕ ಕೇಸುಗಳಲ್ಲಿ ನಾನು ವಾದಿಸಿದ್ದೇನೆ. ತುಂಬಾ ಪ್ರಕರಣಗಳಲ್ಲಿ ಕೋರ್ಟ್‌ನಿಂದ ಆದೇಶ ಹೊರಬಿದ್ದ ಮೇಲೆ ಕಾಣೆಯಾದವರನ್ನು ಪೊಲೀಸರು ಹುಡುಕಿದ್ದು ಇದೆ. ನಿಮ್ಮ ಪ್ರಕರಣವನ್ನು ಸವಿಸ್ತಾರವಾಗಿ  ನ್ಯಾಯಮೂರ್ತಿಗಳಿಗೆ ವಿವರಿಸುತ್ತೇನೆ. ಕೋರ್ಟ್‌ನಿಂದ ಬಿಸಿ ಮುಟ್ಟಿದ ಮೇಲೆ ಪೊಲೀಸರು ಕೆಲಸ ಮಾಡಬಹುದು. ನನ್ನ ಕೈಲಾದಷ್ಟು ನಾನು ಮಾಡುತ್ತೇನೆ, ಮುಂದಿನದ್ದು ದೇವರಿಗೆ ಬಿಟ್ಟದ್ದು’ ಎಂದೆ. ಅವರ ಮುಖದಲ್ಲಿ ಆತಂಕ–ಖುಷಿ ಎಲ್ಲವನ್ನೂ ನಾನು ಕಂಡೆ. ತಮ್ಮ ಗಂಡ ಸಿಗುವ ಆಶಾಭಾವ ಅವರ ಮುಖದಲ್ಲಿ ಇದ್ದಂತೆ ನನಗೆ ಕಂಡುಬಂತು.

***
ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ದಾಖಲು ಮಾಡಿದೆ. ಕೇಸು ವಿಚಾರಣೆಗೆ ಬಂತು. ಮೊದಲನೇ ದಿನ ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿ ಪೊಲೀಸ್‌ ಇನ್‌ಸ್‍ಪೆಕ್ಟರ್‌  ಹಾಜರು ಇರುವಂತೆ ಆದೇಶಿಸಿದರು. ಮುಂದಿನ ವಿಚಾರಣೆ ವೇಳೆ ಹಾಜರು ಇದ್ದ ಇನ್‌ಸ್‍ಪೆಕ್ಟರ್‌ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು, ಒಂದು ವಾರದ ಒಳಗೆ ಸೋಮೇಗೌಡ ಅವರನ್ನು ಕೋರ್ಟ್‌ ಮುಂದೆ ಹಾಜರುಪಡಿಸುವಂತೆ ಆದೇಶಿಸಿದರು. ಒಂದು ವಾರ ಪೊಲೀಸರು ಸೋಮೇಗೌಡ ಅವರ ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಲಿಲ್ಲ. ಕೋರ್ಟ್‌ನಿಂದ ಮತ್ತೊಂದು ವಾರದ ಕಾಲಾವಕಾಶ ಪಡೆದುಕೊಂಡ ಪೊಲೀಸರು ಹಗಲು ಇರುಳು ಎನ್ನದೇ ಹುಡುಕಾಟ ನಡೆಸಿದಾಗ ಕೊನೆಗೂ ಸೋಮೇಗೌಡ ಸಿಕ್ಕೇ ಬಿಟ್ಟರು, ಆದರೆ ಜೀವಂತವಾಗಿ ಅಲ್ಲ, ಬದಲಿಗೆ ಅವರಿಗೆ ಸಿಕ್ಕಿದ್ದು ಸೋಮೇಗೌಡ ಅವರ ತುಂಡುತುಂಡಾದ ಮೃತದೇಹದ ಎಲುಬುಗಳು! ನಾಲೆಯೊಂದರಲ್ಲಿ ಎಲುಬುಗಳ ತುಂಡುಗಳನ್ನು ಪತ್ತೆ ಹಚ್ಚಿದ ಪೊಲೀಸರು ಅದನ್ನು ಪರೀಕ್ಷೆಗೆ ಒಳಪಡಿಸಿದಾಗ ಅದು ಸೋಮೇಗೌಡ ಅವರದ್ದೇ ಎಂದು ಗೊತ್ತಾಯಿತು.

ಕೊನೆಗೂ ಸೋಮೇಗೌಡ ಅವರನ್ನು ಪತ್ತೆಹಚ್ಚಿದ ಸಮಾಧಾನ ಪೊಲೀಸರದ್ದಾಗಿತ್ತು. ಕಾರಣ ಇಷ್ಟೇ... ಅವರು ಕೊಲೆಯಾಗಿರುವುದನ್ನು ಕೋರ್ಟ್‌ಗೆ ಹೇಳಿದರೆ ಅಲ್ಲಿಗೆ ಅವರ ಕರ್ತವ್ಯ ಮುಗಿಯುತ್ತಿತ್ತು. ಏಕೆಂದರೆ ಹೇಬಿಯಸ್‌ ಕಾರ್ಪಸ್‌ ಅರ್ಜಿಯಲ್ಲಿ ಕಾಣೆಯಾದವರ ಬಗ್ಗೆ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರೆ ಅಲ್ಲಿಗೆ ಆ ಪ್ರಕರಣ ಇತ್ಯರ್ಥಗೊಳ್ಳುತ್ತದೆ. ಅದರಂತೆಯೇ ಪೊಲೀಸರು ಕೋರ್ಟ್‌ಗೆ ವರದಿ ಸಲ್ಲಿಸಲು ಉತ್ಸುಕರಾಗಿದ್ದರು.
ಅದೇ ರೀತಿ, ವಿಚಾರಣೆ ದಿನ ಪೊಲೀಸರು ನಡೆದ ವಿಷಯವನ್ನೆಲ್ಲಾ ತಿಳಿಸಿದರು. ಸೋಮೇಗೌಡ ಅವರು ಕೊಲೆ ಆದ ರೀತಿಯ ಬಗ್ಗೆ ಪೊಲೀಸರು ತಾವು ತನಿಖೆ ವೇಳೆಯಲ್ಲಿ ಕಂಡು– ಕೇಳಿದ ಸತ್ಯವನ್ನು ಕೋರ್ಟ್‌ ಮುಂದೆ ಎಳೆಎಳೆಯಾಗಿ ಬಿಡಿಸಿ ಹೇಳುತ್ತಿದ್ದಂತೆಯೇ ನಾನು ದಂಗಾಗಿ ಹೋದೆ, ನನ್ನ ಜೊತೆಗೆ ನ್ಯಾಯಮೂರ್ತಿಗಳು ಸೇರಿದಂತೆ ನೆರೆದವರೆಲ್ಲಾ ಅಚ್ಚರಿಗೊಂಡರು.  ಕಾರಣ ಏನೆಂದರೆ, ಅವರು ಹೇಳಿದ ಪ್ರಕಾರ ಸೋಮೇಗೌಡ ಅವರ ಕೊಲೆ ಮಾಡಿದ್ದು ಬೇರೆ ಯಾರೂ ಅಲ್ಲ, ಬದಲಿಗೆ ತಮ್ಮ ಗಂಡ ಕಾಣುತ್ತಿಲ್ಲ ಎಂದು ಗೋಳಾಡುತ್ತಿದ್ದ, ಅವರನ್ನು ಹುಡುಕಿ ಕೊಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ರಮಾ ಅವರೇ!

ಪೊಲೀಸರ ಪ್ರಕಾರ, ರಮಾ ಅವರಿಗೆ ಮೋಹನ್‌ ಎಂಬುವವನ ಜೊತೆ ಅನೈತಿಕ ಸಂಬಂಧ ಇತ್ತು. ಇದು ಸೋಮೇಗೌಡ ಅವರಿಗೆ ತಿಳಿಯಿತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ಜಗಳವಾಗುತ್ತಿತ್ತು. ತಮ್ಮ ಅನೈತಿಕ ಸಂಬಂಧಕ್ಕೆ ಸೋಮೇಗೌಡ ಅಡ್ಡಿಯಾಗುತ್ತಿದ್ದಾರೆ ಎಂದು ರಮಾ ಅವರೇ ಮೋಹನ್‌ ಜೊತೆಗೂಡಿ ಸೋಮೇಗೌಡ ಅವರ ಕೊಲೆ ಮಾಡುವ ಸಂಚು ರೂಪಿಸಿದರು. ಅದರಂತೆಯೇ ರಮಾ, ಗಂಡನಿಗೆ ರಾಗಿಮುದ್ದೆಯಲ್ಲಿ ವಿಷ ಬೆರೆಸಿ ನೀಡಿದ್ದರು. ಅವರು ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆಯೇ ತಮ್ಮ ಪ್ರಿಯಕರನ ಜೊತೆಗೂಡಿ ಅವರನ್ನು ಸಾಯಿಸಿ, ಮೃತದೇಹವನ್ನು ತುಂಡು ತುಂಡಾಗಿ ಮಾಡಿದ್ದರು. ಈ ತುಂಡುಗಳನ್ನು ಒಂದು ಚೀಲದಲ್ಲಿ ಕಟ್ಟಿ ದೂರದಲ್ಲಿದ್ದ ನಾಲೆಯಲ್ಲಿ ಎಸೆದಿದ್ದರು.

ಗಂಡ ಮನೆಯಲ್ಲಿ ಇಲ್ಲದ ಬಗ್ಗೆ ಅಕ್ಕಪಕ್ಕದವರಿಗೆ ತಿಳಿದು ಸಂಶಯ ಬರುತ್ತದೆ ಎಂಬ ಕಾರಣದಿಂದ ಎರಡು ದಿನಗಳ ನಂತರ ಗಂಡ ನಾಪತ್ತೆಯಾಗಿರುವುದಾಗಿ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು. ಪೊಲೀಸರು ಸೋಮೇಗೌಡ ಅವರನ್ನು ಅಲ್ಲಲ್ಲಿ ಹುಡುಕುವಂತೆ ಮಾಡಿ, ಸಿಗಲಿಲ್ಲ ಎಂದು ಕೈತೊಳೆದುಕೊಂಡಿದ್ದರು. ತಮ್ಮ ಮೇಲೆ ಸಂದೇಹ ಬರಬಾರದು ಎಂಬ ಕಾರಣಕ್ಕೆ ರಮಾ ಮೇಲಿಂದ ಮೇಲೆ ಠಾಣೆಗೆ ಹೋಗಿ ಪೊಲೀಸರನ್ನು ಎಡತಾಕುತ್ತಿದ್ದರು. ಒಂದು ವೇಳೆ ಅಪ್ಪಿತಪ್ಪಿ ಈ ಮೃತದೇಹ ಸಿಕ್ಕಿಬಿಟ್ಟರೆ ತಮ್ಮ ಮೇಲೆ ಸಂದೇಹ ಬರಬಾರದು ಎನ್ನುವುದು ಅವರ ಅಭಿಲಾಷೆಯಾಗಿತ್ತು. ಆದರೆ ಪೊಲೀಸರಿಗೆ ಮಾತ್ರ ಮೃತದೇಹ ಸಿಕ್ಕೇ ಇರಲಿಲ್ಲ.

ಹೀಗೆ ಒಂದೂವರೆ ವರ್ಷ ಕಳೆಯಿತು. ‘ಬೆಕ್ಕು ಕದ್ದು ಮುಚ್ಚಿ ಹಾಲು ಕುಡಿದರೆ ಬೇರೆಯವರಿಗೆ ಗೊತ್ತಾಗದೆ ಇರುತ್ತದೆಯೇ?’ ಎಂಬ ಗಾದೆ ಮಾತಿನಂತೆ ರಮಾ ಅವರ ಅಕ್ರಮ ಸಂಬಂಧ ತಿಳಿದಿದ್ದ ಅಕ್ಕಪಕ್ಕದ ಮನೆಯವರಿಗೆ ಸಂದೇಹ ಬರಲು ಶುರುವಾಗಿತ್ತು. ಗಂಡ ನಾಪತ್ತೆಯಾದ ಮೇಲೆ ಹೊರಗಡೆಯಿಂದ ರಮಾ ದುಃಖದಲ್ಲಿ ಇರುವಂತೆ ನಾಟಕ ಮಾಡುತ್ತಿದ್ದರೂ ಒಳಗೊಳಗೇ ಖುಷಿಯಾಗಿ ಏನೋ ಮಸಲತ್ತು ನಡೆಸುತ್ತಿರುವುದು ನೆರೆಹೊರೆಯವರಿಗೆ ತಿಳಿಯತೊಡಗಿತು. ಈ ಸಂದೇಹಕ್ಕೆ ಇನ್ನಷ್ಟು ಬಲ ತುಂಬಬಾರದು ಎಂಬ ಕಾರಣಕ್ಕೆ ರಮಾ, ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಹಾಕುವ ನಾಟಕವಾಡಿದ್ದರು. ಒಂದೂವರೆ ವರ್ಷ ಹುಡುಕಲು ವಿಫಲರಾದ ಪೊಲೀಸರು ಇನ್ನೇನು ಮಾಡಲು ಸಾಧ್ಯ ಎನ್ನುವುದು ಅವರ ಬಲವಾದ ನಂಬಿಕೆಯಾಗಿತ್ತು. ಎಷ್ಟೇ ಹುಡುಕಿದರೂ ಸೋಮೇಗೌಡ ಅವರು ತಮಗೆ ಸಿಗುತ್ತಿಲ್ಲ ಎಂದು ಪೊಲೀಸರು ಕೋರ್ಟ್‌ಗೆ ಹೇಳಿಬಿಟ್ಟರೆ ‘ಕಾಣೆ’ ಪ್ರಕರಣ ಅಲ್ಲಿಗೆ ಮುಕ್ತಾಯವಾಗುತ್ತದೆ, ತಮ್ಮ ಮುಂದಿನ ಜೀವನ ಆರಾಮಾಗಿ ನಡೆಯುತ್ತದೆ ಎನ್ನುವುದು ರಮಾ ಲೆಕ್ಕಾಚಾರವಾಗಿತ್ತು.

ಆದರೆ ಆದದ್ದೇ ಬೇರೆ. ಹೈಕೋರ್ಟ್‌ ಆದೇಶದ ಮೇರೆಗೆ ಈ ಕೊಲೆ ಕೇಸಿನ ಬೆನ್ನತ್ತಿ ಹೋದ ಕಾಮಾಕ್ಷಿಪಾಳ್ಯದ ಪೊಲೀಸರು ರಮಾ ಅವರ ಮನೆಯ ಅಕ್ಕಪಕ್ಕದವರನ್ನೆಲ್ಲಾ ವಿಚಾರಿಸಿದಾಗ ಈ ಅನೈತಿಕ ಸಂಬಂಧದ ಬಗ್ಗೆ ತಿಳಿಯಿತು. ತನಿಖೆ ಇನ್ನಷ್ಟು ಚುರುಕುಗೊಳಿಸಿದಾಗ ಸೋಮೇಗೌಡ ಅವರ ಕೊಲೆ ಮಾಡಿರುವ ವಿಷಯವೂ ಬೆಳಕಿಗೆ ಬಂತು. ಆ ಹಿನ್ನೆಲೆಯಲ್ಲಿ ರಮಾ ಹಾಗೂ ಮೋಹನ್‌ ವಿರುದ್ಧ ಕೊಲೆಯ ಕೇಸು ದಾಖಲಿಸಿಕೊಂಡರು...
ಇಷ್ಟು ವಿಷಯವನ್ನು ಪೊಲೀಸರು ಕೋರ್ಟ್‌ ಮುಂದೆ ಇಟ್ಟರು. ಮೊದಲೇ ಹೇಳಿದಂತೆ ರಮಾ ಸಲ್ಲಿಸಿದ್ದು ಹೇಬಿಯಸ್‌ ಕಾರ್ಪಸ್‌ ಅರ್ಜಿ. ಸೋಮೇಗೌಡ ಅವರು ಸತ್ತ ಕಾರಣ, ಆ ಅರ್ಜಿಗೆ ಮಾನ್ಯತೆ ಇರಲಿಲ್ಲ. ನಾನು ಅರ್ಜಿಯನ್ನು ವಾಪಸು ತೆಗೆದುಕೊಂಡೆ. ಹೇಬಿಯಸ್‌ ಕಾರ್ಪಸ್‌ ಅರ್ಜಿ ಅಲ್ಲಿಗೆ ಇತ್ಯರ್ಥಗೊಂಡಿತು.

***
ಪೊಲೀಸರು ತುಂಬಾ ಕಷ್ಟಪಟ್ಟು ಪ್ರಕರಣವನ್ನು ಭೇದಿಸಿದ್ದರು. ರಮಾ ಹಾಗೂ ಮೋಹನ್‌ ವಿರುದ್ಧ ದೋಷಾರೋಪ ಪಟ್ಟಿ ತಯಾರು ಮಾಡಿ ಕೋರ್ಟ್‌ಗೆ ಸಲ್ಲಿಸಿದರು. ಕಷ್ಟ ಎನಿಸುವ ಇಂಥದ್ದೊಂದು ಪ್ರಕರಣವನ್ನು ಎರಡೇ ವಾರಗಳಲ್ಲಿ ಭೇದಿಸಿದ ಕಾಮಾಕ್ಷಿಪಾಳ್ಯದ ಅಂದಿನ ಪೊಲೀಸ್‌ ಇನ್‌ಸ್‍ಪೆಕ್ಟರ್‌ ಅವರಿಗೆ ‘ಸೂಪರ್‌ಕಾಪ್‌’ ಬಿರುದು ಕೂಡ ದಕ್ಕಿತು.

ಆದರೆ ವಿಚಿತ್ರ ನೋಡಿ... ರಮಾ ಹಾಗೂ ಮೋಹನ್‌ ಅವರೇ ಕೊಲೆ ಮಾಡಿದ್ದಾರೆ ಎಂದು ಸಾಬೀತುಪಡಿಸಲು ಪೊಲೀಸರು ಸಂಗ್ರಹಿಸಿದ ಸಾಕ್ಷ್ಯಾಧಾರಗಳು ಸಾಕಾಗುತ್ತಿಲ್ಲ ಎಂದು ಸೆಷನ್ಸ್‌ ಕೋರ್ಟ್‌ ಅಭಿಪ್ರಾಯಪಟ್ಟಿತು. ಕೇವಲ ಎಲುಬು-ಮೂಳೆಗಳನ್ನು ತೋರಿಸಿದ ಮಾತ್ರಕ್ಕೆ, ಕೊಲೆ ಮಾಡಿರುವುದು ಇವರಿಬ್ಬರೇ ಎಂದು ಹೇಗೆ ಸಾಬೀತು ಮಾಡಲು ಸಾಧ್ಯ ಎಂದೆಲ್ಲಾ ಅವರ ಪರ ವಕೀಲರು ವಾದ ಮಂಡಿಸಿ ಗೆದ್ದುಬಿಟ್ಟರು. ಇಬ್ಬರೂ ಸೆಷನ್ಸ್‌ ಕೋರ್ಟ್‌ನಿಂದ ಖುಲಾಸೆಗೊಂಡರು. ಅವರ ಬಿಡುಗಡೆ ಆದೇಶವನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್‌ ಕೂಡ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದಂತಿಲ್ಲ.

ಒಟ್ಟಿನಲ್ಲಿ, ರಮಾ ಅವರೇ ಕೊಲೆ ಮಾಡಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ನನ್ನ ಪ್ರಕರಣ ಹೇಬಿಯಸ್‌ ಕಾರ್ಪಸ್‌ ಅರ್ಜಿಗೆ ಸೀಮಿತಗೊಂಡಿದ್ದರಿಂದ ಮತ್ತೆ ಹೆಚ್ಚಿಗೆ ಇದರ ವಿಚಾರಕ್ಕೆ ಹೋಗಲಿಲ್ಲ. ಆದರೆ ಯಾರೇ ಕಣ್ಣೀರು ಸುರಿಸಿದರೂ ಅವರನ್ನು ಸಂಪೂರ್ಣವಾಗಿ ನಂಬಬಾರದು ಎನ್ನುವುದನ್ನು ನಾನು ಈ ಪ್ರಕರಣದಿಂದ ಕಲಿತೆ. ನಾನು ಎಷ್ಟೆಲ್ಲಾ ಕೇಸುಗಳನ್ನು ನಡೆಸಿದ್ದರೂ, ಇದು ನನ್ನ ಜೀವನದಲ್ಲಿ ನಡೆದ ತೀರಾ ವಿಚಿತ್ರ ಪ್ರಕರಣ ಎನ್ನಬಹುದು.
(ಎಲ್ಲರ ಹೆಸರು ಬದಲಾಯಿಸಲಾಗಿದೆ)

ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT