ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದಲ್ಲಿ ಟಿ.ಟಿ.ಸದ್ದು

Last Updated 15 ಜನವರಿ 2017, 19:30 IST
ಅಕ್ಷರ ಗಾತ್ರ

ಕೊರಿಯಾದಿಂದ ಬಂದ ಕೋಚ್‌ಗಳು ಕಳೆದ ಎರಡು ವರ್ಷ ಧಾರವಾಡದಲ್ಲಿ ಕರ್ನಾಟಕದ ಆಟಗಾರರಿಗೆ ವಿಶೇಷ ತರಬೇತಿ ನೀಡಿದರು. ಉತ್ತರ ಅಮೆರಿಕದ ರಿಚರ್ಡ್‌ ಮೆಕೆಫೆ ಇಲ್ಲಿನ ತರಬೇತುದಾರರಿಗೆ ತರಬೇತಿ ನೀಡಿದರು. ರಾಜ್ಯದಲ್ಲಿ ಹೊಸ ಚೆಂಡಿನ ಬಳಕೆಯ ಟೂರ್ನಿಗೆ ಎರಡು ವರ್ಷ ಹಿಂದೆ ಹುಬ್ಬಳ್ಳಿ ನಾಂದಿ ಹಾಡಿತು. ಉತ್ತರ ಕರ್ನಾಟಕದ ಹೃದಯ ಭಾಗವಾದ ಅವಳಿ ನಗರದಲ್ಲಿ ಟೇಬಲ್ ಟೆನಿಸ್‌ಗೆ ಸಂಬಂಧಿಸಿದ ಇಷ್ಟೆಲ್ಲ ನಡೆಯುತ್ತಿದ್ದಾಗ ಸಮೀಪದ ಜಿಲ್ಲೆಗಳ ನಗರ–ಪಟ್ಟಣಗಳಲ್ಲಿ ಟೇಬಲ್‌ ಟೆನಿಸ್‌ ಚೆಂಡು ಪ್ರಗತಿಯ ಹೊಸ ಹೆಜ್ಜೆ ಇಡುವ ಸದ್ದು ಮಾಡುತ್ತಿತ್ತು.

ಟೇಬಲ್ ಟೆನಿಸ್‌ಗೆ ಸಂಬಂಧಿಸಿ ಕಳೆದ ಎರಡು–ಮೂರು ವರ್ಷಗಳು ಉತ್ತರ ಕರ್ನಾಟಕ ಭಾಗದ ಪಾಲಿಗೆ ವಿಶೇಷವಾಗಿದ್ದವು. ಹುಬ್ಬಳ್ಳಿ–ಧಾರವಾಡದಲ್ಲಿ ನಡೆಯುವ ವಿಶೇಷ ಚಟುವಟಿಕೆಗಳು ಇತರ ಜಿಲ್ಲೆಗಳಿಗೂ ಪ್ರೇರಣೆಯಾದ ಪರಿಣಾಮ ಗ್ರಾಮಾಂತರ ಪ್ರದೇಶದ ಆಟಗಾರರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದರು.

ಹೊಸ ಚೆಂಡಿನೊಂದಿಗೆ ಟೇಬಲ್ ಟೆನಿಸ್ ಜಗತ್ತು ಹೊಸ ದಿಸೆಯ ಕಡೆಗೆ ಹೆಜ್ಜೆ ಹಾಕುವ ಸಂದರ್ಭದಲ್ಲಿ ಟೇಬಲ್, ರೋಬೊ ಸೇರಿದಂತೆ ಅತ್ಯಾಧುನಿಕ ಉಪಕರಣಗಳು ಮತ್ತು ಸಲಕರಣೆಗಳು ಉತ್ತರ ಕರ್ನಾಟಕದ ವಿವಿಧ ಕಡೆಗೆ ತಲುಪಿದವು. ಇದು ಆಟಗಾರರ ಪ್ರದರ್ಶನದ ಮೇಲೆ ಬೀರಿದ ಪರಿಣಾಮವನ್ನು ಅವರ ಸಾಧನೆಯ ಪಟ್ಟಿಯೇ ಸೂಚಿಸುತ್ತದೆ. ಪೈಕಾ (ಈಗ ಖೇಲೊ ಇಂಡಿಯಾ), ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌.ಜಿ.ಎಫ್.ಐ) ಮತ್ತು ಸಿಬಿಎಸ್ಇ ಶಾಲೆಗಳ ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಸಣ್ಣ ಪಟ್ಟಣಗಳ ಆಟಗಾರರು ಪ್ರಶಸ್ತಿಗಳನ್ನು ಗೆದ್ದು ಹೆಸರು ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಟೇಬಲ್ ಟೆನಿಸ್ ಈಗ ಉತ್ತಮ ಸ್ಥಿತಿಯಲ್ಲಿದೆ. ಹುಬ್ಬಳ್ಳಿ–ಧಾರವಾಡ ಮತ್ತು ಬೆಳಗಾವಿಯಲ್ಲಿ ಅನೇಕ ವರ್ಷಗಳಿಂದ ನಡೆಯುತ್ತಿರುವ ಚಟುವಟಿಕೆಗಳ ಪ್ರಭಾವ ನೇರವಾಗಿ ಈ ಪಟ್ಟಣದ ಮೇಲೆ ಆಗಿದ್ದು ಅಲ್ಲಿನ ‘ದಿ.ಅರ್ಬನ್ ಯೂಥ್‌ ಕ್ಲಬ್‌’ನಲ್ಲಿ ಜಿಲ್ಲೆಯ ಆಟಗಾರರ ಪ್ರತಿಭೆಗೆ ಒರೆ ಹಚ್ಚಲಾಗುತ್ತಿದೆ.

ಶಿರಸಿ, ಕಾರವಾರದ ಕೈಗಾ ಟೌನ್‌ಶಿಪ್‌, ದಾಂಡೇಲಿಯಲ್ಲಿಯೂ ಪೂರಕ ವಾತಾವರಣ ನಿರ್ಮಾಣವಾಗಿದೆ. ಪೈಕಾ ಕ್ರೀಡಾಕೂಟದಲ್ಲಿ ಕಳೆದ ಮೂರು ವರ್ಷಗಳಲ್ಲಿ ಹೆಸರು ಮಾಡಿರುವ ಉತ್ತರ ಕನ್ನಡ ಜಿಲ್ಲೆಯ ಆಟಗಾರರು ದಿ.ಅರ್ಬನ್ ಯೂಥ್’ ಕ್ಲಬ್‌ನಲ್ಲಿ ತರಬೇತಿ ಪಡೆದವರು. ರಾಜ್ಯಮಟ್ಟದಲ್ಲಿ ಚಾಂಪಿಯನ್ ಆದ ಜಿಲ್ಲೆಯ ತಂಡ ರಾಷ್ಟ್ರಮಟ್ಟದಲ್ಲಿ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕ ಗಳಿಸಿದೆ. ಸಿಬಿಎಸ್‌ಸಿ ಟೇಬಲ್‌ ಟೆನಿಸ್‌ನಲ್ಲಿ ಕರ್ನಾಟಕ ಒಳಗೊಂಡ ಕ್ಲಸ್ಟರ್ ಮಟ್ಟದಲ್ಲಿ ಚಿನ್ನ ಗೆದ್ದ ರಜತ್ ಲಾಡ್‌ ಇದೇ ಕ್ಲಬ್‌ನಲ್ಲಿ ತರಬೇತಿ ಪಡೆದವರು. ಈ ಟೂರ್ನಿಯ ತಂಡ ವಿಭಾಗದಲ್ಲಿ ಈ ಕ್ಲಸ್ಟರ್ ಪ್ರತಿನಿಧಿಸಿದ್ದು ಇದೇ ಜಿಲ್ಲೆಯ ಆಟಗಾರರು. ಫೈನಲ್‌ ಪ್ರವೇಶಿಸಿದ ಸಾಧನೆಯನ್ನೂ ಅವರು ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ಸಿಂಗಲ್ಸ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸೀಮಂತ ಆಚಾರ್ ಕೂಡ ಹಳಿಯಾಳದ ಪ್ರತಿಭೆ. ಶಾಶ್ವತ್ ತೋಟಗೇರ ಕೂಡ ಈ ಜಿಲ್ಲೆಗೆ ಮತ್ತು ಉತ್ತರ ಕರ್ನಾಟಕಕ್ಕೆ ಹೆಸರು ತಂದಿದ್ದಾರೆ.

ಹಳಿಯಾಳದಲ್ಲಿ ಟೇಬಲ್‌ ಟೆನಿಸ್‌ನ ಪ್ರಗತಿಯ ಹಾದಿಯ ಆರಂಭದಲ್ಲಿ ಹೆಸರು ಮಾಡಿದವರು ಚಿನ್ಮಯ ಓಶಿಮಠ. 15 ವರ್ಷದೊಳಗಿನವರ ವಯೋಮಾನದವರ ವಿಭಾಗದಲ್ಲಿ ರಾಜ್ಯಕ್ಕೆ ಆರನೇ ರ‍್ಯಾಂಕ್‌ ಹೊಂದಿದ್ದ ಅವರು ಪೈಕಾ ಕ್ರೀಡಾಕೂಟದಲ್ಲಿ ರಾಜ್ಯ ತಂಡದ ನಾಯಕರಾಗಿದ್ದರು. ಐದು ಬಾರಿ ಈ ಕ್ರೀಡಾಕೂಟದಲ್ಲಿ ಅವರು ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ.

ಯುವ ಪೀಳಿಗೆ ಮೇಲೆ ನಿರೀಕ್ಷೆ
ಅರ್ಬನ್ ಯೂಥ್ ಕ್ಲಬ್‌ನಲ್ಲಿ ಯುವ ಪೀಳಿಗೆಯನ್ನು ಟೇಬಲ್ ಟೆನಿಸ್ ಕಡೆಗೆ ಸೆಳೆಯಲು ಪ್ರಯತ್ನ ನಡೆಯುತ್ತಿದೆ. ಹೀಗಾಗಿ 15 ವರ್ಷದೊಳಗಿನ ಆಟಗಾರರಿಗೆ ಕಠಿಣ ತರಬೇತಿ ನೀಡಲಾಗುತ್ತಿದೆ.

‘ಒಟ್ಟು 80 ಆಟಗಾರರು ತರಬೇತಿ ಪಡೆಯುತ್ತಿದ್ದಾರೆ. ಅವರ ಪೈಕಿ ಬಹುತೇಕರು 15 ವರ್ಷದೊಳಗಿನವರು. ಈ ವರ್ಷದಿಂದ ಬಾಲಕಿಯರ ವಿಭಾಗವನ್ನೂ ಆರಂಭಿಸಲಾಗಿದೆ. ಈಗಾಗಲೇ 40ಕ್ಕೂ ಹೆಚ್ಚು ಬಾಲಕಿಯರು ಪ್ರವೇಶ ಪಡೆದುಕೊಂಡಿದ್ದಾರೆ’ ಎಂದು ಕ್ಲಬ್‌ನ ಕೋಚ್‌ ಉದಯನಾರಾಯಣ ಜಾಧವ್ ತಿಳಿಸಿದರು.

ಬೆಳಗಾವಿ ನಗರದಲ್ಲಿ ಸಂಗಮ ಬೈಲೂರು ಅಕಾಡೆಮಿ, ಕಾನಡೆ ಅಕಾಡೆಮಿ ಮುಂತಾದ ಸಂಸ್ಥೆಗಳ ಪ್ರಭಾವದಿಂದ ನಿಪ್ಪಾಣಿಯಂಥ ಪಟ್ಟಣಗಳಲ್ಲಿ ಟೇಬಲ್ ಟೆನಿಸ್ ಬೆಳೆಯುತ್ತಿದೆ. ಸಮೀಪದ ಪಟ್ಟಣಗಳಿಂದ ಬೆಳಗಾವಿಗೆ ತರಬೇತಿಗೆ ಬರುವವರೂ ಇದ್ದಾರೆ.

‘ಚಿಕ್ಕೋಡಿಯಂಥ ಪ್ರದೇಶದಿಂದ ಟೇಬಲ್ ಟೆನಿಸ್ ತರಬೇತಿಗೆಂದೇ ಬೆಳಗಾವಿಗೆ ಬಂದು ವಾಸ್ತವ್ಯ ಹೂಡುವ ಆಟಗಾರರು ಇದ್ದಾರೆ. ಇಂಥ ಆಸಕ್ತಿ ಕಂಡು ತರಬೇತುದಾರರ ಹುಮ್ಮಸ್ಸು ಹೆಚ್ಚಿದೆ’ ಎನ್ನುತ್ತಾರೆ ಕೋಚ್‌ ಸಂಗಮ ಬೈಲೂರು.

‘ಅನೇಕ ವರ್ಷಗಳ ಸತತ, ಕಠಿಣ ಪರಿಶ್ರಮದಿಂದ ಮಹಾನಗರಗಳ ಹೊರಗೆಯೂ ಟೇಬಲ್ ಟೆನಿಸ್ ಬೆಳೆದಿದೆ. ಕ್ರೀಡೆಯ ಅಭಿವೃದ್ಧಿಗೆ ಸಂಬಂಧಿಸಿ ಇದು ಉತ್ತಮ ಸಂಕೇತ. ಹಾವೇರಿ, ಗದಗ, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲೂ ತರಬೇತಿಗೆ ಬೇಡಿಕೆ ಇದೆ. ಕೆಲವೇ ವರ್ಷಗಳಲ್ಲಿ ಅಲ್ಲಿಯೂ ಟೇಬಲ್ ಟೆನಿಸ್ ಬೆಳೆಯುವ ನಿರೀಕ್ಷೆ ಇದೆ’ ಎನ್ನುತ್ತಾರೆ ಧಾರವಾಡದ ಕೋಚ್‌ ರವಿ ನಾಯಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT