ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ‘ಅಧ್ಯಯನ ವೇಳಾಪಟ್ಟಿ’ ಹೀಗಿರಲಿ

ಅಕ್ಷರ ಗಾತ್ರ

ಒಂದು ಉತ್ತಮ ‘ಅಧ್ಯಯನ ವೇಳಾಪಟ್ಟಿ’ ಒಳ್ಳೆಯ ಫಲಿತಾಂಶದ ಗುರಿಸಾಧನೆಯ ಕೈಮರವೂ ಹೌದು. ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನದೇ ಆದ ಶಕ್ತಿ ಮಿತಿಗಳಿರುತ್ತವೆ. ಒಬ್ಬರಿಂದ ಒಬ್ಬರಿಗೆ ವಿಷಯ ಗ್ರಹಿಕೆ, ಗ್ರಹಿಸಿಕೊಂಡಿದ್ದನ್ನು ವ್ಯಕ್ತಪಡಿಸುವ ಸಾಮರ್ಥ್ಯ ಎಲ್ಲದರಲ್ಲಿಯೂ ಭಿನ್ನತೆಯಿರುತ್ತದೆ. ಆ ಅಂಶಗಳನ್ನು ಆಧರಿಸಿಯೇ ಅವನ/ಅವಳ ಅಧ್ಯಯನ ವೇಳಾಪಟ್ಟಿಯನ್ನು ಸಿದ್ಧಪಡಿಸುವುದು ಅಗತ್ಯ. ಸಾಮಾನ್ಯವಾಗಿ ಎಲ್ಲ ವಿದ್ಯಾರ್ಥಿಗಳೂ ಅನುಸರಿಸಬಹುದಾದ ಒಂದು ಅಧ್ಯಯನ ವೇಳಾಪಟ್ಟಿಯ ಮಾದರಿ ಇಲ್ಲಿದೆ. ನಿಮ್ಮ ಅನುಕೂಲತೆಗಳಿಗೆ ತಕ್ಕಂತೆ ಇವುಗಳನ್ನು ಬದಲಾಯಿಸಿಕೊಂಡು ಬಳಸಬಹುದು.


ಹೆಚ್ಚು–ಕಡಿಮೆ ಎಲ್ಲ ಶಾಲಾ– ಕಾಲೇಜುಗಳಲ್ಲಿ ಈಗ ಪ್ರಸ್ತುತ ಶೈಕ್ಷಣಿಕ ವರ್ಷದ ಪಠ್ಯಕ್ರಮ ಮುಗಿದಿದೆ, ಅಥವಾ ಮುಕ್ತಾಯದ ಹಂತದಲ್ಲಿದೆ. ಹೀಗಾಗಿ, ಪರೀಕ್ಷೆ ಸಮೀಪಿಸಿರುವ ಈ ದಿನಗಳಲ್ಲಿ  ಓದು ಯೋಜಿತವಾಗಿರಬೇಕು, ಬರಹ ಬುದ್ಧಿವಂತಿಕೆಯಿಂದ ಕೂಡಿರಬೇಕು, ವಿಷಯ ಧಾರಣೆಯ ಕ್ರಮ ಸೃಜನಾತ್ಮಕವಾಗಿರಬೇಕು. ಈ ಹಂತದ ಪ್ರತಿ ಕ್ಷಣ, ಪ್ರತಿ ನಿಮಿಷವೂ ಮಹತ್ವದ್ದಾಗಿರುವುದರಿಂದ ವೇಳೆಯ ಶಿಸ್ತುಬದ್ಧ ನಿರ್ವಹಣೆ ಅತಿ ಮುಖ್ಯವಾಗಿರುತ್ತದೆ. ಹೀಗಾಗಿ, ಶಾಲೆ– ಕಾಲೇಜು, ಮನೆಗಳಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಅವಧಿಯನ್ನು ಅಧ್ಯಯನಕ್ಕೆ ಮೀಸಲಿಡಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮದೇ ಆದ ‘ಅಧ್ಯಯನ ವೇಳಾಪಟ್ಟಿ’ (Study Time Table) ಸಿದ್ಧಪಡಿಸಿಕೊಳ್ಳಬೇಕು.

ವೇಳಾಪಟ್ಟಿ ತಯಾರಿಯಲ್ಲಿ ಗಮನಿಸಬೇಕಾದ ಅಂಶಗಳು
ವಿಷಯ ಪ್ರಾಧಾನ್ಯ ನಿರ್ಧರಿಸಿ
ಆಯಾ ವಿಷಯದ ಕಠಿಣತೆಯ ಮಟ್ಟ ಆಧರಿಸಿ ಅಧ್ಯಯನದ ಆದ್ಯತೆ ನಿರ್ಧರಿಸಬೇಕು. ಯಾವ ವಿಷಯಕ್ಕೆ ಎಷ್ಟು ಆದ್ಯತೆ ನೀಡಬೇಕು ಎಂಬುದನ್ನು ಶಿಕ್ಷಕರು, ಪೋಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಿರ್ಧರಿಸಬೇಕು. ಕಠಿಣ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಹಾಗೆಂದು ಸುಲಭದ ವಿಷಯಗಳನ್ನು ಕಡೆಗಣಿಸಬಾರದು.

‘ಕಠಿಣತೆ’ ಎಂಬುದು ವಿದ್ಯಾರ್ಥಿಯಿಂದ ವಿದ್ಯಾರ್ಥಿಗೆ ಭಿನ್ನವಾಗಿರಬಹುದು. ಕೆಲ ಮಕ್ಕಳಿಗೆ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಕಬ್ಬಿಣದ ಕಡಲೆಯಾಗಿದ್ದು, ಉಳಿದ ವಿಷಯಗಳು ಸುಲಭವಾಗಿರಬಹುದು. ಇನ್ನೂ ಕೆಲವರಿಗೆ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳೇ ಸುಲಭವಾಗಿದ್ದು, ಇತರ ಭಾಷಾ ವಿಷಯಗಳು ಹಾಗೂ ಸಮಾಜ ಅಧ್ಯಯನ ವಿಷಯಗಳೇ ಕಷ್ಟವೆನಿಸಬಹುದು. ಮತ್ತೆ ಕೆಲವರಿಗೆ ಎಲ್ಲ ವಿಷಯಗಳೂ ಕಬ್ಬಿಣದ ಕಡಲೆಯೇ ಆಗಿರಬಹುದು. ಈ ಎಲ್ಲ ಅಂಶಗಳನ್ನೂ ಪರಿಗಣನೆಗೆ ತೆಗೆದುಕೊಂಡು ಯಾವ ವಿಷಯದ ಅಧ್ಯಯನಕ್ಕೆ ಎಷ್ಟು ಆದ್ಯತೆ ನೀಡಬೇಕು ಎಂಬುದನ್ನು ನಿರ್ಧರಿಸಬೇಕು.  ಏಕೆಂದರೆ ಪರೀಕ್ಷಾ ಫಲಿತಾಂಶ ಎಲ್ಲ ವಿಷಯಗಳಲ್ಲೂ ಗಳಿಸಿದ ಒಟ್ಟಾರೆ ಅಂಕಗಳನ್ನು ಆಧರಿಸಿ ನಿರ್ಧರಿತವಾಗುತ್ತದೆ.

ನಿತ್ಯ ಚಟುವಟಿಕೆ ಕಡೆಗಣಿಸದಿರಿ
ಅಧ್ಯಯನ ವೇಳಾಪಟ್ಟಿಯನ್ನು ನಿತ್ಯ ಚಟುವಟಿಕೆಗಳಿಗೆ ತೊಂದರೆಯಾಗದಂತೆ ರಚಿಸಿಕೊಳ್ಳಬೇಕು. ಅಧ್ಯಯನದ ಜತೆಗೆ ಆರೋಗ್ಯ ರಕ್ಷಣೆಯೂ ಅತ್ಯಗತ್ಯ. ಶೌಚ, ಸ್ನಾನ, ತಿಂಡಿ, ಊಟ, ಉಪಾಹಾರ, ಅಧ್ಯಯನದ ನಡುವೆ ಅಲ್ಪ ವಿರಾಮ, ಅಲ್ಪಾವಧಿ ನಿದ್ರೆ, ದೀರ್ಘಾವಧಿ ನಿದ್ರೆ, ಸಂಗೀತ ಕೇಳುವುದು... ಅಲ್ಲದೆ, ಅಲ್ಪಾವಧಿಯ ಆಟಕ್ಕೂ ಸಮಯ ನೀಡಬೇಕು.

ಅಧ್ಯಯನದ ಅವಧಿ ಏನು– ಎತ್ತ ?
ಹೆಚ್ಚು ಅಧ್ಯಯನ ಮಾಡಿದರೆ ಹೆಚ್ಚು ಅಂಕಗಳಿಸಬಹುದು ಎಂಬುದು ಜನಪ್ರಿಯ ನಂಬಿಕೆ. ಆದರೆ ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಅದನ್ನು ಮೀರಿದರೆ ಅದರಿಂದ ನಕಾರಾತ್ಮಕ ಪರಿಣಾಮವೇ ಆಗುತ್ತದೆ.
ತಡರಾತ್ರಿ ಅಥವಾ ಇಡೀರಾತ್ರಿ, ದಿನಪೂರ್ತಿ ಅಧ್ಯಯನ ಮಾಡುವುದು ಸೂಕ್ತವಲ್ಲ. ಬೆಳಗಿನ 4ರಿಂದ ರಾತ್ರಿ 10ರವರೆಗಿನ ಅವಧಿ ಅಧ್ಯಯನಕ್ಕೆ ಸೂಕ್ತ. ಈ ಅವಧಿಯನ್ನು ಬೆಳಗಿನ 5ರಿಂದ ರಾತ್ರಿ 11ಕ್ಕೂ ಬದಲಾಯಿಸಿಕೊಳ್ಳಬಹುದು.

ಬೆಳಗಿನ 4ರಿಂದ 7ರವರೆಗಿನ ವೇಳೆ ‘ಬಂಗಾರದ ಅವಧಿ’. ಬೆಳಗಿನ ಶಾಂತ ವಾತಾವರಣದಲ್ಲಿ ಓದಿದ್ದನ್ನು ಗ್ರಹಿಸಿಕೊಳ್ಳುವ ಸಾಮರ್ಥ್ಯ ಹೆಚ್ಚಿರುತ್ತದೆ. ಹೀಗಾಗಿ, ಕಠಿಣ ವಿಷಯಗಳ ಅಧ್ಯಯನಕ್ಕೆ ಈ ಅವಧಿ ಹೇಳಿ ಮಾಡಿಸಿದಂತಿದೆ. ತಜ್ಞರ ಅಭಿಪ್ರಾಯದಂತೆ ಈ ಅವಧಿಯಲ್ಲಿ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಭೂಗೋಳಶಾಸ್ತ್ರ, ಇಂಗ್ಲಿಷ್‌ಗಳಂತಹ ಕಠಿಣ ವಿಷಯಗಳನ್ನು ಅಭ್ಯಸಿಸಬೇಕು. ಪ್ರತಿದಿನ ಒಂದು ಅಥವಾ ಎರಡು ವಿಷಯಗಳನ್ನು ಆಯ್ದುಕೊಳ್ಳಬೇಕು.

ಬೆಳಗಿನ ಓದಿನ ನಂತರ ಸ್ನಾನ ಮಾಡಿ, ಉಪಾಹಾರ ಸೇವಿಸಿ ಬೆಳಿಗ್ಗೆ 9ಗಂಟೆಯಿಂದ ಅಧ್ಯಯನ ಮುಂದುವರಿಸಬಹುದು. ಈ ಅವಧಿಯಲ್ಲಿ ಇತಿಹಾಸ, ಪೌರನೀತಿ, ಅರ್ಥಶಾಸ್ತ್ರ, ಕನ್ನಡ, ಹಿಂದಿಯಂತಹ ಸರಳ ವಿಷಯಗಳನ್ನು ಓದಿಕೊಳ್ಳಬಹುದು. ಮಧ್ಯಾಹ್ನ 1ರವರೆಗೆ ಅಧ್ಯಯನ ಮುಂದುವರಿಸಬಹುದು. ಮಧ್ಯಾಹ್ನದ ಊಟದ ನಂತರ ಅರ್ಧ ಗಂಟೆಯ ನಿದ್ರೆ / ವಿಶ್ರಾಂತಿ ಅಗತ್ಯ. ನಂತರದ ಒಂದು ಗಂಟೆ ಅವಧಿಯನ್ನು ಸಂಗೀತ ಕೇಳಲು, ಟಿ.ವಿ ನೊಡಲು, ಆಟವಾಡಲು ಮೀಸಲಿಡಬೇಕು.

ಮಧ್ಯಾಹ್ನ ಮೂರು ಗಂಟೆಯಿಂದ ಅಧ್ಯಯನವನ್ನು ಪುನರಾರಂಭಿಸಬೇಕು. ಈ ಅವಧಿಯನ್ನು ಹಳೆಯ ಪ್ರಶ್ನೆಪತ್ರಿಕೆಗಳ ಪರಾಮರ್ಶೆ, ಮುಖ್ಯಾಂಶಗಳ ಪುನರ್‌ಮನನಕ್ಕೆ ಬಳಸಿಕೊಳ್ಳಬೇಕು. ಸಂಜೆ ಆರು ಗಂಟೆಯವರೆಗೆ ಈ ಕ್ರಮ ಮುಂದುವರಿಸಬೇಕು.
ಸಂಜೆ 6ಕ್ಕೆ ಅಲ್ಪ ಉಪಾಹಾರ ಸೇವಿಸಿ, 6.30ಕ್ಕೆ ಸಂಜೆಯ ಅಧ್ಯಯನ ಆರಂಭಿಸಬೇಕು. ಸಹಪಾಠಿಗಳೊಂದಿಗೆ ‘ಗುಂಪು ಅಧ್ಯಯನ’ಕ್ಕೆ ಈ ಅವಧಿ ಉತ್ತಮ. ಈ ಅವಧಿಯಲ್ಲಿ ಗಣಿತದ ಲೆಕ್ಕಗಳನ್ನು ಬಿಡಿಸಿ, ಪ್ರತಿ ವಿಷಯಗಳಿಗೆ ಸಂಬಂಧಿಸಿದ ಮುಖ್ಯಾಂಶಗಳನ್ನು ಕಿರು ಟಿಪ್ಪಣಿಯ ರೂಪದಲ್ಲಿ ಬರೆದಿಟ್ಟುಕೊಳ್ಳಬೇಕು. ಅಧ್ಯಯನಕ್ಕೆ ಸಂಬಂಧಿಸಿ ಸಂಕ್ಷೇಪಾಕ್ಷರಗಳನ್ನು, ಜಾರುಚಿತ್ರ (Flow Chart), ಮಿಂಚುಪಟ್ಟಿಗಳನ್ನು ರೂಪಿಸಿ ಅವುಗಳ ಅಧ್ಯಯನ ಕೊಠಡಿಯಲ್ಲಿ ಲಗತ್ತಿಸಬೇಕು. ಈ ಅವಧಿ 9.30ರವರೆಗೆ ಮುಂದುವರಿಯಬೇಕು.

ರಾತ್ರಿ 9.30ರಿಂದ 9.45ರವರೆಗೆ ಇಡೀ ದಿನದ ಅಧ್ಯಯನದ ಪುನರಾವಲೋಕನ ಮಾಡಿಕೊಳ್ಳಬೇಕು. ಮಾರನೆಯ ದಿನದ ಅಧ್ಯಯನಕ್ಕೆ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ನಂತರ ರಾತ್ರಿ ಊಟ ಮಾಡುತ್ತ ಪೋಷಕರೊಡನೆ ಆ ದಿನದ ಅಧ್ಯಯನದ ಕುರಿತು ಚರ್ಚಿಸಿ, ಅಗತ್ಯ ಮಾರ್ಗದರ್ಶನ ಪಡೆಯಬೇಕು. ರಾತ್ರಿ 10 ಗಂಟೆಗೆ ನಿದ್ರೆಗೆ ಜಾರಿ ಮಾರನೆ ದಿನ ಬೆಳಗ್ಗೆ ಮತ್ತೆ ಅಧ್ಯಯನ ಅಭಿಯಾನ ಆರಂಭಿಸಬೇಕು.
ಇದು ತಜ್ಞರ ಸಲಹೆಯಂತೆ ನೀಡಿರುವ ಈ ವೇಳಾಪಟ್ಟಿ ಒಂದು ಮಾದರಿಯಷ್ಟೆ. ಆಯಾ ವಿದ್ಯಾರ್ಥಿಯ ಅಗತ್ಯ, ಅನುಕೂಲಗಳಿಗೆ ಅನುಗುಣವಾಗಿ ಪೋಷಕರ– ಶಿಕ್ಷಕರ ಮಾರ್ಗದರ್ಶನದಂತೆ ವೇಳಾಪಟ್ಟಿಯಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಬಹುದು.
 

ದಿನಗಣನೆಯೂ ಮುಖ್ಯ
ಅಧ್ಯಯನ ವೇಳಾಪಟ್ಟಿಯೊಂದಿಗೆ ಪರೀಕ್ಷೆಗೆ ಬಾಕಿ ಉಳಿದಿರುವ ‘ದಿನಗಣನೆಯ ಚಾರ್ಟ್’ ಸಿದ್ಧಪಡಿಸಿಕೊಳ್ಳಬೇಕು. ಉದಾಹರಣೆಗೆ ಪರೀಕ್ಷೆಗೆ 50 ದಿನ ಬಾಕಿ ಇದ್ದರೆ, 50, 49, 48, 47.... 01 ಹೀಗೆ ಬಾಕಿ ಉಳಿದಿರುವ ದಿನಗಳನ್ನು ಇಳಿಕೆ ಕ್ರಮದಲ್ಲಿ ಚಾರ್ಟ್‌ನಲ್ಲಿ ಬರೆದಿಡಬೇಕು. ದಿನ ಕಳೆದಂತೆ ಆಯಾ ದಿನವನ್ನು ಕೆಂಪು ಬಣ್ಣದಿಂದ ಹೊಡೆದುಹಾಕಬೇಕು. ಇದು ಪರೀಕ್ಷಾ ದಿನ ಸಮೀಪಿಸುತ್ತಿರುವ ಕುರಿತು ಎಚ್ಚರಿಸುತ್ತದೆ. ವೇಳಾಪಟ್ಟಿಯ ಪಕ್ಕದಲ್ಲಿಯೇ ‘ದಿನಗಣನೆಯ ಚಾರ್ಟ್’ ಲಗತ್ತಿಸಬೇಕು. ಪ್ರತಿ ಶಾಲೆ– ಕಾಲೇಜುಗಳಲ್ಲೂ ಒಂದು ಮಾದರಿ ಅಧ್ಯಯನ ವೇಳಾಪಟ್ಟಿ ಹಾಗೂ ದಿನಗಣನೆ ಪಟ್ಟಿಯನ್ನು ಲಗತ್ತಿಸಬೇಕು.
– ಎನ್.ಎಚ್. ನಾಗೂರ, ಡಿಡಿಪಿಐ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT