ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಏಕೆ ಗಾಂಧಿ ಭವನ?

Last Updated 15 ಜನವರಿ 2017, 19:30 IST
ಅಕ್ಷರ ಗಾತ್ರ

ಕರ್ನಾಟಕ ಸರ್ಕಾರವು ಪ್ರತೀ ಜಿಲ್ಲಾ ಕೇಂದ್ರದಲ್ಲೂ ಗಾಂಧಿ ಭವನ  ಸ್ಥಾಪಿಸಲು ಉದ್ದೇಶಿಸಿರುವ ಸುದ್ದಿ ಈಗ ಪ್ರಚಲಿತದಲ್ಲಿದೆ. ಈ ಸಂಬಂಧವಾಗಿ ವಾರ್ತಾ ಇಲಾಖೆಯ ಮುಂದಾ  ಳತ್ವದಲ್ಲಿ ಕೆಲವು ಸಮಾಲೋಚನಾ ಸಭೆಗಳು ನಡೆದ ವರದಿ ಗಳು ಪತ್ರಿಕೆಗಳಲ್ಲಿ ಇತ್ತೀಚೆಗೆ ಪ್ರಕಟವಾಗಿವೆ. ಪ್ರತೀ ಜಿಲ್ಲಾ ಕೇಂದ್ರದ ಗಾಂಧಿ ಭವನದ ಕಟ್ಟಡಕ್ಕೆ ಸರ್ಕಾರದ ಕಡೆಯಿಂದ ತಲಾ ₹ 1 ಕೋಟಿ  ಮಂಜೂರು ಮಾಡುವುದಾಗಿ ಮುಖ್ಯ ಮಂತ್ರಿ ಹೇಳಿರುವುದಾಗಿಯೂ ಈ ವರದಿಗಳು ತಿಳಿಸಿವೆ.

ಗಾಂಧೀಜಿ ಬಗ್ಗೆ  ಸರ್ಕಾರ ಈಗ ಆಸಕ್ತಿ ವಹಿಸಿರುವುದು ಸಂತೋಷದ ವಿಷಯವೇ. ಆದರೆ ಈ ಹೊಸ ಆಸಕ್ತಿಗೆ ಕಾರಣ ಗಳೇನು, ಯಾವ ಉದ್ದೇಶದಿಂದ ಈ ಜಿಲ್ಲಾ ಗಾಂಧಿ ಕೇಂದ್ರ ಗಳು ಸ್ಥಾಪನೆಯಾಗುತ್ತಿವೆ, ಅವುಗಳ ಸ್ವರೂಪವೇನು ಇತ್ಯಾದಿ ಗಳ ಬಗ್ಗೆ ಸಾರ್ವಜನಿಕರಿಗೆ ಯಾವ ಮಾಹಿತಿಯೂ ಇಲ್ಲ.

ಸರ್ಕಾರದ ಅನುದಾನ ಪಡೆಯುವ ಗಾಂಧಿ ಭವನ ಬೆಂಗಳೂರಿನಲ್ಲಿ ಈಗಾಗಲೇ ಅಸ್ತಿತ್ವದಲ್ಲಿದ್ದು, ಅದು ರಾಜ್ಯದಾದ್ಯಂತ ತನ್ನ ಚಟುವಟಿಕೆಗಳನ್ನು ನಡೆಸುತ್ತಿದೆ. ಇನ್ನು ನಮ್ಮ ಪ್ರತೀ ವಿಶ್ವವಿದ್ಯಾಲಯದಲ್ಲೂ ಗಾಂಧಿ ಅಧ್ಯಯನ ಕೇಂದ್ರ– ಪೀಠ– ಭವನಗಳಿದ್ದು ಅವು ಕೂಡ ಗಾಂಧಿ ವಿಚಾರಗಳ ಕುರಿತು ಸಂಶೋಧನೆ, ಪ್ರಕಟಣೆ ಮತ್ತು ಪ್ರಚಾರ ಕೆಲಸಗಳನ್ನು ಕೈಗೊಂಡಿವೆ. ಇವುಗಳ ಕಾರ್ಯ ಅಥವಾ ಉದ್ದೇಶದ ವ್ಯಾಪ್ತಿಯನ್ನು ಮೀರಿದ ಯಾವ ವಿಶೇಷ ಕಾರ್ಯ ಮತ್ತು ಉದ್ದೇಶಕ್ಕಾಗಿ ಬೊಕ್ಕಸದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಜಿಲ್ಲಾ ಗಾಂಧಿ ಭವನಗಳ ಸ್ಥಾಪನೆಯ ಕೆಲಸ ಆರಂಭವಾಗಿದೆ ಎಂಬುದು ಸಾರ್ವಜನಿಕರಿಗೆ ತಿಳಿಯಬೇಕಿದೆ.

ನಾನು ಈ ಯೋಜನೆಗೆ ಸಂಬಂಧಪಟ್ಟ ಇಬ್ಬರು–ಮೂವರು ಅಧಿಕಾರಿಗಳನ್ನು  ಸಂಪರ್ಕಿಸಿದಾಗ, ಈ  ಯೋಜ ನೆಯ ಬಗ್ಗೆ, ಈ ಮೇಲಿನ ವಿಷಯಗಳ ಬಗ್ಗೆ ತಿಳಿವಳಿಕೆ ನೀಡ ಬಲ್ಲ  ಯಾವುದೇ ಪೂರ್ವಭಾವಿ ಸಮೀಕ್ಷೆ ಅಥವಾ ಅಧ್ಯಯನ ವರದಿ ಇಲ್ಲವೆಂದು ತಿಳಿಯಿತು. ಗಾಂಧಿ ವಿಚಾರಗಳ ಬಗ್ಗೆ ಆಸಕ್ತಿ ಹೊಂದಿರುವ ಕೆಲವರೊಡನೆ ಸಮಾಲೋಚಿಸಿ ಈ ಯೋಜನೆಯನ್ನು ಜಾರಿಗೆ ತರುವ ಪ್ರಯತ್ನ ನಡೆದಿದೆ ಎಂದು ಗೊತ್ತಾಯಿತು. ಜೊತೆಗೆ, ‘ನಿಮಗೂ ಇದರಲ್ಲಿ ಆಸಕ್ತಿ ಇದ್ದರೆ, ಈ ಸಂಬಂಧ ವಾದ ನಿಮ್ಮ ಆಲೋಚನೆಗಳನ್ನು ತಿಳಿಸಿ’ ಎಂದು ಹೇಳ ಲಾಯಿತು. ಅಂದರೆ ಇದು  ಮಕ್ಕಳಾಟದಂತೆ ಆಯಿತು.

ಇವೆಲ್ಲ, ‘ನೀನೂ ಆಟಕ್ಕೆ ಸೇರಿಕೊ’  ಎನ್ನುವಂತಹ ಲಘು ಧಾಟಿಯಲ್ಲಿ ನಿರ್ವಹಿಸುವಂತಹ ಅರೆ ಖಾಸಗಿ ಕೆಲಸವಲ್ಲ. ಬದಲಿಗೆ ಅಧಿಕೃತ ಮಾನ್ಯತೆಯನ್ನು ಪಡೆದ, ಒಂದು ವ್ಯಾಪಕ ಸಮಾಲೋಚನೆಯನ್ನು ಬೇಡುವ ಸಾರ್ವಜನಿಕ ಜವಾ ಬ್ದಾರಿಯ ಯೋಜನೆಯೆಂದು ನಾನು ಭಾವಿಸಿದ್ದೇನೆ.

ಈಗಾಗಲೇ ನಮ್ಮ ಜಿಲ್ಲಾ ಕೇಂದ್ರಗಳಲ್ಲಿ ಅಂಬೇಡ್ಕರ್ ಭವನ, ದೇವರಾಜ ಅರಸು ಭವನ, ಶಿಕ್ಷಕರ ಭವನ, ಕುವೆಂಪು ಭವನ ಇತ್ಯಾದಿಯಾಗಿ ಭವ್ಯ ಹೆಸರುಗಳ ಭವನಗಳು ಅಸ್ತಿತ್ವದಲ್ಲಿವೆ. ಅವುಗಳಲ್ಲಿ ನಡೆಯುವ ಚಟುವಟಿಕೆಗಳಿಗೂ ಆ ಹೆಸರುಗಳಿಗೂ ನೆಪ ಮಾತ್ರ ಸಂಬಂಧವಿದ್ದು, ಅವು ಹೆಚ್ಚೂ ಕಡಿಮೆ ವಾಣಿಜ್ಯೋದ್ದೇಶದ ಕಟ್ಟಡಗಳಾಗಿ ಮಾರ್ಪಾಡಾಗಿವೆ. ಅವುಗಳ ನಿರ್ವಹಣಾ ವೆಚ್ಚ ಅವುಗಳಿಂದ ಬರುವ ವರಮಾನ ಕ್ಕಿಂತ ಬಹು ಹೆಚ್ಚಾಗಿಯೇ ಇದೆ. ಈ ಹೊಸ ಗಾಂಧಿ ಭವನ ಗಳೂ ಇಂತಹ ಕಟ್ಟಡಗಳ ಸಾಲಿಗೆ ಸೇರುವ ಕಟ್ಟಡ ಮಾತ್ರವಾಗಲಿವೆಯೇ?

ಹಾಗಿಲ್ಲದಿದ್ದಲ್ಲಿ ಈ ಗಾಂಧಿ ಭವನಗಳ ವಿಶಿಷ್ಟ ಉದ್ದೇಶವಾದರೂ ಏನು? ಅದರ ಕಾರ್ಯ ಚಟುವಟಿಕೆಗಳ ಸ್ವರೂಪವೇನು? ಅವುಗಳ ಆಡಳಿತ ಯಾರಿಂದ? ಸರ್ಕಾರಿ ಅಧಿಕಾರಿಗಳ ಸುಪರ್ದಿಯಲ್ಲಿ ಇವು ನಡೆಯುವವೇ? ಇಲ್ಲವಾದರೆ ಗಾಂಧಿ ವಿಚಾರಗಳಲ್ಲಿ ಆಸಕ್ತಿ ಹೊಂದಿ ಸಾಕಷ್ಟು ಅಧ್ಯಯನ ಮಾಡಿ, ಆ ಸಂಬಂಧದ ಚಟುವಟಿಕೆಗಳನ್ನು ಸಂಘಟಿಸಿ ಇವುಗಳನ್ನು ನಿಭಾಯಿಸಬಲ್ಲ ಜನ ಜಿಲ್ಲಾ ಮಟ್ಟದಲ್ಲಿ ಇದ್ದಾರೆಯೇ? ಅವರನ್ನು ಗುರುತಿಸಲಾಗಿದೆಯೇ? ಇಂತಹ ಯಾವ ಪೂರ್ವಭಾವಿ ಅಥವಾ ಪ್ರಾಥಮಿಕ ಸಮೀಕ್ಷೆಯ ಕೆಲಸವನ್ನೂ ಮಾಡದೆ ಏಕಾಏಕಿ ಕಟ್ಟಡಗಳನ್ನು ಕಟ್ಟುವ, ಅವುಗಳಿಗೆ ಕೋಟಿ ಕೋಟಿ ರೂಪಾಯಿಗಳ ಮಂಜೂರಾತಿಯ ಮಾತಾಡುವುದು ಸಾರ್ವಜನಿಕ ಕೆಲಸಗಳ ಬಗ್ಗೆ ಗಾಂಧಿ ಹೊಂದಿದ್ದ ವಿಚಾರಗಳಿಗೆ ವಿರುದ್ಧವಾದ ನಡೆ.

ಸಾರ್ವಜನಿಕ ಹಣದ ಖರ್ಚಿನ ಒಂದೊಂದು ಪೈಸೆಯ ಹಿಂದೆಯೂ ಸಾರ್ವಜನಿಕ ಹಿತದ ಖಚಿತ ಚಿತ್ರ ಇರಬೇಕೆಂಬುದು ಗಾಂಧಿಯವರ ನಂಬಿಕೆಯಾಗಿತ್ತು. ಇದರ ಅರಿವಿಲ್ಲದೇ ಹೋದರೆ ಈ ಯೋಜನೆಯು ಸರ್ಕಾರದ ಸದರಿ ಅಭಿವೃದ್ಧಿ ಚಟುವಟಿಕೆಗಳ ಭಾಗವಾಗಿ, ಪಿ.ಡಬ್ಲ್ಯು.ಡಿ ಕಂಟ್ರಾಕ್ಟುದಾರರಿಗೆ ವರದಾನವಾಗಬಲ್ಲ ಇನ್ನೊಂದು ಬೃಹತ್ ಕಾಮಗಾರಿ ಕಾರ್ಯಕ್ರಮವಾಗಿ ಮಾರ್ಪಾಡಾಗಿ ಗಾಂಧಿ ಹೆಸರನ್ನು ಮತ್ತಷ್ಟು ಕೆಡಿಸಬಲ್ಲದಷ್ಟೆ.

ನಿಜ, ಇಂದು ಗಾಂಧಿ ವಿಚಾರಗಳ ಪುನರುಜ್ಜೀವನ ಅತ್ಯಂತ ಅಗತ್ಯವಾಗಿದೆ. ಗಾಂಧಿಯನ್ನು ಇನ್ನೂ ರಾಷ್ಟ್ರಪಿತನೆಂದು ಕರೆಯಲಾಗುತ್ತಿದ್ದರೂ ಇಂದಿನ ಸಾರ್ವಜನಿಕ ಜೀವನ ನೋಡಿದರೆ, ಅವರ ವ್ಯಕ್ತಿತ್ವದ ಮತ್ತು ವಿಚಾರಗಳ ಅಪಮೌಲ್ಯೀಕರಣ ಸರ್ಕಾರಗಳಿಂದಲೇ ನಡೆದಿದೆ.

ಗಾಂಧಿ ಕಲ್ಪಿಸಿಕೊಂಡಿದ್ದ ಭಾರತಕ್ಕೆ ವಿರುದ್ಧವಾದ ಭಾರತವನ್ನು ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳ ಹೆಸರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಪಕ್ಷಾತೀತವಾಗಿ  ಕಟ್ಟಲು ಹೊರಟಿರುವುದು ಎದ್ದು ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಗಾಂಧಿ ಕುರಿತ ಸರ್ಕಾರದ ಈ ಹೊಸ ಒಲವು ಅನುಮಾನಾಸ್ಪದವೆನಿಸುತ್ತದೆ. ಅವರ ಚಿಂತನೆಗಳ ವಿರುದ್ಧದ ಕೆಲಸಗಳನ್ನು ಅವರ ಹೆಸರಿನ ರಕ್ಷಣೆಯಲ್ಲೇ ಮಾಡುವ ಹೊಸ ಪ್ರಯತ್ನದಂತೆ ಇದು ಕಾಣುತ್ತದೆ.

ಆದುದರಿಂದ ಇಂದು ನಮಗೆ  ಬೇಕಾಗಿರುವುದು, ‘ಈವರೆಗೆ ನಮ್ಮ ಸರ್ಕಾರಗಳು ತಮ್ಮ ಗಾಂಧಿ ಸಂಸ್ಥೆಗಳ ಮೂಲಕ ಪೋಷಿಸಿಕೊಂಡು ಬಂದಂತಹ ಸತ್ಯ- ಅಹಿಂಸೆ- ಸ್ವದೇಶಿ ಎಂಬ ಬಾಯುಪಚಾರದ ಬಡಾಯಿ ಕಾರ್ಯಕ್ರಮಗಳಿಂದ ಸುಪ್ರೀತರಾಗಿ ಸರ್ಕಾರದ ದುಷ್ಟ ಕೆಲಸಗಳ ವಿರುದ್ಧ ಸೊಲ್ಲೆತ್ತುವ ಉಸಿರನ್ನೇ ಕಳೆದುಕೊಂಡ ಆಶ್ರಮವಾಸಿ ಸರ್ಕಾರಿ ಗಾಂಧಿಯಲ್ಲ. ಬದಲಿಗೆ ತನ್ನ ಚಿಂತನೆಗಳಿಗೆ ದ್ರೋಹ ಬಗೆಯುವಂತಹ ಕೆಲಸಗಳನ್ನೇ ಮಾಡುತ್ತಿರುವ ಸರ್ಕಾರದ ಆತ್ಮಸಾಕ್ಷಿಯನ್ನು ಎಚ್ಚರಿಸುವಂತಹ ಕ್ರಿಯಾಶೀಲ ಗಾಂಧಿ; ಸತ್ಯಾಗ್ರಹಿ ಗಾಂಧಿ’.

ಇಂದಿನ ನಮ್ಮ ರಾಜ್ಯ ಸರ್ಕಾರ, ಗಾಂಧಿ ಆದರ್ಶಗಳನ್ನು ನಂಬಿದ್ದೆಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದ ಸರ್ಕಾರ. ಅದರ ನೇತೃತ್ವ ವಹಿಸಿರುವವರು ಸರ್ಕಾರಿ ಮತ್ತು ಆಶ್ರಮವಾಸಿ ಗಾಂಧಿ ಮಾದರಿಗಳ ಅಪಾಯಗಳ ವಿರುದ್ಧ ಎಚ್ಚರಿಸಿ ಬಂಡುಕೋರ ಗಾಂಧಿಯನ್ನು ಕಂಡುಕೊಂಡ ಸಮಾಜವಾದಿ ನಾಯಕ  ರಾಮಮನೋಹರ ಲೋಹಿಯಾ ಅವರ ಅನುಯಾಯಿ ಎಂದು ಹೇಳಿಕೊಳ್ಳುವವರು. ಹಾಗಾಗಿ ರಾಜ್ಯ ಸರ್ಕಾರಕ್ಕೆ ಗಾಂಧಿ ಬಗ್ಗೆ ನಿಜವಾಗಿಯೂ ಗೌರವವಿದ್ದು ಅವರ ವಿಚಾರಗಳ ಪುನರುಜ್ಜೀವನದ ಆಶಯ ಇದ್ದರೆ, ತಾನು ನಡೆದಿರುವ ಹಾದಿ ಸರಿಯಾದದ್ದೇ ಎಂಬುದರ ಆತ್ಮ ಪರೀಕ್ಷೆಗೆ ನೆರವಾಗಬಲ್ಲ ಗಾಂಧಿ ಮಾದರಿಯನ್ನು ಕಟ್ಟಬಲ್ಲ ಗಾಂಧಿ ಭವನಗಳ ಕಡೆ ಗಮನ ಹರಿಸಲಿ.

ಅದರ ಸಾಧ್ಯತೆಗಳನ್ನು ಪರಿಶೀಲಿಸಿ ಅದರ ಸ್ವರೂಪವನ್ನು ನಿರ್ಧರಿಸಲು ನಾಡಿನಾದ್ಯಂತ ಇರುವ ಗಾಂಧಿ ಚಿಂತಕರ ಮತ್ತು ಕಾರ್ಯಶೀಲರ (ಆಕ್ಟಿವಿಸ್ಟ್‌ಗಳ) ಒಂದು ತಂಡವನ್ನು ರಚಿಸಲಿ. ಅದರ ವರದಿಯ ನಂತರವಷ್ಟೇ ಈ ಹೊಸ ಗಾಂಧಿ ಭವನಗಳ ನಿರ್ಮಾಣದ ಕೆಲಸ ಆರಂಭವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT