ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ–ಕಟ್ಟೆ ಕಟ್ಟಿಸಿದ ಕಾಯಕಯೋಗಿ ಸಿದ್ಧರಾಮೇಶ್ವರ

Last Updated 16 ಜನವರಿ 2017, 4:10 IST
ಅಕ್ಷರ ಗಾತ್ರ

ದಾವಣಗೆರೆ: ‘ನಾಡಿನೆಲ್ಲೆಡೆ ಕೆರೆ–ಕಟ್ಟೆಗಳನ್ನು ಕಟ್ಟಿಸುವ ಮೂಲಕ ಕಾಯಕ ತತ್ವದ ಮಹತ್ವ ಸಾರಿದ ಮಹಾನ್ ಶರಣರು ಶಿವಯೋಗಿ ಸಿದ್ಧರಾಮೇಶ್ವ ರರು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಪ್ರಕಾಶ ಹಲಗೇರಿ ಸ್ಮರಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಚನಕಾರ ಹಾಗೂ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ‘ವೈಚಾರಿಕ ಪ್ರಜ್ಞೆಯನ್ನು ಒಳಗೊಂಡು ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದ ಸಿದ್ಧರಾಮೇಶ್ವರರು ಶ್ರಮ ಸಂಸ್ಕೃತಿಯನ್ನು ಪಸರಿಸಿದರು. ಅಲ್ಲಮಪ್ರಭುವಿನ ಪ್ರೇರಣೆಯ ನಂತರ ಅನುಭವ ಮಂಟಪಕ್ಕೆ ಬಂದು ಮೌಢ್ಯ, ಕಂದಾಚಾರಗಳ ವಿರುದ್ಧ ಜನಜಾಗೃತಿ ಮೂಡಿಸಿದರು ಎಂದರು.

‘ಸಿದ್ಧರಾಮೇಶ್ವರರು ಭವ ದಾರಿದ್ರ್ಯವನ್ನು ದೂರ ಮಾಡುವ ಮೂಲಕ ಪಂಚ ಗಣಾಧೀಶರಲ್ಲೊಬ್ಬ ರಾದರು. ಸತಿ–ಪತಿಯ ನಡುವಿನ ಅವಿನಾಭಾವ ಸಂಬಂಧ, ಅನುಸಂಧಾನ ಕುರಿತು ಸಾವಿರಾರು ವಚನಗಳನ್ನು ರಚಿಸಿದ್ದಾರೆ’ ಎಂದರು.

‘ಜನಪದ ನೆಲೆಯಲ್ಲಿ ಸಿದ್ಧರಾಮೇಶ್ವರರ ವಚನಗಳು ಇಂದಿಗೂ ಪ್ರಸ್ತುತ. ಸಮಾಜದಲ್ಲಿ ಮಹಿಳೆಗೆ ಸಮಾನ ಹಕ್ಕುಗಳು ದೊರೆಯಲು ಶ್ರಮಿಸಿದರು. ಸಮಾಜಕಟ್ಟುವ ಕೆಲಸ ಮಾಡುತ್ತ ಕಾಯಕದ ಮೂಲಕ ಜಡತ್ವವನ್ನು ದೂರ ಮಾಡಿದ ಮಹಾ ಶರಣ’ ಎಂದು ಹಲಗೇರಿ ಸ್ಮರಿಸಿದರು.

ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್ ಮಾತನಾಡಿ, ‘12ನೇ ಶತಮಾನದಲ್ಲಿ ಹಲವು ಸಮಾಜ, ಸಮುದಾಯಗಳನ್ನು ಒಟ್ಟುಗೂಡಿಸುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶರಣರಲ್ಲಿ ಸಿದ್ಧರಾಮೇಶ್ವರರು ಪ್ರಮುಖರು. ಅವರ ಹಾದಿಯಲ್ಲಿ ಎಲ್ಲರೂ ಸಾಗಬೇಕಿದೆ’ ಎಂದರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌.ಅಶ್ವತಿ, ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT