ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ: ಎಕರೆಗೆ 15 ಕ್ವಿಂಟಲ್‌ ಇಳುವರಿ

Last Updated 16 ಜನವರಿ 2017, 4:12 IST
ಅಕ್ಷರ ಗಾತ್ರ

ತ್ಯಾವಣಿಗೆ: ಓದು ಬರಹ ಕಲಿಯಲಿಲ್ಲ. ಕೃಷಿ ಬಿಟ್ಟರೆ ಬೇರೆನೂ ಗೊತ್ತಿಲ್ಲ. ಮೊಮ್ಮಕ್ಕಳನ್ನು ಆಡಿಸುವ ವಯಸ್ಸಾ ದರೂ ಮನೆಯಲ್ಲಿ ಸುಮ್ಮನೆ ಕುಳಿತು ಕೊಳ್ಳುತ್ತಿಲ್ಲ. ಸಾಧನೆ ಮಾಡಬೇಕು ಎಂಬ ಛಲದಿಂದ ಇವರು ತಮ್ಮ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದ ಬಿಳಿ ತೊಗರಿ (ಬಿ.ಆರ್.ಜಿ.–2) ಬೆಳೆಯನ್ನು ನೋಡಲು ಜಿಲ್ಲೆ, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬರುತ್ತಿದ್ದಾರೆ. ಈ ಸಾಧನೆ ಮಾಡಿದವರು 67 ವರ್ಷದ ರೈತ ಮಹಿಳೆ ರುದ್ರಮ್ಮ ತಳವಾರ ಬಸಪ್ಪ.

ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಗ್ರಾಮದ ರುದ್ರಮ್ಮ ತಮ್ಮ ಜೀವನವನ್ನು ಕೃಷಿಗೆ ಮುಡಿಪಾಗಿಟ್ಟಿದ್ದಾರೆ. ಐದು ಎಕರೆ ಜಮೀನಿನಲ್ಲಿ ಬಿ.ಆರ್.ಜಿ–2 ತಳಿಯ ಬಿಳಿ ತೊಗರಿಯನ್ನು ಬಿತ್ತನೆ ಮಾಡಿದ್ದರು. ಕೊಳವೆಬಾವಿ ನೀರನ್ನು ಸ್ಪ್ರಿಂಕ್ಲರ್‌ ಮೂಲಕ 15 ದಿನಗಳಿಗೊಮ್ಮೆ ನೀಡಿ, ರೋಗ ಹರಡದಂತೆ ಕಾಲಕಾಲಕ್ಕೆ ಕೀಟನಾಶಕ ಸಿಂಪರಣೆ ಮಾಡಿದ್ದರು. ಇದೀಗ ಆರೇಳು ಅಡಿ ಎತ್ತರ ಬೆಳೆದ ಒಂದೊಂದು ಗಿಡದಲ್ಲೂ ನಾಲ್ಕೈದು ಕೆ.ಜಿ. ತೊಗರಿ ಸಿಗಲಿದೆ. ತೆನೆಗಳು ಭಾರ ತಡೆಯದೇ ನೆಲಕ್ಕೆ ಬಾಗಿವೆ. ಒಂದು ಎಕರೆಗೆ 12ರಿಂದ 15 ಕ್ವಿಂಟಲ್‌ ಇಳುವರಿ ಸಿಗುವ ನಿರೀಕ್ಷೆಯಿದೆ.

‘ನಾನು ಶಾಲೆಗೆ ಹೋಗಿಲ್ಲ. ಅಪಘಾತವಾಗಿದ್ದರಿಂದ ಪತಿ ಕೆಲಸ ಮಾಡುತ್ತಿಲ್ಲ. ನಾನೇ ಕೃಷಿ ಕೆಲಸ ಕೈಗೊಂಡು ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ದೇನೆ. ಒಬ್ಬ ಮಗಳು ಹಾಗೂ ಇಬ್ಬರು ಪುತ್ರರು ಸರ್ಕಾರಿ ಕೆಲಸದಲ್ಲಿದ್ದಾರೆ. ಒಬ್ಬ ಕೃಷಿ ವಿಜ್ಞಾನಿ ಯಾಗಿರುವುದು ಹೆಮ್ಮೆಯ ವಿಷಯ. ಮಕ್ಕಳೂ ನನ್ನೊಂದಿಗೆ ಕೈ
ಜೋಡಿಸಿದ್ದ ರಿಂದ ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಯಿತು’ ಎನ್ನುತ್ತಾರೆ ರುದ್ರಮ್ಮ.

ಬೆಳೆ ವಿವರ: ಸಹಕಾರದಿಂದ ಸಾವಯವ ಮತ್ತು ನ್ಯಾನೊ ತಂತ್ರಜ್ಞಾನ ಅಳವಡಿಸಿಕೊಂಡು ಗ್ರೀನ್‌ ಪ್ಲಾನೆಟ್‌, ಬಯೋ ಪ್ಲಾನೆಟ್‌ ಬಳಸಿಕೊಂಡು ಬಿಳಿ ತೊಗರಿ ಬೆಳೆಯಲಾಗಿದೆ.

ಸಾಲಿನಿಂದ ಸಾಲಿಗೆ ನಾಲ್ಕು ಅಡಿ ಅಂತರದಲ್ಲಿ ಬೀಜ ಬಿತ್ತನೆ ಮಾಡಿ, ಸಸಿಗಳಿಗೆ ಬೇವಿನಎಣ್ಣೆ ಸಿಂಪರಣೆ ಮಾಡಲಾಗಿತ್ತು. ಹೂವು ಬಿಡುವ ಸಮಯದಲ್ಲಿ ಬ್ಲೂಮ್ ಮತ್ತು ನೈಟ್ರೊಕಿಂಗ್‌ ಸಿಂಪರಣೆ ಹಾಗೂ 3 ಬಾರಿ ರಾಸಾಯನಿಕ ಕೀಟನಾಶಕಗಳನ್ನು ಸಂಪರಣೆ ಮಾಡಲಾಗಿದೆ. ಹದಿನೈದು ದಿನಗಳಿಗೆ ಒಮ್ಮೆ ನೀರು ಕೊಟ್ಟರೆ ಸಾಕು. 170ರಿಂದ 180ದಿನಗಳಲ್ಲಿ ಬೆಳೆ ಕೊಯ್ಲಿಗೆ ಬರುತ್ತದೆ. ರುದ್ರಮ್ಮ ಅವರ ಜಮೀನಿನಲ್ಲಿ ಬೆಳೆದ ಬಿಳಿ ತೊಗರಿ ಬೆಳೆಗೆ ಎಕರೆಗೆ ₹ 10 ಸಾವಿರದಿಂದ 12 ಸಾವಿರ ಖರ್ಚಾಗಿದೆ.

ಗಿಡಗಳ ಎಲೆಗಳು ಉದುರಿ ಭೂಮಿಯಲ್ಲಿ ಕೊಳೆತು ಸಾವಯವ ಗೊಬ್ಬರ ಉತ್ಪತ್ತಿಯಾಗುತ್ತದೆ. ಇದರಿಂದ ಭೂಮಿಯ ಫಲವತ್ತತೆಯೂ ಹೆಚ್ಚುತ್ತದೆ. ಸೊರಗು ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಬೇರಿನಲ್ಲಿರುವ ಗಂಟುಗಳಿಂದ ರೈಸೋಬಿಯಮ್‌ ಬ್ಯಾಕ್ಟೀರಿಯಾ ವಾತಾವರಣದಲ್ಲಿರುವ ಸಾರಜನಕವನ್ನು  ಭೂಮಿಗೆ ಹಾಕಿ ಫಲವತ್ತತೆಯನ್ನು ಹೆಚ್ಚಿಸುತ್ತದೆ.

ರೈತರು ಬೆಳೆದ ಬೀಜಕ್ಕೆ ರಾಜ್ಯ ಬೀಜ ನಿಗಮದಿಂದ ಬೆಲೆ ನಿಗದಿ ಮಾಡಲಾಗುವುದು. ಅವರೇ ನೇರವಾಗಿ ಖರೀದಿ ಮಾಡುತ್ತಾರೆ ಎನ್ನುತ್ತಾರೆ ಕೃಷಿ ವಿಜ್ಞಾನಿ ಡಾ. ಬಿ. ಮಂಜುನಾಥ.

ಕಾರಿಗನೂರು ಗ್ರಾಮದಲ್ಲಿ ಬೆಳೆದ ತೊಗರಿ ಬೆಳೆಯನ್ನು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ವಾಸುದೇವಪ್ಪ, ಕುಲಸಚಿವ ಡಾ. ಪಿ.ನಾರಾಯಣ ಸ್ವಾಮಿ, ವಿಸ್ತರಣಾ ನಿರ್ದೇಶಕ ಡಾ.ಡಿ.ಎಚ್. ಗೌಡ, ಸಂಶೋಧನಾ ನಿರ್ದೇಶಕ ಡಾ.ಎಂ.ಕೆ.ಸ್ವಾಮಿ, ಕತ್ತಲಗೆರೆ ಸಂಶೋಧನಾ ಕೇಂದ್ರ ಮುಖ್ಯಸ್ಥ ಡಾ.ಸಿ.ಮಲ್ಲೇಶಪ್ಪ, ಪಂಜಾಬ್ ರಾಜ್ಯದ ಗ್ರೀನ್ ಪ್ಲಾನೆಟ್ ಬಯೋ ಆರ್ಗೆನಿಕ್ಸ್‌ನ ವಿಜ್ಞಾನಿ ಡಾ. ಕಮಲಜಿತ್‌ ಸಿಂಗ್, ಡಾ.ಉಮೇಶ್ ಅವರು ಭೇಟಿ
ನೀಡಿ ಮಾಹಿತಿ ಪಡೆದಿದ್ದಾರೆ.
ತೊಗರಿ ಬೆಳೆಯಲು ಆಸಕ್ತಿಯುಳ್ಳ ರೈತರು ಮಾಹಿತಿಗೆ ಮೊ: 9480838213 ಸಂಪರ್ಕಿಸಬಹುದು.
– ರಾಜು ಆರ್. ತ್ಯಾವಣಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT