ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಸಮೂಹದಲ್ಲಿ ಹೆಚ್ಚುತ್ತಿರುವ ಕಿವುಡತನ

ಕ್ವೆಸ್ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ಪ್ರತಿ ತಿಂಗಳು ನಗರದಲ್ಲಿ ಉಚಿತ ಚಿಕಿತ್ಸಾ ಶಿಬಿರ
Last Updated 16 ಜನವರಿ 2017, 4:46 IST
ಅಕ್ಷರ ಗಾತ್ರ

ದಾವಣಗೆರೆ: ಶ್ರವಣಮಾಂದ್ಯರನ್ನು ಸಕಾಲಕ್ಕೆ ಗುರುತಿಸದ ಹೊರತು ಅಗತ್ಯ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಇದನ್ನರಿತ ನಗರದ ಕ್ವೆಸ್ ವಾಕ್ ಮತ್ತು ಶ್ರವಣ ಕೇಂದ್ರ ಪ್ರತಿ ತಿಂಗಳ ಎರಡನೇ ಶನಿವಾರ ಮತ್ತು ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯಂತಹ ವಿಶೇಷ ದಿನಗಳಲ್ಲಿ ಉಚಿತ ಚಿಕಿತ್ಸಾ ಶಿಬಿರವನ್ನು ಆಯೋಜಿಸುತ್ತಿದೆ.

ಪ್ರತಿ ಬಾರಿಯ ಉಚಿತ ಚಿಕಿತ್ಸಾ ಶಿಬಿರದಲ್ಲೂ 150ರಿಂದ 200 ಮಂದಿ ಪಾಲ್ಗೊಳ್ಳುತ್ತಾರೆ. ಅವರಲ್ಲಿ 30ರಿಂದ 40 ಮಂದಿ ಶ್ರವಣ ದೋಷವಿರುವವರು ಕಂಡುಬರುತ್ತಿದ್ದಾರೆ. ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಜತೆ ಯುವಕರ ಸಂಖ್ಯೆ ತುಸು ಹೆಚ್ಚೇ ಇದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಕ್ವೆಸ್ ವಾಕ್ ಮತ್ತು ಶ್ರವಣ ಕೇಂದ್ರದ ಮುಖ್ಯ ಸಂಯೋಜಕ ಶ್ರವಣತಜ್ಞ ನಾರಾಯಣ ಶೆಟ್ಟಿ.

‘52 ವರ್ಷಗಳಿಂದ ಹುಟ್ಟು ಮೂಗರು ಮತ್ತು ಶ್ರವಣ ದೋಷ ವಿರುವ ಮಕ್ಕಳಿಗೆ ಉಚಿತವಾಗಿ ವಾಕ್ ಚಿಕಿತ್ಸೆ (ಸ್ಪೀಚ್‌ ಥೆರಪಿ) ನೀಡುತ್ತಿದ್ದೇನೆ. ಅಲ್ಲದೇ ಚಿಕ್ಕಾಸು ಪಡೆಯದೇ ಇಂಥ ಮಕ್ಕಳಿಗೆ ಶ್ರವಣ ಸಾಧನಗಳನ್ನೂ ವಿತರಿಸುತ್ತಿದ್ದೇನೆ. ಶ್ರವಣ ದೋಷದ ಬಗ್ಗೆ ಪೋಷಕರಲ್ಲಿ ಮೊದಲು ಅರಿವು ಮೂಡಿಸಬೇಕು’ ಎನ್ನುತ್ತಾರೆ ಅವರು.

‘ಈವರೆಗೆ ಸುಮಾರು 9 ಸಾವಿರಕ್ಕೂ ಹೆಚ್ಚು ಮಂದಿ ಶ್ರವಣ ದೋಷವುಳ್ಳವರಿಗೆ ಚಿಕಿತ್ಸೆ ನೀಡಿದ್ದೇನೆ. ಅವರಲ್ಲಿ ಆರು ಸಾವಿರ ಮಂದಿಗೆ ಉಚಿತವಾಗಿ ಶ್ರವಣ ಸಾಧನವನ್ನು ವಿತರಣೆ ಮಾಡಿದ್ದೇನೆ. ಶ್ರವಣ ದೋಷದ ಪ್ರಮಾಣ ಶೇ 75ಕ್ಕೂ ಮೇಲ್ಪಟ್ಟಿದ್ದರೆ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಸಿಕ ₹ 1,000 ಪಿಂಚಣಿ ನೀಡುತ್ತದೆ. ಇಂತಹ ಸೌಲಭ್ಯದ ಬಗ್ಗೆಯೂ ಸಂಸ್ಥೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ’ ಎಂದು ಅವರು ತಿಳಿಸಿದರು.

ಕಿವುಡತನ ಕಡೆಗಣಿಸಬೇಡಿ:  ಅತಿ ಯಾದ ಶಬ್ದ ಮಾಲಿನ್ಯದ ನಡುವೆ ಬದು ಕುತ್ತಿರುವವರಿಗೆ ಕ್ರಮೇಣ ಕಿವುಡುತನ ಬರುತ್ತದೆ. ಕಿವಿಯಲ್ಲಿ ಗಾಯ, ಅಲರ್ಜಿ, ಸೋರುವಿಕೆ, ಉಷ್ಣಾಂಶದಲ್ಲಿ ಬದಲಾ ವಣೆ, ನರವ್ಯೂಹದಲ್ಲಿನ ದೋಷ ದಿಂದಾಗಿ ಹಠಾತ್ ಶ್ರವಣ ದೋಷ ಕಾಣಿ ಸಿಕೊಳ್ಳಬಹುದು. ತಪ್ಪಾದ ಔಷಧಿ ಸೇವ ನೆಯಿಂದಲೂ ಗರ್ಭಿಣಿಯರಿಗೆ ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳು ಹುಟ್ಟುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಶ್ರವಣ ಸಮಸ್ಯೆ ಇದೆ ಎಂದು ತಿಳಿದ ತಕ್ಷಣ ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ಪಡೆಯಬೇಕು. ಇಲ್ಲವಾದರೆ ಕೇಳುವಿ ಕೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಅತಿಯಾದ ಮೊಬೈಲ್ ಬಳಕೆ ಬೇಡ: ‘ದಿನಕ್ಕೆ ಒಂದು ಗಂಟೆಗಿಂತಲೂ ಹೆಚ್ಚು ಅವಧಿಯಲ್ಲಿ ಮೊಬೈಲ್‌ನಲ್ಲಿ ಮಾತ ನಾಡುವುದರಿಂದ ಕಿವಿಗಳಿಗೆ ಹಾನಿ ಯುಂಟಾಗುತ್ತದೆ. ಕ್ರಮೇಣ ಕಿವಿಯ ನರಗಳ ಕೇಳಿಸಿಕೊಳ್ಳುವ ಸಾಮರ್ಥ್ಯ ಕುಗ್ಗುತ್ತದೆ. ನಿಯಮಿತವಾಗಿ ಮೊಬೈಲ್ ಬಳಕೆಯಿಂದ ಕಿವುಡುತನ ಬರುತ್ತದೆ. ತಪಾಸಣೆ ಮಾಡಿಸಿಕೊಳ್ಳಲು ಬರುವವ ರಲ್ಲಿ ಯುವಕರ ಸಂಖ್ಯೆ ಅಧಿಕ’ ಎಂದು ನಾರಾಯಣ ಶೆಟ್ಟಿ ವಿಷಾದಿಸಿದರು.

ಸಿವಿಲ್ ಎಂಜಿನಿಯರ್ ಶ್ರವಣತಜ್ಞ ಆದ ಕತೆ: ನಾರಾಯಣ ಶೆಟ್ಟಿ ಅವರು ಮೂಲತಃ ಆಂಧ್ರಪ್ರದೇಶದವರು. ನೈರುತ್ಯ ರೈಲ್ವೆಯಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದರು. ಅವರ ನಾಲ್ಕು ಮಕ್ಕಳಲ್ಲಿ ಮೂರು ಮಕ್ಕಳಿಗೆ ಶ್ರವಣ ದೋಷದ ಸಮಸ್ಯೆ ಕಂಡುಬಂತು. ಶ್ರವಣ ದೋಷವಿರುವ ಈ ಮೂರು ಮಕ್ಕಳನ್ನು ಸಾಮಾಜಿಕ, ಆರ್ಥಿಕವಾಗಿ ಸದೃಢರಾಗಿಸುವ ಪ್ರಯತ್ನ ದಿಂದಾಗಿಯೇ ಸಿವಿಲ್‌ ಎಂಜಿನಿಯರ್‌ ಆಗಿದ್ದವರು ಶ್ರವಣತಜ್ಞರಾದರು (ಆಡಿಯೊಲಾಜಿಸ್ಟ್‌).

‘1967ರಲ್ಲಿ ಗದಗದಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ನನ್ನ ಮಕ್ಕಳಾದ ನೀರಜಾ (7), ರಘು (5) ಮತ್ತು ಪದ್ಮಜಾ (3) ಅವರಿಗೆ ಕಿವಿ ಸರಿಯಾಗಿ ಕೇಳುತ್ತಿರಲಿಲ್ಲ. ಗದಗ ರೈಲ್ವೆ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದ ಡಾ.ಶರ್ಮಾ ಮಕ್ಕಳಿಗೆ ಕಿವುಡುತನ ಬಂದಿದೆ. ಕ್ರಮೇಣ ಕೇಳುವ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದು ಹೇಳಿದ್ದರು. ಇದು ನನಗೆ ಹಾಗೂ ಪತ್ನಿ ನಿರ್ಮಲಾಗೆ ದೊಡ್ಡ ಅಘಾತವನ್ನೇ ತಂದಿತ್ತು. ಆದರೆ, ಅಂಗವೈಕಲ್ಯವಿರುವ ಮಕ್ಕಳನ್ನು ಸಾಮಾನ್ಯ ಮಕ್ಕಳಂತೆ ಬೆಳೆಸಲು ಪೋಷಕನಾಗಿ ಮೈಸೂರಿನ ಲ್ಲಿರುವ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯಲ್ಲಿ ತರಬೇತಿ ಪಡೆದೆ. ನಂತರ ಸ್ವ ಆಸಕ್ತಿಯಿಂದ ಲಾಸ್‌ ಏಂಜಲೀಸ್‌ನಲ್ಲಿರುವ ಜಾನ್‌ ಟ್ರೇಸ್‌ ಕ್ಲಿನಿಕ್‌ನಲ್ಲಿಯೂ ತರಬೇತಿ ಪಡೆದೆ. ತರಬೇತಿ ಪಡೆದ ನಂತರ ನನ್ನ ಮಕ್ಕಳಷ್ಟೆ ಅಲ್ಲದೇ ಇಂಥ ನ್ಯೂನತೆಯಿರುವ ಇತರ ಮಕ್ಕಳಿಗೂ ಚಿಕಿತ್ಸೆ ನೀಡಲು ಆರಂಭಿಸಿದೆ’ ಎಂದು ತಿಳಿಸಿದರು.

‘ಈಗ ನನ್ನ ಮೂರು ಮಕ್ಕಳು ಬ್ಯಾಂಕ್‌, ಸರ್ಕಾರಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರನ್ನು ಕಿವುಡು ತನದಿಂದ ಹೊರತರಲು, ಎಲ್ಲರಂತೆ ಸಾಮಾನ್ಯವಾಗಿ ಬದುಕುವಂತೆ ಮಾಡಲು ಪಟ್ಟ ಶ್ರಮ ಸಾರ್ಥಕವಾಗಿದೆ. ಎಂಜಿನಿಯರ್‌ ಆಗಿ ಕಾರ್ಯನಿರ್ವಹಿ ಸುವಾಗ ಸಿಕ್ಕ ಅಲ್ಪ ಸಮಯವನ್ನು ವಾಕ್‌ ಮತ್ತು ಶ್ರವಣ ಚಿಕಿತ್ಸೆಗಾಗಿ ಮೀಸಲಿಟ್ಟೆ. ನಿವೃತ್ತಿಯಾದ ಮೇಲೆ ಸಂಪೂರ್ಣ ಇದೇ ವೃತ್ತಿಯಲ್ಲಿ ತೊಡಗಿಕೊಂಡಿರುವುದಕ್ಕೆ ಹೆಮ್ಮೆ ಇದೆ’ ಎಂದು ಅವರು ತಿಳಿಸಿದರು.
ಹೆಚ್ಚಿನ ಮಾಹಿತಿಗೆ: 9743780492

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT