ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಮಂದಿರ ಸುತ್ತ ಮುಕ್ತಿ ಕಾಣದ ಸಂಚಾರ ಸಂಕಷ್ಟ

ನಗರದ ಸಿನಿಮಾ ಮಂದಿರಗಳ ಎದುರು ಸಂಚಾರ ಸಮಸ್ಯೆ: ಪಾದಚಾರಿಗಳ ಪರದಾಟ
Last Updated 16 ಜನವರಿ 2017, 4:41 IST
ಅಕ್ಷರ ಗಾತ್ರ

ಶಿವಮೊಗ್ಗ: ಚಿತ್ರಮಂದಿರಗಳ ಎದುರಿನ ಸಂಚಾರ ದಟ್ಟಣೆ ನಗರದ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ನಗರದ ಹೃದಯಭಾಗಗಳಲ್ಲಿರುವ ಸಿನಿಮಾ ಮಂದಿರಗಳ ಆರಂಭ ಹಾಗೂ ಮುಕ್ತಾಯದ ಸಮಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಹಾ
ನಗರಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಯಶಸ್ಸು ಕಂಡಿಲ್ಲ.

ಪ್ರಮುಖ ವೃತ್ತಗಳಲ್ಲಿರುವ ಚಿತ್ರಮಂದಿರ ಸಮೀಪ ಆಗುತ್ತಿರುವ ಸಂಚಾರ ಸಮಸ್ಯೆ ಕೆಲವು ಸಮಯ ಮಾತ್ರ ಅನಿಸಿದರೂ, ಸಹಜ ಸ್ಥಿತಿಗೆ ಬರಲು ಬಹಳಷ್ಟು ಸಮಯವೇ ತಗುಲುತ್ತಿದೆ. ಮಧ್ಯಾಹ್ನ 1.15ರಿಂದ 2, ಸಂಜೆ 5ರಿಂದ 6, ರಾತ್ರಿ 8.15ರಿಂದ 9 ಗಂಟೆವರೆಗೆ ಸಾಮಾನ್ಯವಾಗಿ ಚಿತ್ರಮಂದಿರಗಳ ಎದುರು ಜನಸಂದಣಿ ಹಾಗೂ ವಾಹನ ದಟ್ಟಣೆ ಹೆಚ್ಚಿರುತ್ತದೆ. ಚಿತ್ರ ವೀಕ್ಷಿಸಿ, ಹೊರಬರುವವರು ಹಾಗೂ ಚಿತ್ರ ವೀಕ್ಷಿಸಲು ತೆರಳುವವರು ಒಂದೆಡೆ ಜಮಾವಣೆ ಆಗುವುದರಿಂದ ಸಹಜ ಸಂಚಾರದಲ್ಲಿ ವ್ಯತ್ಯಾಸವಾಗು
ತ್ತಿದೆ. ಇದರಿಂದ ಪಾದಚಾರಿಗಳಿಗೆ, ನಗರ ಸಾರಿಗೆ ಬಸ್ ಸೇರಿದಂತೆ ಇತರೆ ವಾಹನಗಳ ಓಡಾಟಕ್ಕೆ ತೀವ್ರ ಅಡಚಣೆಯಾಗುತ್ತಿದೆ.

ಮಲ್ಲಿಕಾರ್ಜುನ ಚಿತ್ರಮಂದಿರದ ಸಮೀಪ ಹೊಸ ಚಿತ್ರ ಬಿಡುಗಡೆಯಾದಾಗ ಅಥವಾ ಯಶಸ್ವಿ ಚಿತ್ರಗಳು ಪ್ರದರ್ಶನ ಕಾಣುವಾಗ ಗೋಪಿವೃತ್ತ, ದುರ್ಗಿಗುಡಿ, ಬಾಲರಾಜ ಅರಸ್ ರಸ್ತೆ ತುಂಬಾ ವಾಹನಗಳು ಸಾಲುಗಟ್ಟಿನಿಂತಿರುತ್ತವೆ. ಸನಿಹದಲ್ಲಿಯೇ ಇರುವ ಎಚ್‌ಪಿಸಿ ಚಿತ್ರಮಂದಿರ ಸಮೀಪವೂ ಇದೇ ಕಥೆ. ಬಳಿಯಲ್ಲಿಯೇ ನಗರ ಸಾರಿಗೆ ಬಸ್‌ ನಿಲುಗಡೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ, ಪಾದಚಾರಿಗಳಿಗೆ ಕಷ್ಟವಾಗುತ್ತಿದೆ.

ಲಕ್ಷ್ಮಿ ಚಿತ್ರಮಂದಿರದ ಬಳಿ ಸಣ್ಣ ಮಾರುಕಟ್ಟೆಯೂ ನಡೆಯುವುದರಿಂದ ಸಹಜವಾಗಿ ಜನಸಂದಣಿ ಆಗುತ್ತದೆ. ಸಮೀಪದ ಚಾನೆಲ್ ಬಳಿ ಹಾಗೂ ವಿನೋಬನಗರ 100 ಅಡಿ ರಸ್ತೆಯಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಸಿಗದಂತಾಗಿದೆ.

ಬಿ.ಎಚ್.ರಸ್ತೆಯ ವೀರಭದ್ರೇಶ್ವರ ಚಿತ್ರಮಂದಿರದ ಬಳಿ ಕಾಲೇಜುಗಳು ಹಾಗೂ ಸಿಗ್ನಲ್ ದೀಪವಿದೆ. ಒಂದು ವೇಳೆ ಇಲ್ಲಿಯೂ ದಟ್ಟಣೆ ಹೆಚ್ಚಿದರೆ, ಡಿವಿಎಸ್ ವೃತ್ತದವರೆಗೂ ಟ್ರಾಫಿಕ್ ಜಾಮ್ ಖಚಿತವಾಗಿರುತ್ತದೆ.

ಇನ್ನು ಮಂಜುನಾಥ ಚಿತ್ರಮಂದಿರ ನಗರದ ಒಳಭಾಗ ಎಂ.ಕೆ.ಕೆ. ರಸ್ತೆ ಹಾಗೂ ಗಾಂಧಿ ಬಜಾರ್‌ಗೆ ಹೊಂದಿಕೊಂಡಂತೆ ಇದೆ. ಇಲ್ಲಿನ ರಸ್ತೆ ಕಿರಿದಾಗಿ
ರುವುದರಿಂದ ಕೆಲಕಾಲ ನಾಗರಿಕರು ತಾಳ್ಮೆಯಿಂದ ಚಲಿಸುತ್ತಾರೆ. ಮಾಡರ್ನ್ ಮತ್ತು ವಿನಾಯಕದ ಮಂದಿರದ ಬಳಿ ಕೂಡ ಇದೇ ರೀತಿಯ ದೃಶ್ಯ ಸಾಮಾನ್ಯ.
‘ಗುರುವಾರ ಅಥವಾ ಶುಕ್ರವಾರ ಜನಪ್ರಿಯ ನಟರ ಚಿತ್ರಗಳು ಬಿಡುಗಡೆಯಾದರೆ, ಅಂದು ಚಿತ್ರಮಂದಿರ ಸನಿಹದಲ್ಲಿ ಜನರ ದಂಡೇ ಸೇರಿರುತ್ತದೆ. ಮಲ್ಲಿಕಾರ್ಜುನ, ಎಚ್‌ಪಿಸಿ ಹಾಗೂ ವೀರಭದ್ರೇಶ್ವರ ಚಿತ್ರಮಂದಿರಗಳ ಬಳಿ ಇಡೀ ದಿನ ಓಡಾಡಲೂ ಸಾಧ್ಯವಾಗುವುದಿಲ್ಲ. ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಜಮಾಯಿಸುತ್ತಾರೆ. ಪೊಲೀಸರು ಈ ಅವ್ಯವಸ್ಥೆ ನಿಯಂತ್ರಿಸಬೇಕು’ ಎಂದು ಒತ್ತಾಯಿಸುತ್ತಾರೆ ದ್ವಿಚಕ್ರವಾಹನ ಸವಾರ ಅವಿನಾಶ್ ಗೌಡ.

‘ಕೆಲವೊಮ್ಮ ನಟರ ಅಭಿಮಾನಿಗಳು ಗಲಾಟೆ ಮಾಡಿಕೊಂಡು ಕೈ ಕೈ ಮಿಲಾಯಿಸುವ ಸಂದರ್ಭ ಇರುತ್ತದೆ. ಸಂಬಂಧಿಸಿದವರು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಇನ್ನು ಚಿತ್ರಮಂದಿರಗಳಲ್ಲಿ ಸೂಕ್ತ ಮೂಲ ಸೌಕರ್ಯ ಇರುವುದಿಲ್ಲ. ವಾಹನ ನಿಲುಗಡೆಗೆ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಾರೆ. ನಿಯಮ ಪಾಲನೆ ಮಾಡದ ಮಂದಿರಗಳ ಪರವಾನಗಿ ರದ್ದಗೊಳಿಸಬೇಕು’ ಎಂದು ಆಗ್ರಹಿಸುತ್ತಾರೆ ಖಾಸಗಿ ಕಂಪೆನಿ ಉದ್ಯೋಗಿ ಪ್ರಶಾಂತ್.

ಚಿತ್ರಮಂದಿರಗಳು ಎಲ್ಲೆಲ್ಲಿವೆ?
ನಗರದಲ್ಲಿ ಒಟ್ಟು ಆರು ಚಿತ್ರಮಂದಿರಗಳಿವೆ. ಗೋಪಿವೃತ್ತದ ಬಳಿ ಮಲ್ಲಿಕಾರ್ಜುನ ಚಿತ್ರಮಂದಿರ, ಬಾಲರಾಜ ಅರಸ್ ರಸ್ತೆಯ ಎಚ್‌ಪಿಸಿ ಚಿತ್ರಮಂದಿರ, ಬಿ.ಎಚ್. ರಸ್ತೆಯ ವೀರಭದ್ರೇಶ್ವರ ಚಿತ್ರಮಂದಿರ, ಲಕ್ಷ್ಮೀ ಚಿತ್ರಮಂದಿರ, ಗಾಂಧಿ ಬಜಾರ್‌ಗೆ ಹೊಂದಿಕೊಂಡಂತಿರುವ ಮಂಜುನಾಥ ಚಿತ್ರಮಂದಿರ, ಬಸ್ ನಿಲ್ದಾಣ ಬಳಿ ಇರುವ ವಿನಾಯಕ ಹಾಗೂ ಬಿ.ಎಚ್. ರಸ್ತೆಯ ಮಾಡರ್ನ್ ಚಿತ್ರಮಂದಿರಗಳು ನಾಗರಿಕರಿಗೆ ಮನರಂಜನೆ ಒದಗಿಸುತ್ತಿವೆ.

ಕೆ.ಆರ್.ಪುರಂ ರಸ್ತೆಯಲ್ಲಿರುವ ವಂದನಾ ಟಾಕೀಸ್ ಇದ್ದರೂ ಯಾವುದೇ ಚಿತ್ರಗಳು ಪ್ರದರ್ಶನ ಕಾಣುತ್ತಿಲ್ಲ. ಇನ್ನು ಅಮೀರ್ ಅಹಮದ್ ವೃತ್ತದಲ್ಲಿರುವ ಸಿಟಿ ಸೆಂಟರ್ (ಶಿವಪ್ಪನಾಯಕ ಸೆಂಟರ್) ಆರಂಭವಾದಾಗ ಸಂಪೂರ್ಣ ಪ್ರದೇಶದ ಸಂಚಾರ ಬಿಗಡಾಯಿಸುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT